ಐದು ಸೆಕ್ಸ್ ಸಿಡಿಯಲ್ಲಿ ನಿತ್ಯಾನಂದ; ಭಕ್ತರಿಂದ ಚಪ್ಪಲಿಯೇಟು!
ಬೆಂಗಳೂರು, ಶುಕ್ರವಾರ, 23 ಏಪ್ರಿಲ್ 2010( 13:44 IST )
ತನ್ನ ಭಕ್ತೆಯರೊಂದಿಗೆ ತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಂಡಿದ್ದ ಪರಮಹಂಸ ನಿತ್ಯಾನಂದ ಸ್ವಾಮಿ ಕನಿಷ್ಠ ಐವರು ಮಹಿಳೆಯರೊಂದಿಗೆ 35ಕ್ಕೂ ಹೆಚ್ಚು ಸಿಡಿಗಳಲ್ಲಿ ಅಶ್ಲೀಲ ಭಂಗಿಗಳಲ್ಲಿ ಕಾಣಿಸಿಕೊಂಡಿರುವ ಆಘಾತಕಾರಿ ಅಂಶ ಸಿಐಡಿ ಮೂಲಕ ಬೆಳಕಿಗೆ ಬಂದಿದೆ. ಈ ನಡುವೆ ಹಿಮಾಚಲ ಪ್ರದೇಶದಲ್ಲಿ ಬಂಧನಕ್ಕೊಳಗಾದ ಸ್ವಾಮಿಯನ್ನು ನಿನ್ನೆ ಬೆಂಗಳೂರಿಗೆ ಕರೆ ತರುವ ಸಂದರ್ಭದಲ್ಲಿ ಮಾಜಿ ಭಕ್ತರೊಬ್ಬರು ರೋಷದಿಂದ ಚಪ್ಪಲಿ ಸೇವೆ ನಡೆಸಿದ ಬಗ್ಗೆಯೂ ವರದಿಯಾಗಿದೆ.
ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಅರ್ಕಿ ಪ್ರದೇಶದಲ್ಲಿನ ಮಾಮ್ಲೀಕ್ ಗ್ರಾಮದ ಸಮೀಪದ ಶಿವಶಂಕರ್ ಘರ್ ಎಂಬಲ್ಲಿಂದ ನಿತ್ಯಾನಂದ ಸ್ವಾಮಿ ಮತ್ತು ನಿತ್ಯಭಕ್ತಾನಂದ ಆಲಿಯಾಸ್ ಗೋಪಾಲ ಸೀಲಂ ರೆಡ್ಡಿಯನ್ನು ಬಂಧಿಸಿ ನಿನ್ನೆ ಬೆಂಗಳೂರಿಗೆ ಕರೆ ತರಲಾಗಿತ್ತು.
ಆರೋಪಿಗಳಿಬ್ಬರನ್ನೂ ರಾತ್ರಿ 10.30ರ ಹೊತ್ತಿಗೆ ರಾಮನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಪುಷ್ಪಲತಾ ಅವರ ಮುಂದೆ ಸಿಐಡಿ ಅಧಿಕಾರಿಗಳು ಹಾಜರುಪಡಿಸಿದ್ದು, ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಶಿಕ್ಷಕರಿಂದ ಸ್ವಾಮಿಗೆ ಪಾಠ... ನಿತ್ಯಾನಂದ ಸ್ವಾಮಿಯನ್ನು ಬೆಂಗಳೂರಿಗೆ ಕರೆ ತರಲಾಗುತ್ತಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು. ಸ್ವಾಮಿ ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಸಾರ್ವಜನಿಕರು ಮುತ್ತಿಗೆ ಹಾಕಲು ಯತ್ನಿಸಿದರೂ, ಪೊಲೀಸರು ಅವಕಾಶ ನೀಡಿರಲಿಲ್ಲ. ಆದರೂ ಸ್ವಾಮಿಯ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗುತ್ತಿತ್ತು.
ಇದ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದ ಸ್ವಾಮಿ ಶಾಂತಚಿತ್ತದಿಂದ ಪ್ರಸನ್ನವದನ ಅವತಾರದಲ್ಲಿ ಪೊಲೀಸರೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಸಾರ್ವಜನಿಕರ, ಮಾಜಿ ಭಕ್ತರ ಹಲ್ಲೆ ಯತ್ನಗಳು ಈ ಸಂದರ್ಭದಲ್ಲಿ ಸಫಲತೆ ಕಂಡಿರಲಿಲ್ಲ.
ಆದರೆ ರಾತ್ರಿ 10.30ಯ ನಂತರ ನ್ಯಾಯಾಧೀಶರ ಮನೆಯಿಂದ ಸ್ವಾಮಿ ಹೊರ ಬರುತ್ತಿರುವಾಗ ಶಿಕ್ಷಕರೆಂದು ಹೇಳಿಕೊಂಡಿರುವ ಶ್ರೀನಿವಾಸ್ ಎಂಬವರು ಭರ್ಜರಿಯಾಗಿ ಚಪ್ಪಲಿ ಸೇವೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿತ್ಯಾನಂದ ಸ್ವಾಮಿಯನ್ನು ನಿಂದಿಸಿದ ಶಿಕ್ಷಕ, ಚಪ್ಪಲಿಯನ್ನು ಸ್ವಾಮಿಯತ್ತ ಎಸೆದರು ಎಂದು ವರದಿಗಳು ಹೇಳಿವೆ. ನಂತರ ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇಂದು ಮಹತ್ವದ ತೀರ್ಪು... ತನ್ನ ವಿರುದ್ಧ ಪೊಲೀಸರು ದಾಖಲಿಸಿರುವ ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿ ನಿತ್ಯಾನಂದ ಸ್ವಾಮಿ ಹೈಕೋರ್ಟ್‌ಗೆ ಮೊರೆ ಹೋಗಿರುವ ಸಂಬಂಧ ಇಂದು ತೀರ್ಪು ಹೊರ ಬೀಳಲಿದೆ.
ನ್ಯಾಯಮೂರ್ತಿ ಅರಳಿ ನಾಗರಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿದ್ದು, ಇಂದು ಸ್ವಾಮಿಯ ಹಣೆಬರಹ ಹೊರ ಬೀಳಲಿದೆ.
ನಿನ್ನೆಯಷ್ಟೇ ರಾಮನಗರದ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಒಟ್ಟಾರೆ ನಿತ್ಯಾನಂದ ವಿರುದ್ಧ ಗುರುತರ ಆರೋಪಗಳು ಇಲ್ಲದೇ ಇರುವುದರಿಂದ ಒಂದೆರಡು ದಿನಗಳಲ್ಲೇ ನಿರೀಕ್ಷಣಾ ಜಾಮೀನು ಪಡೆದು ಹೊರ ಬರುವ ಸಾಧ್ಯತೆಗಳೂ ಇವೆ ಕಾನೂನು ತಜ್ಞರು ಹೇಳುತ್ತಾರೆ.
ರಂಜಿತಾಳ ವಿಚಾರಣೆ... ತಮಿಳು ನಟಿ ರಂಜಿತಾ ಮತ್ತು ಸ್ವಾಮಿಯ ಕಾಮಕಾಂಡಗಳನ್ನು ಚಿತ್ರೀಕರಿಸಿ, ಹೊರಜಗತ್ತಿಗೆ ಬಹಿರಂಗಪಡಿಸಿದ್ದು ಲೆನಿನ್ ಕರುಪ್ಪನ್ ಆಲಿಯಾಸ್ ಧರ್ಮಾನಂದ. ಈತನೇ ಸ್ವಾಮಿ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದು ಕೂಡ. ಆದರೆ ರಂಜಿತಾ ಇದುವರೆಗೆ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.
ಆದರೆ ಕಳೆದ ವಾರ ಹೈಕೋರ್ಟ್ ರಂಜಿತಾ ಕುರಿತು ಮಾಹಿತಿ ಇಲ್ಲವೆಂದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ರಂಜಿತಾಳನ್ನು ಪತ್ತೆ ಹಚ್ಚಿದ್ದು, ಆಕೆಯನ್ನು ವಿಚಾರಣೆಗೊಳಪಡಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಅವು ಪ್ರಾಚೀನ ತಾಂತ್ರಿಕ ರಹಸ್ಯಗಳಂತೆ... ಬೆಂಗಳೂರಿನ ಬಿಡದಿಯಲ್ಲಿ ಆಶ್ರಮಕ್ಕೆ ದಾಳಿ ಮಾಡಿರುವ ಸಿಐಡಿ ಅಧಿಕಾರಿಗಳೇ ಇದನ್ನೆಲ್ಲ ಕಂಡು ಬೆಚ್ಚಿ ಬಿದ್ದಿದ್ದಾರೆ. ಇದಕ್ಕೆ ಕಾರಣ ಸ್ವಾಮೀಜಿ ಮಹಿಳೆಯರೊಂದಿಗೆ ಮಾಡಿಕೊಂಡಿದ್ದ ಸೆಕ್ಸ್ ಒಪ್ಪಂದಗಳು!
ಪುರಾತನ ತಾಂತ್ರಿಕ ರಹಸ್ಯಗಳ ಅಧ್ಯಯನದ 'ಸ್ವಾಮಿ ಪಾಠ' ಎಂಬ ಈ ಕಾರ್ಯಕ್ರಮದಲ್ಲಿ ನಗ್ನತೆ, ಲೈಂಗಿಕ ಚಟುವಟಿಕೆ ಮತ್ತು ಸಂಭೋಗಗಳು ಬರುತ್ತವೆ. ಆದರೆ ಈ ಕೋರ್ಸ್ ಮಾಡಲು ಬಯಸುವ ಭಕ್ತರು ಯಾವುದೇ ಕಾರಣಕ್ಕೂ ಈ ವಿಚಾರಗಳನ್ನು ಬಹಿರಂಗಪಡಿಸಬಾರದು ಎಂಬ ನಿಷೇಧ ಹೇರಲಾಗುತ್ತದೆ. ಅಲ್ಲದೆ ಈ ಕುರಿತು ಒಪ್ಪಂದವನ್ನೂ ಮಾಡಿಕೊಳ್ಳಲಾಗುತ್ತದೆ. ಅದರ ಪ್ರಕಾರ ಕಾರ್ಯಕ್ರಮ ಮುಗಿದ ನಂತರ ನ್ಯಾಯಾಲಯಕ್ಕೂ ಹೋಗುವಂತಿಲ್ಲ!
ಸಿಐಡಿ ಅಧಿಕಾರಿಗಳು ಆಶ್ರಮಕ್ಕೆ ದಾಳಿ ಮಾಡಿದ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ಹಾರ್ಡ್‌ಡಿಸ್ಕ್‌ಗಳು, ಲ್ಯಾಪ್‌ಟಾಪ್‌ಗಳು, ಮೊಬೈಲ್‌ಗಳು ಮತ್ತು ಇತರ ದಾಖಲೆಗಳಲ್ಲಿ ಇದನ್ನೆಲ್ಲ ಪತ್ತೆ ಹಚ್ಚಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪುರುಷರೂ ಪಾಲ್ಗೊಳ್ಳಬಹುದು. ಆದರೆ ಸಿಐಡಿ ಅಧಿಕಾರಿಗಳು ಹೊಂದಿರುವ ದಾಖಲೆಗಳ ಪ್ರಕಾರ ಇದರಲ್ಲಿ ಭಾಗಶಃ ಪಾಲ್ಗೊಂಡಿರುವುದು ಮಹಿಳೆಯರೇ. ಅದರಲ್ಲೂ ವಿಶೇಷ ಎಂದರೆ ತಮಿಳುನಾಡಿನ ಮಹಿಳೆಯರು ಎಂಬುದು.
ನಿತ್ಯಾನಂದ ಸ್ವಾಮಿ ಕನಿಷ್ಠ ಐದು ಮಹಿಳೆಯರೊಂದಿಗೆ ಇಂತಹ ಅನೈತಿಕ ಚಟುವಟಿಕೆ ನಡೆಸುವ ಅಥವಾ ಲೈಂಗಿಕ ಭಂಗಿಗಳಲ್ಲಿ ಕಾಣಿಸಿಕೊಂಡಿರುವ 35ಕ್ಕೂ ಹೆಚ್ಚು ವೀಡಿಯೋ ತುಣುಕುಗಳನ್ನು ಸಿಐಡಿ ಅಧಿಕಾರಿಗಳು ವೀಕ್ಷಿಸಿದ್ದು, ಅವುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.