ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಒಬಾಮ ಬರ್ತಿದ್ದಾರೆ, ಸುಮ್ನೇ ಕೂರಿ: ಎಂಪಿಗಳಿಗೆ ಸೂಚನೆ!
(Barak Obama | India Visit | Obama in India | 2010 | US President)
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಸೋಮವಾರ ಸಂಜೆ ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡುವ ವೇಳೆ, "ಸದ್ದು ಮಾಡದೆ ಸುಮ್ಮನೇ ಕುಳಿತುಕೊಳ್ಳಿ, ನಮ್ಮ ಮರ್ಯಾದೆ ತೆಗೆಯಬೇಡಿ" ಎಂಬ ಉದ್ದೇಶವುಳ್ಳ ಸಂದೇಶವೊಂದನ್ನು ಎಲ್ಲ ಸಂಸದರಿಗೆ ಕಳುಹಿಸಲಾಗಿದೆ!
ಸದನದ ಗೌರವ ಕಾಪಾಡುವಂತೆ ಶಿಸ್ತಿನಿಂದ ಇರುವಂತೆ ಎಲ್ಲ ಸಂಸದರಿಗೂ ಸೂಚನೆ ನೀಡಬೇಕೆಂಬ ಒಕ್ಕಣೆಯುಳ್ಳ ಈ ಪತ್ರವನ್ನು ಸಂಸದೀಯ ವ್ಯವಹಾರಗಳ ಸಚಿವಾಲಯವು ಎಲ್ಲ ಪಕ್ಷಗಳ ಸಂಸದೀಯ ಮುಖ್ಯಸ್ಥರಿಗೆ ಕಳುಹಿಸಿದೆ.
ಈ ಹಿಂದೆ, 2000ದ ಮಾರ್ಚ್ ತಿಂಗಳಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಬಂದಿದ್ದಾಗ, ಹಲವಾರು ಸಂಸದರು ಬೆಂಚುಗಳ ಮೇಲೆ ಜಿಗಿದುಸ ಕ್ಲಿಂಟನ್ ಬಳಿಗೆ ಹೋಗಿ ಕೈಕುಲುಕುವ ಧಾವಂತ ತೋರಿಸಿದ್ದು ಇನ್ನೂ ನೆನಪಿದೆ. ಅವರ ಈ ವರ್ತನೆ ತೀವ್ರ ಟೀಕೆಗೂ ಗುರಿಯಾಗಿತ್ತು.
ಆದರೆ, ಈ ರೀತಿ ಸೂಚನೆಗಳನ್ನು ಕಳುಹಿಸುವುದಕ್ಕೆ ಲೋಕಸಭಾಧ್ಯಕ್ಷೆ (ಸ್ಪೀಕರ್) ಮೀರಾ ಕುಮಾರ್ ಆಕ್ಷೇಪವಿದೆ. ಅವರ ಪ್ರಕಾರ, ಸಂಸದರು ಸರಿಯಾಗಿ ವರ್ತನೆ ತೋರುವಷ್ಟು ಪ್ರಬುದ್ಧರಾಗಿದ್ದಾರೆ.
ಈ ಕುರಿತು ಎರಡು ಸೂಚನೆಗಳನ್ನು ಕಳುಹಿಸಲಾಗಿದೆ ಎಂಬುದನ್ನು ಬಿಜೆಪಿ ಸಂಸದ ಅರ್ಜುನ್ ರಾಮ್ ಮೇಘ್ವಾಲ್ ಖಚಿತಪಡಿಸಿದ್ದಾರೆ. ಒಬಾಮ ಅವರು ಸೋಮವಾರ ಸಂಜೆ ಸಂಸತ್ತಿನ ಉಭಯ ಸದನಗಳಲ್ಲಿ ಭಾಷಣ ಮಾಡುವ ಕಾರ್ಯಕ್ರಮವಿದೆ.
ಇತ್ತೀಚೆಗೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ನಡೆಯುತ್ತಿರುವ ಅವಾಚ್ಯ ಬೈಗುಳ ಪ್ರಯೋಗ, ಅಸಹ್ಯ ವರ್ತನೆ ಇವುಗಳನ್ನೆಲ್ಲಾ ನೋಡಿರುವ ನಮಗೆ, ಶಾಲೆಯಲ್ಲಿ ಮಕ್ಕಳಿಗೆ "ಇನ್‌ಸ್ಪೆಕ್ಟರ್ ಬರ್ತಾರೆ, ಶಿಸ್ತಿನಿಂದ ಕೂತ್ಕೊಳ್ಳಿ" ಎಂದು ಹೇಳುವಂತೆ ನಮ್ಮ ಜನನಾಯಕರಿಗೂ ಹೇಳಬೇಕಾಗಿರುವುದು ಪರಿಸ್ಥಿತಿಗೊಂದು ಕೈಗನ್ನಡಿ.