ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರು ಕಾಂಗ್ರೆಸ್ಸನ್ನು ಮತ್ತೊಮ್ಮೆ ಕೆಣಕಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ಭ್ರಷ್ಟಾಚಾರದಲ್ಲಿ ಮೌನವಹಿಸಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಮಹಾತ್ಮ ಗಾಂಧೀಜಿಯವರ ಮೂರು ಮಂಗಗಳಿಗೆ ಹೋಲಿಸಿದ್ದಾರೆ.
ಕ್ರೀಡೆಯ ಹೆಸರಿನಲ್ಲಿ ರಾಷ್ಟ್ರದ ಧನಸಂಪತ್ತನ್ನು ಲೂಟಿ ಮಾಡುತ್ತಿದ್ದರೂ ಪ್ರಧಾನಿ ಸಿಂಗ್ ಎಲ್ಲೋ ನೋಡುತ್ತಿದ್ದಾರೆ ಎಂದು ವಿಚಾರಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಗಡ್ಕರಿ ಆರೋಪಿಸಿದರು.
ಈ ಲೂಟಿಯನ್ನು ಆಯೋಜಿಸಿರುವುದು ಕಾಂಗ್ರೆಸ್ ನೇತೃತ್ವದ ಯುಪಿಎ. ನಮ್ಮ ಪ್ರಧಾನ ಮಂತ್ರಿಯವರಿಗೆ ಕಣ್ಣಿದೆ, ಆದರೆ ನೋಡಲಾರರು; ಬಾಯಿ ಇದೆ, ಆದರೆ ಮಾತನಾಡಲಾರರು ಎಂದು ನನಗೆ ಕೆಲವು ಬಾರಿ ಅನಿಸುತ್ತದೆ. ಅವರೊಂದು ರೀತಿಯಲ್ಲಿ ಗಾಂಧೀಜಿಯವರ ಮೂರು ಮಂಗಗಳಂತೆ. ಅವರು ಆ ರೀತಿ ನಡೆದುಕೊಳ್ಳಬಾರದೆಂದು ನಾನು ಒತ್ತಾಯಿಸುತ್ತಿದ್ದೇನೆ ಎಂದು ಸಿಂಗ್ ಗಾಢ ಮೌನಕ್ಕೆ ಮಾತಿನ ಚಾಟಿ ಬೀಸಿದರು.
ಮಾತು ಮುಂದುವರಿಸಿದ ಗಡ್ಕರಿ, ಬಹುಶಃ ಪ್ರಧಾನ ಮಂತ್ರಿಯವರು ಕೆಟ್ಟದ್ದನ್ನು ಕೇಳಬಾರದು ಅಥವಾ ನೋಡಬಾರದು ಎಂದು ಬಯಸುತ್ತಿದ್ದಾರೆ ಎಂದು ಮತ್ತೆ ಕೆದಕಿದರು.
ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಗಡ್ಕರಿಯವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿಗಳಿಂದಲೇ ಸುದ್ದಿಯಲ್ಲಿರುವವರು. ಕೆಲವೇ ಸಮಯ ಹಿಂದಷ್ಟೇ ಪಾರ್ಲಿಮೆಂಟ್ ದಾಳಿಯಲ್ಲಿ ಗಲ್ಲು ಶಿಕ್ಷೆ ತೀರ್ಪು ಪಡೆದುಕೊಂಡಿರುವ ಭಯೋತ್ಪಾದಕ ಅಫ್ಜಲ್ ಗುರುವನ್ನು ಕಾಂಗ್ರೆಸ್ ಅಳಿಯನೇ ಎಂದು ಪ್ರಶ್ನಿಸುವ ಮೂಲಕ 'ಜಾತ್ಯತೀತ'ರ ಕೆಂಗಣ್ಣಿಗೆ ಗುರಿಯಾಗಿದ್ದರು.
ಅದಕ್ಕೂ ಮೊದಲು ರಾಷ್ಟ್ರೀಯ ಜನತಾದಳ ಮತ್ತು ಸಮಾಜವಾದಿ ಪಕ್ಷಗಳ ಮುಖಂಡರ ನಡೆಗಳನ್ನೂ ಗಡ್ಕರಿ ತೀಕ್ಷ್ಣವಾಗಿ ಬಣ್ಣಿಸಿದ್ದರು. ಲಾಲೂ ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಬೂಟು ನೆಕ್ಕುವ ನಾಯಿಗಳು ಎಂದು ಬಿಜೆಪಿ ಅಧ್ಯಕ್ಷರು ಹೇಳಿದ್ದರು.