ತನ್ನ ಪಾಕಿಸ್ತಾನಿ ಪ್ರಿಯಕರನ ಸಲುವಾಗಿ ಹುಟ್ಟಿ ಬೆಳೆಸಿದ ದೇಶಕ್ಕೆ ದ್ರೋಹ ಮಾಡಿದ್ದ ಭಾರತದ ಮಾಜಿ ರಾಯಭಾರಿ ಮಾಧುರಿ ಗುಪ್ತಾ ಹೇಳಿರುವ ಮಾತಿದು. ನಾನು ನನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡಿದ ನಂತರ ನನ್ನನ್ನು ಆತ ನಾಯಿಯಂತೆ ನೋಡಿಕೊಂಡ ಎಂದು ಮಾಧುರಿ ದೂರಿದ್ದಾಳೆ.
ತನ್ನ ಪ್ರಿಯಕರ ಹಾಗೂ ಐಎಸ್ಐ ಬೇಹುಗಾರ ಜಿಮ್ ಜೆಮ್‌ಷೆಡ್ ಎಂಬಾತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಮಾಧುರಿ, ಭಾರತೀಯ ಅಧಿಕಾರಿಯಾಗಿದ್ದುಕೊಂಡೇ ಪಾಕ್ ಪರ ಗೂಢಚಾರಿಕೆ ನಡೆಸಿದ್ದಳು. ಭಾರತಕ್ಕೆ ಸಂಬಂಧಿಸಿದ ಹಲವು ರಹಸ್ಯ ಮಾಹಿತಿಗಳನ್ನು ಜೆಮ್‌ಷೆಡ್ ಮತ್ತು ಇನ್ನೊಬ್ಬ ಐಎಸ್ಐ ಅಧಿಕಾರಿ ಮುಬಾಸರ್ ರಾಜಾ ರಾಣಾರಿಗೆ ಹಸ್ತಾಂತರಿಸಿದ್ದಳು.
PTI
ಇಸ್ಲಾಮಾಬಾದ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಎರಡನೇ ಹಂತದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ 53ರ ಹರೆಯ ಮಾಧುರಿಯ ಸಂಶಯಿತ ನಡೆಗಳನ್ನು ಖಚಿತಪಡಿಸಿಕೊಂಡ ವಿದೇಶಾಂಗ ಸಚಿವಾಲಯವು ದೇಶಕ್ಕೆ ಕರೆಸಿಕೊಂಡು ಬಂಧಿಸಿತ್ತು. ಇದೀಗ ಆಕೆಯ ವಿರುದ್ಧ ದೆಹಲಿ ಪೊಲೀಸರು ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶ ಕಾವೇರಿ ಬಾವೇಜಾ ಅವರಿಗೆ ಆರೋಪ ಪಟ್ಟಿ ದಾಖಲಿಸಿದ್ದಾರೆ.
2009ರ ಅಕ್ಟೋಬರ್ ಮೂರರಂದು ರಾಣಾನಿಗೆ ಮಾಧುರಿ ಬರೆದಿದ್ದ ಪತ್ರ ಸೇರಿದಂತೆ ಇನ್ನಿತರ ವಿವರಗಳನ್ನೊಳಗೊಂಡ 700 ಪುಟಗಳ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ನೀಡಲಾಗಿದೆ.
ನನ್ನನ್ನು ನಾಯಿಯಂತೆ ನೋಡಿಕೊಂಡ... ನಾನು ಜೆಮ್‌ಷೆಡ್‌ಗಾಗಿ ನನ್ನಿಂದ ಸಾಧ್ಯವಾಗುವಷ್ಟು ಸಹಕಾರ ಮಾಡಿದ್ದೇನೆ. ಆದರೆ ಆತ ನನಗೆ ನೀಡಿದ ಉಪಚಾರ ನಾಯಿಗೆ ನೀಡುವಂತದ್ದು ಎಂದು 'ಕೆಟ್ಟ ಮೇಲೆ ಬುದ್ಧಿ ಬಂತು' ಎಂಬಂತೆ ಮಾಧುರಿ ರಹಸ್ಯಗಳನ್ನೆಲ್ಲ ಹೇಳಿದ ನಂತರ ಪ್ರಿಯಕರನಿಂದಾದ ಮೋಸದ ಕುರಿತು ಐಎಸ್ಐ ಅಧಿಕಾರಿ ರಾಣಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಳು.
ಈ ಇಮೇಲ್ ಪತ್ರದ ಪ್ರತಿಯನ್ನೀಗ ಆರೋಪ ಪಟ್ಟಿಯ ಜತೆಗೆ ನ್ಯಾಯಾಲಯಕ್ಕೆ ನೀಡಲಾಗಿದೆ.
ನಾನು ಇರುವ ಸನ್ನಿವೇಶದ ಬಗ್ಗೆ ಅಥವಾ ನನ್ನ ಬಗ್ಗೆ ಯಾವುದೇ ರೀತಿಯಲ್ಲೂ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಆತ (ಜೆಮ್‌ಷೆಡ್) ಮಾಡುತ್ತಿಲ್ಲ. ನಾವು ಮದುವೆಯಾಗುವ ತನಕ ಮತ್ತು ಈ ಹುದ್ದೆಯಲ್ಲಿ ಉಳಿದುಕೊಳ್ಳುವರೆಗೆ, ಅದಕ್ಕೆ ತಕ್ಕಂತೆ ವರ್ತಿಸಬೇಕಾಗಿತ್ತು. ಆದರೆ ನಾನು ಯಾವುದೇ ಪಾಕಿಸ್ತಾನಿಯ ಜತೆ ಬೆರೆಯುವುದರ ಕುರಿತು ಜಿಮ್ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾನೆ. ನಾನು ಯಾವತ್ತೂ ಮನೆಯಲ್ಲಿ ಬುರ್ಖಾ ಹಾಕಿಕೊಂಡು ಕುಳಿತವಳಲ್ಲ ಎಂದು ಮಾಧುರಿ ಹೇಳಿರುವುದನ್ನು ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ.
ಹಾಗಾಗಿ ನಾವು ಬೇರೆಯಾಗುವುದೇ ಉತ್ತಮ ಎನಿಸುತ್ತಿದೆ. ನಾನು ಪಾಕಿಸ್ತಾನಿಯೊಬ್ಬನನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದು ಜಿಮ್‌ಗೆ ಹೇಳಿ ಎಂದು ರಾಣಾನಿಗೆ ಬರೆದಿರುವ ಪತ್ರದಲ್ಲಿ ಮಾಧುರಿ ಗುಪ್ತಾ ತನ್ನನ್ನು 'ಜವೇರಿಯಾ' ಎಂದು ಹೆಸರಿಸಿಕೊಂಡು ತಿಳಿಸಿದ್ದಾಳೆ.
ಈ ಇಮೇಲ್ ಪತ್ರದಲ್ಲಿರುವ ಅಂಶಗಳನ್ನು ಪರಿಶೀಲನೆ ನಡೆಸಿದಾಗ, ಮಾಧುರಿಯು ಜಿಮ್ ಜೆಮ್‌ಷೆಡ್ ಜತೆ ಪ್ರೇಮ ಸಂಬಂಧ ಹೊಂದಿದ್ದಳು ಎನ್ನುವುದು ಖಚಿತವಾಗುತ್ತದೆ. ಅವರಿಬ್ಬರು ಮದುವೆಯಾಗಲೂ ಯೋಜನೆ ಹಾಕಿಕೊಂಡಿದ್ದರು. ಅಲ್ಲದೆ ಜಿಮ್ ಓರ್ವ ಪಾಕಿಸ್ತಾನಿ ಎಂಬುದೂ ಖಚಿತವಾಗಿದೆ. ಅವರ ಉದ್ದೇಶ ಏನಾಗಿತ್ತೆಂಬುದು ಈ ಇಮೇಲ್ ಮೂಲಕ ಬಹಿರಂಗವಾಗಿದೆ ಎಂದು ಆರೋಪಪಟ್ಟಿಯಲ್ಲಿ ನಮೂದಿಸಲಾಗಿದೆ.
ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯ ಪ್ರಕಾರ 'ಜಂಗ್' ಪತ್ರಿಕೆಯ ವರದಿಗಾರ ಜಾವೇದ್ ರಷೀದ್ ಮೂಲಕ ರಾಣಾ ಮತ್ತು ಜೆಮ್‌ಷೆಡ್ ಸಂಪರ್ಕಕ್ಕೆ ಮಾಧುರಿ ಬಂದಿದ್ದಳು.
ರಹಸ್ಯ ಮಾಹಿತಿಗಳನ್ನು ತನ್ನ ನಿರ್ದಿಷ್ಟ ಇಮೇಲ್ ವಿಳಾಸವೊಂದಕ್ಕೆ ಕಳುಹಿಸುವ ಸಲುವಾಗಿ ಮಾಧುರಿಗೆ ಪ್ರತ್ಯೇಕ ಇಮೇಲ್ ಖಾತೆಯೊಂದನ್ನು ರಾಣಾ ತೆರೆದಿದ್ದ ಎಂಬುದನ್ನೂ ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಮಾಧುರಿಯಲ್ಲಿದ್ದ ಎರಡು ಮೊಬೈಲ್ ಫೋನುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅದರಲ್ಲಿ ಒಂದು ಬ್ಲಾಕ್‌ಬೆರ್ರಿ ಫೋನ್‌ನಲ್ಲಿ ಪಾಕಿಸ್ತಾನಿ ಸಿಮ್ ಇತ್ತು. ಈ ಎರಡೂ ಫೋನ್‌ಗಳಲ್ಲಿ ಒಟ್ಟು 19 ಸಂದೇಶಗಳು ಇನ್‌ಬಾಕ್ಸ್‌ನಲ್ಲಿ ಹಾಗೂ 54 ಸಂದೇಶಗಳು ಸೆಂಟ್ ಐಟಂನಲ್ಲಿ ದಾಖಲಾಗಿವೆ. ಜತೆಗೆ ಮೂರು ಇಮೇಲ್ ವಿಳಾಸಗಳೂ ಸಿಕ್ಕಿವೆ.
'ಪಾಕಿಸ್ತಾನಕ್ಕೆ ಹೋಗಿ, ಐಎಸ್ಐ ಬಳಿಯೇ ವಿಚಾರಿಸಿ' -- ಹೀಗೆಂದು ಉತ್ತರಿಸಿರುವುದು ಮಾಧುರಿ. ಆಕೆಯನ್ನು ನ್ಯಾಯಾಲಯಕ್ಕೆ ಕರೆ ತರುವ ಸಂದರ್ಭದಲ್ಲಿ ಪತ್ರಕರ್ತರು ಮುತ್ತಿಕೊಂಡು ಐಎಸ್ಐ ಏಜೆಂಟರ ಜತೆಗಿನ ಸಂಬಂಧದ ಕುರಿತು ಪ್ರಶ್ನಿಸಿದಾಗ ಹೀಗೆಂದಿದ್ದಾಳೆ.