'ಬಡ' ಸಂಸದರ ಬೇಡಿಕೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮಣಿದಿದೆ. ಮೊನ್ನೆಯಷ್ಟೇ ಶೇ.300ರಷ್ಟು ವೇತನ ಹೆಚ್ಚಳಗೊಳಿಸಲು ನಿರ್ಧರಿಸಿದ್ದ ಸರಕಾರವು ಇದೀಗ ಮತ್ತೆ 10,000 ರೂಪಾಯಿಗಳನ್ನು ಭತ್ಯೆಗಳ ವಿಭಾಗದಲ್ಲಿ ಹೆಚ್ಚಳ ಮಾಡಿದೆ.
ಸಂಸದರ ವೇತನವನ್ನು 16,000 ರೂಪಾಯಿಗಳಿಂದ 80,001 ರೂಪಾಯಿಗಳಿಗೆ ಏರಿಕೆ ಮಾಡಬೇಕೆಂದು ಸಂಸದೀಯ ಸಮಿತಿಯು ಶಿಫಾರಸು ಮಾಡಿದ್ದನ್ನು ಒಪ್ಪಿಕೊಳ್ಳದ ಸಂಪುಟವು 50,000 ರೂಪಾಯಿಗಳಿಗೆ ಏರಿಕೆ ಮಾಡಲು ಕಳೆದ ವಾರ ಅಂಗೀಕಾರ ನೀಡಿತ್ತು. ಆದರೆ ಇದೀಗ ಸಂಸದರು ಮತ್ತಷ್ಟು ಹೆಚ್ಚಳ ಬೇಕೆಂದು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಸಭೆ ಸೇರಿದ ಕ್ಯಾಬಿನೆಟ್ ಮತ್ತೆ 10,000 ರೂಪಾಯಿಗಳನ್ನು ಹೆಚ್ಚಳ ಮಾಡಲು ನಿರ್ಧರಿಸಿತು.
ಇದೀಗ ಹೆಚ್ಚುವರಿಯಾಗಿ ಮಾಡಲಾಗಿರುವ 10,000 ರೂಪಾಯಿಗಳನ್ನು ಸಂಸದರ ಕ್ಷೇತ್ರ ಭತ್ಯೆ ಮತ್ತು ಕಚೇರಿ ಖರ್ಚು-ವೆಚ್ಚಗಳಿಗಾಗಿ ತಲಾ ಐದು ಸಾವಿರ ರೂಪಾಯಿಗಳಂತೆ ಹಂಚಲಾಗುತ್ತದೆ.
ಕ್ಷೇತ್ರ ಭತ್ಯೆ ಮತ್ತು ಕಚೇರಿ ವೆಚ್ಚಗಳ ಭತ್ಯೆಗಳನ್ನು 20,000 ರೂಪಾಯಿಗಳಿಂದ 40,000 ರೂಪಾಯಿಗಳಿಗೆ ಕಳೆದ ವಾರವಷ್ಟೇ ಹೆಚ್ಚಳ ಮಾಡಲಾಗಿತ್ತು. ಇದೀಗ ಈ ಎರಡೂ ವಿಭಾಗಗಳಿಗೆ ತಲಾ ಐದು ಸಾವಿರ ರೂಪಾಯಿಗಳನ್ನು ಹಂಚಲಾಗಿದ್ದು, ಇದರೊಂದಿಗೆ ಸಂಸದರು ತಲಾ 45,000 ರೂಪಾಯಿಗಳಂತೆ ಕ್ಷೇತ್ರ ಭತ್ಯೆ ಮತ್ತು ಕಚೇರಿ ಖರ್ಚುಗಳನ್ನು ಪಡೆಯಲಿದ್ದಾರೆ.
50,000 ವೇತನ, ಕ್ಷೇತ್ರ ಭತ್ಯೆ 45,000, ಕಚೇರಿ ವೆಚ್ಚ 45,000 ಮತ್ತು ದಿನ ಭತ್ಯೆ 2,000 ರೂಪಾಯಿ ಸೇರಿದಂತೆ ಸಂಸದರು ಒಟ್ಟಾರೆ ಮಾಸಿಕ 1.6 ಲಕ್ಷ ರೂಪಾಯಿಗಳನ್ನು ವೇತನ ಮತ್ತು ಭತ್ಯೆಗಳ ರೂಪದಲ್ಲಿ ಪಡೆದುಕೊಳ್ಳಲಿದ್ದಾರೆ.
ದಿನಭತ್ಯೆ ಸಂಸತ್ ಕಲಾಪಗಳಿಗೆ ನೀಡಲಾಗುತ್ತದೆ. ಆದರೆ ಸಂಸತ್ ಅಧಿವೇಶನ ನಡೆಯದೇ ಇದ್ದರೂ ಸಂಸದರು ಭತ್ಯೆ ಪಡೆಯಬಹುದಾಗಿದೆ. ಸಂಸದರು ಹಾಜರಾಗುವ ಸಭೆಗಳಿಗೆ ಭತ್ಯೆ ನೀಡಲಾಗುತ್ತಿದೆ. ಸಂಸದರು ತಿಂಗಳಿಗೆ ಕನಿಷ್ಠ 10 ಸಭೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಅಂದರೆ 20,000 ರೂಪಾಯಿಗಳನ್ನು ತಿಂಗಳಿಗೆ ದಿನಭತ್ಯೆಯೆಂದು ಅವರು ಪಡೆದುಕೊಳ್ಳುತ್ತಾರೆ.
ದೆಹಲಿಯಲ್ಲಿನ ಬಂಗಲೆ, ಉಚಿತ ವಾಯುಯಾನ ಮತ್ತು ರೈಲ್ವೇ ಪ್ರಯಾಣ ಮುಂತಾದ ಸೌಲಭ್ಯಗಳು ಮೇಲಿನ ಭತ್ಯೆಗಳಿಗಿಂತ ಹೊರತಾಗಿವೆ. ಹೆಂಡತಿ-ಮಕ್ಕಳು ಮತ್ತು ತಮ್ಮ ಸಿಬ್ಬಂದಿಗಳೊಂದಿಗೆ ಸಂಸದರು ರೈಲಿನಲ್ಲಿ ಎಷ್ಟು ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ.