ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ಮುಗ್ಧರ ಹೊಸಕಿದ ಪಾತಕಿ ಕಸಬ್‌ಗೆ ಗಲ್ಲು
(Mohammed Ajmal Amir Kasab | Mumabi attack | Mumbai Special court | Death sentence)
2008ರ ನವೆಂಬರ್ 26ರ ಮುಂಬೈ ನರಮೇಧ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿರುವ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ಗೆ ಮುಂಬೈ ವಿಶೇಷ ನ್ಯಾಯಾಲಯವು 17 ತಿಂಗಳ ಬಳಿಕ ಗುರುವಾರ ಅಪರಾಹ್ನ ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಶಿಕ್ಷೆಯ ಪ್ರಮಾಣ ಕುರಿತು ಸರಕಾರಿ ವಕೀಲ ಉಜ್ವಲ್ ನಿಕಂ ಮತ್ತು ಕಸಬ್ ಪರ ವಕೀಲ ಕೆ.ಪಿ. ಪವಾರ್ ಅವರ ವಾದ-ವಿವಾದಗಳನ್ನು ಮಂಗಳವಾರ ಆಲಿಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಎಲ್. ತಹಲಿಯಾನಿ ಅವರು ಇಂದು ಈ ತೀರ್ಪನ್ನು ನೀಡಿದ್ದಾರೆ.
ಅತ್ತೇ ಬಿಟ್ಟ ಕಸಬ್..
ನ್ಯಾಯಾಲಯವು ತನಗೆ ಮರಣದಂಡನೆ ಶಿಕ್ಷೆಯನ್ನು ಘೋಷಿಸುತ್ತಿದ್ದಂತೆ ತಲೆ ಕೆಳಗೆ ಹಾಕಿದ ಕಸಬ್, ಗಳಗಳನೆ ಅತ್ತು ಒಂದು ಲೋಟ ನೀರು ಕುಡಿದ. ಬಳಿಕ ಬಗ್ಗಿ ಕುಳಿತು ತಲೆಯನ್ನು ಹಿಡಿದುಕೊಂಡಿದ್ದ. ಆಗ ನ್ಯಾಯಾಧೀಶರು ಶಿಕ್ಷೆಯ ಕುರಿತು ಪ್ರತಿಕ್ರಿಯೆ ಕೇಳಿದರೂ, 'ಏನೂ ಇಲ್ಲ' ಎಂಬಂತೆ ತಲೆಯಾಡಿಸಿದ್ದಾನೆ.
ಕಸಬ್‌ಗೆ ನಾಲ್ಕು ಆರೋಪದಲ್ಲಿ ಗಲ್ಲು.. ದೇಶದ ವಿರುದ್ಧ ಯುದ್ಧ ಸಾರಿರುವುದು, ಹತ್ಯೆ, ಕ್ರಿಮಿನಲ್ ಪಿತೂರಿ ಮತ್ತು ಭಯೋತ್ಪಾದನಾ ಚಟುವಟಿಕೆ ನಡೆಸಿರುವ ಕೃತ್ಯಗಳಿಗಾಗಿ ನ್ಯಾಯಾಲಯವು ಕಸಬ್‌ಗೆ ಗರಿಷ್ಠ ಶಿಕ್ಷೆ ಮರಣದಂಡನೆಯನ್ನು ವಿಧಿಸಿದೆ. ಇತರ ಐದು ಪ್ರಕರಣಗಳಲ್ಲಿ ಆತನಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಲಾಗಿದೆ.
ಸೋಮವಾರ ಮುಂಬೈ ಭಯೋತ್ಪಾದನಾ ದಾಳಿಯ ಅಂತಿಮ ತೀರ್ಪು ನೀಡಿದ್ದ ನ್ಯಾಯಾಲಯವು ಪಾಕಿಸ್ತಾನದ ಫರೀದ್‌ಕೋಟ್ ನಿವಾಸಿ ಕಸಬ್‌ನನ್ನು ದೋಷಿಯೆಂದು ಹೇಳಿತ್ತು. ಆದರೆ ಲಷ್ಕರ್ ಇ ತೋಯ್ಬಾದ ಇಬ್ಬರು ಸಕ್ರಿಯ ಭಾರತೀಯ ಕಾರ್ಯಕರ್ತರಾದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಆರೋಪಗಳಿಗೆ ಪೂರಕ ಸಾಕ್ಷ್ಯಗಳು ಸಿಗದ ಹಿನ್ನೆಲೆಯಲ್ಲಿ ಅವರನ್ನು ಖುಲಾಸೆಗೊಳಿಸಲಾಗಿತ್ತು.
PTI
ವಿಶೇಷ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ಕಸಬ್‌ಗೆ ನೀಡಿದೆಯಾದರೂ, ಇದನ್ನು ಹೈಕೋರ್ಟ್ ಖಚಿತಪಡಿಸಬೇಕಿದೆ. ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಕಸಬ್ ಪರ ವಕೀಲರು ಮೇಲ್ಮನವಿ ಸಲ್ಲಿಸಬಹುದಾಗಿದೆ. ಈ ಹಂತದಲ್ಲಿ ಹೈಕೋರ್ಟ್ ಪ್ರಕರಣದ ಮರು ತನಿಖೆಗೆ ಆದೇಶಿಸುವ, ಕಸಬ್‌ನನ್ನು ಖುಲಾಸೆ ಮಾಡುವ ಅಥವಾ ವಿಶೇಷ ನ್ಯಾಯಾಲಯದ ತೀರ್ಪನ್ನು ಖಚಿತಪಡಿಸುವ ಸಾಧ್ಯತೆಗಳಿವೆ.
ಹೈಕೋರ್ಟ್‌ನಲ್ಲಿ ಕಸಬ್ ನಿರ್ದೋಷಿ ಎಂಬ ತೀರ್ಪು ಪಡೆದುಕೊಂಡರೆ, ಸರಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು ಅಥವಾ ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದರೆ ಕಸಬ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದು. ಕಸಬ್ ಮರಣದಂಡನೆ ಶಿಕ್ಷೆಯನ್ನು ಅಥವಾ ಖುಲಾಸೆಯ ಬಗ್ಗೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡುತ್ತದೆ. ಇಲ್ಲಿ ಮರಣದಂಡನೆ ಖಚಿತವಾದರೆ, ಕೊನೆಯ ಹಂತ ರಾಷ್ಟ್ರಪತಿಯವರದ್ದು. ಮರಣದಂಡನೆಗೆ ಅಂಕಿತ ಹಾಕುವ ಅಥವಾ ಕ್ಷಮಾದಾನ ನೀಡುವ ಅಧಿಕಾರವನ್ನು ರಾಷ್ಟ್ರಪತಿ ಹೊಂದಿದ್ದಾರೆ.