ಮುಂಬೈ ದಾಳಿ ಸಂಬಂಧ ಅಜ್ಮಲ್ ಕಸಬ್ ತಪ್ಪಿತಸ್ಥ ಮತ್ತು ಆತನ ಇಬ್ಬರು ಸಹಚರರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿರುವ ಪ್ರಕರಣವು ಭಾರತ ಕಾನೂನಿನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ತೋರಿಸಿದೆ. ಅಲ್ಲದೆ ಭಯೋತ್ಪಾದನೆಯನ್ನು ದೇಶಕ್ಕೆ ರಫ್ತು ಮಾಡಬಾರದು ಎಂಬ ಪ್ರಬಲ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದೆ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ತಿಳಿಸಿದ್ದಾರೆ.
ಖಚಿತ ಆರೋಪಿಯನ್ನು ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ. ಜತೆಗೆ ಇಬ್ಬರು ಆಪಾದಿತರನ್ನು ದೋಷಮುಕ್ತಗೊಳಿಸಿದೆ. ಇದು ನಮ್ಮ ನ್ಯಾಯಾಲಯಗಳ ಸ್ವಾತಂತ್ರ್ಯ, ಭೀತಿಮುಕ್ತತೆ ಮತ್ತು ಸಮಗ್ರತೆಯನ್ನು ತೋರಿಸುತ್ತದೆ ಎಂದು ಮುಂಬೈ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪಿಗೆ ಪ್ರತಿಕ್ರಿಯಿಸಿದರು.
ಕಾನೂನಿನ ಪ್ರಕಾರ ಈ ಪ್ರಕರಣವನ್ನು ಮುಕ್ತವಾಗಿ ವಿಚಾರಣೆ ನಡೆಸಲಾಗಿದ್ದು, ಆರೋಪಿಗಳಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಸಂಪೂರ್ಣ ಅವಕಾಶ ನೀಡಲಾಗಿತ್ತು ಎಂದು ಸಚಿವರು ಹೇಳಿದರು.
ತೀವ್ರ ಜಟಿಲವಾದ ವಿಚಾರಣೆ ಎಂದು ಭಾವಿಸಿದ್ದ ಪ್ರಕರಣವು ಕೇವಲ ಒಂದು ವರ್ಷದ ಅವಧಿಯೊಳಗೆ ಮುಕ್ತಾಯಗೊಂಡಿರುವುದು ನನಗೆ ಸಮಾಧಾನ ತಂದಿದೆ. ಕ್ರಿಮಿನಲ್ ಪ್ರಕರಣದ ವಿಚಾರಣೆಯು ಹಂತ ಹಂತವಾಗಿ ಮಾತ್ರ ಸಾಗಲು ಸಾಧ್ಯವಿದ್ದು, ಒಂದು ವರ್ಷದೊಳಗೆ ಪ್ರಾಸಿಕ್ಯೂಷನ್ ಪ್ರಮುಖ ಆರೋಪಿಯನ್ನು ತಪ್ಪಿತಸ್ಥ ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಬದುಕುಳಿದಿರುವ ಏಕೈಕ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ದೋಷಿ ಎಂದು ನ್ಯಾಯಾಲಯ ಘೋಷಿಸಿರುವುದನ್ನು ಸ್ವಾಗತಿಸುತ್ತಾ, ಪಾಕಿಸ್ತಾನವು ಇನ್ನಾದರೂ ತನ್ನ ತಪ್ಪನ್ನು ತಿದ್ದಿಕೊಂಡು ನಡೆಯುವುದನ್ನು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಪಾಕಿಸ್ತಾನಕ್ಕೆ ನೀಡುವ ಸಂದೇಶವೇನು ಎಂಬ ಪ್ರಶ್ನೆಗೆ ಗೃಹ ಸಚಿವರು, ಪಾಕಿಸ್ತಾನವು ಭಯೋತ್ಪಾದನೆಯನ್ನು ಭಾರತಕ್ಕೆ ರಫ್ತು ಮಾಡಬಾರದು ಎಂಬ ಎಚ್ಚರಿಕೆ ಸಂದೇಶವನ್ನು ಈ ತೀರ್ಪು ನೀಡಿದೆ; ಹಾಗೊಂದು ವೇಳೆ ಅವರು ಅದನ್ನೇ ಮಾಡಿದಲ್ಲಿ, ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡಿದಲ್ಲಿ, ನಾವು ಅವರನ್ನು ಕಾನೂನಿನ ಪರಿಧಿಗೆ ತಂದು ಗರಿಷ್ಠ ಶಿಕ್ಷೆಯನ್ನು ನೀಡುತ್ತೇವೆ ಎಂದರು.