ಮರಳಿದ ಜಸ್ವಂತ್; ಹಿಂದಿದ್ದನೆಲ್ಲ ಮರೆತುಬಿಡಿ: ಗಡ್ಕರಿ ಸಲಹೆ
ನವದೆಹಲಿ, ಗುರುವಾರ, 24 ಜೂನ್ 2010( 17:59 IST )
ಪಕ್ಕದ ದೇಶದ ಮಹಾತ್ಮ(?)ನ ಕುರಿತು ಗಂಟಲು ಹರಿಯುವಂತೆ ಒಂದೇ ಪಕ್ಷದ ಮುಖಂಡರು ಕಚ್ಚಾಡಿಕೊಂಡರು; ಬಳಿಕ ಹೊಗಳಿದ ಮುಖಂಡ ಜಸ್ವಂತ್ ಸಿಂಗ್‌ರನ್ನು ಪಕ್ಷದಿಂದಲೇ ಹೊರ ದಬ್ಬಲಾಯಿತು. ಈಗ ಎಲ್ಲವೂ ಸರಿಯಾಗಿದೆ. ಅವರು ಮರಳಿದ್ದಾರೆ. ಬಿಜೆಪಿಯೂ ತಳಿರು ತೋರಣಗಳನ್ನು ಕಟ್ಟಿ ಜಸ್ವಂತ್‌ಗೆ ಸ್ವಾಗತ ಕೋರಿದೆ.
ಒಂಬತ್ತು ತಿಂಗಳುಗಳ ನಂತರ ಮಾತೃಪಕ್ಷಕ್ಕೆ ವಾಪಸ್ ಬಂದ 72ರ ಹರೆಯದ ಸಂಸ್ಥಾಪಕ ಸದಸ್ಯ ಸಿಂಗ್, ತನ್ನನ್ನು ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುವ ಕಾಯಕಕ್ಕೆ ಮುಂದಾದ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿಯವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೌಟುಂಬಿಕ ವಲಯಕ್ಕೆ ಮರಳಿರುವುದು ಸಂತಸ ತಂದಿದೆ. ಇದಕ್ಕಾಗಿ ನಾನು ಯಾವುದೇ ಮುಚ್ಚುಮರೆಯಿಲ್ಲದೆ ನನ್ನ ಕೃತಜ್ಞತೆಯನ್ನು ಅಡ್ವಾಣಿಜೀಯವರಿಗೆ ಸಮರ್ಪಿಸುತ್ತೇನೆ ಎಂದರು.
ಬಿಜೆಪಿ ಆಯೋಜಿಸಿದ್ದ ಈ ಸರಳ ಸಮಾರಂಭದಲ್ಲಿ ಅಧ್ಯಕ್ಷ ನಿತಿನ್ ಗಡ್ಕರಿ, ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು.
ಜಸ್ವಂತ್ ಪಕ್ಷಕ್ಕೆ ಮರಳಿರುವುದರಿಂದ ನಾನು ಅತೀವ ಸಂತಸಗೊಂಡಿದ್ದೇನೆ, ಅವರನ್ನು ನಾನು ಸ್ವಾಗತಿಸುತ್ತಿದ್ದೇನೆ ಎಂದು ಅಡ್ವಾಣಿಯವರು ಹೇಳಿದರೆ, ಆದದ್ದೆಲ್ಲ ಆಗಿ ಹೋಗಿದೆ; ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಆದರೆ ಸಿಂಗ್ ಮುಂದಿನ ದಿನಗಳಲ್ಲಿ ಪಕ್ಷದ ಏಳ್ಗೆಗಾಗಿ ಶ್ರಮಿಸಲಿದ್ದಾರೆ ಎಂಬ ಭರವಸೆ ನನ್ನಲ್ಲಿದೆ. ಇದು ನನಗೆ ಮತ್ತು ಪಕ್ಷದ ಕಾರ್ಯಕರ್ತರೂ ಸೇರಿದಂತೆ ಎಲ್ಲರಿಗೂ ಹೆಚ್ಚು ಸಂತಸದ ದಿನ ಎಂದು ಗಡ್ಕರಿ ಹೇಳಿದರು.
ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾರನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ಹೊಗಳಿ ಪುಸ್ತಕವೊಂದನ್ನು ಬರೆದ ನಂತರ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆಗೊಳಿಸಿತ್ತು.
ಜಿನ್ನಾ ಒಬ್ಬ ಮಹಾನ್ ವ್ಯಕ್ತಿ ಮತ್ತು ಸಮಾಜವಾದಿ ನಾಯಕ. ಅಲ್ಲದೆ ಭಾರತ-ಪಾಕಿಸ್ತಾನ ವಿಭಜನೆಗೆ ಜಿನ್ನಾ ಜವಾಬ್ದಾರರಲ್ಲ ಎಂದು ಜಸ್ವಂತ್ ತನ್ನ ಪುಸ್ತಕದಲ್ಲಿ ಹೊಗಳಿದ್ದರು. ಅಷ್ಟಕ್ಕೂ ಮುಗಿಯದ ಅವರ ಟೀಕೆ, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ದೇಶನಿಷ್ಠೆಯನ್ನೂ ಸಂಶಯಿಸಿತ್ತು. ಈ ವಿಚಾರದಲ್ಲಿ ಜಸ್ವಂತ್ ಸ್ವತಃ ಅಡ್ವಾಣಿಯವರನ್ನೂ ಕೆದಕಿದ್ದರು. ಇದರಿಂದ ಕೆರಳಿದ್ದ ಬಿಜೆಪಿ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದಲೇ ಕಿತ್ತು ಹಾಕಿತ್ತು.
ನಾಲ್ಕು ದಶಕಗಳ ಕಾಲ ಪಕ್ಷಕ್ಕಾಗಿ ಬೆವರು ಹರಿಸಿದ್ದ ಜಸ್ವಂತ್ ಸಿಂಗ್‌ರನ್ನು ಬಿಜೆಪಿ ನಡೆಸಿಕೊಂಡಿದ್ದ ರೀತಿಗೆ ಹಲವು ದಿಕ್ಕುಗಳಿಂದ ತೀವ್ರ ಟೀಕೆಗಳು ಬಂದಿದ್ದವು. ಲೋಕಸಭಾ ಚುನಾವಣೆಯಲ್ಲಾದ ಮುಖಭಂಗವನ್ನು ಅರಗಿಸಿಕೊಳ್ಳದ ಬಿಜೆಪಿ, ತನ್ನ ಕೋಪವನ್ನು ಅವರ ಮೇಲೆ ತೀರಿಸಿಕೊಂಡಿತ್ತು ಎಂದೂ ಬಣ್ಣಿಸಲಾಯಿತು.
ಅಲ್ಲದೆ ಅದಕ್ಕೂ ಮೊದಲು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಅಡ್ವಾಣಿಯವರು, ಸ್ವತಃ ಜಿನ್ನಾ ಸಮಾಧಿಗೆ ನಮಸ್ಕರಿಸಿದ್ದಲ್ಲದೆ ಅವರನ್ನು ಅಪಾದಮಸ್ತಕ ಹೊಗಳಿದ್ದನ್ನೂ ಸ್ಮರಿಸಲಾಯಿತು. ಅಂದು ಅಡ್ವಾಣಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಬಿಜೆಪಿ, ಕೇವಲ ಪುಸ್ತಕವೊಂದನ್ನು ಬರೆದ ಮಾತ್ರಕ್ಕೆ ಜಸ್ವಂತ್ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿತು ಎಂದು ಯಶವಂತ್ ಸಿನ್ಹಾ ಸೇರಿದಂತೆ ಹಲವು ಬಿಜೆಪಿ ನಾಯಕರೇ ಪ್ರಶ್ನಿಸಿದರು.
ತದನಂತರದ ದಿನಗಳಲ್ಲಿ ಬಿಜೆಪಿಗೆ ಹೊಸ ಸಾರಥ್ಯವೂ ಲಭಿಸಿತು. ಪಕ್ಷ ಸಂಘಟನೆ ಅಗತ್ಯವೆಂಬುದನ್ನೂ ಬಿಜೆಪಿ ಮನಗಂಡಿತು. ಅದೇ ನಿಟ್ಟಿನಲ್ಲಿ ಮುಂದುವರಿದ ಅಧ್ಯಕ್ಷ ನಿತಿನ್ ಗಡ್ಕರಿ, ಹಲವು ಮಾಜಿ ನಾಯಕರನ್ನು ಮತ್ತೆ ಪಕ್ಷಕ್ಕೆ ಸೆಳೆಯುವ ಮೂಲಕ ಗತವೈಭವವನ್ನು ಮರುಕಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು.
ಅದರ ಮೊದಲನೇ ಫಲಿತಾಂಶ ಜಸ್ವಂತ್ ಸಿಂಗ್. ಮುಂದಿನ ದಿನಗಳಲ್ಲಿ ಮಾಜಿ ಫೈರ್ ಬ್ರಾಂಡ್ ಉಮಾ ಭಾರತಿ, ಒಂದು ಕಾಲದ ಬಿಜೆಪಿಯ ಆಸ್ತಿ ಕಲ್ಯಾಣ್ ಸಿಂಗ್ ಕೂಡ ಪಕ್ಷಕ್ಕೆ ಮರಳಲಿದ್ದಾರೆ. ಈ ಕುರಿತೂ ಮಾತುಕತೆಗಳು ನಡೆದಿದೆ ಎಂದು ಬಿಜೆಪಿ ಮೂಲಗಳೇ ಹೇಳುತ್ತಿವೆ.