ಲಕ್ನೋ: ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗುವುದಾಗಿ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿ ಘೋಷಿಸಿದ ಬೆನ್ನಿಗೆ ಪ್ರಕರಣದ ವಾದಿಗಳಲ್ಲೊಂದಾದ ಅಖಿಲ ಭಾರತ ಹಿಂದೂ ಮಹಾಸಭಾ ಕೂಡ ಅದೇ ಹಾದಿ ತುಳಿಯುವುದಾಗಿ ಹೇಳಿದೆ.
ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಶೇಷ ತ್ರಿಸದಸ್ಯ ಪೀಠವು ರಾಮ ಜನ್ಮಭೂಮಿಯನ್ನು ಮೂರು ಭಾಗಗಳಾಗಿ ವಿಭಾಗಿಸುವ ತೀರ್ಮಾನ ಕೈಗೊಂಡಿರುವುದರ ವಿರುದ್ಧ ನಾವು ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ಮಹಾಸಭಾದ ರಾಜ್ಯಾಧ್ಯಕ್ಷ ಕಮಲೇಶ್ ತಿವಾರಿ ತಿಳಿಸಿದ್ದಾರೆ.
ನಮ್ಮ ಹೋರಾಟವಾಗಿದ್ದ ರಾಮ ಜನ್ಮಭೂಮಿ ಅಯೋಧ್ಯೆಯಲ್ಲೇ ಇದೆ ಎಂಬ ವಾದವನ್ನು ಎಲ್ಲಾ ನ್ಯಾಯಮೂರ್ತಿಗಳು ಒಕ್ಕೊರಲಿನಿಂದ ಒಪ್ಪಿಕೊಂಡಿದ್ದಾರೆ. ಆದರೆ ಭೂಮಿಯನ್ನು ಹಂಚಿಕೆ ಮಾಡಿರುವುದನ್ನು ನಾವು ಪ್ರಶ್ನಿಸಲಿದ್ದೇವೆ ಎಂದರು.
1950ರ ಜನವರಿ 16ರಂದು ಫೈಜಾಬಾದ್ ಮಹಾಸಭಾದ ಅಧ್ಯಕ್ಷ ಗೋಪಾಲ್ ಸಿಂಗ್ ವಿಶಾರದ್ ಅವರು ಕಾನೂನು ಹೋರಾಟಕ್ಕೆ ಚಾಲನೆ ನೀಡಿದ್ದರು ಎಂದು ಇದೇ ಸಂದರ್ಭದಲ್ಲಿ ತಿವಾರಿಯವರು ಮಾಹಿತಿ ನೀಡಿದರು.
ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಹುಟ್ಟಿದ್ದು ಅಯೋಧ್ಯೆಯಲ್ಲೇ ಮತ್ತು ವಿವಾದಿತ ಸ್ಥಳದಲ್ಲಿ ಹಿಂದೆ ದೇಗುಲವಿತ್ತು. ಅದೇ ಜಾಗದಲ್ಲಿ ಮಸೀದಿಯನ್ನು ನಿರ್ಮಾಣ ಮಾಡಲಾಗಿತ್ತು. ಮಸೀದಿಯ ಕೇಂದ್ರ ಗುಮ್ಮಟವಿದ್ದ ಜಾಗದಲ್ಲಿ ರಾಮ ಹುಟ್ಟಿದ್ದು. ಅದು ಹಿಂದೂಗಳಿಗೆ ಸೇರಬೇಕು. ರಾಮ ಚಬೂತರ ಮತ್ತು ಸೀತಾ ರಸೋಯಿ ಕೂಡ ಹಿಂದೂಗಳಿಗೇ ಸೇರಬೇಕು. ಹಿಂದೂಗಳು ಪೂಜಿಸಲ್ಪಟದ ಭಾಗವು ಅಂದರೆ ಒಟ್ಟು ವಿವಾದಿತ ಜಾಗದ ಮೂರನೇ ಒಂದು ಭಾಗವು ಮುಸ್ಲಿಂ ಸಮುದಾಯಕ್ಕೆ ನೀಡಬೇಕು ಎಂದು ಕೋರ್ಟ್ ತೀರ್ಪು ನೀಡಿತ್ತು.
ಇದನ್ನು ಆಕ್ಷೇಪಿಸಿರುವ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಯು ಸುಪ್ರೀಂ ಕೋರ್ಟಿಗೆ ಹೋಗುವುದಾಗಿ ಹೇಳಿದೆ. ನ್ಯಾಯಾಲಯ ನೀಡಿರುವ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಇದರ ಬಗ್ಗೆ ಸಾರ್ವಜನಿಕವಾಗಿ ಯಾವುದೇ ವಿರೋಧವನ್ನು ವ್ಯಕ್ತಪಡಿಸುವುದಿಲ್ಲ. ಆದರೆ ಇದನ್ನು ನಾವು ಪ್ರಶ್ನಿಸಲಿದ್ದೇವೆ ಎಂದು ಸಂಘಟನೆ ತಿಳಿಸಿದೆ.