ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿಗೆ ಅಚ್ಚರಿ, ಕಾಂಗ್ರೆಸ್‌ಗೆ ಆಘಾತ; ಜನತೆಗೆ ನೆಮ್ಮದಿಯೇ? (Ayodhya verdict | Congress | BJP | Allahabad High Court)
Bookmark and Share Feedback Print
 
ಅಯೋಧ್ಯೆ ಒಡೆತನದ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪು ಬಿಜೆಪಿಗೆ ಅನಿರೀಕ್ಷಿತವಾಗಿದ್ದರೆ, ಕಾಂಗ್ರೆಸ್‌ಗೆ ಆಘಾತ. ಜಾತ್ಯತೀತ ಸೋಗಿನಲ್ಲಿರುವ ಪಕ್ಷವು ಮುಂದಿನ ಬಿಹಾರ ಸೇರಿದಂತೆ ರಾಜ್ಯಗಳ ಚುನಾವಣೆಗಳಲ್ಲಿನ ಗತಿಯೇನು ಎಂದು ಯೋಚಿಸುತ್ತಿದ್ದರೆ, ಕೇಸರಿ ಪಾಳಯವು ಕೂಡ ಸಮಸ್ಯೆ ಮುಗಿದು ಹೋದರೆ ಮುಂದೇನು ಎಂಬ ಚಿಂತೆಯಲ್ಲಿದೆ.

ಸ್ವತಃ ಕೇಂದ್ರ ಸರಕಾರವೇ ಆಶ್ಚರ್ಯಕ್ಕೊಳಗಾಗಿದೆ. ಪ್ರಕರಣದಲ್ಲಿ ಸಂಪೂರ್ಣ ಸೋಲು ಅಥವಾ ಸುಲಭ ಜಯವನ್ನು ಸರಕಾರ ನಿರೀಕ್ಷಿಸಿರಲಿಲ್ಲವಾದರೂ, ವಿವಾದಿತ ಸ್ಥಳವನ್ನು ನ್ಯಾಯಾಧೀಶರುಗಳು ಹಿಂದೂಗಳಿಗೆ ಹಸ್ತಾಂತರಿಸುವ ನಿರ್ಧಾರಕ್ಕೆ ಬರುತ್ತಾರೆ ಎಂದಂತೂ ಯೋಚಿಸಿಯೇ ಇರಲಿಲ್ಲ.

ಮಸೀದಿ ಧ್ವಂಸ ಪ್ರಕರಣದಲ್ಲಿ ಮುಖಕ್ಕೆ ಕರಿ ಮೆತ್ತಿಸಿಕೊಂಡಿದ್ದ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಭರ್ಜರಿ ಉಡುಗೊರೆ. ತಮ್ಮ ಕಳಂಕವನ್ನು ಜನಮಾನಸದಿಂದ ದೂರ ಮಾಡಲು ಸಿಕ್ಕಿದ ಸುವರ್ಣಾವಕಾಶವೆಂದೇ ಪರಿಗಣಿಸಿದಂತಿದೆ. ಇಂತಹ ತೀರ್ಪನ್ನು ಬಹುಶಃ ಬಿಜೆಪಿ ಪಾಳಯವೂ ನಿರೀಕ್ಷಿಸಿರಲಿಲ್ಲ.

ಇದರೊಂದಿಗೆ, ಇದೇ ವಿಚಾರವನ್ನು ಮುಂದಿಟ್ಟುಕೊಂಡು ಭಿನ್ನ ಕೋಮುಗಳ ಒಲವು ಗಿಟ್ಟಿಸಿಕೊಳ್ಳಲು ಯತ್ನಿಸಿದ್ದ ದೇಶದ ಎರಡೂ ರಾಷ್ಟ್ರೀಯ ಪಕ್ಷಗಳು ಬೇರೆ ವಿಚಾರಗಳತ್ತ ಗಮನ ಹರಿಸಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಆ ಮೂಲಕ ಜನತೆ ಧರ್ಮಾಧರಿತವಲ್ಲದ ರಾಜಕಾರಣವನ್ನು ಕಾಣಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಅದೇ ಹೊತ್ತಿನಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಗೃಹಸಚಿವ ಪಿ. ಚಿದಂಬರಂ ನೀಡಿರುವ ಹೇಳಿಕೆಗಳೂ ಮಹತ್ವ ಪಡೆದಿವೆ. ಪ್ರಸಕ್ತ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಂಗ್, ಇದನ್ನು ಜಾಗರೂಕತೆಯಿಂದ ಪರಿಶೀಲನೆ ನಡೆಸಬೇಕಾದ ಅಗತ್ಯವಿದೆ. ಹಾಗಾಗಿ ವಿವಾದಿತ ಸ್ಥಳದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಪ್ರಕರಣ ಉನ್ನತ ನ್ಯಾಯಾಲಯಕ್ಕೆ ಹೋಗಲಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ನಾವು ಹೈಕೋರ್ಟ್ ನೀಡಿರುವ ಆದೇಶದಂತೆ ಸ್ಥಳದಲ್ಲಿ ಯಾವುದೇ ಬದಲಾವಣೆ ಮಾಡದಿರುವುದಕ್ಕೆ ಬದ್ಧರಾಗಿದ್ದೇವೆ. ಇದು ಸುಪ್ರೀಂ ಕೋರ್ಟಿಗೆ ಪ್ರಕರಣ ಹಸ್ತಾಂತರವಾಗುವ ತನಕ ಮುಂದುವರಿಯುತ್ತದೆ ಎಂದು ಚಿದಂಬರಂ ಹೇಳಿದ್ದಾರೆ.

ಕಾಂಗ್ರೆಸ್ಸಿಗೆ ಯಾದವರ ಚಿಂತೆ...
ಸದಾ ಜಾತ್ಯತೀತೆಯ ಹೆಸರಿನಲ್ಲಿ ಕೋಮು ರಾಜಕಾರಣ ಮಾಡುತ್ತಾ ಬಂದಿರುವ ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಲಾಲೂ ಪ್ರಸಾದ್ ಯಾದವ್ ಮತ್ತು ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ರಾಮ್ ವಿಲಾಸ್ ಪಾಸ್ವಾನ್ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರದ ವೈಫಲ್ಯವನ್ನು ಬೆಟ್ಟು ಮಾಡಿ ಒಂದು ಸಮುದಾಯದ ಒಲವು ಗಿಟ್ಟಿಸುವ ಭೀತಿಯನ್ನು ಕಾಂಗ್ರೆಸ್ ಎದುರಿಸುತ್ತಿದೆ.

ರಥಯಾತ್ರೆಯ ಸಂದರ್ಭದಲ್ಲಿ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿಯವರನ್ನು ಬಂಧಿಸಿದ್ದು ನನ್ನ ಸರಕಾರ ಎಂದು ಹೇಳುತ್ತಾ ಬಂದಿರುವ ಲಾಲೂ, ಮುಸ್ಲಿಮರ ಒಲವು ಗಿಟ್ಟಿಸಲು ಹಲವು ರೀತಿಯ ಕಸರತ್ತುಗಳನ್ನು ಮಾಡುತ್ತಾ ಬಂದವರು. ಅತ್ತ ಪಾಸ್ವಾನ್ ಕೂಡ ಅದೇ ರೀತಿಯ ರಾಜಕಾರಣಕ್ಕೆ ಒಗ್ಗಿಕೊಂಡವರು. ಪ್ರಸಕ್ತ ಇಬ್ಬರೂ ಹೈಕೋರ್ಟ್ ತೀರ್ಪಿನ ಬಗ್ಗೆ ಯಾವುದೇ ಖಾರ ಪ್ರತಿಕ್ರಿಯೆ ನೀಡಲು ಮುಂದಾಗದೇ ಇದ್ದರೂ, ಚುನಾವಣಾ ಪ್ರಚಾರದ ಹಂತದಲ್ಲಿ ಕಾಂಗ್ರೆಸ್ ವಿರುದ್ಧ ಅಲೆ ಸೃಷ್ಟಿಸುವ ಭೀತಿಯಿದೆ.

ಬಾಬ್ರಿ ಮಸೀದಿ ಧ್ವಂಸದ ಸಂದರ್ಭದಲ್ಲೂ ಕೇಂದ್ರದಲ್ಲಿದ್ದುದು ಕಾಂಗ್ರೆಸ್ ಸರಕಾರ. ಈಗ ನ್ಯಾಯಾಲಯ ತೀರ್ಪು ನೀಡುವ ಸಂದರ್ಭದಲ್ಲೂ ಬಾಬ್ರಿ ಮಸೀದಿಗೆ ನ್ಯಾಯ ಒದಗಿಸುವ ಸಂಬಂಧ ಸೂಕ್ತವಾಗಿ ಕಾರ್ಯ ನಿರ್ವಹಿಸಿಲ್ಲ ಎಂಬ ರೀತಿಯ ಆರೋಪಗಳನ್ನು ಮಾಡಬಹುದು ಎಂಬ ರೀತಿಯ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಹರಿದಾಡುತ್ತಿದೆ.

ನಮ್ಮದು ರಾಷ್ಟ್ರೀಯ ಪಕ್ಷ. ಅಯೋಧ್ಯೆ ವಿಚಾರದ ಕುರಿತು ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ನಾವು ತೀರ್ಪನ್ನು ಸ್ವೀಕರಿಸಿದ್ದೇವೆ ಮತ್ತು ಇದನ್ನು ಚುನಾವಣಾ ಪ್ರಚಾರದಲ್ಲಿ ಬಳಕೆ ಮಾಡುವುದಿಲ್ಲ. ಆದರೆ ಇತರ ಪಕ್ಷಗಳು ಅದನ್ನು ಪ್ರಚಾರ ತಂತ್ರವನ್ನಾಗಿಸಬಹುದು ಎಂಬ ಭೀತಿ ನಮ್ಮಲ್ಲಿದೆ ಎಂದು ಸ್ವತಃ ಕಾಂಗ್ರೆಸ್ ವಕ್ತಾರ ಪ್ರೇಮ್ ಚಂದ್ ಮಿಶ್ರಾ ಹೇಳಿಕೊಂಡಿದ್ದಾರೆ.

ಅತ್ತ ಬಿಹಾರದ ಆಡಳಿತ ಪಕ್ಷ ಸಂಯುಕ್ತ ಜನತಾದಳ (ಜೆಡಿಯು) ಕೂಡ ಇದರಿಂದ ಹೊರತಾಗಿಲ್ಲ. ಮುಸ್ಲಿಮರ ಒಲವು ಗಿಟ್ಟಿಸುವ ಸಲುವಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ದೂರ ಸರಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಸಂಘ ಪರಿವಾರವು ಮೀಸೆ ತಿರುವುತ್ತಿರುವುದನ್ನು ಸಹಿಸಿಕೊಳ್ಳಲಾರರು.

ಇದು ಚುನಾವಣಾ ವೇದಿಕೆಗಳಿಗೂ ಹರಿದು ಬಂದಲ್ಲಿ, ಆಗ ಜೆಡಿಯು ಮತ್ತು ಮಿತ್ರಪಕ್ಷ ಬಿಜೆಪಿ ನಡುವೆ ಭಿನ್ನಮತಕ್ಕೆ ಕಾರಣವಾಗಬಹುದು. ತೀರ್ಪು ತನ್ನ ಅಜೆಂಡಾದ ಪರವಾಗಿಯೇ ಬಂದಿರುವುದರಿಂದ ಅದರಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಹಿಂದೆ ಸರಿಯದು ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಅಯೋಧ್ಯೆ ವಿಚಾರವು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ತಿರುವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಸಂಬಂಧಪಟ್ಟ ಸುದ್ದಿಗಳು:
* ಹಿಂದೂ-ಮುಸ್ಲಿಮರಿಗೆ ಅಯೋಧ್ಯೆ ಹಂಚಿಕೆ: ಹೈಕೋರ್ಟ್ ತೀರ್ಪು
* ಅಯೋಧ್ಯೆಯೇ ರಾಮ ಜನ್ಮಭೂಮಿ, ಮಸೀದಿ ಅನ್ಇಸ್ಲಾಮಿಕ್
* ರಾಮಮಂದಿರ ನಿರ್ಮಾಣ ಹಾದಿ ಸುಗಮ: ಆರೆಸ್ಸೆಸ್, ವಿಎಚ್‌ಪಿ
* ನನ್ನ ಜೀವನದ ಅಮೂಲ್ಯ ಕ್ಷಣವಿದು: ತೀರ್ಪಿಗೆ ಉಮಾ ಭಾರತಿ
* ಅಯೋಧ್ಯೆ ತೀರ್ಪಿನ ವಿರುದ್ಧ ಮೇಲ್ಮನವಿ: ಸುನ್ನಿ ವಕ್ಫ್ ಮಂಡಳಿ
* ಒಡೆತನ ಹಂಚಿಕೆ; ಹಿಂದೂ ಮಹಾಸಭಾ ಸುಪ್ರೀಂ ಕೋರ್ಟಿಗೆ
* ಭವ್ಯ ರಾಮಮಂದಿರ ನಿರ್ಮಾಣ ಹಾದಿ ಸುಗಮ: ಮೋದಿ
* 'ರಾಮ ಹುಟ್ಟಿದ್ದು ಎಲ್ಲಿ ಎಂದು ಹೇಳುವುದು ಕೋರ್ಟ್ ಕೆಲಸವಲ್ಲ'
* ಕಾಂಗ್ರೆಸ್ ಮಸೀದಿ ಕಟ್ಟಿ ಕೊಡಲಿ: ಬಾಬ್ರಿ ಕ್ರಿಯಾ ಸಮಿತಿ
ಸಂಬಂಧಿತ ಮಾಹಿತಿ ಹುಡುಕಿ