ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ತೀರ್ಪು ಬಾಬ್ರಿ ಧ್ವಂಸದ ಸಮರ್ಥನೆಯಲ್ಲ: ಚಿದಂಬರಂ
(Ayodhya verdict | Babri demolition | P Chidambaram | Allahabad High Court)
ಅಯೋಧ್ಯೆ ತೀರ್ಪು ರಾಮಮಂದಿರ ಪರವಾಗಿ ಬಂದಿರುವುದನ್ನು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮರ್ಥನೆಗೆ ಬಳಸಿಕೊಳ್ಳಬೇಕಾಗಿಲ್ಲ. ಅಂದು ನಡೆದಿರುವುದು ಸಂಪೂರ್ಣವಾಗಿ ಕ್ರಿಮಿನಲ್ ಕೃತ್ಯ ಎಂದು ಕೇಂದ್ರ ಗೃಹಸಚಿವ ಪಿ. ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.
ಪ್ರಸಕ್ತ ಬಂದಿರುವ ತೀರ್ಪು ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ದುರ್ಬಲಗೊಳಿಸುತ್ತದೆಯೇ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಅವರು, 1992ರ ಡಿಸೆಂಬರ್ ಆರರ ಘಟನೆಯ ಮೇಲೆ ಈ ತೀರ್ಪು ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಅಂದು ನಡೆದ ಘಟನೆ ಸಂಪೂರ್ಣವಾಗಿ ಅಸ್ವೀಕಾರಾರ್ಹವಾದುದು ಮತ್ತು ಕಾನೂನು ಸುವ್ಯವಸ್ಥೆಯನ್ನು ತಮ್ಮ ಕೈಗೆ ತೆಗೆದುಕೊಂಡು ಕೆಲವರು ಸೃಷ್ಟಿಸಿದ ಪ್ರಸಂಗ. ನನ್ನ ಪ್ರಕಾರ ಅದೊಂದು ಕ್ರಿಮಿನಲ್ ಪ್ರಕರಣ ಮತ್ತು ಅದೇ ರೀತಿ ಅದು ಪರಿಗಣಿಸಲ್ಪಡುವುದು ಮುಂದುವರಿಯುತ್ತದೆ. ಹಾಗಾಗಿ ದಯವಿಟ್ಟು ಅಂದು ನಡೆದ ಘಟನೆಗೆ ಸಮರ್ಥನೆ ನೀಡುವ ಯತ್ನದ ರೀತಿಯ ಆರೋಪಗಳು ಲಕ್ನೋ ಪೀಠದ ನ್ಯಾಯಮೂರ್ತಿಗಳ ಮೇಲೆ ಬರುವಂತೆ ಮಾಡಬೇಡಿ ಎಂದರು.
ಅದೇ ಹೊತ್ತಿಗೆ ಅಯೋಧ್ಯೆ ತೀರ್ಪಿನ ಕುರಿತು ಜನತೆ ಗೌರವಯುತ ಪ್ರತಿಕ್ರಿಯೆ ನೀಡಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದ ಚಿದಂಬರಂ, ವಿವಾದಿತ ಸ್ಥಳದ ಪ್ರಸಕ್ತ ಸ್ಥಿತಿಯನ್ನು ಕಾಪಾಡಿಕೊಳ್ಳುವುದು ಮತ್ತು ದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಖಚಿತಪಡಿಸುವ ಹೊರತು ಪ್ರಕರಣದಲ್ಲಿ ಕೇಂದ್ರಕ್ಕೆ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಅಲಹಾಬಾದ್ ಹೈಕೋರ್ಟ್ ನೀಡುವ ತೀರ್ಪು ಸುಪ್ರೀಂ ಕೋರ್ಟಿಗೆ ಹೋಗಲಿದೆ ಎಂದು ಮೊದಲೇ ಊಹಿಸಲಾಗಿತ್ತು. ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಪ್ರಸಕ್ತ ತೀರ್ಪಿಗೆ ಮಧ್ಯಂತರ ತಡೆಯಾಜ್ಞೆಯನ್ನು ಸುಪ್ರೀಂ ನೀಡಲಿದೆ ಎಂದರು.
ಪ್ರಸಕ್ತ ಇಲ್ಲಿ ಕೇಂದ್ರ ಸರಕಾರಕ್ಕೆ ಯಾವುದೇ ಪಾತ್ರವಿಲ್ಲ. ಅಯೋಧ್ಯೆಯ ವಿವಾದಿತ ಸ್ಥಳದ ಸ್ಥಿತಿಯನ್ನು ಬದಲಾವಣೆ ಮಾಡಬಾರದು ಎಂದು ನ್ಯಾಯಮೂರ್ತಿಗಳು ಆದೇಶ ನೀಡಿದ್ದಾರೆ. ತೀರ್ಪು ಪ್ರಮುಖ ಹೌದಾದರೂ, ಸದ್ಯಕ್ಕೆ ಜಾರಿಯಾಗುವಂತಿಲ್ಲ. ಅದು ಸುಪ್ರೀಂ ಕೋರ್ಟಿಗೆ ಹೋಗಲಿದೆ. ಹಾಗಾಗಿ 1994ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವು ಮುಂದುವರಿಯುತ್ತದೆ ಎಂದು ತಿಳಿಸಿದರು.
ತೀರ್ಪು ಬಿಜೆಪಿ ಪಾಲಿಗೆ ಹಿಗ್ಗಿ ಹೀರೇಕಾಯಿಯಂತಾಗಿದ್ದರೆ, ಕಾಂಗ್ರೆಸ್ ಪಕ್ಷವು ತೀವ್ರ ಆತಂಕಕ್ಕೊಳಗಾಗಿದೆಯೇ ಎಂಬ ಪ್ರಶ್ನೆಗೆ, ನಿಮಗೆ ಪಕ್ಷದ ನಿಲುವು ಬೇಕಾಗಿದ್ದರೆ ನೀವು ಕಾಂಗ್ರೆಸ್ ಪಕ್ಷದ ವಕ್ತಾರರಲ್ಲಿ ಈ ಪ್ರಶ್ನೆಯನ್ನು ಕೇಳಿ ಎಂದು ವರದಿಗಾರರನ್ನು ಸುಮ್ಮನಾಗಿಸಿದರು.