ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಡೆಯದ ಗಡ್ಕರಿ ಭೇಟಿ, ಯಡಿಯೂರಪ್ಪರ 3 ಸೂತ್ರ (Yaddyurappa | Karnataka Crisis | BJP | Nitin Gadkari | BJP High Command)
Bookmark and Share Feedback Print
 
PTI
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ನಡುವಣ ಮಾತುಕತೆ ಮಂಗಳವಾರ ರಾತ್ರಿಯವರೆಗೂ ಕಣ್ಣಾಮುಚ್ಚಾಲೆಯಾಟದಂತಾಗಿದ್ದು, ಯಡಿಯೂರಪ್ಪ ಅವರು ದಿಟ್ಟವಾಗಿಯೇ ತಮ್ಮ ನಿಲುವನ್ನು ಪ್ರಕಟಿಸಿರುವುದರಿಂದ, ಏನು ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಬಿಜೆಪಿ ರಾಷ್ಟ್ರೀಯ ನಾಯಕರು ಗೊಂದಲದ ಗೂಡಿನಲ್ಲಿದ್ದಾರೆ. ರಾಜಧಾನಿಯಲ್ಲಿ ಮಂಗಳವಾರ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ತೀರಾ ಇತ್ತೀಚಿನ ವರದಿಗಳು ಬಂದಾಗ, ಹಿರಿಯ ಬಿಜೆಪಿ ಮುಖಂಡ ಬಾಳಾ ಅಪ್ಟೆ ನಿವಾಸದಲ್ಲಿ ಸಭೆ-ಸಮಾಲೋಚನೆ ನಡೆಸಲಾಗುತ್ತಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆರೆಸ್ಸೆಸ್ ಹಿರಿಯ ಮುಖಂಡ ಅಪ್ಟೆ ನಿವಾಸದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ನಾಯಕರಾದ ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು, ಅರುಣ್ ಜೇಟ್ಲಿ, ಆರೆಸ್ಸೆಸ್‌ನ ವಿ.ಸತೀಶ್ ಮತ್ತು ರಾಮ್ ಲಾಲ್ ಮುಂತಾದವರು ಭಾಗವಹಿಸಿದ್ದಾರೆ.

ಯಡಿಯೂರಪ್ಪ ಅವರು ಮೂರು ಸೂತ್ರಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದ್ದು ಆ ಸಂಧಾನ ಸೂತ್ರಗಳು ಇಂತಿವೆ:
* ನಾಯಕತ್ವ ಬದಲಾವಣೆ ವಿಚಾರವು ಕೇಂದ್ರೀಯ ಮಟ್ಟದಲ್ಲಲ್ಲ, ರಾಜ್ಯ ಮಟ್ಟದಲ್ಲೇ ನಡೆಯಬೇಕು. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಾಯಕತ್ವ ಬದಲಾವಣೆಗೆ ಮುಂದಾಗಬೇಕು. ಅದಕ್ಕಾಗಿ ರಾಜ್ಯಕ್ಕೆ ಕೇಂದ್ರೀಯ ವೀಕ್ಷಕರನ್ನು ಕಳುಹಿಸಬೇಕು.
* ಪಕ್ಷದಲ್ಲಿದ್ದುಕೊಂಡು ಸರಕಾರವನ್ನು, ಪಕ್ಷವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
* ತಾನು ಹೇಳಿದವರನ್ನೇ ಮುಖ್ಯಮಂತ್ರಿ ಹುದ್ದೆಗೆ ನಿಯಮಿಸಬೇಕು.

ರಾಜ್ಯದಲ್ಲಿ ಪಕ್ಷ ಮತ್ತು ಸರಕಾರ ಉಳಿಯಬೇಕಿದ್ದರೆ ಈ ಸೂತ್ರಗಳನ್ನು ಪಾಲಿಸಬೇಕು ಎಂದು ಯಡಿಯೂರಪ್ಪ ಹೇಳಿರುವುದರಿಂದ ಮತ್ತು ಹೈಕಮಾಂಡ್‌ಗೂ ಇದು ಹೌದು ಅನ್ನಿಸಿದ್ದರಿಂದ ರಾಷ್ಟ್ರೀಯ ನಾಯಕರು ಗೊಂದಲದಲ್ಲಿ ಸಿಲುಕಿದ್ದಾರೆ. ಯಡಿಯೂರಪ್ಪ ಅವರ ಮೇಲೆ ಕ್ರಮ ಕೈಗೊಂಡು ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರ ಮತ್ತು ಪಕ್ಷಕ್ಕೆ ಆತಂಕ ತಂದುಕೊಳ್ಳಬೇಕೇ, ಅಥವಾ ಕ್ರಮ ಕೈಗೊಳ್ಳದೆ ಸುಮ್ಮನಿರುವ ಮೂಲಕ, ಕೇಂದ್ರೀಯ ಮಟ್ಟದಲ್ಲಿ ಯುಪಿಎ ಸರಕಾರದ ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ಕೈಬಿಡುವಂತಾಗಬೇಕೇ ಎಂಬ ಇಕ್ಕಟ್ಟಿನಲ್ಲಿ ಸಿಲುಕಿದೆ ಬಿಜೆಪಿ ಹೈಕಮಾಂಡ್.

ಆದರೆ, ಬೆಳಿಗ್ಗೆ ಮಾಧ್ಯಮಗಳೆದುರು ಕಾಣಿಸಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಆಮೇಲೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಉನ್ನತ ನಾಯಕರ ಸಭೆಯಲ್ಲೂ ಹಾಜರಿರಲಿಲ್ಲ ಎಂದಿವೆ ಮೂಲಗಳು.

ಅದರ ನಡುವೆ, ಬೆಳಿಗ್ಗೆ ವರದಿಯಾದಂತೆ, ಯಡಿಯೂರಪ್ಪ ಅವರು ಸೇಫ್ ಆಗಿದ್ದಾರೆಯೇ ಎಂಬ ಊಹಾಪೋಹಗಳಿನ್ನೂ ಚಾಲ್ತಿಯಲ್ಲಿವೆ. (ಕ್ಲಿಕ್ ಮಾಡಿ) ರಾಜ್ಯದ ಸಂಸದರ ಬೆಂಬಲವೂ ಯಡಿಯೂರಪ್ಪ ಅವರಿಗಿದೆ. ಇವೆಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ, ಬಿಜೆಪಿ ಕೇಂದ್ರೀಯ ಮಟ್ಟದಲ್ಲಿಯೂ ಒಡೆದ ಮನೆಯಾಗಿದೆ, ಅಲ್ಲೂ ಕೂಡ ಪಕ್ಷದೊಳಗೆ ಯಡಿಯೂರಪ್ಪ ಪರ ಮತ್ತು ವಿರೋಧ ಎಂಬ ಎರಡು ಬಣಗಳಿವೆ.

ನಡೆಯದ ಗಡ್ಕರಿ-ಯಡಿಯೂರಪ್ಪ ಮುಖಾಮುಖಿ...
ಭೂಹಗರಣಗಳ ಹಿನ್ನೆಲೆಯಲ್ಲಿ, ಯಡಿಯೂರಪ್ಪ ಅವರು ಹೈಕಮಾಂಡ್‌ನ ರಾಜೀನಾಮೆ ಸೂಚನೆಯನ್ನು ಧಿಕ್ಕರಿಸಿ, ತಲೆಮರೆಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳ ನಡುವೆಯೇ, ಸೋಮವಾರ ತಮ್ಮ ವೈಷ್ಣೋದೇವಿ ದರ್ಶನ ಕಾರ್ಯಕ್ರಮ ರದ್ದುಪಡಿಸಿ ದೆಹಲಿಗೆ ಧಾವಿಸಿದ್ದ ಸಿಎಂ ಅವರಿಗೆ ಗಡ್ಕರಿಯವರು ಭೇಟಿಗೆ ಸಿಕ್ಕಿರಲಿಲ್ಲ. ಯಡಿಯೂರಪ್ಪ ಜೊತೆ ಮಾತುಕತೆ ನಡೆಸುವಂತೆ ಗಡ್ಕರಿಯವರು ಹಿರಿಯ ನಾಯಕ ಅರುಣ್ ಜೇಟ್ಲಿ ಅವರಿಗೆ ಸೂಚಿಸಿ, ನಾಗ್ಪುರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಹೊರಟಿದ್ದರು.

ಗಡ್ಕರಿ ಮಂಗಳವಾರ ಅಪರಾಹ್ನ ದೆಹಲಿಗೆ ಮರಳಿದರೂ, ಗಡ್ಕರಿ-ಯಡಿಯೂರಪ್ಪ ಭೇಟಿ ಎಷ್ಟೇ ಹೊತ್ತಾದರೂ ಸಾಧ್ಯವಾಗಿರಲಿಲ್ಲ. ಈ ನಡುವೆ, ಯಡಿಯೂರಪ್ಪ ಅವರು ದೆಹಲಿಯಲ್ಲಿ ಎಲ್ಲಿದ್ದಾರೆಂಬುದೇ ಗೊತ್ತಾಗಲಿಲ್ಲ ಎಂಬ ಮಾಹಿತಿಗಳೂ ಬಂದಿದ್ದವು. ನಡುನಡುವೆ, ಯಡಿಯೂರಪ್ಪ ಅವರು ಗುಜರಾತ್ ಮುಖ್ಯಮಂತ್ರಿಯೊಂದಿಗೆ ಸಾಯಂಕಾಲ ಮಾತುಕತೆ ನಡೆಸುವರೆಂಬ ವರದಿಗಳೂ ಬರುತ್ತಿದ್ದವು. ಎಲ್ಲವೂ ಅಸ್ಪಷ್ಟವಾಗಿದ್ದವು.

ಅದರ ಮಧ್ಯೆಯೇ, ದೆಹಲಿಯಲ್ಲಿ ಎಲ್.ಕೆ.ಆಡ್ವಾಣಿ ನೇತೃತ್ವದಲ್ಲಿ ವೆಂಕಯ್ಯ ನಾಯ್ಡು ಮತ್ತು ಇತರ ಹಿರಿಯ ನಾಯಕರು ಕರ್ನಾಟಕ ರಾಜಕೀಯ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದರು. ಅದರ ಫಲಿತಾಂಶವೇನು ಎಂಬುದು ಮಾಧ್ಯಮಗಳಿಗೆ ಇನ್ನೂ ತಿಳಿಯಲಿಲ್ಲ.

ಇದನ್ನೂ ಓದಿ :
ಪ್ರಧಾನಿಯ ವಿಮಾನದಲ್ಲಿ ಸಿಎಂ ಬಂದಿದ್ದು ರಾಜಕೀಯ ತಂತ್ರವೇ?
ಜಾತಿ ರಾಜಕೀಯವೇ, ರಾಜಕೀಯವೇ ಜಾತಿಯೇ?
ಸಂಬಂಧಿತ ಮಾಹಿತಿ ಹುಡುಕಿ