ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೈ ಕತ್ತರಿಸಿದ್ದು ನಾವಲ್ಲ, ಅದು ತಪ್ಪು: ಪಾಪ್ಯುಲರ್ ಫ್ರಂಟ್
(Taliban | Kerala | Popular Front of India | E M Abdul Rahiman)
ಕೈ ಕತ್ತರಿಸಿದ್ದು ನಾವಲ್ಲ, ಅದು ತಪ್ಪು: ಪಾಪ್ಯುಲರ್ ಫ್ರಂಟ್
ನವದೆಹಲಿ, ಗುರುವಾರ, 15 ಜುಲೈ 2010( 11:19 IST )
'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ'ವನ್ನು ನಿಷೇಧಿಸಲು ಯಾವುದೇ ಕಾರಣಗಳಿಲ್ಲ ಎಂದು ಹೇಳಿಕೊಂಡಿರುವ ಸಂಘಟನೆ, ನಾವು ತಾಲಿಬಾನ್‌ನ ಎಲ್ಲಾ ವಾದಗಳನ್ನು ಒಪ್ಪಲು ಸಿದ್ಧರಿಲ್ಲ ಎಂದು ಅದರ ತತ್ವಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತಾ ತಿಳಿಸಿದೆ.
ಪ್ರವಾದಿ ಮಹಮ್ಮದ್ ಅವರ ಹೆಸರನ್ನು ಪ್ರಶ್ನೆಪತ್ರಿಕೆಯೊಂದರಲ್ಲಿ ಪ್ರಸ್ತಾಪಿಸಿದ ಏಕೈಕ ಕಾರಣಕ್ಕೆ ಉಪನ್ಯಾಸಕರೊಬ್ಬರ ಕೈ ಕತ್ತರಿಸಿದ್ದ ಪಾಪ್ಯುಲರ್ ಫ್ರಂಟ್, ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಉಪನ್ಯಾಸಕನ ಕೃತ್ಯದಿಂದ ಮುಸ್ಲಿಮರ ಮನಸ್ಸಿಗೆ ನೋವಾಗಿರುವುದು ಹೌದು, ಆದರೆ ಇದು ಸಂಘಟನೆಯ ಕೃತ್ಯವಲ್ಲ ಎಂದು ಪಾಪ್ಯುಲರ್ ಫ್ರಂಟ್ ಅಧ್ಯಕ್ಷ ಇ.ಎಂ. ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.
ಲಷ್ಕರ್ ಇ ತೋಯ್ಬಾ, ಸಿಮಿ ಮತ್ತು ತಾಲಿಬಾನ್‌ಗಳಂತಹ ಭಯೋತ್ಪಾದಕ ಸಂಘಟನೆಗಳ ಜತೆ ಸಂಬಂಧ ಹೊಂದಿದೆ ಎಂಬ ಆರೋಪಗಳಿಗೆ ತುತ್ತಾಗಿರುವ ಪಾಪ್ಯುಲರ್ ಫ್ರಂಟ್ ಮೇಲೆ ನಿಷೇಧ ಹೇರುವ ಕುರಿತು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಇತ್ತೀಚೆಗಷ್ಟೇ ಕೇರಳ ಸರಕಾರ ಹೇಳಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ರಹಿಮಾನ್, ಸಂಘಟನೆಯ ಮೇಲೆ ನಿಷೇಧ ಹೇರಲು ಯಾವುದೇ ಒಂದು ಕಾರಣವೂ ಇಲ್ಲ. ನಮ್ಮ ಸಂಘಟನೆಯು ಈ ದೇಶದ ಕಾನೂನಿನ ಮೇಲೆ ನಂಬಿಕೆಯಿಟ್ಟಿದ್ದು, ಅದನ್ನು ಗೌರವಿಸುತ್ತಿದೆ. ಅದರ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತ ಮುಸ್ಲಿಮರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಲು ಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.
ಕೈ ಕತ್ತರಿಸಿದ್ದು ತಪ್ಪು... ಉಪನ್ಯಾಸಕ ಜೋಸೆಫ್ ಅವರ ಕೈ ಕತ್ತರಿಸಿದ್ದು ಶುದ್ಧ ಅಪರಾಧಿ ಕೃತ್ಯ ಎಂದು ಖಂಡಿಸಿರುವ ಪಾಪ್ಯುಲರ್ ಫ್ರಂಟ್ ಅಧ್ಯಕ್ಷ, ಇದರಲ್ಲಿ ಸಂಘಟನೆಯ ಯಾವುದೇ ಕಾರ್ಯಕರ್ತರು ಪಾಲ್ಗೊಂಡಿರುವುದು ಸಾಬೀತಾದರೆ ಅವರ ವಿರುದ್ಧ ಸೂಕ್ತ ಶಿಸ್ತಿನ ಕ್ರಮಕೈಗೊಳ್ಳಲಾಗುತ್ತದೆ. ಈ ಸಂಬಂಧ ಪೊಲೀಸರೊಂದಿಗೆ ಸಹಕರಿಸಲು ನಾನು ಸಿದ್ಧನಿದ್ದೇನೆ ಎಂದಿದ್ದಾರೆ.
ಪಾಪ್ಯುಲರ್ ಫ್ರಂಟ್ ಎನ್ನುವುದು ಮುಸ್ಲಿಂ ಜನಾಂಗೀಯರನ್ನು ಹೊಂದಿರುವ ಸಾಮಾಜಿಕ ಚಳವಳಿ. ಇದು ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದೆ. ನಾವು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಕಾನೂನುಗಳಿಗೆ ಬದ್ಧರಾಗಿದ್ದೇವೆ. ನಮ್ಮ ಜತೆಗಿರುವವರು ಯಾರೇ ಆಗಿರಲಿ, ಅವರು ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದರು.
ಕೃತ್ಯವನ್ನು ಖಂಡಿಸಿರುವ ಅವರು, 'ಉಪನ್ಯಾಸಕ ಜೋಸೆಫ್ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದಿರುವುದು ಸತ್ಯ. ಇದು ಕೆಲವರಿಗೆ ಸೇಡು ತೀರಿಸಿಕೊಳ್ಳಲು ಪ್ರಚೋದಿಸಿರಬಹುದು. ಆದರೆ ನಾವು ದಾಳಿಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ' ಎಂದರು.
ಇದು ಭಯೋತ್ಪಾದನೆಯಲ್ಲ... ಕೈ ಕತ್ತರಿಸಿರುವ ಕೃತ್ಯ ಭಯೋತ್ಪಾದನೆಯ ಭಾಗವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ರಹಿಮಾನ್, ಇದೊಂದು ಅಪರಾಧಿ ಕೃತ್ಯ; ಕ್ರಿಮಿನಲ್ ಕೃತ್ಯಗಳಿಗಿಂತ ಭಯೋತ್ಪಾದನೆ ಹೇಗೆ ಭಿನ್ನ ಎಂಬುದು ನನಗೆ ತಿಳಿದಿಲ್ಲ. ಹಾಗೆಲ್ಲಾದರೂ ಸಂಘಟನೆಗಳ ಕ್ರಿಮಿನಲ್ ಕೃತ್ಯಗಳನ್ನು ಭಯೋತ್ಪಾದನೆ ಎಂದು ಹೇಳುವುದಾದರೆ ಕೇರಳದಲ್ಲಿ ಸಾಮಾನ್ಯವಾಗಿರುವ ಆರೆಸ್ಸೆಸ್ ಮತ್ತು ಬಿಜೆಪಿ - ಸಿಪಿಐಎಂಗಳ ನಡುವಿನ ಸಂಘರ್ಷಗಳನ್ನು ಏನೆಂದು ಕರೆಯಬಹುದು ಎಂದು ಪ್ರಶ್ನಿಸಿದ್ದಾರೆ.
ನಾವು ತಾಲಿಬಾನಿಗಳಂತಲ್ಲ... ಅಮೆರಿಕಾ ಮತ್ತು ಅದರ ಮಿತ್ರ ರಾಷ್ಟ್ರಗಳ ಪಡೆಗಳ ಆಕ್ರಮಣಗಳ ವಿರುದ್ಧ ಅಫಘಾನಿಸ್ತಾನದಲ್ಲಿ ಸ್ಥಳೀಯವಾಗಿ ಹೋರಾಡುತ್ತಿರುವ ಜನತೆಯೇ ತಾಲಿಬಾನ್. ವಿದೇಶಿ ಪಡೆಗಳ ಕ್ರೂರ ದಾಳಿಗಳನ್ನು ನೀವು 'ಅಮೆರಿಕನಿಸಂ' ಅಥವಾ 'ಒಬಾಮಾನಿಸಂ' ಎಂದು ಕರೆಯುವಿರಾ ಎಂದು ಆರಂಭದಲ್ಲಿ ವಾದಿಸಿರುವ ರಹಿಮಾನ್, ತಕ್ಷಣವೇ ಸಾವರಿಸಿಕೊಂಡು 'ಇದರ ಅರ್ಥ ನಾವು ತಾಲಿಬಾನ್ ಅಥವಾ ಇತರ ಯಾವುದೇ ಸಂಘಟನೆಯ ಎಲ್ಲಾ ಕಾರ್ಯಾಚರಣೆಗಳನ್ನು ಒಪ್ಪಿಕೊಳ್ಳುತ್ತೇವೆ ಎಂದಲ್ಲ' ಎಂದಿದ್ದಾರೆ.
2006ರಲ್ಲಿ ಕೋಯಿಕ್ಕೋಡ್‌ನಲ್ಲಿ ಅಸ್ತಿತ್ವಕ್ಕೆ ಬಂದ ಪಾಪ್ಯುಲರ್ ಫ್ರಂಟ್ ಮೂರು ಅಂಗ ಸಂಸ್ಥೆಗಳನ್ನು ಹೊಂದಿದೆ. ಕರ್ನಾಟಕದಲ್ಲಿ ಫಾರಂ ಫಾರ್ ಡಿಗ್ನಿಟಿ (ಕೆಎಫ್‌ಡಿ), ಕೇರಳದಲ್ಲಿ ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ (ಎನ್‌ಡಿಎಫ್) ಮತ್ತು ತಮಿಳುನಾಡಿನಲ್ಲಿ ಮನಿತಾ ನೀತಿ ಪಸರೈ (ಎಂಎನ್‌ಪಿ) ಸಂಘಟನೆಗಳು ಪಾಪ್ಯುಲರ್ ಪ್ರಂಟ್‌ಗೆ ಬೆಂಬಲ ನೀಡುತ್ತಿವೆ.