ವಾಶಿಂಗ್ಟನ್, ಶುಕ್ರವಾರ, 11 ಸೆಪ್ಟೆಂಬರ್ 2009( 18:43 IST )
ಮುಂಬೈ ಯುವತಿ ಇಶ್ರತ್ ಜಹಾನ್ ಹಾಗೂ ಇತರ ಮೂವರ ವಿವಾದಾಸ್ಪದ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿದಾವಿತನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು, ಇದು 'ಸಾಕ್ಷಿಯೂ ಅಲ್ಲ ಅಥವಾ ನಿರ್ಣಾಯಕ ಪುರಾವೆ'ಯೂ ಅಲ್ಲ ಎಂದು ಹೇಳಿದ್ದಾರೆ.
"ಅಫಿದಾವಿತ್‌ನಲ್ಲಿ ಏನು ತಪ್ಪಿದೆ? ನನಗೆ ತಿಳಿದಿರುವಂತೆ ಗುಪ್ತಚರ ಮಾಹಿತಿಗಳನ್ನು ಗುಜರಾತಿನೊಂದಿಗೆ ಹಂಚಿಕೊಳ್ಳಲಾಗಿದೆ ಎಂಬುದು ಅದರಲ್ಲಿದೆ ಅಷ್ಟೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಅವರು ಅಮೆರಿದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಅಫಿದಾವಿತ್ ಅನ್ನು ಸನ್ನಿವೇಶಕ್ಕೆ ಅನುಗುಣವಾಗಿ ಅರ್ಥೈಸಿಕೊಳ್ಳಬೇಕು ಎಂದು ಚಿದಂಬರಂ ಹೇಳಿದ್ದಾರೆ. ಅವರು 2005ರಲ್ಲಿ ಇಶ್ರತ್ ಹಾಗೂ ಇತರ ಮೂವರು ಉಗ್ರರ ವಿರುದ್ಧ ಗುಜರಾತ್ ಪೊಲೀಸರು ಮಾಡಿದ್ದ ಎನ್‌ಕೌಂಟರ್ ನಕಲಿ ಎಂಬುದಾಗಿ ನೀಡಲಾಗಿರುವ ನ್ಯಾಯಾಂಗ ತನಿಖೆಯ ವರದಿಯ ಕುರಿತು ಅವರ ಅಭಿಪ್ರಾಯ ಕೇಳಿದ ವೇಳೆ ಈ ಮೇಲಿನಂತೆ ಉತ್ತರಿಸಿದ್ದಾರೆ.