ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತನ್ನ ವಿರುದ್ಧ ಅಪಮಾನಕಾರಿ ಟೀಕೆಗಳನ್ನು ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಹಾಗೂ ಫಿಲಿಭಿತ್ ಸಂಸದ ವರುಣ್ ಗಾಂಧಿ ವಿರುದ್ಧ ಅದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರ ಸೋದರ ಮಾವ ವಿ.ಎಂ. ಸಿಂಗ್ ಮಾನನಷ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ನೋಟೀಸ್ ಜಾರಿಗೊಳಿಸಿದೆ.
ಅರ್ಜಿದಾರರ ದೂರಿಗೆ ಜುಲೈ 30ರೊಳಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಅರುಣಾ ಸುರೇಶ್ ಆದೇಶ ನೀಡಿದ್ದಾರೆ.
ತಾನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಜತೆ ಸಂಬಂಧ ಹೊಂದಿದ್ದು, ಪ್ರತ್ಯೇಕ ಖಾಲಿಸ್ತಾನ್ ರಾಜ್ಯಕ್ಕಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ವರುಣ್ ಗಾಂಧಿ ಆರೋಪಿಸಿದ್ದರು ಎಂದು ಸಿಂಗ್ ತನ್ನ ವಕೀಲ ಅರ್ಜುನ್ ಹರ್ಕೌಲಿ ಮೂಲಕ ಪ್ರಕರಣ ದಾಖಲಿಸಿದ್ದರು.
ಅಲ್ಲದೆ ರೈತರು ಮತ್ತು ಮುಸ್ಲಿಮರಿಗೂ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನಾಯಕ ಅವಮಾನ ಎಸಗಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಫಿಲಿಭಿತ್ ಕ್ಷೇತ್ರದಿಂದ ಇಬ್ಬರೂ ಸಂಸದ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಸಿಂಗ್ ವಿರುದ್ಧ ಗಾಂಧಿ ಮಾನ ಹಾನಿಕರ ಭಾಷೆಯಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ.
ಶ್ರೀಮಂತ ಅಭ್ಯರ್ಥಿಗಳಲ್ಲೊಬ್ಬರಾಗಿರುವ ಸಿಂಗ್, ಸ್ವತಃ ವರುಣ್ ಗಾಂಧಿಯ ಸೋದರ ಮಾವ. ಇವರನ್ನು ಗಾಂಧಿ ಕುಟುಂಬದ ವರುಣ್ ವಿರುದ್ಧ ಕಾಂಗ್ರೆಸ್ ಕಣಕ್ಕಿಳಿಸಿತ್ತು. ಅರ್ಜಿದಾರ ಸಿಂಗ್ ಫಿಲಿಭಿತ್ ಸಂಸದ ಗಾಂಧಿಯ ತಾಯಿ, ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿಯವರ ಹಿರಿಯ ಸಹೋದರ.
ಮಹಾ ಚುನಾವಣೆ ಸಂದರ್ಭದಲ್ಲಿ ಫಿಲಿಭಿತ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಗಾಂಧಿ ಮುಸ್ಲಿಮರ ವಿರುದ್ಧ ದ್ವೇಷಮಯ ಭಾಷಣಗಳನ್ನು ಮಾಡಿ ತೀವ್ರ ವಿವಾದಕ್ಕೆ ಸಿಲುಕಿದ್ದನ್ನು ಇದೀಗ ಸ್ಮರಿಸಬಹುದಾಗಿದೆ. ಇದೇ ಕಾರಣಕ್ಕಾಗಿ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಉತ್ತರ ಪ್ರದೇಶ ಸರಕಾರವು ಬಂಧಿಸಿ ಜೈಲಿಗೆ ಕಳುಹಿಸಿತ್ತು.