ಪ್ರತಿಪಕ್ಷಗಳಿಂದ ಸ್ವಜನ ಪಕ್ಷಪಾತ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ದೆಹಲಿಯಿಂದ ಬಂದ ತಕ್ಷಣ ಮಾಡಿದ ಮೊದಲ ಕೆಲಸವೆಂದರೆ, ತನ್ನ ಅಧಿಕೃತ ನಿವಾಸದಲ್ಲಿದ್ದ ಮಗ, ಮಗಳು ಮತ್ತು ಅಳಿಯರನ್ನು ಬೇರೆ ಕಡೆಗೆ ಹೋಗುವಂತೆ ಸೂಚಿಸಿದ್ದು.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಿಂದ ಹೊರಟುಹೋಗುವಂತೆ ಮಗ ಬಿ.ವೈ.ವಿಜಯೇಂದ್ರ, ಮಗಳು ಉಮಾದೇವಿ ಅವರಿಗೆ ಯಡಿಯೂರಪ್ಪ ಸೂಚಿಸಿದಾಗ, ಅವರು ಈ ಮಾತನ್ನು ಪಾಲಿಸಿದರು ಎಂದು ಮುಖ್ಯಮಂತ್ರಿ ಕಾರ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಜಯೇಂದ್ರ, ಉಮಾದೇವಿ ಮತ್ತು ಆಕೆಯ ಪತಿ ಸೋಹನ್ ಕುಮಾರ್ ಅವರು ಯಡಿಯೂರಪ್ಪ ಅವರೊಂದಿಗೇ ನೆಲಸಿದ್ದರೆ, ಹಿರಿಯ ಮಗ, ಸಂಸದ ಬಿ.ವೈ.ರಾಘವೇಂದ್ರ ಆಗಾಗ್ಗೆ ಈ ಮನೆಗೆ ಬಂದು ಹೋಗುತ್ತಿದ್ದರು.
ಇದೀಗ, ಯಾವುದೇ ಸಂದರ್ಭದಲ್ಲಿಯೂ ತಮ್ಮ ಕುಟುಂಬ ಸದಸ್ಯರ ಯಾವುದೇ ಮಾತಿನಿಂದ ಪ್ರಭಾವಕ್ಕೊಳಗಾಗದಿರುವಂತೆಯೂ, ಹೀಗೇನಾದರೂ ತಿಳಿದರೆ ತಮ್ಮ ಗಮನಕ್ಕೆ ತರುವಂತೆಯೂ ಯಡಿಯೂರಪ್ಪ ತಮ್ಮ ಕಾರ್ಯದರ್ಶಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಬಂಧುಗಳನ್ನು ಅಧಿಕಾರ ಕೇಂದ್ರದಿಂದ ದೂರವಿಡುವಂತೆ ಕೇಂದ್ರದ ಹೈಕಮಾಂಡ್ ಯಡಿಯೂರಪ್ಪರಿಗೆ ಸೂಚಿಸಿತ್ತು.