ಸಾನಿಯಾ ಮಿರ್ಜಾ - ಶೋಯಿಬ್ ಮಲಿಕ್ ಮದುವೆ ಸುದ್ದಿ ಹೊರಬಿದ್ದ ನಂತರ ಗರಿಗೆದರಿರುವ ಆಯೇಶಾ ಸಿದ್ಧಿಕಿ ಜತೆಗಿನ ವಿವಾಹ ಪ್ರಕರಣವು ಮಹತ್ವದ ತಿರುವನ್ನು ಪಡೆದುಕೊಂಡಿದ್ದು, ಮದುವೆ ದಾಖಲೆಗಳನ್ನು ಆಯೇಶಾ ಬಹಿರಂಗಪಡಿಸಿದ್ದಾಳೆ.
ಶೋಯಿಬ್ ಮಲಿಕ್ ತನ್ನನ್ನು ವಿವಾಹವಾಗಿರುವ ಪ್ರಮಾಣಪತ್ರ (ನಿಕಾಹ್‌ನಾಮ)ವನ್ನು ಇಮೇಲ್ ಮೂಲಕ ಪಾಕಿಸ್ತಾನದ ವಾರ್ತಾವಾಹಿನಿಯೊಂದಕ್ಕೆ ಆಯೇಶಾ ಕಳುಹಿಸಿದ್ದಾಳೆ. 180 ರೂಪಾಯಿ ಮೌಲ್ಯದ ಮದುವೆ ನೋಂದಣಿ ಪ್ರತಿ ಬಹಿರಂಗವಾಗಿರುವುದರಿಂದ ವಿವಾದ ಭುಗಿಲೇಳಬಹುದು ಎಂದು ಹೇಳಲಾಗುತ್ತಿದೆ.
ಶೋಯಿಬ್ ಮಲಿಕ್ ನನ್ನ ಗಂಡ ಎಂಬುದಕ್ಕೆ ನನ್ನಲ್ಲಿ ಸಾಕಷ್ಟು ಅಗತ್ಯ ದಾಖಲೆಗಳಿವೆ. ವೃತ್ತಿಪರ ಕಾರಣಗಳಿಂದಾಗಿ ನಾವು ಬೇರೆ ಬೇರೆಯಾಗಿ ವಾಸಿಸುತ್ತಿದ್ದೆವು ಎಂದು ಆಯೇಶಾ ತಿಳಿಸಿದ್ದು, ನನಗೆ ವಿಚ್ಛೇದನ ನೀಡದೆ ಅವರು ಮತ್ತೊಂದು ಮದುವೆಯಾಗಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾಳೆ.
PR
ಆಯೇಶಾ ಬಹಿರಂಗಪಡಿಸಿರುವ ಮದುವೆ ದಾಖಲೆಗಳ ಪ್ರಕಾರ 3-6-2002ರಂದು ಪಾಕಿಸ್ತಾನದ ಸಾಯಿಲ್‌ಕೋಟ್‌ನಲ್ಲಿ ಈ ರಿಜಿಸ್ಟ್ರೇಷನ್ ನಡೆದಿದೆ. ವಧುದಕ್ಷಿಣೆ ರೂಪದಲ್ಲಿ ಮಲಿಕ್ ಅವರು ಆಯೇಶಾ ಕುಟುಂಬಕ್ಕೆ 500 ರೂಪಾಯಿ ಮೆಹೆರ್ ನೀಡಿದ್ದಾರೆ. ಮದುವೆ ನೋಂದಣಿ ಶುಲ್ಕ 180 ರೂಪಾಯಿಗಳೆಂದು ಪತ್ರದಲ್ಲಿ ನಮೂದಿಸಲಾಗಿದೆ.
ಈ ಮದುವೆ ನೋಂದಣಿಗೆ ಮುಖ್ತಾರ್ ಆಲಿಖಾನ್, ಸೈಯದ್ ಅಬ್ದುಲ್ಲಾ ಎಂಬ ಇಬ್ಬರು ಸಾಕ್ಷಿಗಳಾಗಿ ಸಹಿ ಮಾಡಿದ್ದಾರೆ. ಶೋಯಿಬ್ ಮಲಿಕ್ ಮತ್ತು ಆಯೇಶಾ ಸಿದ್ಧಿಕಿ ಕೂಡ ಸಹಿ ಮಾಡಿದ್ದಾರೆ.
ಈ ನಡುವೆ ತನ್ನ ನಿಜವಾದ ಹೆಸರು ಮಹಾ ಸಿದ್ಧಿಕಿಯಾಗಿದ್ದು, ಆಯೇಶಾ ಸಿದ್ಧಿಕಿ ಎಂದಲ್ಲ ಎಂದು ಹೇಳುವ ಮೂಲಕ ಮಹಾ ಎಂಬ ಹುಡುಗಿಯ ಹೆಸರಿನಲ್ಲಿ ಆಯೇಶಾ ಸಿದ್ಧಿಕಿಯವರು ಶೋಯಿಬ್ ಅವರಿಗೆ ಮೋಸ ಮಾಡಿದ್ದರು ಎಂಬ ವಾದಕ್ಕೆ ಕೂಡ ಹೊಸ ತಿರುವು ಸಿಕ್ಕಿದೆ. ಮದುವೆ ದಾಖಲೆಗಳಲ್ಲಿ ಎರಡೂ ಹೆಸರುಗಳನ್ನು ಪ್ರಸ್ತಾಪಿಸಲಾಗಿರುವುದು ತಿಳಿದು ಬಂದಿದೆ.