ಅಯೋಧ್ಯೆ ತೀರ್ಪನ್ನು ಸ್ವಾಗತಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಭಾರತದ ಐಕ್ಯತೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಈ ತೀರ್ಪು ಪರಿವರ್ತನಾ ಪ್ರತಿನಿಧಿಯಾಗಲಿದೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ದೇಗುಲ ನಿರ್ಮಾಣ ಪರ ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಶೇಷ ತ್ರಿಸದಸ್ಯ ಪೀಠವು ನೀಡಿರುವ ತೀರ್ಪಿನ ಬಗ್ಗೆ ಮಾತನಾಡುತ್ತಿದ್ದ ಅವರು, ಇದರಿಂದಾಗಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡುವ ಹಾದಿ ಸುಗಮವಾಗಿದೆ ಎಂದರು.
PR
ಅದೇ ಹೊತ್ತಿಗೆ ತೀರ್ಪು ಯಾರೊಬ್ಬರ ಗೆಲುವು ಅಥವಾ ಸೋಲು ಎಂಬ ದೃಷ್ಟಿಯಲ್ಲಿ ನೋಡಬಾರದು ಎಂದೂ ಹೇಳಿದ್ದಾರೆ.
ಯಾವುದೇ ಸಮುದಾಯದ ಸೋಲು ಅಥವಾ ಜಯಭೇರಿ ಎಂದು ಇದನ್ನು ಪರಿಗಣಿಸಬಾರದು. ದೇಶದ ಮೂಲ ನಂಬಿಕೆಯನ್ನು ಗೌರವಿಸುವ ತೀರ್ಪು ಬಂದಿದೆ. ಇದನ್ನು ದೇಶದ ಗೌರವಕ್ಕೆ ಸಂಬಂಧ ಕಲ್ಪಿಸಬೇಕೇ ಹೊರತು ಇನ್ನಿತರ ವಿಚಾರಗಳಿಗಲ್ಲ. ತೀರ್ಪಿನಿಂದಾಗಿ ಜನರ ನಡುವಿನ ಐಕ್ಯತೆ ಮತ್ತು ಅನ್ಯೋನ್ಯತೆ ವೃದ್ಧಿಯಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟರು.
ತೀರ್ಪನ್ನು ಜನತೆ ಸ್ಫೂರ್ತಿಯಾಗಿ ಪರಿಗಣಿಸಿ ಸ್ವೀಕರಿಸಬೇಕು ಎಂದು ಮನವಿ ಮಾಡಿರುವ ಬಿಜೆಪಿ ನಾಯಕ, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವನ್ನು ನಿರ್ಮಾಣ ಮಾಡುವ ಮೂಲಕ ದೇಶದ ಒಗ್ಗಟನ್ನು ಬಲ ಪಡಿಸಲಾಗುತ್ತದೆ ಎಂದರು.
ಶಾಂತಿಯನ್ನು ಕಾಪಾಡಿಕೊಂಡಿರುವುದಕ್ಕೆ ಗುಜರಾತ್ ಜನತೆಯನ್ನು ಅಭಿನಂದಿಸಿದ ಅವರು, ರಾಜ್ಯವು ಅಭಿವೃದ್ಧಿಯ ಪಥದಲ್ಲಿದೆ. ನಾವು ಇದನ್ನು ಮುನ್ನಡೆಸಬೇಕಾಗಿದೆ ಎಂದಿದ್ದಾರೆ.