ಲೆನಿನ್ ಹಿಂದೆ ಕ್ರೈಸ್ತ ಮಿಷನರಿ; ಬೆಂಗಳೂರಿನಲ್ಲಿ ರಂಜಿತಾ ಸ್ಪಷ್ಟನೆ
ಬೆಂಗಳೂರು, ಶುಕ್ರವಾರ, 31 ಡಿಸೆಂಬರ್ 2010( 16:16 IST )
WD
ನಿತ್ಯಾನಂದ ಸ್ವಾಮಿ ಜತೆ ಪಲ್ಲಂಗದಲ್ಲಿ ಕಾಣಿಸಿಕೊಂಡು, ನಂತರದ ದಿನಗಳಲ್ಲಿ ಮಾಯವಾಗಿದ್ದ ನಟಿ ರಂಜಿತಾ ಮೊತ್ತ ಮೊದಲ ಬಾರಿ ಬೆಂಗಳೂರಿನಲ್ಲಿ ಪ್ರತ್ಯಕ್ಷಳಾಗಿದ್ದು, ತನ್ನ ಮೇಲಿರುವ ಎಲ್ಲಾ ಆರೋಪಗಳನ್ನೂ ತಳ್ಳಿ ಹಾಕಿದ್ದಾರೆ. ಅಲ್ಲದೆ ಇದರ ಸೂತ್ರಧಾರಿ ಎಂದು ಹೇಳಲಾಗಿರುವ ಲೆನಿನ್ ಹಿಂದೆ ಕ್ರೈಸ್ತ ಮಿಷನರಿಯೊಬ್ಬರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಸತ್ಯಾಂಶವನ್ನು ಪರಿಶೀಲಿಸದೆ ಅಪಪ್ರಚಾರ ಮಾಡಿದ ಕೆಲವು ಮಾಧ್ಯಮಗಳ ಮೇಲೂ ಕಿಡಿ ಕಾರಿದ ರಂಜಿತಾ, ಸುಮಾರು ಹತ್ತು ತಿಂಗಳ ಬಳಿಕ ಮಾಧ್ಯಮಗಳ ಎದುರು ಶುಕ್ರವಾರ ಕಾಣಿಸಿಕೊಂಡರು. ನನ್ನಂತೆಯೇ ಕಂಡ ಯಾರನ್ನೋ ವೀಡಿಯೋದಲ್ಲಿ ತೋರಿಸಿ, ಪ್ರಸಾರ ಮಾಡಿದ ಸಂದರ್ಭದಲ್ಲಿ, ಯಾವುದೇ ಮಾಧ್ಯಮದ ಮಂದಿಯೂ ತನ್ನನ್ನು ಒಂದು ಮಾತು ಕೇಳುವ ಪ್ರಯತ್ನ ಮಾಡಿಲ್ಲ. ನನ್ನ ವ್ಯಕ್ತಿಗತ ಜೀವನವನ್ನು ಹಾಳುಗೆಡಹಿದರು ಎಂದೂ ಆಕೆ ವಿಷಾದದಿಂದ ನುಡಿದರು.
ಶುಕ್ರವಾರ ಕಾಮಾಕ್ಷಿಪಾಳ್ಯದ ಧನಂಜಯ್ ಪ್ಯಾಲೇಸ್‌ನಲ್ಲಿ ಭಾವೋದ್ವೇಗದಿಂದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಂಜಿತಾ, ನಿತ್ಯಾನಂದನ ಕೋಟ್ಯಂತರ ಭಕ್ತರಲ್ಲಿ ನಾನೂ ಒಬ್ಬಳಾಗಿದ್ದೇನೆ. ಬಿಡದಿ ಆಶ್ರಮದಲ್ಲಿ ಸಾಮಾಜಿಕ ಸೇವೆಯ ಉದ್ದೇಶದಿಂದ ಭಾಗಿಯಾಗಿದ್ದೆ ವಿನಃ ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ಈ ಎಲ್ಲ ವಿವಾದವು ಲೆನಿನ್ ಕರುಪ್ಪನ್‌ನ ಪಿತೂರಿ. ಇದರ ಹಿಂದೆ ಮಿಶನರಿಗಳೇ ಇದ್ದಾರೆ ಎಂದು ಲೆನಿನ್ನೇ ಒಂದು ಬಾರಿ ಹೇಳಿದ್ದು ನೆನಪಿದೆ ಎಂದರು.
ಕಳೆದ ಹದಿನೆಂಟು ವರ್ಷಗಳಿಂದ ಚಿತ್ರರಂಗದಲ್ಲಿರುವ ನಾನು, ಈ ದಿಢೀರ್ ಆರೋಪಗಳನ್ನು ಎದುರಿಸುವ ಮನಸ್ಥಿತಿಯಲ್ಲಿರಲಿಲ್ಲ. ಯಾಕೆಂದರೆ ನಾನೊಬ್ಬಳು ಸಾಮಾನ್ಯ ಹೆಂಗಸು. ಹೀಗಾಗಿ ಅಮೆರಿಕಕ್ಕೆ ಹೋದೆ. ನಿತ್ಯಾನಂದ ಧ್ಯಾನಪೀಠದೊಂದಿಗೆ ಸಂಪರ್ಕ ಹೊಂದಿದ್ದೇನೆ ಎಂಬ ಕಾರಣಕ್ಕೆ ಈ ರೀತಿ ಯಾಕೆ ಮಾಡಬೇಕಿತ್ತು. ಈಗಾಗಲೇ ನನ್ನ ಮಾನ ಹರಾಜು ಹಾಕಿದ್ದಕ್ಕಾಗಿ ಗುರುವಾರ ರಾಮನಗರ ಪೊಲೀಸರಿಗೆ ದೂರು ನೀಡಿದ್ದೇನೆ. ಅದರಲ್ಲಿ ನಿತ್ಯಾನಂದ ಸ್ವಾಮೀಜಿಯ ಮಾಜಿ ಕಾರು ಚಾಲಕ ಲೆನಿನ್, ಮಾಜಿ ಭಕ್ತೆ ಆರತಿ ರಾವ್ ಮತ್ತು ವಕೀಲರನ್ನು ಹೆಸರಿಸಿದ್ದೇನೆ ಎಂದರು.