ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಜ್ಮೀರ್ ಸ್ಫೋಟದಲ್ಲಿ ಆರೆಸ್ಸೆಸ್; ಕಾಂಗ್ರೆಸ್-ಬಿಜೆಪಿ ಕಿತ್ತಾಟ (RSS | Ajmer blast case | Indresh Kumar | Abhinav Bharat)
Bookmark and Share Feedback Print
 
2007ರ ಅಜ್ಮೀರ್ ಸ್ಫೋಟ ಪ್ರಕರಣದ ಆರೋಪಪಟ್ಟಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರೊಬ್ಬರನ್ನು ಹೆಸರಿಸಿದ ಬೆನ್ನಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ.

2005ರ ಅಕ್ಟೋಬರ್ 31ರಂದು ಜೈಪುರದಲ್ಲಿನ ಗುಜರಾತಿ ಅತಿಥಿಗೃಹದಲ್ಲಿ ನಡೆದ ರಹಸ್ಯ ಸಭೆಯಲ್ಲಿ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜತೆಗೆ ಆರೆಸ್ಸೆಸ್‌ನ ಇನ್ನಿತರ ಆರು ಮಂದಿ ಜತೆಗಿದ್ದರು ಎಂದು ಶುಕ್ರವಾರ ಅಜ್ಮೀರ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ 806 ಪುಟಗಳ ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಅಷ್ಟಾಗಿಯೂ ಇಂದ್ರೇಶ್ ಕುಮಾರ್ ಈ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿಲ್ಲ. ಈ ಕುರಿತು ತನಿಖೆ ನಡೆಯುತ್ತಿದ್ದು, ಸ್ಫೋಟದಲ್ಲಿ ಅವರ ಪಾತ್ರ ಇರುವ ಬಗ್ಗೆ ಯಾವುದೇ ಖಚಿತತೆಯಿಲ್ಲ ಎಂದು ರಾಜಸ್ತಾನ ಎಟಿಎಸ್ ಮೂಲಗಳು ಹೇಳಿವೆ.

ಹಿಂದೂ ಬಲಪಂಥೀಯ ಸಂಘಟನೆ ಎಂದು ಆರೋಪಿಸಲಾಗಿರುವ ಅಭಿನವ್ ಭಾರತ್ ಜತೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿರುವ ದೇವೇಂದ್ರ ಗುಪ್ತಾ ಸೇರಿದಂತೆ ಒಟ್ಟು ಐವರ ಹೆಸರುಗಳನ್ನು ಕೂಡ ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ.

ಗುಪ್ತಾ ಹೊರತುಪಡಿಸಿ ಉಳಿದ ನಾಲ್ವರು ಆರೋಪಿಗಳೆಂದರೆ ಲೋಕೇಶ್ ಶರ್ಮಾ, ಚಂದ್ರ ಶೇಖರ್ ಲಾವೆ, ಸಂದೀಪ್ ಡಂಗೆ ಮತ್ತು ರಾಮ್ಜಿ ಕಲಾಸಂಗ್ರೆ. ಇವರಲ್ಲಿ ಶರ್ಮಾ ಮತ್ತು ಲಾವೆಯವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಡಂಗೆ ಮತ್ತು ಕಲಾಸಂಗ್ರೆ ತಲೆ ಮರೆಸಿಕೊಂಡಿದ್ದಾರೆ. ಇನ್ನೋರ್ವ ಆರೋಪಿ ಸುನಿಲ್ ಜೋಷಿ ತನಿಖೆ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ.

ಗುಪ್ತಾ ಅವರನ್ನು ಇದೇ ವರ್ಷದ ಏಪ್ರಿಲ್‌ನಲ್ಲಿ ಬಂದಿಸಲಾಗಿತ್ತು. ಇವರು ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಜತೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಇದು ರಾಜಕೀಯ ಷಡ್ಯಂತ್ರ: ಇಂದ್ರೇಶ್
ಸ್ಫೋಟದಲ್ಲಿ ಪಾಲ್ಗೊಂಡಿದ್ದೇನೆ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಇಂದ್ರೇಶ್ ಕುಮಾರ್, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲಾಗಿದೆ; ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ರಾಜಸ್ತಾನದ ಕಾಂಗ್ರೆಸ್ ಸರಕಾರವು ದೇಶದ್ರೋಹಿಗಳನ್ನು ರಕ್ಷಿಸುತ್ತಿದೆ. ಅದು ದೇಶಭಕ್ತರ ವಿರುದ್ಧ ಪಿತೂರಿ ನಡೆಸುತ್ತಿದೆ. ನನಗೆ ಆಗಿರುವ ಅನ್ಯಾಯದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುತ್ತೇನೆ ಎಂದು ಕುಮಾರ್ ತಿಳಿಸಿದ್ದಾರೆ.

ಸತ್ಯ ಹೊರಗೆ ಬಂದಿದೆ: ಗೆಹ್ಲೋಟ್
ಸತ್ಯ ಕೊನೆಗೂ ಹೊರಗೆ ಬಂದಿದೆ. ಇದನ್ನು ಆರೆಸ್ಸೆಸ್ ಸ್ವೀಕರಿಸಬೇಕು ಎಂದು ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.

ಈ ಸಂಬಂಧ ತನಿಖೆಗಳು ನಡೆಯುತ್ತಿವೆ. ಆರೆಸ್ಸೆಸ್ ನಾಯಕ ಇನ್ನಷ್ಟು ಹೆಸರುಗಳು ಹೊರಗೆ ಬರಲಿವೆ. ಪ್ರತಿಯೊಬ್ಬರೂ ನ್ಯಾಯಾಂಗದಲ್ಲಿ ವಿಶ್ವಾಸ ಇಡಬೇಕು. ಖಂಡಿತಾ ಸತ್ಯ ಹೊರಗೆ ಬರುತ್ತದೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದು ಮುಖ್ಯಮಂತ್ರಿ ಭರವಸೆ ವ್ಯಕ್ತಪಡಿಸಿದ್ದಾರೆ.

ಹೆಸರು ಕೆಡಿಸುವ ತಂತ್ರ: ಆರೆಸ್ಸೆಸ್
ಆರೆಸ್ಸೆಸ್‌ನ ದೆಹಲಿಯ ಹಿರಿಯ ನಾಯಕ ಇಂದ್ರೇಶ್ ಕುಮಾರ್ ಅಜ್ಮೀರ್ ಸ್ಫೋಟದಲ್ಲಿ ಪಾತ್ರವಹಿಸಿದ್ದಾರೆ ಎಂಬ ವರದಿಗಳು ಸುಳ್ಳು. ಇದು ಸತ್ಯಕ್ಕೆ ದೂರವಾದುದು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತದೆ ಎಂದು ಆರೆಸ್ಸೆಸ್ ವಕ್ತಾರ ರಾಮ್ ಮಾಧವ್ ತಿಳಿಸಿದ್ದಾರೆ.

ಆರೆಸ್ಸೆಸ್ ಯಾವತ್ತೂ ಸಂವಿಧಾನ ವಿರೋಧಿ ಕೃತ್ಯಗಳನ್ನು ಬೆಂಬಲಿಸಿಲ್ಲ ಎಂದಿರುವ ಮಾಧವ್, ತನಿಖಾ ದಳಗಳಿಗೆ ನಾವು ನಮ್ಮ ಸಹಕಾರವನ್ನು ವಿಸ್ತರಿಸಲಿದ್ದೇವೆ. ಆದರೆ ವಾಸ್ತವ ವಿಚಾರಗಳನ್ನು ಖಚಿತಪಡಿಸಿಕೊಳ್ಳದೆ ನಮ್ಮ ಹಿರಿಯ ನಾಯಕರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದರು.

ಈ ಬಗ್ಗೆ ನಮಗೆ ಮೊದಲೇ ಶಂಕೆಯಿತ್ತು. ರಾಜ್ಯ ಸರಕಾರವು ಆರೆಸ್ಸೆಸ್ ಗೌರವವನ್ನು ಮಣ್ಣುಪಾಲು ಮಾಡಲು ಬಯಸುತ್ತಿದೆ. ಅದೇ ಕಾರಣದಿಂದ ಅವರು ಇಂತಹ ಘಟನೆಗಳಲ್ಲಿ ಆರೆಸ್ಸೆಸ್ ನಾಯಕರ ಹೆಸರುಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಆರೆಸ್ಸೆಸ್ ಕ್ಷೇತ್ರೀಯ ಪ್ರಚಾರ ಪ್ರಮುಖ ಸಂಜಯ್ ಅಭಿಪ್ರಾಯಪಟ್ಟಿದ್ದಾರೆ.

ಆರೆಸ್ಸೆಸ್‌ ಸಮಾಜ ಕಂಟಕ: ಕಾಂಗ್ರೆಸ್
ದೇಶದ ಅನೇಕತೆ ಅಥವಾ ಜಾತ್ಯತೀತ ನೆಲೆಗಳನ್ನು ಯಾವತ್ತೂ ನಾಶ ಮಾಡಲು ಯತ್ನಿಸುವ ಸಂಘಟನೆ ಆರೆಸ್ಸೆಸ್. ಇದು ಈಗಿನಿಂದ ಅಲ್ಲ, 1925ರಿಂದಲೇ ಆರೆಸ್ಸೆಸ್ ಋಣಾತ್ಮಕ ಪಾತ್ರಗಳಲ್ಲಿ ಗುರುತಿಸಿಕೊಂಡು ಬಂದಿದೆ. ಅದು ಮಾಲೆಗಾಂವ್, ಮೊದಾಸಾ ಅಥವಾ ಗೋವಾ ಪ್ರಕರಣಗಳಿರಬಹುದು. ಒಟ್ಟಾರೆ ಆರೆಸ್ಸೆಸ್ ನಿರಂತರವಾಗಿ ಅನೇಕತೆಯ ತತ್ವಗಳನ್ನು ಧ್ವಂಸಗೊಳಿಸುತ್ತಾ, ಕೋಮು ಸಾಮರಸ್ಯವನ್ನು ಕೆಡಿಸುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಆರೋಪಿಸಿದ್ದಾರೆ.

ಭಾರತದ ಪ್ರಗತಿಯ ಸಂಕೇತವಾಗಿರುವ ಜಾತ್ಯತೀತೆ ಮತ್ತು ಕೋಮು ಸೌಹಾರ್ದತೆಯನ್ನು ಕೆಡಿಸುವಲ್ಲಿ ಆರೆಸ್ಸೆಸ್ ಪಾತ್ರ ಮಹತ್ವದ್ದು. ಇತ್ತೀಚಿನ ಅಜ್ಮೀರ್ ಸ್ಫೋಟ ಪ್ರಕರಣದಲ್ಲಿ ಆರೆಸ್ಸೆಸ್ ನಾಯಕ ಹೆಸರು ಆರೋಪಪಟ್ಟಿಯಲ್ಲಿರುವುದು ಸಂಘಟನೆಯು ಯಾವ ಹಾದಿಯಲ್ಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ ಎಂದರು.

ಆರೋಪದಲ್ಲಿ ಹುರುಳಿಲ್ಲ: ಬಿಜೆಪಿ
ಅಜ್ಮೀರ್ ಸ್ಫೋಟ ಪ್ರಕರಣದ ಆರೋಪಪಟ್ಟಿಯಲ್ಲಿ ಇಂದ್ರೇಶ್ ಕುಮಾರ್ ಅವರನ್ನು ಹೆಸರಿಸಿರುವುದು ಹೌದು, ಆದರೆ ಅವರನ್ನು ಆರೋಪಿ ಎಂದು ಹೆಸರಿಸಲಾಗಿಲ್ಲ. ಅವರು ಸ್ಫೋಟದಲ್ಲಿ ಪಾತ್ರವಹಿಸಿದ್ದಾರೆ ಎಂದು ಹೇಳುವ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಸಂಬಂಧಪಟ್ಟ ಸುದ್ದಿಗಳು:
** ಅಜ್ಮೀರ್ ಸ್ಫೋಟದಲ್ಲಿ ಕೈವಾಡವಿಲ್ಲ, ಇದು ಪಿತೂರಿ: ಆರೆಸ್ಸೆಸ್
** ಕೇಸರಿ ಭಯೋತ್ಪಾದನೆ ಆರೋಪ; ಚಾನೆಲ್‌ಗೆ ದಾಳಿ
** ಅಜ್ಮೀರ್ ಸ್ಫೋಟ ಹಿಂದೂ ಬಲಪಂಥೀಯ ಸಂಘಟನೆ ಕೈವಾಡ?
** ಅಜ್ಮೀರ್ ಬ್ಲಾಸ್ಟ್-ಆರ್ಎಸ್ಎಸ್ ಲಿಂಕ್: ಮತ್ತೋರ್ವ ಸೆರೆ
ಸಂಬಂಧಿತ ಮಾಹಿತಿ ಹುಡುಕಿ