ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣ ನನಗೆ ಒಂದೂವರೆ ತಿಂಗಳ ಮೊದಲೇ ಗೊತ್ತಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಬಹಿರಂಗಪಡಿಸಿದ್ದಾರೆ.
ನನ್ನ ಪತ್ನಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹರತಾಳು ಹಾಲಪ್ಪನವರು ಅತ್ಯಾಚಾರ ಎಸಗಿದ್ದಾರೆ ಎಂದು ವೆಂಕಟೇಶ ಮೂರ್ತಿ ಎಂಬ ವ್ಯಕ್ತಿ ನನ್ನ ಬಳಿ ಬಂದು ಒಂದೂವರೆ ತಿಂಗಳ ಹಿಂದೆಯೇ ದೂರಿಕೊಂಡಿದ್ದರು ಎಂದು ಈಶ್ವರಪ್ಪ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ನಿಜವಾಗಿಯೂ ಅತ್ಯಾಚಾರ ನಡೆದಿರುತ್ತಿದ್ದರೆ ಗಂಡನಾದವನು ಅದರ ವೀಡಿಯೋ ಚಿತ್ರೀಕರಣ ನಡೆಸುತ್ತಿರಲಿಲ್ಲ. ಬದಲಿಗೆ ಕೊಲೆಯೇ ಮಾಡುತ್ತಿದ್ದ. ಆದರೆ ಇಲ್ಲಿ ಸ್ವತಃ ಗಂಡನೇ ವೀಡಿಯೋ ಶೂಟಿಂಗ್ ಮಾಡಿದ್ದಾನೆ. ಹಾಗಾಗಿ ಇಲ್ಲಿ ಪಿತೂರಿ ಅಡಗಿರುವುದು ಸ್ಪಷ್ಟ ಎಂದು ಅವರು ಅಭಿಪ್ರಾಯಪಟ್ಟರು.
ಸುಮಾರು ಒಂದೂವರೆ ತಿಂಗಳ ಹಿಂದೆ ನನ್ನ ಬಳಿ ಬಂದಿದ್ದ ಮೂರ್ತಿ, ನಿಮ್ಮ ಸಚಿವರು ನನ್ನ ಪತ್ನಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆದರೆ ಸರಕಾರ ಮತ್ತು ನಿಮ್ಮ ಪಕ್ಷಕ್ಕೆ ಕೆಟ್ಟ ಹೆಸರು ತರಬಾರದೆನ್ನುವ ಉದ್ದೇಶದಿಂದ ನಾನು ಇದುವರೆಗೆ ತಾಳಿಕೊಂಡು ಬಂದಿದ್ದೇನೆ. ಅದಕ್ಕೆ ಸಂಬಂಧಪಟ್ಟ ವೀಡಿಯೋ-ಆಡಿಯೋ ಮತ್ತು ಫೋಟೋ ದಾಖಲೆಗಳು ನನ್ನಲ್ಲಿವೆ ಎಂದು ಹೇಳಿಕೊಂಡಿದ್ದ. ನಿನಗೆ ಬಿಜೆಪಿಯ ಚಿಂತೆ ಬೇಡ. ಅದನ್ನು ನೋಡಿಕೊಳ್ಳಲು ಕಾರ್ಯಕರ್ತರು, ನಾಯಕರು ಇದ್ದಾರೆ. ನೀನು ನಿನ್ನ ಕುಟುಂಬದ ಯೋಗಕ್ಷೇಮವನ್ನು ನೋಡಿಕೋ. ಸಚಿವರ ವಿರುದ್ಧ ಪೊಲೀಸರಿಗೆ ದೂರು ನೀಡು. ದೂರು ಸ್ವೀಕರಿಸಲು ಯಾರಾದರೂ ನಿರಾಕರಿಸಿದರೆ ನನ್ನಲ್ಲಿ ಬಂದು ಹೇಳು ಎಂದಿದ್ದೆ ಎಂದು ಈಶ್ವರಪ್ಪ ವಿವರಣೆ ನೀಡಿದ್ದಾರೆ.
ಒಂದೂವರೆ ತಿಂಗಳ ಹಿಂದೆಯೇ ಈಶ್ವರಪ್ಪನವರ ಗಮನಕ್ಕೆ ಈ ಪ್ರಕರಣ ಬಂದಿದ್ದರೂ, ಅವರು ಪಕ್ಷದ ವೇದಿಕೆಯಲ್ಲಿ ಈ ವಿಚಾರವನ್ನು ಚರ್ಚಿಸಿದ್ದಾರೆಯೇ ಅಥವಾ ನಾಯಕರಲ್ಲಿ ಪ್ರಸ್ತಾಪಿಸಿದ್ದಾರೆಯೇ ಎಂಬುದು ತಿಳಿದು ಬಂದಿಲ್ಲ. ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನನಗೆ ಈ ವಿಚಾರ ಇಂದು ಬೆಳಿಗ್ಗೆಯಷ್ಟೇ ತಿಳಿದು ಬಂದಿತ್ತು ಎಂದಿರುವುದು ಕೂಡ ಕುತೂಹಲ ಹುಟ್ಟಿಸಿದೆ.