ಲಷ್ಕರ್ ಇ ತೋಯ್ಬಾ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಬಂಧನಕ್ಕೆ ಕ್ಷಣಗಣನೆಯಲ್ಲಿರುವ ನರೇಂದ್ರ ಮೋದಿಯವರ ಗುಜರಾತ್ ಬಿಜೆಪಿ ಸರಕಾರದ ಗೃಹ ಸಚಿವ ಅಮಿತ್ ಶಾಹ್ ರಾಜೀನಾಮೆ ಸಲ್ಲಿಸಿದ್ದಾರೆ.
ನಾನೀಗ ದೆಹಲಿಯಲ್ಲಿದ್ದೇನೆ. ಆದರೆ ಅಮಿತ್ ಅವರು ತನ್ನ ರಾಜೀನಾಮೆಯನ್ನು ಗಾಂಧಿನಗರದ ನನ್ನ ನಿವಾಸಕ್ಕೆ ತಲುಪಿಸಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ಗುಜರಾತಿಗೆ ವಾಪಸ್ಸಾದ ನಂತರ ನಾನು ರಾಜೀನಾಮೆಯನ್ನು ಸ್ವೀಕರಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ರಾಷ್ಟ್ರೀಯ ಅಭಿವೃದ್ಧಿ ಪರಿಷತ್ ಸಭೆಗಾಗಿ ರಾಜಧಾನಿಯಲ್ಲಿರುವ ಮುಖ್ಯಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
PTI
ಅಮಿತ್ ಶಾಹ್ ವಿರುದ್ಧ ಶುಕ್ರವಾರ ಆರೋಪಪಟ್ಟಿ ಸಲ್ಲಿಸಿರುವ ಸಿಬಿಐ, ಅದಕ್ಕೂ ಮೊದಲು ಎರಡೆರಡು ಬಾರಿ ಸಮನ್ಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಆದರೆ ಸಚಿವರು ಮತ್ತಷ್ಟು ಕಾಲಾವಕಾಶ ಕೇಳಿದ್ದರು. ಅದಕ್ಕೆ ಸಿಬಿಐ ನಕಾರ ಸೂಚಿಸಿತ್ತು.
ನಂತರ ಸಚಿವರು ಸಿಬಿಐ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯೂ ವಜಾಗೊಂಡಿತ್ತು. ಇದೀಗ ರಾಜೀನಾಮೆ ನೀಡಿದ ನಂತರ ಭೂಗತರಾಗಿರುವ ಸಚಿವರು ಗುಜರಾತ್ ಹೈಕೋರ್ಟ್ ಮೂಲಕ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ರಾಜೀನಾಮೆಯನ್ನು ನೀಡುವುದರೊಂದಿಗೆ ಅಮಿತ್ ಅಪರಾಧಿಯೆಂದು ಒಪ್ಪಿಕೊಂಡಂತಾಗಿದೆಯೇ ಎಂಬ ಪ್ರಶ್ನೆಗೆ, ಅವರು ಸಂವಿಧಾನವನ್ನು ಗೌರವಿಸುವ ನಿಟ್ಟಿನಲ್ಲಿ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.
ಅಮಿತ್ ಕಾನೂನು ಹೋರಾಟ ನಡೆಸಲಿದ್ದು, ನ್ಯಾಯಾಂಗದ ಮೂಲಕ ಅವರಿಗೆ ನ್ಯಾಯ ಸಿಗುವ, ಸತ್ಯಕ್ಕೆ ಜಯ ಸಿಗುವ ಭರವಸೆಯಿದೆ ಎಂದು ಮುಖ್ಯಮಂತ್ರಿ ಭರವಸೆ ವ್ಯಕ್ತಪಡಿಸಿದ್ದಾರೆ.
ಇದು ಕಾಂಗ್ರೆಸ್ ದ್ವೇಷ ರಾಜಕಾರಣ... ಕಾಂಗ್ರೆಸ್ ಸೊಹ್ರಾಬುದ್ದೀನ್‌ನನ್ನು ಹೀರೋ ಎಂದು ಪ್ರಚಾರ ಮಾಡಿದರೂ 2007ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಕ್ಕೆ ಇದೀಗ ಅಮಿತ್ ಶಾಹ್ ವಿರುದ್ಧ ಇದೀಗ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿದೆ. ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿರುವ ಗುಜರಾತನ್ನು ಮಟ್ಟ ಹಾಕಲು ಮತ್ತು ಇಲ್ಲಿನ ಬಿಜೆಪಿ ಸರಕಾರವನ್ನು ಮೂಲೆಗುಂಪು ಮಾಡಲು ಅವರ ವಿರುದ್ಧ ರಾಜಕೀಯ ಪ್ರೇರಿತ ಕ್ರಮಗಳನ್ನು ಜರುಗಿಸಲಾಗುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ.
ಅಮಿತ್ ಶಾಹ್ ಮುಗ್ಧ ಎಂದು ತನ್ನ ಸಹಚರನನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ, ಅವರ ವಿರುದ್ಧದ ಆರೋಪಗಳು ಕಪೋಲಕಲ್ಪಿತವಾಗಿವೆ; ಕಾಂಗ್ರೆಸ್ ತನ್ನ ರಾಜಕೀಯ ಎದುರಾಳಿಗಳ ವಿರುದ್ಧ ಸಿಬಿಐಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.
ಭಯೋತ್ಪಾದಕರ ವಿರುದ್ಧದ ಹೋರಾಟವನ್ನು ಬಿಂಬಿಸುವ ನಿಟ್ಟಿನಲ್ಲಿ ಬಿಜೆಪಿಯು ನೇರವಾಗಿ ಜನರ ಬಳಿ ಹೋಗಲಿದೆ. ಇಂತಹ ವಿಚಾರಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಮಾವೋವಾದಿಗಳ ಸಮಸ್ಯೆ, ಕಾಶ್ಮೀರ ಸೇರಿದಂತೆ ಪಾಕಿಸ್ತಾನದ ಜತೆಗಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಲ್ಲಾ ರೀತಿಯಿಂದಲೂ ಸರಕಾರ ಎಡವಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.