ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರನ್ನು ಒಳಗೊಂಡಿರುವ ಕಾರ್ಗಿಲ್ ಯೋಧರ ವಸತಿಗೃಹ ಗುಳುಂ ಮಾಡಿದ 'ಆದರ್ಶ ವಸತಿ ಹಗರಣ' ಮತ್ತು ಕಾಮನ್ವೆಲ್ತ್ ಗೇಮ್ಸ್ ಹಗರಣಗಳ ಬಗ್ಗೆ ಎಐಸಿಸಿ ಅಧಿವೇಶನದಲ್ಲಿ ಉಲ್ಲೇಖವನ್ನೇ ಮಾಡದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅದರ ಬದಲಾಗಿ ಆರ್ಥಿಕತೆಯ ಅಭಿವೃದ್ಧಿ, ಕೋಮುವಾದ, ಕಾಶ್ಮೀರ, ಭಯೋತ್ಪಾದಕತೆ ವಿಷಯಗಳನ್ನು ಪ್ರಸ್ತಾಪಿಸಿದರಲ್ಲದೆ, ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಉರುಳಿಸಿದವರಿಗೆ ಶಿಕ್ಷೆಯಾಗಬೇಕು ಎಂದು ಮಂಗಳವಾರ ಆಗ್ರಹಿಸಿದರು.
ಸೋನಿಯಾ ಸತತ ನಾಲ್ಕನೇ ಅವಧಿಗೆ ಕಾಂಗ್ರೆಸ್ ಅಧ್ಯಕ್ಷೆಯಾಗಿ ಪುನರಾಯ್ಕೆಯಾದ ಬಳಿಕ ನಡೆಯುತ್ತಿರುವ ಮೊದಲ ಸಮಾವೇಶವಿದಾಗಿದ್ದು, ಕಾಂಗ್ರೆಸ್ ಪಕ್ಷವು 125 ವರ್ಷ ಪೂರ್ಣಗೊಂಡ ಬಳಿಕದ ಮೊದಲ ಸಭೆಯಾಗಿದ್ದರೂ, ವಿವಾದಗಳು, ಹಗರಣಗಳಿಂದಾಗಿ ಪಕ್ಷವು ಆಚರಣೆಯ ಮೂಡ್‌ನಲ್ಲಿ ಇದ್ದಂತಿರಲಿಲ್ಲ.
ಮಹಾರಾಷ್ಟ್ರದ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ಕುರ್ಚಿ ಅಲುಗಾಡಲು ಕಾರಣವಾದ, ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ವಿಧವೆಯರಿಗೆ ಮೀಸಲಾಗಿಟ್ಟಿದ್ದ ವಸತಿ ಗೃಹಗಳನ್ನು ತಮ್ಮವರಿಗೆ ಕೊಡಿಸಿದ ಆರೋಪವು ಬಿಜೆಪಿ ಸಹಿತ ಪ್ರತಿಪಕ್ಷಗಳ ತೀವ್ರ ಗದ್ದಲಕ್ಕೆ ಹೇತುವಾಗಿತ್ತು. ಅದಲ್ಲದೆ, ಇತ್ತೀಚೆಗೆ ಮುಗಿದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಾದ 70 ಸಾವಿರ ಕೋಟಿ ಅವ್ಯವಹಾರ ಆರೋಪಕ್ಕೂ ಕಾಂಗ್ರೆಸ್ ಪ್ರತಿಕ್ರಿಯಿಸುತ್ತದೆ ಎಂಬ ಆಶಾವಾದವು ದೇಶದ ಜನತೆಯಲ್ಲಿತ್ತು.
ಬಾಬರಿ ಮಸೀದಿ ಧ್ವಂಸ ಸಮರ್ಥನೀಯವಲ್ಲ... ಆದರೆ ಅವ್ಯಾವುಗಳ ಉಲ್ಲೇಖವಿಲ್ಲದೆ, ಅಧಿವೇಶನದಲ್ಲಿ ಭಾಷಣ ಓದಿದ ಸೋನಿಯಾ ಗಾಂಧಿ, ಅಯೋಧ್ಯೆ ವಿಷಯವನ್ನು ಪ್ರಸ್ತಾಪಿಸಿ, ಸಂಘ ಪರಿವಾರದ ಮೇಲೆ ಮುಗಿಬಿದ್ದರು. ಮಸೀದಿ ಉರುಳಿಸಿದವರು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂದರು. ಅಂತೆಯೇ, ನವೆಂಬರ್ 26ರ ಮುಂಬೈ ದಾಳಿಕೋರರನ್ನು ಶಿಕ್ಷಿಸುತ್ತೇವೆ, ಭಯೋತ್ಪಾದನೆ ಮಟ್ಟ ಹಾಕಬೇಕಿದೆ ಮತ್ತು ಕೋಮುವಾದದ ವಿರುದ್ಧ, ಕಾಶ್ಮೀರದ ವಿಭಾಜಕ ಶಕ್ತಿಗಳ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು.
ಅಯೋಧ್ಯೆಯ ಕುರಿತು ಅಲಾಹಾಬಾದ್ ಹೈಕೋರ್ಟ್ ತ್ರಿಸದಸ್ಯ ಪೀಠ ನೀಡಿರುವ ತೀರ್ಪು ಬಾಬರಿ ಮಸೀದಿ ಧ್ವಂಸವನ್ನು ಎಂದೂ ಬೆಂಬಲಿಸಿಲ್ಲ ಎಂದು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅದೊಂದು ನಾಚಿಕೆಗೇಡಿನ ಕ್ರಿಮಿನಲ್ ಕೃತ್ಯವಾಗಿದ್ದು, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲೇಬೇಕು ಎಂದು ಹೇಳಿದ್ದಾರೆ.
ಕಾಶ್ಮೀರ: ಸರಕಾರವನ್ನು ನಂಬಿ... ಜಮ್ಮು ಮತ್ತು ಕಾಶ್ಮೀರದ ಕುರಿತಾಗಿ ಸರಕಾರ ತಳೆದಿರುವ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವವರೆಲ್ಲರೂ ಸರಕಾರದ ಮೇಲೆ ವಿಶ್ವಾಸವಿರಿಸಿ, ಅದು ಶಾಂತಿಗೊಂದು ಅವಕಾಶ ಮಾಡಿಕೊಡಿ ಮತ್ತು ಅವರಿಗಾಗಿ ಭವ್ಯ ಭವಿಷ್ಯ ನಿರ್ಮಿಸಲು ನೆರವಾಗಿ ಎಂದು ಸೋನಿಯಾ ಕೇಳಿಕೊಂಡರು.
ಕಾಶ್ಮೀರದಲ್ಲಿ ನಾವು ಹೊಸ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಕಳೆದ ಕೆಲವು ತಿಂಗಳುಗಳಂತೂ ಯಾತನಾಮಯವಾಗಿದ್ದವು ಎಂದು ಅವರು ಅಭಿಪ್ರಾಯಪಟ್ಟರು.
ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ, ಆಹಾರ ಧಾನ್ಯಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ತಮ್ಮ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಕ್ರಮ ಕೈಗೊಳ್ಳುತ್ತದೆ, ಆರ್ಥಿಕ ಪರಿಸ್ಥಿತಿ ಚೇತರಿಕೆಯಾಗುತ್ತದೆ, ಮಹಿಳಾ ಮೀಸಲು ಮಸೂದೆ ಮಂಡನೆಗೆ ಸಿದ್ಧ ಎಂದೂ ಮಗದೊಮ್ಮೆ ಹೇಳಿದರು.