ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ನ ಗಂಡನಿಗೆ ರಾಡಿಯಾ ಸಂಬಂಧವಿಲ್ಲ: ಅನಂತ್ ಪತ್ನಿ (Ananth Kumar | Tejaswini Ananth Kumar | BJP | Niira Radia)
Bookmark and Share Feedback Print
 
2ಜಿ ಹಗರಣದಲ್ಲಿ ಬೆಳಕಿಗೆ ಬಂದಿರುವ ಕುಖ್ಯಾತ ಲಾಬಿಗಾರ್ತಿ ನೀರಾ ರಾಡಿಯಾ ಜತೆ ನಾಗರಿಕ ವಾಯುಯಾನ ಮಾಜಿ ಸಚಿವ ಅನಂತ್ ಕುಮಾರ್ ನಿಕಟ ಸಂಬಂಧ ಹೊಂದಿದ್ದರು ಎಂಬ ಆರೋಪಗಳನ್ನು ಬಿಜೆಪಿ ಮುಖಂಡನ ಪತ್ನಿ ತೇಜಸ್ವಿನಿ ತಳ್ಳಿ ಹಾಕಿದ್ದು, ಆರೋಪಗಳು ಆಧಾರ ರಹಿತ ಮತ್ತು ರಾಜಕೀಯ ಪ್ರೇರಿತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಪಟ್ಟ ಸುದ್ದಿಗಳು:
** ಅನಂತ್, ಗಡ್ಕರಿ ಮೇಲೆ ನೀರಾ 'ರಾಡಿ'; ಬಿಜೆಪಿಗೆ ಮುಖಭಂಗ
** ನನ್ನ ಮತ್ತು ಅಡ್ವಾಣಿ ಮೇಲಿನ ಆರೋಪಗಳು ಸುಳ್ಳು: ಗಡ್ಕರಿ
** ನೀರಾ 'ರಾಡಿ'ಯಾಗೆ ಪೇಜಾವರ ಸ್ವಾಮಿ ಲಿಂಕ್; ನಿರಾಕರಣೆ

ಅದಮ್ಯ ಚೇತನ ಟ್ರಸ್ಟ್ ಎಂಬ ಸರಕಾರೇತರ ಸಂಘಟನೆಯನ್ನು ನಡೆಸುತ್ತಿರುವ ತೇಜಸ್ವಿನಿ ಪತ್ರಕರ್ತರ ಜತೆ ಮಾತನಾಡುತ್ತಾ, ಇಂತಹ ತಳರಹಿತ ಆರೋಪಗಳನ್ನು ಮಾಡುವ ಮೂಲಕ ಕಾಂಗ್ರೆಸ್ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದರು.
PTI

2ಜಿ ತರಂಗಾಂತರ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಹಗರಣಗಳ ಮೇಲಿನ ಗಮನ ವಿಕೇಂದ್ರೀಕರಣಕ್ಕೆ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸ್ ಆರೋಪಗಳನ್ನು ಮಾಡುತ್ತಿದೆ. 2ಜಿ ಹಗರಣವನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಿಸಬೇಕು ಎಂದು ಬೇಡಿಕೆಯಲ್ಲಿ ನನ್ನ ಗಂಡ ಮುಂಚೂಣಿಯಲ್ಲಿ ಹೋರಾಡುತ್ತಿರುವುದರಿಂದ ಅವರನ್ನು ಕಾಂಗ್ರೆಸ್ ಗುರಿಯಾಗಿಸಿಕೊಂಡಿದೆ ಎಂದು ತೇಜಸ್ವಿನಿ ಆರೋಪಿಸಿದರು.

ಎನ್‌ಡಿಎ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಅನಂತ್ ಕುಮಾರ್, ರಾಡಿಯಾ ಜತೆ ಸಂಬಂಧ ಹೊಂದಿದ್ದರು. 2002ರಲ್ಲಿ ವಸಂತ್ ಕುಂಜ್‌ನಲ್ಲಿನ ರಾಡಿಯಾ ಅವರ ಟ್ರಸ್ಟ್‌ಗೆ ಎನ್‌ಡಿಎ ಸರಕಾರವು ಭಾರೀ ಪ್ರಮಾಣದ ಜಮೀನು ಮಂಜೂರು ಮಾಡಿತ್ತು. ಅನಂತ್ ಕುಮಾರ್ ಅವರು ಸಂಪುಟದ ರಹಸ್ಯ ದಾಖಲೆಗಳನ್ನು ರಾಡಿಯಾಗೆ ನೀಡುತ್ತಿದ್ದರು. ಈ ಸಂಬಂಧ ರಾಡಿಯಾರಿಂದ ಕಮಿಷನ್ ಹಣವನ್ನು ಕೂಡ ಅನಂತ್ ಪಡೆಯುತ್ತಿದ್ದರು ಎಂದು ರಾಡಿಯಾ ಮಾಜಿ ಸಹಚರ ರಾವ್ ಧೀರಜ್ ಸಿಂಗ್ ಆರೋಪಿಸಿದ್ದರು.

ಇದನ್ನೇ ಮುಂದಿಟ್ಟುಕೊಂಡಿದ್ದ ಕಾಂಗ್ರೆಸ್, ಅನಂತ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿತ್ತು. ಅಲ್ಲದೆ ಅವರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸಿತ್ತು. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದೂ ಕೆಲವು ನಾಯಕರು ಒತ್ತಾಯಿಸಿದ್ದರು.

ಈ ಸಂಬಂಧ ಕಾಂಗ್ರೆಸ್‌ನ ಕರ್ನಾಟಕ ವಕ್ತಾರ ಜಿ.ಸಿ. ಚಂದ್ರಶೇಖರ್ ಮಾತನಾಡುತ್ತಾ, ರಾಡಿಯಾ ಜತೆಗಿನ ತನ್ನ ಲಿಂಕ್ ಕುರಿತು ಅನಂತ್ ಕುಮಾರ್ ಇದುವರೆಗೂ ಸೂಕ್ತ ಸ್ಪಷ್ಟನೆಯನ್ನು ನೀಡಿಲ್ಲ. ಅವರು ಪರಿಶುದ್ಧರೆಂಬುದು ತಿಳಿಯುವವರೆಗೆ ಅವರು ಯಾವುದೇ ಸ್ಥಾನಗಳಲ್ಲಿ ಮುಂದುವರಿಯಬಾರದು ಎಂದು ಆಗ್ರಹಿಸಿದ್ದಾರೆ.

ಆದರೆ ಬಿಜೆಪಿ ಮೂಲಗಳ ಪ್ರಕಾರ, ಅನಂತ್ ಮೇಲೆ ಇಂತಹ ಆರೋಪಗಳನ್ನು ಮಾಡಿರುವುದೇ ಹಗರಣದ ಗಮನವನ್ನು ಬೇರೆಡೆ ಸೆಳೆಯಲು. ಈ ರಾವ್ ಧೀರಜ್ ಸಿಂಗ್ ಕಾಂಗ್ರೆಸ್ ಆಪ್ತ. ಆತನನ್ನು ಸೂಕ್ತ ಸಮಯದಲ್ಲಿ ಕಾಂಗ್ರೆಸ್ ಬಳಸಿಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ