ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಬರಿಮಲೆ ದುರಂತ; ಭಕ್ತರು ಕೇರಳದವರಲ್ಲ ಎಂಬ ನಿರ್ಲಕ್ಷ್ಯವೇ? (Sabarimala | Ayyappa temple | Sabarimala stampede | Kerala)
Bookmark and Share Feedback Print
 
ಮಕರ ಸಂಕ್ರಾಂತಿಯಂದು ದುರಂತ ನಡೆದ ಪುಲಿಮೇಡು ಪ್ರದೇಶವನ್ನು ಹೆಚ್ಚಾಗಿ ಬಳಸುವುದು ಕೇರಳದವರನ್ನು ಹೊರತುಪಡಿಸಿದ ರಾಜ್ಯದವರು ಎಂಬ ಕಾರಣದಿಂದ ಕೇರಳ ಸರಕಾರವು ಸುರಕ್ಷತೆಯ ಕಡೆ ನಿರ್ಲಕ್ಷ್ಯ ವಹಿಸಿತ್ತೇ? ಕೋಟಿಗಳ ಲೆಕ್ಕದಲ್ಲಿ ಆದಾಯವಿದ್ದರೂ ಮೂಲಭೂತ ಸೌಕರ್ಯಗಳನ್ನು ಅದೇ ಕಾರಣದಿಂದ ಮಾಡುತ್ತಿಲ್ಲವೇ? ಇಂತಹ ಹಲವು ಪ್ರಶ್ನೆಗಳು, ಆರೋಪಗಳು ಶಬರಿಮಲೆ ಕಾಲ್ತುಳಿತ ದುರಂತದ ನಂತರ ಎದ್ದಿವೆ-ಬರುತ್ತಿವೆ.

ಜನವರಿ 14ರಂದು ರಾತ್ರಿ ಎಂಟು ಗಂಟೆ ಹೊತ್ತಿಗೆ ದುರಂತ ನಡೆದ ನಿರ್ದಿಷ್ಟ ಸ್ಥಳ ಪುಲಿಮೇಡುವಿನ (ಹುಲಿಗಳ ರಕ್ಷಿತಾರಣ್ಯ) ಉಪ್ಪುಪಾರ. ಇದು ಇಡುಕ್ಕಿ ಜಿಲ್ಲೆಯ ವೆಂಡಿಪಿರಿಯಾರ್ ಎಂಬಲ್ಲಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಂದ ಅಯ್ಯಪ್ಪ ಸನ್ನಿಧಿಗೆ ಇರುವ ದೂರ ಐದು ಕಿಲೋ ಮೀಟರ್.

ತಮಿಳುನಾಡಿನ 35, ಕರ್ನಾಟಕದ 31, ಆಂಧ್ರಪ್ರದೇಶದ 23, ಕೇರಳದ ಐವರು, ಪುದುಚೇರಿಯ ಇಬ್ಬರು ಹಾಗೂ ಶ್ರೀಲಂಕಾದ ಓರ್ವ ಭಕ್ತ ಸೇರಿದಂತೆ 102 ಭಕ್ತರು ಕಾಲ್ತುಳಿತದಲ್ಲಿ ಅಸುನೀಗಿದ್ದರು.
PR

ಇಲ್ಲಿ ಥಟ್ಟನೆ ಕಣ್ಣಿಗೆ ರಾಚುವಂತೆ ಕಾಣುವ ಪ್ರಮುಖ ಅಂಶವೆಂದರೆ ಕಾಲ್ತುಳಿತ ನಡೆದ ಮಾರ್ಗವನ್ನು ಬಳಕೆ ಮಾಡುತ್ತಿರುವ ಬಗ್ಗೆ. ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಹೋಗಲು ಇರುವ ದಾರಿಗಳು ಮೂರು. ಮೊದಲನೆಯದ್ದು ಕೊಟ್ಟಾಯಂನಿಂದ ಪಂಪೆಗೆ. ಎರಡನೆಯದ್ದು ಎರುಮೇಲಿಯಿಂದ ಪಂಪೆಗೆ. ಇನ್ನೊಂದು ವೆಂಡಿಪಿರಿಯಾರ್ ಮೂಲಕ ಸನ್ನಿಧಾನಕ್ಕೆ.

ಇವುಗಳಲ್ಲಿ ವೆಂಡಿಪಿರಿಯಾರ್ ಮಾರ್ಗವನ್ನು ಹೆಚ್ಚಾಗಿ ಬಳಸುವುದು ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಭಕ್ತರು. ಕೆಲವೇ ಕೆಲವು ಕೇರಳಿಗರು ಮಾತ್ರ ಈ ಮಾರ್ಗದಿಂದ ಶಬರಿಮಲೆಗೆ ಬರುತ್ತಾರೆ. ಕರ್ನಾಟಕದ ಭಕ್ತರನ್ನು ಗಮನಕ್ಕೆ ತೆಗೆದುಕೊಂಡರೆ, ಎರುಮೇಲಿಯಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಹೋಗುತ್ತಾರೆ.

ಹಾಗಾದರೆ ಕೇರಳದ ಭಕ್ತರು ಶಬರಿಮಲೆಗೆ ತೆರಳಲು ಬಳಸುವ ಮಾರ್ಗಗಳನ್ನು ಮಾತ್ರ ಅಭಿವೃದ್ಧಿಪಡಿಸಿ ಉಳಿದ ಮಾರ್ಗಗಳನ್ನು ನಿರ್ಲಕ್ಷಿಸಲಾಗಿದೆಯೇ? ಹೌದು ಎಂದು ಹೇಳಲು ಕೆಲವು ಕಾರಣಗಳಿವೆ. ಅಲ್ಲ ಎಂದು ಹೇಳುವುದಕ್ಕೂ ಕಾರಣಗಳಿವೆ.

ನಾಲ್ಕು ಕೋಟಿಗೂ ಅಧಿಕ ಭಕ್ತರನ್ನು ಈ ವರ್ಷ ಕಂಡ ಶಬರಿಮಲೆ, ಮಕರ ಸಂಕ್ರಾಂತಿಯಂದು ಸುಮಾರು 20 ಲಕ್ಷ ಭಕ್ತರಿಗೆ ಸಾಕ್ಷಿಯಾಗಿತ್ತು. ಅವರಲ್ಲಿ ಸುಮಾರು ಆರು ಲಕ್ಷಕ್ಕೂ ಅಧಿಕ ಮಂದಿ ಆರಿಸಿಕೊಂಡದ್ದು ವೆಂಡಿಪಿರಿಯಾರ್ ಮಾರ್ಗವನ್ನು.

ಶಬರಿಮಲೆ ಪ್ರದೇಶದಲ್ಲಿ ಮಕರ ಸಂಕ್ರಾಂತಿಯಂದು ಅಯ್ಯಪ್ಪ ದರ್ಶನದ ನಂತರ ಜ್ಯೋತಿ ವೀಕ್ಷಣೆಗೆ ಇರುವ ಅಧಿಕೃತ ಸ್ಥಳ ಪಂಪೆ. ಅದು ಬಿಟ್ಟರೆ ಇರುವ ಇನ್ನೊಂದು ಜಾಗ ವೆಂಡಿಪಿರಿಯಾರ್. ಈ ಎರಡು ಸ್ಥಳಗಳಲ್ಲಿ ಜ್ಯೋತಿಯನ್ನು ಸ್ಪಷ್ಟವಾಗಿ ನೋಡಬಹುದು. ಉಳಿದ ಜಾಗಗಳನ್ನು ಸಾಮಾನ್ಯವಾಗಿ ಪ್ರಶಸ್ತವೆಂದು ಪರಿಗಣಿಸುವುದಿಲ್ಲ.

ಬಹುತೇಕ ಮಂದಿ ಜ್ಯೋತಿ ದರ್ಶನಕ್ಕೆ ಯೋಗ್ಯ ಎಂದು ಪರಿಗಣಿಸುವುದು ಪಂಪೆಯನ್ನು. ಇಲ್ಲಿಂದ ವಾಹನಗಳಲ್ಲಿ ತಂತಮ್ಮ ಊರುಗಳಿಗೆ ಸುಲಭವಾಗಿ ಹೋಗಬಹುದು ಎನ್ನುವುದು ಪ್ರಮುಖ ಕಾರಣ. ಪಂಪೆಯಲ್ಲಿ ಈ ರೀತಿಯಾಗಿ ಭಾರೀ ನಿಭಿಡತೆ ಇರುತ್ತದೆ ಎಂಬ ನಿಟ್ಟಿನಲ್ಲಿ ವೆಂಡಿಪಿರಿಯಾರ್ ಮಾರ್ಗವನ್ನು ಕೆಲವರು ಆಯ್ದುಕೊಳ್ಳುತ್ತಾರೆ.

ಅಂತಹ ಸ್ಥಳದಲ್ಲಿ ನಿಯೋಜಿಸಿದ್ದ ಪೊಲೀಸರ ಸಂಖ್ಯೆ ಗೊತ್ತೇ? ಕೇವಲ 30. ಇದನ್ನೇ ಅರಣ್ಯ ಇಲಾಖೆಯೂ ಬೆಟ್ಟು ಮಾಡಿ ತೋರಿಸುತ್ತಿದೆ. ಉಪ್ಪುಪಾರದ ಮೂಲಕ ತೆರಳುವ ಭಕ್ತರ ಸಂಚಾರ ಸುಗಮವಾಗಿರುವಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಯು ಹೆಚ್ಚಿನ ಮುತುವರ್ಜಿ ವಹಿಸಬೇಕಿತ್ತು, ಅದು ನಮ್ಮ ಕೆಲಸವಲ್ಲ ಎನ್ನುವುದು ಅರಣ್ಯ ಇಲಾಖೆಯ ಆರೋಪ.

ಈ ಮಾರ್ಗದಲ್ಲಿ ಭಾರೀ ಪ್ರಮಾಣದಲ್ಲಿ ವಾಹನ ಸಮೇತ ಭಕ್ತರನ್ನು ಹೋಗಲು ಬಿಟ್ಟದ್ದು ಅರಣ್ಯ ಇಲಾಖೆ. ವಾಹನಗಳಿಗೆ ನಿಷೇಧವಿದ್ದರೂ ಹೀಗೆ ಮಾಡಿದ್ದು ಯಾಕೆ ಎಂದು ಪೊಲೀಸ್ ಇಲಾಖೆ ಪ್ರತ್ಯಾರೋಪ ಮಾಡುತ್ತಿದೆ.

ಆಗಲೇ ಹೇಳಿದಂತೆ ವೆಂಡಿಪಿರಿಯಾರ್ ಎನ್ನುವುದು ಹುಲಿ ರಕ್ಷಿತಾರಣ್ಯ. ಇಲ್ಲಿ ರಸ್ತೆಯೇ ಇಲ್ಲ. ಇದ್ದರೂ ಅದು ತೀರಾ ಇಕ್ಕಟ್ಟಾದ ರಸ್ತೆ. ಬೆಳಕು, ನೀರು, ಆಹಾರದ ವ್ಯವಸ್ಥೆಯಂತೂ ಮರೀಚಿಕೆ. ಇಲ್ಲಿ ವಾಹನಗಳೊಂದಿಗೆ ಭಕ್ತರು ಹೋಗುವಂತಿಲ್ಲ. ಸರಕಾರದ ನಿಷೇಧವಿದೆ. ಆದರೆ ಹಣದ ಆಸೆಗೆ ಬಲಿ ಬೀಳುವ ಅರಣ್ಯ ಇಲಾಖೆ ಸಿಬ್ಬಂದಿಗಳು, 100 ರೂಪಾಯಿ ಪಡೆದುಕೊಂಡು ಎಲ್ಲರನ್ನೂ ಬಿಡುತ್ತಾರೆ.

ಹುಲಿ ರಕ್ಷಿತಾರಣ್ಯ ಪ್ರದೇಶವಾದರೂ ವಾಹನಗಳೊಂದಿಗೆ ಭಕ್ತರನ್ನು ತೆರಳಲು ಅವಕಾಶ ನೀಡಿರುವ ಅರಣ್ಯ ಇಲಾಖೆ, ಹೊರ ರಾಜ್ಯಗಳ ಭಕ್ತರು ಹೆಚ್ಚಾಗಿ ಬಳಸುವ ಒಂದು ಮಾರ್ಗದಲ್ಲಿ ಸುರಕ್ಷತೆಯನ್ನು ಕಡೆಗಣಿಸಿದ ಪೊಲೀಸ್ ಇಲಾಖೆ, ಇವೆರಡು ಇಲಾಖೆಗಳ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸಬೇಕಾಗಿದ್ದ ಕೇರಳ ಸರಕಾರ ಮತ್ತು ತಿರುವಾಂಕೂರ್ ದೇವಸ್ವಂ ಮಂಡಳಿ -- ಇವರಲ್ಲಿ ತಪ್ಪಿತಸ್ಥರು ಯಾರು?

ಸಂಬಂಧಪಟ್ಟ ಸುದ್ದಿಗಳು:
** ಕಾಲ್ತುಳಿತದಿಂದ ಸ್ವಲ್ಪದರಲ್ಲೇ ಪಾರಾದ ವಿವೇಕ್ ಒಬೆರಾಯ್
** ಶಬರಿಮಲೆ ದುರಂತ ನಡೆದ ಪ್ರದೇಶ ಹುಲಿ-ಚಿರತೆಗಳದ್ದು!
** ಶಬರಿಮಲೆ; ಕರ್ನಾಟಕದ ಮುಸ್ಲಿಂ ಭಕ್ತನನ್ನೂ ಬಿಡದ ಜವರಾಯ
ಸಂಬಂಧಿತ ಮಾಹಿತಿ ಹುಡುಕಿ