ತನ್ನ ಪತ್ನಿಯನ್ನು ಯಾರಾದರೂ ಅತ್ಯಾಚಾರ ಮಾಡುತ್ತಿದ್ದರೆ ಪತಿಯಾದವನು ಅವಳನ್ನು ರಕ್ಷಿಸಲು ಯಾವುದೇ ಅಪಾಯಕಾರಿ ಸಾಹಸಕ್ಕಾದರೂ ಕೈ ಹಾಕುವುದು ತಕ್ಷಣದ ಪ್ರತಿಕ್ರಿಯೆ. ಅದನ್ನು ಬಿಟ್ಟು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಾರೆಯೇ ಎನ್ನುವುದು ಅತ್ಯಾಚಾರದ ಆರೋಪ ಹೊತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪನವರ ಪ್ರಶ್ನೆ. ಅದೇ ಹೊತ್ತಿಗೆ ಹಾಲಪ್ಪನವರ ಮೇಲೆ ಅತ್ಯಾಚಾರ ಆರೋಪ ಹೊರಿಸಿದ ದಂಪತಿಯ ರಂಗುರಂಗಿನ 'ಇತಿಹಾಸ'ವೂ ಬಯಲಾಗಿದೆ.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹರತಾಳು ಹಾಲಪ್ಪನವರ ಮೇಲೆ ನಿನ್ನೆ ದಿನಪತ್ರಿಕೆಯೊಂದರಲ್ಲಿ ಅತ್ಯಾಚಾರ ಆರೋಪ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ತಕ್ಷಣವೇ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಹತ್ತು-ಹಲವು ಬೆಳವಣಿಗೆಗಳು ನಡೆದು ಹೋಗಿವೆ. ಅವುಗಳತ್ತ ಒಂದು ಸುತ್ತು ಗಮನ ಹರಿಸೋಣ...
ಯಾರಾದ್ರೂ ಶೂಟಿಂಗ್ ಮಾಡ್ತಾರಾ? ಇದು ಆರೋಪಿ ಹಾಲಪ್ಪ ಮಾಡಿರುವ ಪ್ರಶ್ನೆ. ಹೆಂಡತಿಯ ಮೇಲೆ ಯಾರಾದರೂ ಅತ್ಯಾಚಾರ ಮಾಡುತ್ತಿದ್ದಾಗ ದೊಣ್ಣೆ ಎಲ್ಲಿದೆ ಎಂದು ಹುಡುಕುತ್ತಾರೆಯೇ ಹೊರತು ಮೊಬೈಲ್ ಅಲ್ಲ. ಇದರ ಹಿಂದೆ ದೊಡ್ಡ ಪಿತೂರಿಯೇ ಇದೆ. ನಮ್ಮದೇ ಪಕ್ಷದ ಕೆಲವರು ಮತ್ತು ನನ್ನ ರಾಜಕೀಯ ಗುರು ಎಸ್. ಬಂಗಾರಪ್ಪನವರ ಕುಟುಂಬದ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿನ ಕೆಲವು ಸಚಿವಾಕಾಂಕ್ಷಿ ಶಾಸಕರು ಮತ್ತು ಬಂಗಾರಪ್ಪನವರ ಕುಟುಂಬದ್ದೇ ಪಿತೂರಿಯಿದು. ನಾನು ಶಿವಮೊಗ್ಗದಲ್ಲಿ ಯಾವುದೇ ಸ್ನೇಹಿತನ ಮನೆಯಲ್ಲಿ ಮಲಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಾಲಪ್ಪನವರ ವಿರುದ್ಧ ದಂಪತಿ ದೂರು... ಹಾಲಪ್ಪ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಲಾಗಿರುವ ಮಹಿಳೆ ಚಂದ್ರಾವತಿ ಮತ್ತು ಅವರ ಪತಿ ಹಾಗೂ ಮಾಜಿ ಸಚಿವರ ಗೆಳೆಯ ವೆಂಕಟೇಶ್ ಮೂರ್ತಿ ಭಾನುವಾರ ರಾತ್ರಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಜಯ್ ಕುಮಾರ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಆರಂಭದಲ್ಲಿ ಅವರನ್ನು ಭೇಟಿ ಮಾಡಲು ನಿರಾಕರಿಸಿದ ಡಿಜಿಪಿ, ದಂಪತಿಯ ಆಕ್ರೋಶದಿಂದಾಗಿ ಭೇಟಿ ಮಾಡಿ ದೂರುಗಳನ್ನು ಸ್ವೀಕರಿಸಿದರು. ದೂರಿನ ಜತೆ ಹಾಲಪ್ಪನವರು ಅತ್ಯಾಚಾರ ನಡೆಸಿದ ನಂತರ ಶೂಟಿಂಗ್ ಮಾಡಲಾದ ಸಿಡಿ, ಬೆಂಬಲಿಗರು ಮಾಡಿದ್ದ ಬೆದರಿಕೆ ಕರೆಗಳ ದಾಖಲೆಗಳನ್ನೂ ಸಲ್ಲಿಸಿದ್ದಾರೆ.
ನಂತರ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ರಾಜಭವನಕ್ಕೆ ತೆರಳಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಿಗೆ ದೂರು ನೀಡಿದರು.
ಇವೆಲ್ಲಾ ದಾಖಲೆ, ಸಿಡಿಗಳನ್ನು ದಂಪತಿ ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದಾರೆ.
ವೀಡಿಯೋ ಬಹಿರಂಗ... ಹಾಲಪ್ಪನವರು ಚಂದ್ರಾವತಿಯವರನ್ನು ಅತ್ಯಾಚಾರ ನಡೆಸಿದ ಬಳಿಕ ಅವರ ಪತಿ ವೆಂಕಟೇಶ್ ಮೂರ್ತಿ ಚಿತ್ರೀಕರಿಸಿರುವ 40 ಸೆಕುಂಡುಗಳ ವೀಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.
ಇದರಲ್ಲಿ ಹಾಲಪ್ಪನವರು ಬಟ್ಟೆ ಧರಿಸುವುದು, ದಂಪತಿಯ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿರುವ ದೃಶ್ಯಗಳಿವೆ ಎಂದು ದಂಪತಿ ಹೇಳುತ್ತಿದ್ದಾರೆ. ಆದರೆ ವೀಡಿಯೋವನ್ನು ವೀಕ್ಷಿಸಿದಾಗ ಯಾವುದೂ ಸ್ಪಷ್ಟವಾಗಿ ಕಾಣಿಸುತ್ತಿಲ್ಲ.
PR
ಘಟನೆ ನಡೆದದ್ದು ನವೆಂಬರ್ 27ರಂದು.... ದಂಪತಿ ನೀಡಿರುವ ದೂರಿನ ಪ್ರಕಾರ ಘಟನೆ ನಡೆದಿರುವುದು ನವೆಂಬರ್ 27ರಂದು ಮುಂಜಾನೆ 3.30ರ ಹೊತ್ತಿಗೆ. ನವೆಂಬರ್ 26ರ ರಾತ್ರಿ 8 ಗಂಟೆಗೆ ಮಹಿಳೆಯ ಪತಿ ವೆಂಕಟೇಶ್ ಮೂರ್ತಿ ಮೊಬೈಲ್‌ಗೆ ಕರೆ ಮಾಡಿದ್ದ ಹಾಲಪ್ಪ, 10 ನಿಮಿಷಗಳ ನಂತರ ಊಟಕ್ಕೆಂದು ಬಂದಿದ್ದರು.
ಊಟ ಬಳಿಕ ರಾತ್ರಿ 11.30ಯವರೆಗೂ ಪತಿಯ ಜತೆ ಮಾತುಕತೆ ನಡೆಸಿದ್ದರು. ಬಳಿಕ ಪ್ರವಾಸಿ ಮಂದಿರಕ್ಕೆ (ಐಬಿ) ಹೋಗಲು ಇನ್ನು ತಡವಾಯಿತು. ಇಲ್ಲೇ ಉಳಿದುಕೊಳ್ಳುತ್ತೇನೆ ಎಂದ ಸಚಿವರಿಗೆ ನಾವು ಮೇಲಿನ ಮಹಡಿಯಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದೆವು.
ರಾತ್ರಿ 3.30ರ ಹೊತ್ತಿಗೆ ಹಾಲಪ್ಪನವರು ಕೂಗಿಕೊಂಡು, ಆರೋಗ್ಯ ಹದಗೆಟ್ಟಿದೆ, ರಕ್ತದೊತ್ತಡ ತೀವ್ರವಾಗಿದೆ. ದಯವಿಟ್ಟು ಐಬಿಯಲ್ಲಿರುವ ಮಾತ್ರೆಗಳನ್ನು ತೆಗೆದುಕೊಂಡು ಬನ್ನಿ ಎಂದ ಬೆನ್ನಿಗೆ ಹಾಲಪ್ಪ ಕುಸಿದು ಬಿದ್ದರು. ಇದರಿಂದ ಆತಂಕಗೊಂಡ ನನ್ನ ಪತಿ ಐಬಿಗೆ ಹೋದರು.
ಅಷ್ಟರಲ್ಲಿ ಹಾಲಪ್ಪನವರು ನನ್ನ ಬೆಡ್‌ರೂಂಗೆ ಬಂದು ನನ್ನನ್ನು ಅತ್ಯಾಚಾರ ನಡೆಸಿದರು. ನನ್ನ ಬಾಯಿ ಮುಚ್ಚಿ, ಬಲವಂತವಾಗಿ ಅವರು ಈ ಕೃತ್ಯ ನಡೆಸಿದ್ದಾರೆ. ನಾನು ಕೂಗಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಷ್ಟು ಹೊತ್ತಿಗೆ ನನ್ನ ಪತಿ ವೆಂಕಟೇಶ ಮೂರ್ತಿ ಬಂದಿದ್ದಾರೆ.
ಆಗ ಇಬ್ಬರೂ ಸೇರಿ ಹಾಲಪ್ಪನವರನ್ನು ಥಳಿಸಿದ್ದೇವೆ. ಒಂದು ಹಂತದಲ್ಲಿ ಸತ್ತೇ ಹೋಗಿದ್ದಾರೆ ಎಂದುಕೊಂಡರೂ, ನಂತರ ನೀರು ಚಿಮುಕಿಸಿದ ಮೇಲೆ ಎದ್ದು ಕುಳಿದು ಕ್ಷಮೆ ಕೇಳಿದ್ದರು. ತಪ್ಪು ಮಾಡಿದ್ದೇನೆ ಕೊಂದು ಬಿಡಿ ಎಂದು ಅಲವತ್ತುಕೊಂಡಿದ್ದರು.
ಬಳಿಕ 2009ರ ನವೆಂಬರ್ 31ರಂದು 9448****09 ಮೊಬೈಲ್ ಸಂಖ್ಯೆಯಿಂದ ಹಾಲಪ್ಪನವರು ಕರೆ ಮಾಡಿ, ನಡೆದದ್ದೆಲ್ಲವನ್ನೂ ಮರೆತುಬಿಡಿ ಎಂದಿದ್ದರಲ್ಲದೆ, ಘಟನೆಯನ್ನು ಬಹಿರಂಗಪಡಿಸಿದರೆ ಪರಿಸ್ಥಿತಿ ನೆಟ್ಟಗಿರದು ಎಂದು ಬೆದರಿಕೆ ಹಾಕಿದ್ದರು. ಅದೇ ದಿನ ಕಪ್ಪು ಬಣ್ಣದ ಮಾರುತಿ ಕಾರೊಂದರಲ್ಲಿ ಕೆಲವು ಅಪರಿಚಿತರು ಅನುಮಾನಾಸ್ಪದವಾಗಿ ಸುತ್ತಾಡಿ ಹೋಗಿದ್ದಾರೆ.
ಆ ಬಳಿಕವೂ ಹಲವು ಸಲ ಹಾಲಪ್ಪನವರು ನನ್ನ ಪತಿಯ ಮೊಬೈಲ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಆದರೆ ನಂತರ ಅವರ ಮೊಬೈಲ್ ಸಂಖ್ಯೆ ಕಾಣಿಸುತ್ತಿರಲಿಲ್ಲ. 'ನೋ ನಂಬರ್' ಎಂದು ಬರುತ್ತಿತ್ತಾದರೂ, ಆ ಕರೆಗಳನ್ನು ರೆಕಾರ್ಡ್ ಮಾಡಲಾಗಿದೆ.
ಬಳಿಕ 9900****59, 9448****09, 9448****63, 9972****15 ಮುಂತಾದ ಮೊಬೈಲ್ ನಂಬರುಗಳಿಂದ ಹಾಲಪ್ಪನವರ ಅನುಯಾಯಿಗಳಾದ ಗಿರೀಶ್ ಮತ್ತು ಬಸವರಾಜ್ ಎಂಬವರು ನಿರಂತರ ಬೆದರಿಕೆಗಳನ್ನು ಹಾಕುತ್ತಾ ಬಂದಿದ್ದಾರೆ. ನನ್ನ ಪತಿ ಹೋದಲ್ಲೆಲ್ಲ ಹಿಂಬಾಲಿಸುವ ಇವರು, ಪ್ರಾಣ ಬೆದರಿಕೆಗಳನ್ನು ಹಾಕುತ್ತಿದ್ದಾರೆ ಎಂದು ಚಂದ್ರಾವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಚಂದ್ರಾವತಿ ಮೂರ್ತಿಯವರ ಎರಡನೇ ಪತ್ನಿ... ವೆಂಕಟೇಶ ಮೂರ್ತಿ ಎಂಬ ಹಾಲಪ್ಪನವರ ಸ್ನೇಹಿತ ತೀರ್ಥಹಳ್ಳಿಯ ಹಣೆಗೆರೆ ಸಮೀಪದ ಅರನಲ್ಲಿ ಗ್ರಾಮದವರಾಗಿದ್ದು, ಫೈನಾನ್ಸ್ ವ್ಯವಹಾರ ನಡೆಸುತ್ತಾ ಬಂದವರು. ಈಗ ಅವರ ಮನೆಯಿರುವುದು ಶಿವಮೊಗ್ಗ ವಿನೋಬನಗರದ ಕಲ್ಲಹಳ್ಳಿಯ ದಾಮೋದರ ಕಾಲೊನಿಯಲ್ಲಿ.
ಈ ವೆಂಕಟೇಶ ಮೂರ್ತಿಯವರು ದ್ವಿಪತ್ನಿ ವಲ್ಲಭ. ಮೊದಲ ಪತ್ನಿಗೆ ಇಬ್ಬರು ಹಾಗೂ ಎರಡನೇ ಪತ್ನಿಗೆ ಇಬ್ಬರು ಮಕ್ಕಳು. ಮೊದಲ ಪತ್ನಿಯನ್ನು ಕುರೂಪಿ ಎಂಬ ಕಾರಣಕ್ಕೆ ಮೂರ್ತಿಯವರು ಮನೆಯಿಂದ ಹೊರಗೆ ದಬ್ಬಿದ್ದರು ಎನ್ನುವುದು ಆರೋಪ. ಅಲ್ಲದೆ ಹಲವು ಪೊಲೀಸ್ ಠಾಣೆಗಳಲ್ಲಿ ಚೆಕ್‌ಬೌನ್ಸ್ ಮುಂತಾದ ಪ್ರಕರಣಗಳು ಮೂರ್ತಿಯವರ ವಿರುದ್ಧ ದಾಖಲಾಗಿವೆ.
ನಾನು ಕುರೂಪಿ ಎಂಬ ಕಾರಣಕ್ಕೆ ಮನೆಯಿಂದ ಹೊರದಬ್ಬಿದ್ದರು. ನನ್ನನ್ನು ಬಿಟ್ಟು 14 ವರ್ಷ ಕಳೆದಿದೆ. ನನಗಿಬ್ಬರು ಮಕ್ಕಳು. ನನ್ನನ್ನು ಬಿಟ್ಟ ಮೂರ್ನಾಲ್ಕು ವರ್ಷಗಳಲ್ಲಿ ಮತ್ತೊಬ್ಬಳನ್ನು ಮನೆಗೆ ಕರೆಸಿ ಮೋಸದಿಂದ ಮದುವೆಯಾಗಿದ್ದಾರೆ ಎಂದು ಮೂರ್ತಿಯವರ ಮೊದಲ ಪತ್ನಿ ಸುಮಿತ್ರಾ ಆರೋಪಿಸುತ್ತಾರೆ.
ಚಂದ್ರಾವತಿಯನ್ನು ಮೂರ್ತಿ ಮದುವೆಯಾಗಿ ಒಂಬತ್ತು ವರ್ಷವಾಗಿದೆ. ಆಕೆ ಮೊದಲು ನನ್ನ ಭಾವ ಮೈದುನನನ್ನು ಪ್ರೀತಿಸುತ್ತಿದ್ದಳು. ಆದರೆ ನನ್ನ ಗಂಡ ಮೋಸದಿಂದ ಅವಳನ್ನು ಮದುವೆಯಾದರು ಎನ್ನುವುದು ಸುಮಿತ್ರಾ ಮಾತು.