ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಫತ್ವಾ ವಿರುದ್ಧ ಹೇಳಿಕೆ; ಜಾವೇದ್ ಅಖ್ತರ್‌ಗೆ ಕೊಲೆ ಬೆದರಿಕೆ (fatwa | Javed Akhtar | Islamic cleric | email | Deoband)
ಫತ್ವಾ ವಿರುದ್ಧ ಹೇಳಿಕೆ; ಜಾವೇದ್ ಅಖ್ತರ್‌ಗೆ ಕೊಲೆ ಬೆದರಿಕೆ
ನವದೆಹಲಿ, ಶನಿವಾರ, 15 ಮೇ 2010( 18:15 IST )
ಮುಸ್ಲಿಮ್ ಮಹಿಳೆಯರು ಪುರುಷರ ಜತೆ ಕೆಲಸ ಮಾಡುವುದು ಇಸ್ಲಾಂ ತತ್ವ ಸಿದ್ದಾಂತಕ್ಕೆ ವಿರುದ್ಧ ಎಂದು ಫತ್ವಾ ಹೊರಡಿಸಿರುವ ಇಸ್ಲಾಮ್‌ನ ಮೌಲ್ವಿಗಳು ಮತಿವಿಕಲರು ಎಂದು ಚಾನೆಲ್‌ವೊಂದರ ಚರ್ಚೆಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದ ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಅವರನ್ನು ಕೊಲ್ಲುವುದಾಗಿ ಇ-ಮೇಲ್‌ನಲ್ಲಿ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
'ನಿಮ್ಮ ಸಾವಿನ ದಿನಗಳು ಹತ್ತಿರವಾಗುತ್ತಿದೆ' ಎಂಬರ್ಥದ ಇ-ಮೇಲ್ ಸಂದೇಶವನ್ನು ಕಳುಹಿಸಿರುವುದಾಗಿ ಅಖ್ತರ್ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ.
ದಿಯೋಬಂದ್ ಹೊರಡಿಸಿದ್ದ ಫತ್ವಾ ಕುರಿತಂತೆ ಟಿವಿ ಚಾನೆಲ್‌ವೊಂದರ ಚರ್ಚೆಯಲ್ಲಿ ಜಾವೇದ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಈ ರೀತಿಯ ಫತ್ವಾ ಹೊರಡಿಸುವ ಮುಸ್ಲಿಮ್ ಧರ್ಮಗುರುಗಳು ಮತಿಗೆಟ್ಟವರು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿಯೇ ಅಖ್ತರ್ ವಿರುದ್ಧ ಕೊಲೆ ಬೆದರಿಕೆಯ ಇ-ಮೇಲ್ ಸಂದೇಶ ರವಾನಿಸಲಾಗಿದ್ದು, ಫತ್ವಾ ವಿರುದ್ಧ ಹೇಳಿಕೆ ನೀಡಿದ ಅಖ್ತರ್ ಬಹಿರಂಗ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಇ-ಮೇಲ್ ಸಂದೇಶದಲ್ಲಿ ಎಚ್ಚರಿಸಲಾಗಿದೆ.
ಹಾಗಾಗಿ ನಾನು ವ್ಯಕ್ತಪಡಿಸಿರುವ ಹೇಳಿಕೆ ಇಸ್ಲಾಮ್‌ಗೆ ವಿರುದ್ಧವಾದದ್ದು ಎಂದೂ ಇ-ಮೇಲ್‌ನಲ್ಲಿ ದೂರಲಾಗಿದೆ. ಹಾಗಾಗಿ ಈ ಎಲ್ಲಾ ವಿವರಗಳನ್ನು ಪೊಲೀಸರಿಗೆ ತಿಳಿಸಿದ್ದು, ನನಗೆ ಸೂಕ್ತ ಭದ್ರತೆ ನೀಡುವಂತೆ ಕೋರಿದ್ದೇನೆ ಎಂದು ಪಿಟಿಐ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಭಾರತದ ಬೃಹತ್ ಇಸ್ಲಾಮಿಕ್ ಸಂಘಟನೆ ದಾರುಲ್ ಉಲೂಮ್ ದಿಯೋಬಂದ್, ಕೆಲಸಕ್ಕೆ ಹೋಗುವ ಮುಸ್ಲಿಂ ಮಹಿಳೆಯರ ವಿರುದ್ಧ ಫತ್ವಾ ಜಾರಿಗೊಳಿಸಿ, ಪುರುಷರ ಜತೆ ಕೆಲಸ ಮಾಡುವುದು ಇಸ್ಲಾಂ ತತ್ವ-ಸಿದ್ಧಾಂತಗಳಿಗೆ ವಿರುದ್ಧವಾದುದು ಎಂದು ತಿಳಿಸಿತ್ತು.
ಪುರುಷರು ಮತ್ತು ಮಹಿಳೆಯರು ಜತೆಯಾಗಿ ಕೆಲಸ ಮಾಡುವ ಮತ್ತು ಮುಖ ಪರದೆಯಿಲ್ಲದೆ ಪುರುಷರ ಜತೆ ಮಾತನಾಡಲು ಅವಕಾಶ ಮಾಡಿಕೊಡುವ ಖಾಸಗಿ ಅಥವಾ ಸರಕಾರಿ ಕೆಲಸಗಳಲ್ಲಿ ಮುಸ್ಲಿಂ ಮಹಿಳೆಯರು ಕೆಲಸ ಮಾಡುವುದು ಕಾನೂನು ಬಾಹಿರ ಎಂದು ಫತ್ವಾದಲ್ಲಿ ಸೂಚಿಸಲಾಗಿತ್ತು.
ಮುಸ್ಲಿಂ ಮಹಿಳೆ ಕಚೇರಿಯಲ್ಲಿರುವ ಸಂದರ್ಭದಲ್ಲಿ ಬುರ್ಖಾ ತೊಡುವುದು ಕಡ್ಡಾಯ ಮತ್ತು ಪುರುಷ ಸಹೋದ್ಯೋಗಿಗಳ ಜತೆ ಬೆರೆಯಬಾರದು ಎಂದು ಶರಿಯತ್ ಸ್ಪಷ್ಟವಾಗಿ ಹೇಳಿದೆ ಎಂದು ದಿಯೋಬಂದ್ ಧರ್ಮಗುರುಗಳು ಹೇಳಿದ್ದರು.