ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ದೇಶದ್ರೋಹಿ' ಆರುಂಧತಿ ರಾಯ್ ವಿರುದ್ಧ ಕ್ರಿಮಿನಲ್ ಕೇಸ್?
(Arundhati Roy | Delhi high court | Syed Ali Shah Geelani | anti-India speeche)
ರಾಷ್ಟ್ರವಿರೋಧಿ ಭಾಷಣಗಳನ್ನು ಮಾಡಿರುವ ಲೇಖಕಿ ಆರುಂಧತಿ ರಾಯ್, ಹುರಿಯತ್ ತೀವ್ರವಾದಿ ಬಣದ ನಾಯಕ ಸಯ್ಯದ್ ಆಲಿ ಶಾ ಗಿಲಾನಿ ಮತ್ತು ದೆಹಲಿ ಯುನಿವರ್ಸಿಟಿ ಪ್ರೊಫೆಸರ್ ಎಸ್.ಎ.ಆರ್. ಗಿಲಾನಿಯವರ ವಿರುದ್ಧ ಯಾಕೆ ಕ್ರಿಮಿನಲ್ ಪ್ರಕರಣ ದಾಖಲಿಸಬಾರದು ಎಂಬುದಕ್ಕೆ ಪ್ರತಿಕ್ರಿಯಿಸುವಂತೆ ದೆಹಲಿ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ರಾಜದ್ರೋಹ ಮತ್ತು ಇತರ ಆರೋಪಗಳ ಮೇಲೆ ಇವರ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮ ಜರಗಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಹೀಮಾ ಕೋಹ್ಲಿಯವರು ದೆಹಲಿ ಸರಕಾರಕ್ಕೆ ಪ್ರತಿಕ್ರಿಯಿಸುವಂತೆ ಆದೇಶ ನೀಡಿದರು.
ಭಾರತೀಯ ದಂಡ ಸಂಹಿತೆಯ 124 ಎ ಅಡಿಯಲ್ಲಿ (ರಾಜದ್ರೋಹ) ಆರುಂಧತಿ ರಾಯ್, ಸಯ್ಯದ್ ಗಿಲಾನಿ ಮತ್ತು ಪ್ರೊಫೆಸರ್ ಗಿಲಾನಿಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ನ್ಯಾಯವಾದಿ ಸುಗ್ರೀವ ದುಬೇ ಅರ್ಜಿದಾರರ ಪರ ಮನವಿ ಮಾಡಿದ್ದರು.
ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ತಂತ್ರಗಳನ್ನು ಪಸರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಯಾರೊಬ್ಬರ ಭಾಷಣ ಅಥವಾ ಉಪದೇಶಗಳು ಅಮಾಯಕ ಜನರನ್ನು ದುರುದ್ದೇಶಗಳಿಗೆ ಪ್ರಚೋದಿಸುವಂತಿರಬಾರದು ಎಂದು ಅಕ್ಟೋಬರ್ 25ರಂದು ಗಿಲಾನಿ ಮತ್ತಿತರರು ಮಾಡಿದ್ದ ಭಾಷಣಗಳನ್ನು ಉಲ್ಲೇಖಿಸಿ ದುಬೇ ತನ್ನ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಲ್ಲ. ಕಾಶ್ಮೀರಕ್ಕಾಗಿ ರಾಜ್ಯದ ಯುವ ಜನತೆ ತ್ಯಾಗಕ್ಕೆ ಸಿದ್ಧರಾಗಬೇಕು ಎಂದು ಆರುಂಧತಿ ರಾಯ್ ತನ್ನ ಭಾಷಣದಲ್ಲಿ ಕರೆ ನೀಡಿದ್ದರು ಎಂದೂ ವಕೀಲರು ರಾಯ್ ವಿರುದ್ಧ ಆರೋಪ ಮಾಡಿದ್ದಾರೆ.
ನ್ಯಾಯವಾದಿ ದುಬೇ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ಸಂಬಂಧ ಮುಂದಿನ ವಿಚಾರಣೆ ನಡೆಯುವ 2011ರ ಜನವರಿ 27ರೊಳಗೆ ಉತ್ತರಿಸುವಂತೆ ಆದೇಶ ನೀಡಿತು.
ಹುರಿಯತ್ ನಾಯಕ ಮತ್ತು ಇತರರು 'ದೇಶದ್ರೋಹ'ದ ಭಾಷಣ ಮಾಡಿದ್ದಾರೆಂದು ಈಗಾಗಲೇ ಕೆಳ ನ್ಯಾಯಾಲಯಗಳಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.