ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ರಾಮ ಹುಟ್ಟಿದ್ದು ಎಲ್ಲಿ ಎಂದು ಹೇಳುವುದು ಕೋರ್ಟ್ ಕೆಲಸವಲ್ಲ'
(Ayodhya verdict | Ram | Ram Janmbhoomi | Allahabad High Court)
'ರಾಮ ಹುಟ್ಟಿದ್ದು ಎಲ್ಲಿ ಎಂದು ಹೇಳುವುದು ಕೋರ್ಟ್ ಕೆಲಸವಲ್ಲ'
ನವದೆಹಲಿ, ಶುಕ್ರವಾರ, 1 ಅಕ್ಟೋಬರ್ 2010( 12:45 IST )
ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ವಿಶೇಷ ತ್ರಿಸದಸ್ಯ ಪೀಠವು ನೀಡಿರುವ ತೀರ್ಪಿಗೆ ಕೆಲ ಇತಿಹಾಸ ತಜ್ಞರು ಮತ್ತು ರಾಜಕೀಯ ವಿಶ್ಲೇಷಕರು ಪ್ರತಿಕ್ರಿಯಿಸಿರುವ ರೀತಿಯಿದು. ಕೋರ್ಟ್ ನೀಡಿರುವ ತೀರ್ಪನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಹೇಳುತ್ತಲೇ, ಅದರಲ್ಲಿನ ಹಲವು ಅಂಶಗಳನ್ನು ಪ್ರಶ್ನಿಸಿದ್ದಾರೆ.
ಅಯೋಧ್ಯೆಯ ವಿವಾದಿತ ಸ್ಥಳದಲ್ಲೇ ರಾಮ ಹುಟ್ಟಿರುವುದರಿಂದ ತಾತ್ಕಾಲಿಕ ಮಂದಿರದಲ್ಲಿನ ರಾಮನ ಮೂರ್ತಿಗಳನ್ನು ಬೇರೆಡೆ ಸ್ಥಳಾಂತರಿಸಬಾರದು ಎಂದು ಹೇಳಿದ್ದ ನ್ಯಾಯಾಲಯವು, ಬಹುತೇಕ ರಾಮಮಂದಿರ ನಿರ್ಮಾಣ ಪರ ತೀರ್ಪನ್ನು ನೀಡಿತ್ತು.
ಕೆಲವರಿಗೆ ನ್ಯಾಯಾಲಯವು ಹಿಂದೂ ದೇವರು ರಾಮನ ಹೆಸರಿನಲ್ಲಿ ಪ್ರಕರಣ ದಾಖಲಿಸಿದ್ದನ್ನು ಸ್ವೀಕರಿಸಿರುವುದೇ ಸರಿ ಕಂಡಿಲ್ಲ. ಈ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದೆ. ಆದರೆ ಇತಿಹಾಸವನ್ನು ಗಮನಿಸಿದರೆ ಈ ರೀತಿ ದೇವರ ಹೆಸರಿನಲ್ಲೇ ಕೇಸು ದಾಖಲಾಗಿರುವುದು ಕಂಡು ಬರುತ್ತದೆ. ಇದನ್ನು ಸ್ವತಃ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ವಾರಣಾಸಿಯಲ್ಲಿನ ಕಾಶಿ ವಿಶ್ವನಾಥ ದೇವಳದ ಶ್ರೀ ಆದಿ ವಿಶ್ವೇಶ್ವರ ದೇವರ ಹೆಸರಿನಲ್ಲಿ 1997ರಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತ್ತು ಮತ್ತು ದೇವಳದ ಆಸ್ತಿಯು ವಿಶ್ವನಾಥನಿಗೆ ಸೇರಿದ್ದು ಎಂದು ತೀರ್ಪು ನೀಡಿತ್ತು. ಇಂತಹುದೇ ಮತ್ತೊಂದು ತೀರ್ಪು ಬಿಹಾರದ ಪ್ರಕರಣವೊಂದಕ್ಕೆ ಕೋರ್ಟ್ ನೀಡಿತ್ತು.
ಕೆಲವೊಂದು ಪ್ರಶ್ನೆಗಳು ಇರುವುದಾದರೂ ಇದೀಗ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ಒಪ್ಪಿಕೊಳ್ಳಬೇಕು ಎಂದು ರಾಜಕೀಯ ತಜ್ಞೆ ಝೋಯಾ ಹಸನ್ ಅಭಿಪ್ರಾಯಪಟ್ಟಿದ್ದಾರೆ.
ನಿರ್ದಿಷ್ಟ ಸ್ಥಳದಲ್ಲಿ ರಾಮ ಹುಟ್ಟಿದ್ದಾನೆ ಅಥವಾ ಇಲ್ಲ ಎಂಬ ತೀರ್ಪು ಸ್ಪಷ್ಟ ಪುರಾವೆಗಳನ್ನು ಆಧರಿಸಿದ್ದು ಆಗಿರಲು ಸಾಧ್ಯವಿಲ್ಲ. ಇಲ್ಲಿ ಯಾವುದೇ ಸಂವಿಧಾನಾತ್ಮಕ ಕಾರಣಗಳೂ ಇರಲಾರವು. ನ್ಯಾಯಾಲಯವು ಪ್ರಕರಣದಲ್ಲಿರುವ ಬಹುಮತವನ್ನು ಆಧರಿಸಿ ಈ ತೀರ್ಪನ್ನು ನೀಡಿರುವ ಸಾಧ್ಯತೆಗಳಿವೆ ಎಂದು ಹಸನ್ ಹೇಳಿದ್ದಾರೆ.
ಇತಿಹಾಸ ತಜ್ಞ ಹಾಗೂ ರಾಜಕಾರಣಿ ಚಂದನ್ ಮಿತ್ರಾ ಅವರ ಅಭಿಪ್ರಾಯ ಕೇಳಿ. 'ಇಲ್ಲಿ ಕೇವಲ ನಂಬಿಕೆಯನ್ನು ಆಧರಿಸಿ ನ್ಯಾಯಾಲಯವು ತೀರ್ಪು ನೀಡಿಲ್ಲ. ಭಾರತೀಯ ಪುರಾತತ್ವ ಇಲಾಖೆಯು ಅಯೋಧ್ಯೆಯ ವಿವಾದಿತ ಸ್ಥಳದ ಉತ್ಖನನದ ವರದಿಯಲ್ಲಿ ನಿರ್ದಿಷ್ಟ ಸ್ಥಳದಲ್ಲಿ ರಾಮ ಹುಟ್ಟಿರುವ ಸಾಧ್ಯತೆಗಳ ಬಗೆಗಿನ ಮಾಹಿತಿಗಳನ್ನು ಗಮನಿಸಿ ನ್ಯಾಯಾಲಯ ಇಂತಹ ನಿರ್ಧಾರಕ್ಕೆ ಬಂದಿರಬಹುದು' ಎಂದಿದ್ದಾರೆ.
ಆದರೆ ಮತ್ತೊಬ್ಬ ಇತಿಹಾಸಕಾರ ದಿಲೀಪ್ ಸೈಮನ್ ಈ ವಾದಗಳನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಹಿಂದೂ ದೇವರ ಹೆಸರಿನಲ್ಲಿರುವ ಪ್ರಕರಣವನ್ನು ನ್ಯಾಯಾಲಯ ಸ್ವೀಕರಿಸಬಾರದಿತ್ತು. ಹಾಗೆ ಮಾಡುವುದರಿಂದ ಪವಿತ್ರತೆ ಮತ್ತು ಧಾರ್ಮಿಕತೆ ಹೆಸರಿನಲ್ಲಿ ಕೆಲಸು ಅಸಂಬದ್ಧತೆಗೆ ಶರಣಾಗಬೇಕಾಗುತ್ತದೆ. ರಾಮ ಹುಟ್ಟಿದ್ದು ಎಲ್ಲಿ ಎಂದು ನ್ಯಾಯ ತೀರ್ಮಾನ ನೀಡುವುದು ಅವರ ಕೆಲಸವಲ್ಲ. ಐತಿಹಾಸಿಕವಾಗಿ ಇದನ್ನು ಸಾಬೀತುಪಡಿಸುವುದು ತುಂಬಾ ಕಷ್ಟ. ಈ ಸಂಬಂಧ ಭಾರತೀಯ ಪುರಾತತ್ವ ಇಲಾಖೆ ನೀಡಿರುವ ವರದಿಯು ಕೂಡ ವಿವಾದಗಳಿಂದಲೇ ಕೂಡಿದೆ ಎಂದಿದ್ದಾರೆ.
ನ್ಯಾಯಾಲಯವು ಅಲ್ಲಿ ನಡೆದಿರುವ ಅಪರಾಧವನ್ನು ಕೇಂದ್ರೀಕರಿಸಬೇಕಿತ್ತೇ ಹೊರತು, ಇನ್ನಿತರ ವಿಚಾರಗಳನ್ನಲ್ಲ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಅಲ್ಲಿದ್ದ ಪುರಾತನ ಕಟ್ಟಡವನ್ನು ಧ್ವಂಸಗೊಳಿಸಲಾಗಿತ್ತು. ಅಲ್ಲಿ ದೇವರ ರಾಜಕೀಯದ ಹೆಸರಿನಲ್ಲಿ ಜನರ ಪ್ರಾಣ ತೆಗೆಯಲಾಗಿತ್ತು ಮತ್ತು ಬಾಬ್ರಿ ಮಸೀದಿಯನ್ನು ನಾಶ ಮಾಡಲಾಗಿತ್ತು ಎಂದು ಸೈಮನ್ ವಿವರಣೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ದಂತಕತೆಯ ಜನ್ಮಸ್ಥಳವೆಂದು ಅಲ್ಲಿನ ಜಾಗ ನಮ್ಮನ್ನು ಕಾಡುತ್ತಿಲ್ಲ. ಒಂದು ಕಾಲದಲ್ಲಿ ಪುರಾತನ ಕಟ್ಟಡವಿದ್ದದ್ದು ಈಗ ಅವಶೇಷಗಳ ರಾಶಿಯಾಗಿರುವುದಕ್ಕೆ ನಮ್ಮಲ್ಲಿ ದುಃಖವಿದೆ. 1992ರಲ್ಲಿ ನಡೆದ ನೈಜ ಅಪರಾಧ ನಮ್ಮ ಮುಖದಲ್ಲಿ ಕಲೆಯಾಗಿಯೇ ಉಳಿದಿರುವಾಗ, ಸಾವಿರಾರು ವರ್ಷಗಳ ಹಿಂದಿನ ಪುರಾಣವನ್ನು ಆಧರಿಸಿ ನಾವು ಹಿಂದಿನದ್ದನ್ನು ಮರೆದು ಮುನ್ನಡೆಯಬೇಕು ಎಂದು ಈಗ ಹೇಳುವುದು ಯಾರಿಗಾದರೂ ಕಷ್ಟ ಎಂದು ತನ್ನ ಅಭಿಪ್ರಾಯವನ್ನು ಹೊರಗೆಡವಿದ್ದಾರೆ.