ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣು ಸ್ಮರಣೆ; 'ಸಿಂಹ' ಬೇಡ, ರಾಮಚಾರಿಯಾಗಿ ಮತ್ತೆ ಹುಟ್ಟಿ ಬಾ (Vishnuvardhan | Kannada Actor | Dwarakeesh | Bharati)
ಸುದ್ದಿ/ಗಾಸಿಪ್
Bookmark and Share Feedback Print
 
PR
ಪ್ರೀತಿಯ ವಿಷ್ಣುವಿಗೆ,

ಸಣ್ಣದೊಂದು ಸುಳಿವನ್ನೂ ನೀಡದೆ, ಎಲ್ಲಾ ಸಾಲವನ್ನು ತೀರಿಸಿದವನಂತೆ ಸಾವಿನ ಹಿಂದೆ ಹೋದ ದಿನಕ್ಕೀಗ ವರ್ಷ ತುಂಬಿದೆ. ಅಂದು ಕೆಲವರು ಬಿಕ್ಕಿದರು, ದುಃಖಿಸಿದರು, ಅತ್ತರು, ಕೆಲವರು ಸತ್ತಂತೆ ನಟಿಸಿದರು, ಪ್ರಚಾರದ ಆಸೆಯಿಂದ ಇಲ್ಲದ ಕಣ್ಣೀರು ಸುರಿಸಿದರು, ನೋವುಂಡವರಂತೆ ನಾಟಕ ಮಾಡಿದರು, ಹಾಡಿ ಹೊಗಳಿದರು, ಇನ್ನು ಕೆಲವರು ಇವೆಲ್ಲದರ ಹೆಸರಿನಲ್ಲಿ ಸಂಭ್ರಮಿಸಿದರು.

ಅಂದು ತೀರಾ ಭಾವುಕರಾಗಿದ್ದ ನಿನ್ನ ಲಕ್ಷಾಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಬೆಳ್ಳಂಬೆಳಗ್ಗೆ ಯಾರೋ ಫೋನ್ ಮಾಡಿ ವಿಷ್ಣುವರ್ಧನ್ ಹೋಗಿ ಬಿಟ್ಟರು ಎಂದು ಹೇಳಿದ್ದರು. ನಂಬಿರಲಿಲ್ಲ. ಟಿವಿ ನೋಡಿದೆ. 'ವಿಷ್ಣುವರ್ಧನ್ ಇನ್ನಿಲ್ಲ' ಎಂಬ ಸುದ್ದಿ ಬರುತ್ತಿತ್ತು. ಒಂದು ಕ್ಷಣ ಅಸಹಾಯಕನಾಗಿ ಹೋದೆ. ಕಣ್ಣಿಂದ ಅಚಾನಕ್ ಆಗಿ ನೀರು ಹೊರ ಬಂತು.

ಹೋದೋರೆಲ್ಲ ಒಳ್ಳೆಯವರು, ಹರಸೋ ಹಿರಿಯರು
ಅವರ ಸವಿಯ ನೆನಪು ನಾವೇ, ಉಳಿದ ಕಿರಿಯರು
ನಿನ್ನ ಕೂಡ ನೆರಳ ಹಾಗೆ, ಇರುವೆ ನಾನು ಎಂದೂ ಹೀಗೆ...

ಒಂಟಿಯಲ್ಲ ನೀ..

ನಾಳೆ ನಮ್ಮ ಮುಂದೆ ಇಹುದು, ದಾರಿ ಕಾಯುತಾ
ದುಃಖ ನೋವು ಎಂದೂ ಜತೆಗೆ, ಇರದು ಶಾಶ್ವತಾ
ಭರವಸೆಯ ಬೆಳ್ಳಿ ಬೆಳಕು,
ಹುಡುಕಿ ಮುಂದೆ ಸಾಗಬೇಕು ಧೈರ್ಯ ತಾಳುತಾ...

ಮೇಲಿನ ಸಾಲುಗಳು ಬಿಟ್ಟೂ ಬಿಡದೆ ನೆನಪಾದವು, ಕಾಡಿದವು. ಅವೆಲ್ಲ ಈಗ ಕಾಲಗರ್ಭಕ್ಕೆ ಸೇರಿ ಹೋಗಿದೆ. ದುಃಖ, ನೋವುಗಳನ್ನು ಖಂಡಿತಕ್ಕೂ ನಾವು ಮರೆತಿದ್ದೇವೆ. ಆದರೆ ನಿನ್ನನ್ನು ಮರೆತಿಲ್ಲ. ಮರೆತವರ ಬಗ್ಗೆ ಬೇಸರಗಳಿವೆ. ಅವರನ್ನು ಕಂಡಾಗ ಅಸಹ್ಯವಾಗುತ್ತಿದೆ.

ಬಿಡು, ಹೇಗಿದ್ದೀಯಾ ರಾಮಾಚಾರಿ?

ಇಲ್ಲಿ ನಾನು ಮತ್ತು ನನ್ನಂತಹ ಲಕ್ಷಾಂತರ ಅಭಿಮಾನಿಗಳು ಕ್ಷೇಮವಾಗಿದ್ದೇವೆ, ನಿನ್ನಂತೆ -- ನೀನು ಕಳೆದ ವರ್ಷದ ಡಿಸೆಂಬರ್ 29ರ ರಾತ್ರಿ ಮಲಗುವ ಹೊತ್ತಿನಲ್ಲಿ ಇದ್ದ ಹಾಗೆ. ಸದ್ಯಕ್ಕೆ ಬರುವ ಯೋಚನೆ ಖಂಡಿತಾ ಇಲ್ಲ, ಅಷ್ಟಕ್ಕೂ ಅದು ನನ್ನ/ನಮ್ಮ ಕೈಯಲ್ಲಿ ಇಲ್ಲ, ನಿನ್ನಂತೆ -- ಯಾವಾಗ ಬೇಕಾದರೂ ಬರಬಹುದು.

ಬಿಡು, ನಮ್ಮ ವಿಚಾರ ಅಷ್ಟೊಂದು ತಲೆ ಕೆಡಿಸುವ ಮಹತ್ವ ಹೊಂದಿರಲಾರದು. ಯಾರೋ ಪತ್ರ ಬರೆದಿದ್ದಾರೆ ಅಂದ ಮೇಲೆ ಇಲ್ಲಿನ ಪರಿಸ್ಥಿತಿ ಬಗ್ಗೆ ಬರೆದೇ ಇರುತ್ತಾರೆ ಎಂದು ನಿರೀಕ್ಷಿಸಿರುತ್ತೀಯ.
PR

ನಾನು ಕೆಲವೊಂದು ಹೇಳಲೇಬೇಕಾದ ವಿಚಾರಗಳಿವೆ. ನೀನು ನಿರ್ಲಿಪ್ತ ಎಂದು ನನಗೆ ಗೊತ್ತು. ನಾನು ಹೇಳುವ ಮಾತುಗಳು ನಿನಗೆ ನೋವು ತರುವ ಬದಲು ವಿಮರ್ಶೆಗೆ ಹಚ್ಚಲಿದೆ ಎನ್ನುವಷ್ಟು ಅಥವಾ ಅದು ನನಗೆ ಗೊತ್ತು ಎಂದು ನೀನು ಅಂದುಕೊಳ್ಳುವಷ್ಟು ನನಗೆ ನೀನು ಗೊತ್ತು.

ಹಾಗಿದ್ದರೆ ಕೇಳು, ಮೊದಲನೆಯದಾಗಿ ನಿನ್ನನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ನಿಜಕ್ಕೂ ಬಡವಾಗಿಲ್ಲ! ಎರಡನೆಯದಾಗಿ ನಿನ್ನ ಹೆಸರು ಹೇಳಿಕೊಂಡು ಅತ್ತೂ ಕರೆದವರು ಇಂದು ನಿನ್ನ ಹೆಸರಿನಲ್ಲಿ ಹಣ ಮಾಡಲು ಹೊರಟಿದ್ದಾರೆ. ಮೂರನೆಯದಾಗಿ ನೀನು ಯಾರಿಗೆ ಸೇರಿದವನು ಎಂಬ ಬಗ್ಗೆ ಭಾರೀ ಗೊಂದಲವಿದೆ.

ನಿನ್ನನ್ನು ಹೆತ್ತು-ಹೊತ್ತು ಸಲಹಿದ್ದು ನಿನ್ನ ತಂದೆ-ತಾಯಿ. ನಿನ್ನನ್ನು ಚಿತ್ರರಂಗದಲ್ಲಿ ನೆಲೆಗೊಳಿಸಿದ್ದು ಪುಟ್ಟಣ್ಣ ಕಣಗಾಲ್. ಸ್ನೇಹದಲ್ಲಿ ಹೆಗಲಿಗೆ ಹೆಗಲಾದದ್ದು ದ್ವಾರಕೀಶ್. ಕೈ ಹಿಡಿದದ್ದು ಭಾರತಿ. ಇವರಲ್ಲಿ ಮೊದಲ ಮೂರು ಮಂದಿ ನಿನಗಿಂತ ಮೊದಲೇ ಹೊರಟವರು. ಕೊನೆಯ ಎರಡು ಮಂದಿ ನಿನ್ನ ಜೀವನದ ವಿವಿಧ ಮಜಲುಗಳಲ್ಲಿ ಹತ್ತಿರವಾಗಿದ್ದವರು ಮತ್ತು ದೂರವಾದವರು.

ಆದರೆ ಈಗ ಮಾತ್ರ ಬೀದಿಯಲ್ಲಿ ನಿಂತು ಅವರಿಬ್ಬರು ನಿನ್ನ ವಿಚಾರದಲ್ಲೇ ಕಚ್ಚಾಡುತ್ತಿದ್ದಾರೆ. ನಿನ್ನ ಅಗಲಿಕೆಯ ದುಃಖಕ್ಕಿಂತ ಪ್ರತಿಷ್ಠೆಯೇ ದೊಡ್ಡದು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಒಬ್ಬರು ಸ್ನೇಹದ ಸಬೂಬು ಕೊಟ್ಟು ಮಸಾಲೆ ಚಿತ್ರ ಮಾಡಿ ಹಣ ಮಾಡಲು ಹೊರಟರೆ, ಅವರಿಗೆ ಬೆಂಬಲ ನೀಡಲು ನಿನ್ನನ್ನು 'ಅಪ್ಪಾಜಿ' ಎಂದು ಕರೆಯುತ್ತಿದ್ದವರು ಪಣ ತೊಟ್ಟಿದ್ದಾರೆ.

ನಿನ್ನನ್ನೇ ಜೀವ ಎಂದು ಪರಿಗಣಿಸಿದ ಜೀವ ಅಂದಿನಿಂದ ಇಂದಿನವರೆಗೂ ಹೆಣಗಾಡುತ್ತಿದೆ. ಆ ಜೀವದ ನೋವುಗಳಿಗೆ ಸಾಂತ್ವನ ಹೇಳಬೇಕಾದ ಕೈಗಳು ಸುತ್ತ ಕೋಲು ಹಿಡಿದು ಹಳೆ ದ್ವೇಷ ಸಾಧಿಸಲು ಕಾದು ನಿಂತಿವೆ. ನೀನು ಬದುಕಿದ್ದಾಗ ಸುಮ್ಮನಿದ್ದ ಭೂತಗಳು ಈಗ ದಿಗ್ಗನೆದ್ದು ಬೆದರಿಸುತ್ತಿವೆ.

ಬದುಕಿದ್ದಾಗಲೇ ನಿನ್ನನ್ನು ಬೇರೆಯೇ ತಕ್ಕಡಿಯಲ್ಲಿ ತೂಗಿದ ಜನ, ಅಂದು ಇಂದ್ರ-ಚಂದ್ರ ಎಂದು ಹೊಗಳಿದ ಚಿತ್ರರಂಗದ ಮಂದಿ ನಿನ್ನದೇ ಧ್ಯಾನದಲ್ಲಿದ್ದಾರೆ ಎಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಅಂತವರೆಲ್ಲ ಇಂದು ನಿನ್ನ ಹೆಸರಿನ ಬದಲಿಗೆ ಬೇರೆ ಹೆಸರನ್ನು ತಂದಿದ್ದಾರೆ. ಕನ್ನಡ ಚಿತ್ರರಂಗ ಬಡವಾಗಿದೆ ಎಂಬ ಯಾವೊಂದು ಅಂಶವೂ ಅಲ್ಲಿ ಕಾಣುತ್ತಿಲ್ಲ. ಎಲ್ಲರೂ ಸುಖವಾಗಿದ್ದಾರೆ, ನೆಮ್ಮದಿಯಿಂದಿದ್ದಾರೆ.
PR

ಅತ್ತ ನಿನ್ನ 'ಜಲೀಲ್' ಇದ್ಯಾವುದರ ಉಸಾಬರಿಯೇ ಬೇಡ ಎಂದು ದೂರ ನಿಂತಿದ್ದಾನೆ. ಅವನಿಂದ ಯಾವ ಗುಟುರು ಕೂಡ ಈಗ ಹೊರಗೆ ಬರುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡು ಬದಿಗೆ ನಿಲ್ಲುತ್ತಾನೆ. ಈ ಜನರೇ ಇಷ್ಟು ಎನ್ನುವುದು ಅವನಿಗೂ ತಿಳಿದು ಹೋದಂತಿದೆ.

ಅಂದು ನಿನಗೆ ಎರಡೆರಡಡಿ ಎರವಲು ಮೀಸೆಯನ್ನು ಅಂಟಿಸಿದ ಮಂದಿಯಂತೂ ತಪ್ಪಿಯೂ ನಿನ್ನನ್ನು ನೆನಪಿಸಿಕೊಳ್ಳುತ್ತಿಲ್ಲ. ಪರಭಾಷೆಯ ಸಿಡಿಗಳನ್ನು ತಂದು ನಿನ್ನ ಮನೆಯಲ್ಲಿ ಗುಡ್ಡೆ ಹಾಕಿದ ಮಂದಿ ಬೇರೆ ಮನೆ ನೋಡಿಕೊಂಡಿದ್ದಾರೆ. ವಿಷ್ಣುವರ್ಧನ್ ಎಂಬ ವಿಷ್ಣುವರ್ಧನ್ ನಮ್ಮಲ್ಲಿ ಇದ್ದ ಎಂಬುದು ಮರೆತು ಹೋದಷ್ಟು, ನೀನು ಕಾಲವಾಗಿ ಎಷ್ಟೋ ವರುಷಗಳು ಸಂದಿವೆ ಎಂಬಂತೆ ಎಲ್ಲರೂ ಸಿನಿಮೀಯವಾಗಿ ಸುಮ್ಮನಿದ್ದಾರೆ.

ಇಲ್ಲದೇ ಇದ್ದರೆ ನಿನ್ನ ಸ್ಮಾರಕ ಆ ಅಭಿಮಾನ್ ಸ್ಟುಡಿಯೋದಲ್ಲಿ ಎದ್ದು ನಿಲ್ಲುತ್ತಿತ್ತು. ನಿನ್ನ ನೆನಪಾದಾಗಲೆಲ್ಲ ಬಂದು ಸುಮ್ಮನೆ ಕೂತು ಹೋಗಬಹುದಾದ ರಚನೆಯೊಂದು ಅಲ್ಲಿರುತ್ತಿತ್ತು. ಚೆನ್ನೈಯಲ್ಲಿರುವ ಎಂಜಿಆರ್ ಸಮಾಧಿಯಂತೆ ನಿನ್ನ ಉಸಿರಿನ ಸದ್ದು ಕೇಳಿಸುತ್ತಿದೆಯೋ ಎಂದು ನಾನೂ ಕೇಳುತ್ತಿದ್ದೆ. ಬಿಡು, ಅಂತಹ ಆಡಂಬರ, ಗೌರವಗಳನ್ನು ನೀನು ಬದುಕಿರುವಾಗಲೂ ನಿರೀಕ್ಷೆ ಮಾಡಿದವನಲ್ಲ. ಈ ತುಂಡು ರಾಜಕಾರಣಿಗಳ ಕೃಪಾಕಟಾಕ್ಷದಿಂದ ನಿರ್ಮಾಣವಾಗುವ ಸ್ಮಾರಕದಿಂದ ನಿನ್ನ ಗೌರವ ಹೆಚ್ಚಾಗಬೇಕೂ ಇಲ್ಲ.

ಆದರೆ ಒಂದು ಮಾತ್ರ ಸತ್ಯ. ನಿನ್ನನ್ನು ರಾಮಚಾರಿಯಿಂದ ಹಿಡಿದು ಡಾ. ವಿಜಯ್ ತನಕ ಅಷ್ಟೂ ವರ್ಷಗಳ ಕಾಲ ಪ್ರೀತಿಸಿದ, ಆರಾಧಿಸಿದ ನಿನ್ನನ್ನು ತಂದೆಯ, ಅಣ್ಣನ, ಮಗನ ಸ್ಥಾನದಲ್ಲಿಟ್ಟ ಅಭಿಮಾನಿಗಳು ಮರೆತಿಲ್ಲ. ನೀನು ಬಿಟ್ಟು ಹೋದ ಸಾವಿರ-ಸಾವಿರ ನೆನಪುಗಳು ಈಗಲೂ ನಮ್ಮನ್ನು ಬಾಧಿಸುತ್ತಿವೆ, ಕಾಡುತ್ತಿವೆ, ಏನನ್ನೋ ಬೇಡುತ್ತಿವೆ.

ನೀನು ಮತ್ತೆ ಹುಟ್ಟಿ ಬಾ. ನಾಗರಹಾವಿನ ರಾಮಚಾರಿಯಾಗಿ ಬಾ, ಕರ್ಣದ ತ್ಯಾಗಮಯಿ ಮಗನಾಗಿ ಬಾ, ಬಂಧನದ ಬೇಕು-ಬೇಡವೆನ್ನುವ ಪ್ರೇಮಿ ಡಾ. ಹರೀಶನಾಗಿ ಬಾ, ಸುಪ್ರಭಾತದ ಮೆಕ್ಯಾನಿಕ್ ವಿಜಯ ಕುಮಾರನಾಗಿ ಬಾ, ಮಲಯ ಮಾರುತದ ವಿಶ್ವನಾಥನಾಗಿ ಬಾ, ಮುತ್ತಿನಹಾರದ ತಂದೆಯಾಗಿ ಬಾ.

ಆದರೆ ಸಾಹಸಸಿಂಹನ ಹೆಸರಿನಲ್ಲಿ ಬರಬೇಡ. ನಿನಗೆ ಯಾವ ನಿಟ್ಟಿನಲ್ಲೂ ಹೊಂದಾಣಿಕೆಯಾಗದ ಬಿರುದು ಅದು. ನೀನು ಏನಿದ್ದರೂ ಅಭಿನಯ ಭಾರ್ಗವ, ಕನ್ನಡ ಕುಲಕೋಟಿಯ ಮೇರು ತಿಲಕ. ನಿನಗೆ ಯಾರೂ ಸಾಟಿಯಲ್ಲ, ನಿನಗೆ ನೀನೇ ಸಾಟಿ.

ಇಂತಿ ನಿನ್ನ ಅಭಿಮಾನಿ,

XXX



ಸಂಬಂಧಪಟ್ಟ ಸುದ್ದಿಗಳು:
** ನುಡಿನಮನ: ವಿಷ್ಣು ತುಂಬಿದ ಕೊಡ, ಯಾವತ್ತೂ ತುಳುಕಿರಲಿಲ್ಲ!
** ಹೃದಯಾಘಾತ: ಸಾಹಸ ಸಿಂಹ ವಿಷ್ಣುವರ್ಧನ್ ಇನ್ನಿಲ್ಲ
** ಆಪ್ತಮಿತ್ರದಲ್ಲಿ ಸೌಂದರ್ಯ, ಆಪ್ತರಕ್ಷಕದಲ್ಲಿ ವಿಷ್ಣು ಹೋದ್ರು!
** ಆತ ರಾಮಾಚಾರಿ, ಈತ ಜಲೀಲ್: ಇಬ್ಬರೂ ಪ್ರಾಣ ಸ್ನೇಹಿತರು
** ನನ್ನ ಏಳ್ಗೆಗೆ ವಿಷ್ಣು ಕಾರಣ, ಆತ ಎಲ್ಲೂ ಹೋಗಿಲ್ಲ: ದ್ವಾರಕೀಶ್
** ವಿಷ್ಣು ಅಭಿಮಾನಿಗಳು ರಸ್ತೆ ಗುಡಿಸೋರು, ಕೆಡಿಸೋರಲ್ಲ: ಭಾರತಿ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಕನ್ನಡ ನಟ, ದ್ವಾರಕೀಶ್, ಭಾರತಿ, ಸಿನಿಮಾ ನಟ