ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಕೆಲವು ರಾಜಕೀಯ ಮುಖಂಡರ ದೂರವಾಣಿ ಕದ್ದಾಲಿಕೆ ನಡೆಸಿದೆ ಎಂಬ ಆರೋಪವನ್ನು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ತಳ್ಳಿ ಹಾಕಿದ ಬೆನ್ನಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಈ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೊಳಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಫಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ ಭೇಟಿ ನಿಮಿತ್ತ ಇಂದು ಸಂಸತ್ ಕಲಾಪಗಳಿಂದ ದೂರ ಉಳಿದಿದ್ದ ಸಿಂಗ್ ಪ್ರತಿಪಕ್ಷಗಳ ಆಗ್ರಹಕ್ಕೆ ಮಣಿಯುವ ಯಾವುದೇ ಸೂಚನೆಗಳನ್ನು ನೀಡಿಲ್ಲ.
ದೂರವಾಣಿ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಯ ಅಗತ್ಯವಿಲ್ಲ. ಜೆಪಿಸಿ ಎನ್ನುವುದು ತುಂಬಾ ಗಂಭೀರವಾದ ವಿಚಾರ. ಹಾಗಾಗಿ ನಾವು ಯಾವುದೇ ಅಂತಹ ಆತುರದ ನಿರ್ಧಾರಕ್ಕೆ ಬರುವುದಿಲ್ಲ ಎಂದು ಪ್ರಧಾನಿ ತಿಳಿಸಿದ್ದಾರೆ.
ಗೃಹಸಚಿವ ಚಿದಂಬರಂ ಸ್ಪಷ್ಟನೆ.. ಟೆಲಿಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರತಿಪಕ್ಷಗಳು ಸರಕಾರದ ವಿರುದ್ಧ ಹರಿಹಾಯ್ದಿದ್ದು, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರೇ ಸ್ವತಃ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿ ಗದ್ದಲ ಎಬ್ಬಿಸಿದ್ದವು.
ವಿರೋಧ ಪಕ್ಷಗಳ ಗದ್ದಲದ ನಡುವೆಯೂ ಹೇಳಿಕೆ ನೀಡಿದ ಚಿದಂಬರಂ ಸರಕಾರವನ್ನು ಸಮರ್ಥಿಸಿಕೊಂಡಿದ್ದು, ಯಾವುದೇ ರೀತಿಯ ದೂರವಾಣಿ ಕದ್ದಾಲಿಕೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಈ ಹಿಂದಿನ ಯುಪಿಎ ಅಥವಾ ಈಗಿನ ಯುಪಿಎ ಸರಕಾರವು ರಾಜಕೀಯ ಮುಖಂಡರ ದೂರವಾಣಿ ಕದ್ದಾಲಿಕೆ ಅಥವಾ ಅಂತಹ ಯಾವುದೇ ರೀತಿಯ ಕೃತ್ಯಗಳನ್ನು ನಡೆಸಲು ಅನುಮತಿ ನೀಡಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ. ಓಟ್‌ಲುಕ್ ವರದಿಯ ಆರೋಪಗಳ ಕುರಿತು ನಾವು ಗಮನ ಹರಿಸಲಿದ್ದೇವೆ. ಕದ್ದಾಲಿಕೆ ನಡೆಸಿದೆ ಎಂದು ಆರೋಪಿಸಲಾಗಿರುವ ರಾಷ್ಟ್ರೀಯ ತಾಂತ್ರಿಕ ಅಧ್ಯಯನ ಸಂಸ್ಥೆಯ ದಾಖಲೆಗಳಲ್ಲಿ ಯಾವುದೇ ಪೂರಕ ಸಾಕ್ಷ್ಯಗಳು ದೊರೆತಿಲ್ಲ. ಅಗತ್ಯ ಬಿದ್ದರೆ ಇನ್ನಷ್ಟು ತನಿಖೆಗಳನ್ನು ನಡೆಸಲಾಗುತ್ತದೆ ಎಂದರು.
ನಮ್ಮ ಬೇಹುಗಾರಿಕಾ ಸಂಸ್ಥೆಗಳು ಕಾನೂನಿನ ಪರಿಧಿಯಲ್ಲೇ ಕಾರ್ಯ ನಿರ್ವಹಿಸುತ್ತವೆ. ಅವುಗಳು ಸರಕಾರಕ್ಕೆ ಸಂಪೂರ್ಣವಾಗಿ ಬದ್ಧವಾಗಿವೆ. ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕಾಗಿ, ಅಪರಾಧಗಳ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಸುರಕ್ಷತೆಯನ್ನು ಖಚಿತಪಡಿಸಲು ಇಂತಹ ಪರಶೀಲನೆಯ ಅಗತ್ಯವಿರುತ್ತದೆ ಎಂದು ಪರೋಕ್ಷವಾಗಿ ಫೋನ್ ಕದ್ದಾಲಿಕೆಯನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರ ಕೃಷಿ ಸಚಿವ ಹಾಗೂ ಎನ್‌ಸಿಪಿ ಮುಖಂಡ ಶರದ್ ಪವಾರ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ದೂರವಾಣಿ ಮಾತುಕತೆಗಳನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಕದ್ದಾಲಿಕೆ ನಡೆಸಿದೆ ಎಂದು 'ಔಟ್‌ಲುಕ್' ನಿಯತಕಾಲಿಕ ವರದಿ ಮಾಡಿತ್ತು.
ಪ್ರಧಾನಿಯೇ ಸ್ಪಷ್ಟನೆ ನೀಡಬೇಕು: ಅಡ್ವಾಣಿ ಗೃಹ ಸಚಿವ ಪ್ರಣಬ್ ಮುಖರ್ಜಿಯವರ ಸ್ಪಷ್ಟನೆಗೆ ಸೊಪ್ಪು ಹಾಕದ ಪ್ರಮುಖ ವಿರೋಧ ಪಕ್ಷ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ, ಈ ಸಂಬಂಧ ಪ್ರಧಾನಿಯವರೇ ಸ್ಪಷ್ಟನೆ ನೀಡಬೇಕೆಂದು ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪತ್ರಕರ್ತ ಕುಲದೀಪ್ ನಯ್ಯರ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ರಾಷ್ಟ್ರಪತಿ ಮತ್ತು ಸ್ವತಃ ನನ್ನ ದೂರವಾಣಿಗಳನ್ನು ತುರ್ತು ಪರಿಸ್ಥಿತಿ ಮತ್ತು ಆ ನಂತರ ಕದ್ದಾಲಿಸಲಾಗಿತ್ತು. ಇದು ಸಲ್ಲದು. ಇದನ್ನು ತಡೆಗಟ್ಟಲು ನೂತನ ಕಾನೂನೊಂದನ್ನು ಅಸ್ತಿತ್ವಕ್ಕೆ ತರಬೇಕು ಎಂದು ಅಡ್ವಾಣಿ ಒತ್ತಾಯಿಸಿದ್ದಾರೆ.
ಇತ್ತೀಚಿನ ಎರಡು ಪ್ರಮುಖ ವಿವಾದಗಳಾದ ಐಪಿಎಲ್ ಮತ್ತು ದೂರವಾಣಿ ಕದ್ದಾಲಿಕೆ ಸಂಬಂಧ ಜಂಟಿ ಸಂಸದೀಯ ಸಮಿತಿ ರಚನೆ ಮಾಡಬೇಕು ಎಂಬ ಅಡ್ವಾಣಿಯವರ ಬೇಡಿಕೆಗೆ ಪ್ರತಿಪಕ್ಷಗಳು ಒಕ್ಕೊಲಿನಿಂದ ಬೆಂಬಲ ಸೂಚಿಸಿವೆ.
ಈ ವಿಚಾರದ ಕುರಿತು ಪ್ರತಿಪಕ್ಷಗಳು ಗದ್ದಲ ಎಬ್ಬಿಸುತ್ತಿರುವುದರಿಂದ ಉಭಯ ಸದನಗಳ ಕಲಾಪವನ್ನು ನಾಳೆಯವರೆಗೆ ಮುಂದೂಡಲಾಗಿದೆ. ನಾಳೆ ಕೂಡ ಪ್ರಧಾನಿಯವರ ಹೇಳಿಕೆಗಾಗಿ ಪ್ರತಿಪಕ್ಷಗಳು ಆಗ್ರಹಿಸುವ ನಿರೀಕ್ಷೆಗಳಿವೆ.