ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರ ಬಹುಚರ್ಚಿತ ನೋಟಿನ ಹಾರದ ಬಗ್ಗೆ ಎಲ್ಲರಿಗಿಂತ ಮೊದಲು ಹೇಳಿಕೆ ನೀಡಿದ್ದ ಕರ್ನಾಟಕ ಬಿಎಸ್‌ಪಿ ವಕ್ತಾರ ವೈ.ಎನ್. ಶರ್ಮಾ ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿದೆ.
ಸೋಮವಾರ ಲಕ್ನೋದಲ್ಲಿ ನಡೆದಿದ್ದ ಬಿಎಸ್‌ಪಿ ರಜತ ಮಹೋತ್ಸವ ಸಂದರ್ಭದಲ್ಲಿ ಮಾಯಾವತಿ ಅವರಿಗೆ ಬಹುಕೋಟಿ ಮೌಲ್ಯದ ನೋಟಿನ ಹಾರವನ್ನು ಹಾಕಲಾಗಿತ್ತು. ಇದು ವಿರೋಧ ಪಕ್ಷಗಳ ಭಾರೀ ಟೀಕೆಗೆ ಕಾರಣವಾಗಿತ್ತು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕರ್ನಾಟಕ ಬಿಎಸ್‌ಪಿ ಘಟಕದ ವಕ್ತಾರ ಶರ್ಮಾ, ಹಾರವನ್ನು ನೀಡಿದ್ದು ಕರ್ನಾಟಕ ಬಿಎಸ್‌ಬಿ ಘಟಕ ಎಂಬ ವರದಿಗಳನ್ನು ತಳ್ಳಿ ಹಾಕಿದ್ದರು.
ಮಾಯಾವತಿಯವರಿಗೆ ಹಾಕಿದ ಹಾರವನ್ನು ಕರ್ನಾಟಕ ಅರ್ಪಿಸಿತ್ತು ಎಂದು ವರದಿಗಳು ಹೇಳಿದ್ದವು. ಆದರೆ ಬಳಿಕ ಉತ್ತರ ಪ್ರದೇಶ ಬಿಎಸ್‌ಪಿ, ಇದು ಲಕ್ನೋ ಘಟಕವೇ ಹಾಕಿದ ಹಾರ ಎಂದು ಸ್ಪಷ್ಟಪಡಿಸಿತ್ತು.
ಶರ್ಮಾ ಅವರನ್ನು ಉಚ್ಛಾಟನೆಗೊಳಿಸಿರುವ ಕ್ರಮಕ್ಕೆ ಪ್ರತಿಕ್ರಿಯೆ ನೀಡಿರುವ ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷ ಮಾಣಸಂದ್ರ ಮುನಿಯಪ್ಪ, ಅವರನ್ನು 11 ತಿಂಗಳ ಹಿಂದೆಯೇ ಉಚ್ಛಾಟಿಸಲಾಗಿತ್ತು. ಅವರು ಪಕ್ಷದವರೇ ಆಗಿರಲಿಲ್ಲ ಎಂದು ತದ್ವಿರುದ್ಧ ಹೇಳಿಕೆ ನೀಡಿದ್ದಾರೆ.
ಹಲವು ಸಮಯಗಳ ಹಿಂದೆಯೇ ಶರ್ಮಾ ಅವರನ್ನು ಉಚ್ಛಾಟನೆಗೊಳಿಸಲಾಗಿದ್ದರೂ, ಅವರು ನಕಲಿ ಪತ್ರಿಕಾ ಹೇಳಿಕೆಗಳನ್ನು ನೀಡುತ್ತಿದ್ದರು ಎಂದು ಮುನಿಯಪ್ಪ ವಾಹಿನಿಯೊಂದರ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಶರ್ಮಾ, ತನ್ನನ್ನು 11 ತಿಂಗಳ ಹಿಂದಯೇ ಉಚ್ಛಾಟಿಸಿದ್ದ ವಿಚಾರ ನನಗೆ ಗೊತ್ತಿಲ್ಲ. ಇವತ್ತಿನವರೆಗೂ ನಾನು ಪಕ್ಷದಲ್ಲಿದ್ದೆ. ಅಲ್ಲದೆ ಅಧ್ಯಕ್ಷ ಮುನಿಯಪ್ಪನವರ ಜತೆಗೇ ಪತ್ರಿಕಾಗೋಷ್ಠಿ ನಡೆಸಿದ್ದೇನೆ ಎಂದು ಸ್ಪಷ್ಪಪಡಿಸಿದ್ದಾರೆ.
ಇದೀಗ ಉಚ್ಛಾಟನೆಗೊಳಿಸಲಾಗಿರುವ ಬಗ್ಗೆ ಮಾತನಾಡುತ್ತಾ, ಮಾಧ್ಯಮಗಳ ಜತೆ ಮಾತನಾಡಿದ್ದೇ ತಪ್ಪು ಎಂಬ ಕಾರಣವನ್ನು ಬಿಎಸ್‌ಪಿ ರಾಷ್ಟ್ರೀಯ ಘಟಕ ಉಚ್ಛಾಟನೆಗೆ ಕಾರಣ ನೀಡಿದೆ. ಪಕ್ಷದ ವಕ್ತಾರನ ಕೆಲಸವೇ ಮಾಧ್ಯಮಗಳ ಜತೆ ಮಾತನಾಡುವುದು. ಅದನ್ನೇ ಮಾಡಿದರೆ ಉಚ್ಛಾಟನೆಗೊಳಿಸಲಾಗಿದೆ. ನಾನೇನೂ ತಪ್ಪು ಮಾತನಾಡಿಲ್ಲ ಎಂದು ಹೇಳಿದ್ದಾರೆ.