ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಉಗ್ರ ಕಸಬ್ ದೋಷಿ: ಇಬ್ಬರು ಭಾರತೀಯರ ಖುಲಾಸೆ (Ajmal Kasab | Lashkar-e-Taiba | Faheem Ansari | Mumbai terror attacks)
2008ರ ನವೆಂಬರ್ 26ರಂದು ನಡೆದಿದ್ದ ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಅಮೀರ್ ಅಜ್ಮಲ್ ಕಸಬ್ ತಪ್ಪಿತಸ್ಥ ಎಂದು ಮುಂಬೈ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ. ಆದರೆ ಲಷ್ಕರ್ ಇ ತೋಯ್ಬಾ ದಾಳಿಗೆ ಸಹಕರಿಸಿದ್ದ ಇಬ್ಬರು ಭಾರತೀಯರಾದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಪಾಕಿಸ್ತಾನದ ಲಷ್ಕರ್ ಇ ತೋಯ್ಬಾ ಪ್ರಾಯೋಜಿತ ದಾಳಿಯಲ್ಲಿ 10 ಮಂದಿ ಭಯೋತ್ಪಾದಕರು ಪಾಲ್ಗೊಂಡಿದ್ದರು. ಅವರಲ್ಲಿ ಜೀವಂತವಾಗಿ ಸೆರೆ ಸಿಕ್ಕಿರುವ ಉಗ್ರ ಕಸಬ್ ಮಾತ್ರ. ಆತನ ಮೇಲೆ 86 ವಿವಿಧ ಪ್ರಕರಣಗಳನ್ನು ದಾಖಲಿಸಿ ವಿಚಾರಣೆ ನಡೆಸಲಾಗಿತ್ತು. ಈ ಎಲ್ಲಾ ಪ್ರಕರಣಗಳಲ್ಲೂ ಆತ ತಪ್ಪಿತಸ್ಥ ಎಂದು ನ್ಯಾಯಾಲಯ ಹೇಳಿದೆ.
ಕಸಬ್ ತಪ್ಪಿತಸ್ಥನೆಂದು ನ್ಯಾಯಾಲಯ ತೀರ್ಪು ನೀಡಿದ್ದರೂ, ಆತನಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿಲ್ಲ. ನಾಳೆ ದೋಷಿ ಕಸಬ್ ಶಿಕ್ಷೆಯನ್ನು ಪ್ರಕಟಿಸಲಾಗುತ್ತದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಎಲ್. ತಹಲಿಯಾನಿ ತಿಳಿಸಿದ್ದಾರೆ.
ಲಷ್ಕರ್ ಇ ತೋಯ್ಬಾ ದಾಳಿಗೆ ಸಹಕರಿಸಿದ್ದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಅವರ ಕೃತ್ಯಗಳ ಕುರಿತು ಸಾಕ್ಷ್ಯಾಧಾರಗಳ ಕೊರತೆಯನ್ನು ಎತ್ತಿ ತೋರಿಸಿದ ನ್ಯಾಯಾಲಯವು, ಅವರಿಬ್ಬರನ್ನು ಪ್ರಕಣದಿಂದ ಖುಲಾಸೆಗೊಳಿಸಿದೆ. ಇವರಿಬ್ಬರು ಮುಂಬೈಯ ನಕ್ಷೆಗಳನ್ನು ಭಯೋತ್ಪಾದಕರಿಗೆ ಒದಗಿಸಿದ್ದರು ಎಂದು ಆರೋಪಿಸಲಾಗಿತ್ತು.
ಮುಖ್ಯಾಂಶಗಳು...
* 1,522 ಪುಟ ತೀರ್ಪು ಓದಿದ ಜಡ್ಜ್.
* 166 ಅಮಾಯಕರ ಹತ್ಯೆಗೆ ಪರೋಕ್ಷ ಕಾರಣ ಮತ್ತು ಭಾರತದ ವಿರುದ್ಧ ಯುದ್ಧ ಸಾರಿದ ಕಸಬ್ ತಪ್ಪಿತಸ್ಥ.
* ಶಿಕ್ಷೆಯ ಪ್ರಮಾಣ ನಾಳೆ ಘೋಷಣೆ. ಅತ್ತುಬಿಟ್ಟ ಕಸಬ್.
* ಉಗ್ರರಿಗೆ ನಕ್ಷೆ ಒದಗಿಸಿದ್ದ ಇಬ್ಬರು ಭಾರತೀಯರಾದ ಫಹೀಂ, ಸಬಾವುದ್ದೀನ್ ಬಗ್ಗೆ ಸಾಕ್ಷ್ಯ ಕೊರತೆ- ಖುಲಾಸೆ
271 ದಿನಗಳ ವಿಚಾರಣೆ ಫಲಿತಾಂಶವಿದು... ಮುಂಬೈಯ ವಿಶೇಷ ನ್ಯಾಯಾಲಯವು 271 ಕಾರ್ಯನಿರತ ದಿನಗಳಲ್ಲಿ ಮುಂಬೈ ದಾಳಿ ಪ್ರಕರಣದ ವಿಚಾರಣೆಯನ್ನು ಮುಗಿಸಿರುವುದು ಭಾರತದ ಮಟ್ಟಿಗೆ ದಾಖಲೆ. ಈ ಹಿಂದೆಂದೂ ಭಯೋತ್ಪಾದನಾ ಪ್ರಕರಣವೊಂದು ಇಷ್ಟು ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಿದ್ದಿಲ್ಲ.
658 ಸಾಕ್ಷಿಗಳನ್ನು ಪರಿಶೀಲನೆ ನಡೆಸಿರುವ ಈ ವಿಶೇಷ ನ್ಯಾಯಾಲಯವನ್ನು ಮುಂಬೈಯ ಆರ್ಥರ್ ರೋಡ್ ಜೈಲಿನ ಆವರಣದಲ್ಲೇ ಸ್ಥಾಪಿಸಲಾಗಿತ್ತು. ಮೇ 8ರಂದು ಇದು ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಸಾಕ್ಷಿಗಳ ವಿಚಾರಣೆ ನಂತರ 3,192 ಪುಟಗಳ ಪುರಾವೆಗಳನ್ನು ದಾಖಲಿಸಿಕೊಂಡಿದೆ.
ಈ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಎಂ.ಎಲ್. ತಹಲಿಯಾನಿ ಅವರೆದುರು, ಮುಂಬೈಯಲ್ಲಿ ಗುಂಡು ಹಾರಾಟ ನಡೆಸಿದವನು ಕಸಬ್ ಎಂದು 30 ಮಂದಿ ಸಾಕ್ಷಿ ಹೇಳಿದ್ದಾರೆ.
ಉಜ್ವಲ್ ನಿಕಂ ನೇತೃತ್ವದ ಸರಕಾರಿ ಪರ ವಕೀಲರು ತನಿಖೆಯ ಸಂದರ್ಭದಲ್ಲಿ 1,015 ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 1,691 ದಾಖಲೆಗಳನ್ನು ಕೂಡ ಸಲ್ಲಿಸಲಾಗಿದೆ. ಈ ದಾಳಿಯಲ್ಲಿ ಲಷ್ಕರ್ ಇ ತೋಯ್ಬಾವು ಪಾಕಿಸ್ತಾನದ ಭದ್ರತಾ ಪಡೆಗಳ ಶಸ್ತ್ರಾಸ್ತ್ರಗಳನ್ನು ಬಳಸಿತ್ತು ಎಂದೂ ಪ್ರಾಸಿಕ್ಯೂಷನ್ ನ್ಯಾಯಾಲಯದಲ್ಲಿ ವಾದಿಸಿತ್ತು.
ಮುಂದೇನು? ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಖಚಿತಪಡಿಸುವ ಅಗತ್ಯವಿದ್ದು, ಅದಕ್ಕಾಗಿ ಪರಿಶೀಲನೆ ನಡೆಸುತ್ತದೆ. ವಿಶೇಷ ನ್ಯಾಯಾಲಯದ ತೀರ್ಪಿನ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದಲ್ಲಿ, ಮರು ತನಿಖೆಗೆ ಆದೇಶ ನೀಡಬಹುದು. ಈ ಹಂತದಲ್ಲಿ ವಿಶೇಷ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿ, ಆರೋಪಿಗಳನ್ನು ದೋಷಮುಕ್ತಗೊಳಿಸಬಹುದು.
ಒಂದು ವೇಳೆ ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಒಪ್ಪಿಕೊಂಡು ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಲ್ಲಿ, ಇಲ್ಲಿ ಶಿಕ್ಷೆಗೊಳಬೇಕಾದವರು ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬಹುದಾಗಿದೆ. ಸುಪ್ರೀಂ ಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸಿದರೆ, ರಾಷ್ಟ್ರಪತಿಯವರಲ್ಲಿ ಕ್ಷಮಾದಾನ ಕೋರಲು ಅವಕಾಶವಿದೆ.
ಮಾಧ್ಯಮಗಳಿಗೆ ಪಾಸ್... ಮುಂಬೈ ದಾಳಿ ಕುರಿತ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಪ್ರವೇಶಿಸಲು ಮಾಧ್ಯಮಗಳು, ವಕೀಲರು, ನ್ಯಾಯಾಲಯ ಸಿಬ್ಬಂದಿ, ದಾಳಿಯ ಬಲಿಪಶುಗಳ ಕುಟುಂಬಸ್ತರು ಮತ್ತು ಆರೋಪಿಗಳ ಕುಟುಂಬಕ್ಕೆ ನ್ಯಾಯಾಲಯವು ವಿಶೇಷ ಪಾಸ್‌ಗಳನ್ನು ನೀಡಿತ್ತು.
ಸುರಕ್ಷತೆ ಹಿನ್ನೆಲೆಯಲ್ಲಿ ಮುಂಬೈಯ ಆರ್ಥರ್ ಜೈಲಿನ ಸಮೀಪವೇ ಅಸ್ತಿತ್ವಕ್ಕೆ ತರಲಾಗಿರುವ ಈ ವಿಶೇಷ ನ್ಯಾಯಾಲಯಕ್ಕೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಆದರೆ ಪತ್ರಕರ್ತರು ಮತ್ತು ಬಲಿಪಶುಗಳ ಮನೆಯವರಿಗೆ ಅವಕಾಶ ನೀಡಲಾಗಿತ್ತು. ಆದರೆ ಭಾರೀ ತಪಾಸಣೆಯ ನಂತರವಷ್ಟೇ ಒಳಗೆ ಬಿಡಲಾಗುತ್ತಿತ್ತು. ನ್ಯಾಯಾಲಯ ಪ್ರವೇಶಿಸುವ ಯಾರೊಬ್ಬರ ಕೈಯಲ್ಲೂ ಪೆನ್ನು, ಮೊಬೈಲ್ ಅಥವಾ ಯಾವುದೇ ಸಾಧನಗಳನ್ನು ಕೊಂಡೊಯ್ಯಲು ಅವಕಾಶವಿರಲಿಲ್ಲ.
166 ಮಂದಿ ಬಲಿಯಾಗಿದ್ದರು... ಲಷ್ಕರ್ ಇ ತೋಯ್ಬಾ ಸಂಘಟನೆಯ 10 ಭಯೋತ್ಪಾದಕರು 2008ರ ನವೆಂಬರ್ 26ರಂದು ಸಾಗರ ಮಾರ್ಗವಾಗಿ ಮುಂಬೈಗೆ ಬಂದು ಹಲವು ಕಡೆಗಳಲ್ಲಿ ಯದ್ವಾತದ್ವಾ ದಾಳಿ ನಡೆಸಿದ ಪರಿಣಾಮ 23 ವಿದೇಶಿ ಪ್ರಜೆಗಳೂ ಸೇರಿದಂತೆ 166 ಮಂದಿ ಅಮಾಯಕರು ಸಾವನ್ನಪ್ಪಿದ್ದರು. ಘಟನೆಯಲ್ಲಿ 304 ಮಂದಿ ಗಾಯಗೊಂಡಿದ್ದರು.
ಕಸಬ್ ಫರೀದ್‌ಕೋಟ್ ನಿವಾಸಿ... ಭಾರತದ ಮೇಲೆ 10 ಮಂದಿ ಭಯೋತ್ಪಾದಕರು ದಂಡೆತ್ತಿ ಬಂದರೂ ಅವರಲ್ಲಿ ಜೀವಂತವಾಗಿ ಸೆರೆ ಹಿಡಿಯಲು ಸಾಧ್ಯವಾಗಿದ್ದು ಕಸಬ್ ಒಬ್ಬನನ್ನು ಮಾತ್ರ. ಈತನನ್ನು ಕಳೆದ 17 ತಿಂಗಳುಗಳಿಂದ ಭಾರತವು ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಭಾರೀ ಭದ್ರತೆಯಲ್ಲಿ ವಿಚಾರಣೆ ನಡೆಸುತ್ತಾ ಬಂದಿತ್ತು.
1987ರ ಜುಲೈ 13ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಒಕಾರಾ ಜಿಲ್ಲೆಯ ಫರೀದ್‌ಕೋಟ್‌ನಲ್ಲಿ ಜನಿಸಿದ್ದ ಕಸಬ್‌ನನ್ನು ಅಜ್ಮಲ್ ಕಸಬ್, ಅಝ್ಮಲ್ ಅಮೀರ್ ಕಸವ್, ಅಜ್ಮಲ್ ಖಾಸಬ್, ಅಜಂ ಅಮೀರ್ ಕಸಬ್, ಮೊಹಮ್ಮದ್ ಅಜ್ಮಲ್ ಕಸಬ್, ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್, ಅಜ್ಮಾದ್ ಅಮೀರ್ ಕಮಾಲ್, ಮೊಹಮ್ಮದ್ ಅಜ್ಮಲ್ ಅಮೀರ್ ಕಸರ್ ಮುಂತಾದ ಹತ್ತು ಹಲವು ಹೆಸರುಗಳಿಂದ ಗುರುತಿಸಲಾಗುತ್ತಿದೆ.
ಕಸಬ್ ತಂದೆ ದಾಹಿ ಪೂರಿ ವ್ಯಾಪಾರಿಯಾಗಿದ್ದರೆ, ಈತನ 25ರ ಹರೆಯದ ಅಫ್ಜಲ್ ಎನ್ನುವ ಸಹೋದರ ಲಾಹೋರ್‌ನಲ್ಲಿ ಕಾರ್ಮಿಕ. ಹಿರಿಯ ಸಹೋದರಿ ರುಕಿಯಾ ಹುಸೇನ್‌ಳನ್ನು ಫರೀದ್‌ಕೋಟ್‌ನಲ್ಲೇ ಮದುವೆ ಮಾಡಿಕೊಡಲಾಗಿತ್ತು. ಕಿರಿಯ ಸಹೋದರಿ ಸುರೈಯ್ಯಾ ಮತ್ತು ಸಹೋದರ ಮುನೀರ್ ಪ್ರಸಕ್ತ ಹೆತ್ತವರೊಂದಿಗೆ ವಾಸಿಸುತ್ತಿದ್ದಾರೆ.