ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುಪಿಎಗೆ ವಿರೋಧ ಲೆಕ್ಕಕ್ಕಿಲ್ಲ; ಕಳಂಕಿತರಿಗೂ ಪದ್ಮ ಪ್ರದಾನ (Padma Bhushan | Sant Singh Chatwal | Pratibha Patil | Rashtrapati Bhavan)
Bookmark and Share Feedback Print
 
ಪ್ರಶಸ್ತಿ ಸ್ವೀಕರಿಸುತ್ತಿರುವ ಛತ್ವಾಲ್
PTI
ಭ್ರಷ್ಟಾಚಾರ ಪ್ರಕರಣದಲ್ಲಿ ಹೆಸರು ಥಳಕು ಹಾಕಿಕೊಂಡಿದ್ದ ಅನಿವಾಸಿ ಭಾರತೀಯ ಹೊಟೇಲ್ ಉದ್ಯಮಿ ಸಂತಾ ಸಿಂಗ್ ಛತ್ವಾಲ್‌, ಬಾಲಿಶ ವರ್ತನೆಗಳಿಂದಲೇ ಸದಾ ಸುದ್ದಿ ಮಾಡುತ್ತಿರುವ ಸೈಫ್ ಆಲಿ ಖಾನ್, ಒಂದು ಕಾಲದಲ್ಲಿ ಭಯೋತ್ಪಾದಕನಾಗಿದ್ದ ಗುಲಾಂ ಮೊಹಮ್ಮದ್ ಮಿರ್ ಅವರಿಗೆ ರಾಷ್ಟ್ರದ ಉನ್ನತ ಗೌರವ ಪದ್ಮ ಪ್ರಶಸ್ತಿ ನೀಡುವುದಕ್ಕೆ ರಾಷ್ಟ್ರದಾದ್ಯಂತ ವ್ಯಕ್ತವಾಗಿದ್ದ ಭಾರೀ ವಿರೋಧವನ್ನು ಲೆಕ್ಕಿಸದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ನಿನ್ನೆ ಶಾಲು ಹೊದೆಸಿ ಗೌರವ ಪ್ರದಾನ ಮಾಡಿದೆ.

ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಛತ್ವಾಲ್ ವಿರುದ್ಧ ಮೇಲ್ಮನವಿ ಮಾಡುವುದಿಲ್ಲ ಎಂದು ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ನಿರ್ಧಾರ ಕೈಗೊಂಡಿರುವುದನ್ನೇ ಮುಂದಿಟ್ಟುಕೊಂಡು ಅಥವಾ ಆ ರೀತಿ ಆಗುವಂತೆ ನೋಡಿಕೊಂಡು ಕಳಂಕಿತರಿಗೆ ಪ್ರಶಸ್ತಿ ಒಲಿಯುವಂತೆ ಮಾಡುವಲ್ಲಿ ಕೇಂದ್ರ ನಾಗರಿಕ ವಾಯುಯಾನ ಸಚಿವ ಪ್ರಫುಲ್ ಪಟೇಲ್ ಮತ್ತು ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ ಪ್ರಮುಖರಾಗಿದ್ದರು ಎಂದು ಕೇಂದ್ರ ಸರಕಾರವೇ ಕೆಲ ದಿನಗಳ ಹಿಂದೆ ಹೇಳಿತ್ತು.

ಈ ಹೊತ್ತಿನಲ್ಲಿ ಛತ್ವಾಲ್ ಸೇರಿದಂತೆ ಹಲವು ಭ್ರಷ್ಟರಿಗೆ ಪ್ರಶಸ್ತಿ ಪ್ರಕಟಿಸಿದ ಕ್ರಮವನ್ನು ವಿರೋಧಿಸಿ ಬಿಜೆಪಿ ಸೇರಿದಂತೆ ಕೆಲವು ಪಕ್ಷಗಳು ರಾಷ್ಟ್ರಪತಿ ಮತ್ತು ಪ್ರಧಾನಿಯವರಿಗೆ ಪತ್ರಗಳನ್ನು ಬರೆದು, ಗೌರವವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಪ್ರಶಸ್ತಿ ಪ್ರದಾನ ಪಟ್ಟಿಯಿಂದ ಕಳಂಕಿತರನ್ನು ಕೈ ಬಿಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ವಿರೋಧಗಳನ್ನು ಲೆಕ್ಕಿಸದ ಯುಪಿಎ ಸರಕಾರವು ರಾಷ್ಟ್ರಪತಿಯವರ ಮೂಲಕ ಪ್ರಶಸ್ತಿಗಳನ್ನು ಪ್ರದಾನ ಮಾಡಿಸಿದೆ.

ನಿನ್ನೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಛತ್ವಾಲ್ ಆನಂದ ತುಂದಿಲರಾಗಿದ್ದು ತೀವ್ರ ಸಂತೋಷವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ನನಗೆ ಈ ಗೌರವ ನೀಡಿರುವುದಕ್ಕೆ ಸರಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಬಹುಶಃ ನನ್ನ ಬಗೆಗಿದ್ದ ಎಲ್ಲಾ ಸಂಶಯಗಳು ಇದೀಗ ನಿವಾರಣೆಯಾಗಿವೆ ಎಂದು ಭಾವಿಸುತ್ತೇನೆ. ಸತ್ಯ ಮೇಲುಗೈ ಸಾಧಿಸಿದೆ ಎಂದರು.

ಇತ್ತೀಚೆಗಷ್ಟೇ ಪ್ರಕಟಿಸಲಾಗಿದ್ದ 2010ರ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ, ಶರಣಾಗತನಾಗಿದ್ದ ಕಾಶ್ಮೀರ ಉಗ್ರ ಗುಲಾಂ ಮೊಹಮ್ಮದ್ ಮಿರ್ ಯಾನೆ ಮೂಮಾ ಖಾನ್ ಎಂಬಾತನ ಮೇಲಿರುವ ಸುಲಿಗೆ ಮತ್ತು ಕೊಲೆ ಪ್ರಕರಣಗಳು ಇತ್ಯರ್ಥವಾಗದಿದ್ದರೂ ಗುಲಾಂ ಅವರ 'ಸಾಮಾಜಿಕ ಸೇವೆ'ಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ ಎಂದು ಸರಕಾರ ಹೇಳಿತ್ತು. ಅಲ್ಲದೆ ಸರಕಾರವು ಖಾನ್ ಭಯೋತ್ಪಾದಕನಾಗಿದ್ದ ಎಂಬ ಅಂಶವನ್ನು ಪರಿಗಣಿಸದೆ, ನಂತರದ ಭಯೋತ್ಪಾದಕರ ವಿರುದ್ಧದ ಕೆಲಸಗಳನ್ನು ಪುರಸ್ಕರಿಸಿ ಪ್ರಶಸ್ತಿ ಪ್ರಕಟಿಸಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು. ಅವರಿಗೂ ನಿನ್ನೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಉಳಿದಂತೆ ಸಂಗೀತ ನಿರ್ದೇಶಕ ಇಳಯರಾಜಾ, ಕನ್ನಡ ರಂಗಭೂಮಿ ಕಲಾವಿದೆ ಆರುಂಧತಿ ನಾಗ್, ಬಾಕ್ಸರ್ ವಿಜೇಂದರ್ ಸಿಂಗ್, ನಟಿ ರೇಖಾ, ಆಸ್ಕರ್ ವಿಜೇತ ಶಬ್ಧ ಗ್ರಹಣಕಾರ ರಸೂಲ್ ಪೂಕುಟ್ಟಿ ಸೇರಿದಂತೆ ಹಲವು ಮಂದಿ ಪದ್ಮ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.

ಸಂಬಂಧಪಟ್ಟ ವರದಿಗಳಿವು:
** ಅಕಟಕಟಾ..! ಭಾರತದಲ್ಲಿ ಮಾಜಿ ಭಯೋತ್ಪಾದಕನಿಗೂ ಪದ್ಮಶ್ರೀ!
** ಕ್ರಿಮಿನಲ್ ಆರೋಪಿಗಳಿಗೆ ಪದ್ಮ ಪ್ರಶಸ್ತಿ: ಬಿಜೆಪಿ ಆಕ್ರೋಶ ** ಕಳಂಕಿತರಿಗೆ ಪದ್ಮ; ಸರಕಾರದ ನಿರ್ಧಾರಕ್ಕೆ ರಾಷ್ಟ್ರಪತಿ ವಿರೋಧವಿತ್ತು
** ಛತ್ವಾಲ್‌ಗೆ ಪದ್ಮಭೂಷಣ ಪ್ರಶ್ನಿಸಿದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ
ಸಂಬಂಧಿತ ಮಾಹಿತಿ ಹುಡುಕಿ