ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಪ್ರತಿಬಾಲಕಿಯನ್ನು ಲಕ್ಷಾಧಿಪತಿಯಾಗಿಸುವ ಆಡ್ವಾಣಿ ಕನಸು
ಮತಸಮರ
ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಹೆಣ್ಣು ಮಗುವು 18 ವರ್ಷ ತಲುಪುತ್ತಲೇ ಆಕೆ ಒಂದು ಲಕ್ಷರೂಪಾಯಿ ಪಡೆಯುತ್ತಾಳೆ ಎಂಬುದಾಗಿ ಎನ್‌ಡಿಎ ಪ್ರಧಾನ ಮಂತ್ರಿ ಅಭ್ಯರ್ಥಿ ಲಾಲ್ ಕೃಷ್ಣ ಆಡ್ವಾಣಿ ಹೇಳಿದ್ದಾರೆ.

"ನಮ್ಮ ಪಕ್ಷ ಆಯ್ಕೆಗೊಂಡು ಸರ್ಕಾರ ರೂಪಿಸುವಂತಾದರೆ, ಪ್ರತಿ ಹುಡುಗಿಯು 18 ವರ್ಷ ತಲುಪುವಷ್ಟರಲ್ಲಿ ಆಕೆ ಲಕ್ಷಾಧಿಪತಿಯಾಗುವಂತೆ ನೋಡಿಕೊಳ್ಳುವುದು ನಮ್ಮಜವಾಬ್ದಾರಿ. ಹೆಣ್ಣು ಮಕ್ಕಳ ಬೆಂಬಲಕ್ಕಾಗಿ ನಾವು ಲಾಡ್ಲಿ ಲಕ್ಷ್ಮಿ ಯೋಜನೆಯನ್ನು ಪ್ರತಿ ರಾಜ್ಯದಲ್ಲಿ ಜಾರಿಗೆ ತರಲಿದ್ದೇವೆ" ಎಂದು 81ರ ಹರೆಯದ ಆಡ್ವಾಣಿ ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹತೆ ಹೊಂದಿರುವ 71.4 ಕೋಟಿ ಮತದಾರರಲ್ಲಿ ಒಟ್ಟು 34.0 ಕೋಟಿ ಮಹಿಳಾ ಮತದಾರರಿದ್ದಾರೆ.

ಮಧ್ಯ ಪ್ರದೇಶದಲ್ಲಿ ಇಂತಹ ಯೋಜನೆಯ ಯಶಸ್ಸು ಕಂಡಿದೆ ಎಂದು ಆಡ್ವಾಣಿ ನುಡಿದರು. "2006ರಲ್ಲಿ ಬಿಜೆಪಿ ಸರ್ಕಾರ ಮಧ್ಯಪ್ರದೇಶದಲ್ಲಿ ಈ ಯೋಜನೆ ಜಾರಿಗೆ ತಂದಿತ್ತು. ಇದು ರಾಜ್ಯದ ಸಮಾಜ ಕಲ್ಯಾಣ ಯೋಜನೆಗಳಲ್ಲೇ ಕ್ಷಿಪ್ರ ಅವಧಿಯಲ್ಲಿ ಅತಿ ಹೆಚ್ಚು ಯಶಸ್ಸು ಪಡೆದ ಕಾರ್ಯಕ್ರಮವಾಗಿದೆ ಎಂದು ಅವರು ತಿಳಿಸಿದರು.

ಈ ಯೋಜನೆಯಡಿ ರಾಜ್ಯ ಸರ್ಕಾರವು, ಹುಟ್ಟುವ ಪ್ರತೀ ಹೆಣ್ಣು ಮಕ್ಕಳಿಗೆ ಪ್ರತೀ ವರ್ಷ ಆರು ಸಾವಿರ ಮುಖಬೆಲೆಯ ಉಳಿತಾಯ ಸರ್ಟಿಫಿಕೇಟುಗಳನ್ನು ಸತತ ಐದು ವರ್ಷಗಳ ಕಾಲ ಖರೀದಿಸಲಿದೆ.

ಯೋಜನೆಯಂತೆ ಬಾಲಕಿಯು ಐದನೆ ಕ್ಲಾಸು ಮುಗಿಸಿದ ಬಳಿಕ ನಾಲ್ಕು ಸಾವಿರ ರೂಪಾಯಿ, 8ನೆ ತರಗತಿ ಬಳಿಕ 4,000 ಹಾಗೂ 10ನೆ ತರಗತಿ ಬಳಿಕ 7,500 ರೂಪಾಯಿ, 11ತರಗತಿ ಬಳಿಕ ತಿಂಗಳೊಂದರ 200 ರೂಪಾಯಿ ಹಾಗೂ 12ನೆ ತರಗತಿ ಪ್ರವೇಶದ ವೇಳೆ ಅಥವಾ 18 ವರ್ಷವಾದಾಗ ಆಕೆಗೆ 1,18,000 ರೂಪಾಯಿ ಪಡೆಯಲಿದ್ದಾಳೆ.

ಹೆಣ್ಣು ಮಕ್ಕಳು ಶಾಲೆಬಿಡುವುದನ್ನು ತಪ್ಪಿಸಲು ಮತ್ತು ಅವರು ಕನಿಷ್ಠ ಹನ್ನೆರಡನೆ ತರಗತಿಯ ತನಕ ವಿದ್ಯಾಭ್ಯಾಸ ಹೊಂದಲಿ ಎಂಬ ಉದ್ದೇಶದಿಂದ ಈ ಯೋಜನೆ ತರಲಾಗುತ್ತದೆ ಮತ್ತು ಹೆಣ್ಣುಮಕ್ಕಳ ಕಾಳಜಿ ಆಕೆಯ ಹೆತ್ತವರಂತೆ ಸರ್ಕಾರದ ಜವಾಬ್ದಾರಿಯೂ ಹೌದು ಎಂದು ಆಡ್ವಾಣಿ ಹೇಳಿದ್ದಾರೆ.