ಗುಜರಾತ್ ಗೃಹ ಸಚಿವ ಸ್ಥಾನಕ್ಕೆ ಕೊನೆಗೂ ರಾಜೀನಾಮೆ ನೀಡಿರುವ ಅಮಿತ್ ಶಾಹ್ ಎಲ್ಲಿ ಅಡಗಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದ್ದರೆ, 'ಇದೆಲ್ಲ ಬಿಜೆಪಿಯ ನಾಟಕ' ಎಂದು ಅತ್ತ ಕೇಸರಿ ಪಾಳಯದ ಕೋಪಕ್ಕೆ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ತಿರುಗೇಟು ನೀಡಿದ್ದಾರೆ.
ಲಷ್ಕರ್ ಇ ತೋಯ್ಬಾ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಮತ್ತು ಆತನ ಪತ್ನಿ ಕೌಸರ್ಬೀ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐಯಿಂದ ಬಂಧನ ಭೀತಿ ಎದುರಿಸುತ್ತಿರುವ ಅಮಿತ್ ಶಾಹ್ ನಿನ್ನೆ ರಾತ್ರಿಯಷ್ಟೇ ಗುಜರಾತ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಇಡೀ ಪ್ರಕರಣದ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಪಿತೂರಿ ನಡೆಸುತ್ತಿದೆ, ರಾಜಕೀಯ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ 'ಜಾತ್ಯತೀತ' ಪಕ್ಷಗಳಿಂದ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಇದೀಗ ಸ್ವತಃ ಗೃಹಸಚಿವರೇ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ರಾಜಧಾನಿಯಲ್ಲಿ ಮಾತನಾಡುತ್ತಿದ್ದ ಅವರು, ಬಿಜೆಪಿ ಯಾಕೆ ತೀರಾ ವಿಳಂಬವಾಗಿ ತನ್ನ ಕೋಪದ ನಾಟಕವನ್ನಾಡುತ್ತಿದೆ? ಇಷ್ಟು ತಡವಾಗಿ ಯಾಕೆ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ? ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವರ್ಗಾಯಿಸಿದ ಜನವರಿಯಲ್ಲೇ ಅವರು ಇದನ್ನು ಹೇಳಬೇಕಿತ್ತು ಎಂದರು.
ಸಿಬಿಐ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಚಿದಂಬರಂ, ಇದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಡೆದಿದೆ. ಇದನ್ನು ಬಿಜೆಪಿ ನಾಯಕ ಅರುಣ್ ಜೇಟ್ಲಿಯವರಾದರೂ ಅರ್ಥ ಮಾಡಿಕೊಳ್ಳಬೇಕಿತ್ತು. ಅವರೊಬ್ಬರು ವಕೀಲರು. ಹಾಗಾಗಿ ಅವರು ಇದನ್ನು ಜನವರಿಯಲ್ಲೇ ಪ್ರಶ್ನಿಸಬೇಕಿತ್ತು. ಈಗ ಯಾಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಅಮಿತ್ ಯಾಕೆ ಅಡಗಿದ್ದಾರೆ? ಅಮಿತ್ ಶಾಹ್ ಗೃಹಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಸಾಲದು ಮತ್ತು ಇದು ತೀರಾ ವಿಳಂಬವಾಗಿದೆ ಎಂದಿರುವ ಕಾಂಗ್ರೆಸ್, ಆರೋಪಿ ಎಲ್ಲಿ ಅಡಗಿದ್ದಾರೆ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.
ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ವಕ್ತಾರ ಅಭಿಷೇಕ್ ಮನು ಸಿಂಘ್ವಿ, 'ಬಿಜೆಪಿ ಈಗಲೂ ಪಶ್ಚಾತಾಪ ಪ್ರದರ್ಶಿಸುತ್ತಿಲ್ಲ' ಎಂದು ಆರೋಪಿಯನ್ನು ಸಮರ್ಥಿಸಿಕೊಂಡಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಸೊಹ್ರಾಬುದ್ದೀನ್ ಒಬ್ಬ ಹೀರೋ ಎಂದು ಕಾಂಗ್ರೆಸ್ 2007ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಮಾಡಿದರೂ ಚುನಾವಣೆಯಲ್ಲಿ ಸೋಲನುಭವಿಸಿತ್ತು. ಆ ಸೇಡನ್ನು ಇದೀಗ ಅಮಿತ್ ಶಾಹ್ ಪ್ರಕರಣದಲ್ಲಿ ಸಿಬಿಐ ಮೂಲಕ ತೀರಿಸಿಕೊಳ್ಳಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಂಘ್ವಿ, 'ಆ ಪಕ್ಷವೀಗ ಬೈಗುಳಗಳ ಡೊಂಬರಾಟದಲ್ಲಿ ತೊಡಗಿಸಿಕೊಂಡಿದೆ. ಆ ಮೂಲಕ ತನ್ನ ನಿಜವಾದ ಬಣ್ಣವನ್ನು ತೋರಿಸುತ್ತಿದೆ' ಎಂದರು.