ನಿಧಾನವಾಗಿ ನಿದ್ದೆಗೆ ಜಾರುತ್ತಿದ್ದ ಮುಂಬೈ ಮೇಲೆ ಅನಾಮತ್ತಾಗಿ ಹತ್ತು ಮಂದಿ ಪಾಕಿಸ್ತಾನಿ ಉಗ್ರರು ದಂಡೆತ್ತಿ ಬಂದು ಅಮಾಯಕರನ್ನು ಕುರಿಗಳಂತೆ ಹೊಸಕಿ ಹಾಕಿದ ಬರ್ಬರ ಘಟನೆಗೆ ಇಂದು ಸರಿಯಾಗಿ ಎರಡು ವರ್ಷ ತುಂಬಿದೆ. ಅಂದಿನಿಂದ ಇಂದಿನವರೆಗೂ ನಮ್ಮ ಸರಕಾರವು ಪಾಕಿಸ್ತಾನಕ್ಕೆ ನಿರಂತರ ಎಚ್ಚರಿಕೆಗಳನ್ನು ನೀಡುತ್ತಾ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾ ಬಂದಿದೆ.
ಫಲಿತಾಂಶ ಮಾತ್ರ ಶೂನ್ಯ. ಪಾಕಿಸ್ತಾನದ ನಿಲುವಿನಲ್ಲಿ ಕೂಡ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಅದು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಬದಿಗಿರಲಿ, ತನ್ನ ಉದ್ಧಟತನದ ಮಾತುಗಳನ್ನು ನಿಲ್ಲಿಸುವ ಗೋಜಿಗೂ ಹೋಗಿಲ್ಲ. ಬಿಡಿ, ಆ ದೇಶದ ಕುರಿತು ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದೇ ತಪ್ಪು.
PTI
ಜೀವಂತವಾಗಿ ಕೈಗೆ ಸಿಕ್ಕಿರುವ ಪಾತಕಿ ಕಸಬ್‌ನನ್ನು ಗಲ್ಲಿಗೆ ಹಾಕಿ ಎಂದು ದೇಶಕ್ಕೆ ದೇಶವೇ ಒಕ್ಕೊರಲಿನಿಂದ ಹೇಳುತ್ತಿದೆ. ಆತ ಮಾತ್ರ ಜೈಲಿನಲ್ಲಿದ್ದರೂ ರಾಜ ಮರ್ಯಾದೆಯಿಂದ ಜೀವನ ಸಾಗಿಸುತ್ತಿದ್ದಾನೆ. ಸೊಳ್ಳೆ ಕಚ್ಚಿದರೂ ದೂರು ನೀಡುತ್ತಾನೆ, ದಿನಕ್ಕೆರಡು ಬಾರಿ ವೈದ್ಯರು ಪರಿಶೀಲನೆ ನಡೆಸುತ್ತಾರೆ. ಆತನ ರಕ್ಷಣೆಗೆಂದೇ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನೇನು ಬೇಕು?
175ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು... 2008ರ ನವೆಂಬರ್ 26ರಿಂದ 29ರ ನಡುವೆ ನಡೆದಿರುವ ಘಟನೆಯಿದು. ಕರಾಚಿಯಿಂದ ಸಾಗರ ಮಾರ್ಗದ ಮೂಲಕ ಮುಂಬೈ ತಲುಪಿದ್ದ ಪಾಕಿಸ್ತಾನದ ಲಷ್ಕರ್ ಇ ತೋಯ್ಬಾದ ಹತ್ತು ಮಂದಿ ಉಗ್ರರು ಮುಂಬೈಯ ಹತ್ತಾರು ಕಡೆ ದಾಳಿ ನಡೆಸಿದ್ದರು.
ಘಟನೆಯಲ್ಲಿ ಕನಿಷ್ಠ 175 ಮಂದಿ ಸಾವನ್ನಪ್ಪಿದ್ದರೆ, 300ಕ್ಕೂ ಹೆಚ್ಚು ಗಾಯಗೊಂಡಿದ್ದರು. ಸಾವು-ನೋವಿನಲ್ಲಿ ವಿದೇಶೀಯರೂ ಸೇರಿದ್ದರು. ಅವರನ್ನೇ ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗಿತ್ತು.
ಕಸಬ್‌ಗೆ ಗಲ್ಲು ಯಾವಾಗ? ಅಂದಿನ ದಾಳಿಕೋರರಲ್ಲಿ ಜೀವಂತವಾಗಿ ಭಾರತ ಪೊಲೀಸರ ಕೈಗೆ ಸಿಕ್ಕಿರುವುದು ಮೊಹಮ್ಮದ್ ಅಮೀರ್ ಅಜ್ಮಲ್ ಕಸಬ್ ಮಾತ್ರ. ಈತನ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು 2010ರ ಮೇ 6ರಂದು ಮರಣ ದಂಡನೆ ಶಿಕ್ಷೆ ಪ್ರಕಟಿಸಿತ್ತು.
ಕಸಬ್ ಗಲ್ಲು ಶಿಕ್ಷೆಯನ್ನು ಖಚಿತಪಡಿಸುವ ವಿಚಾರಣೆ ಪ್ರಸಕ್ತ ಬಾಂಬೆ ಹೈಕೋರ್ಟಿನಲ್ಲಿ ನಡೆಯುತ್ತಿದೆ. ಸರಕಾರಿ ವಕೀಲರು ತನ್ನ ವಾದವನ್ನು ಮುಗಿಸಿದ್ದು, ಕಸಬ್ ಪರ ವಾದ ಈಗಷ್ಟೇ ಆರಂಭವಾಗಿದೆ. ಹೈಕೋರ್ಟ್ ತೀರ್ಪಿನ ಬಳಿಕ ಪ್ರಕರಣ ಸುಪ್ರೀಂ ಕೋರ್ಟ್ ಪ್ರವೇಶಿಸಲಿದೆ. ಇಲ್ಲೂ ಶಿಕ್ಷೆ ಖಚಿತವಾದಲ್ಲಿ ಅಂತಿಮ ನಿರ್ಧಾರ ರಾಷ್ಟ್ರಪತಿಯವರದ್ದಾಗಿರುತ್ತದೆ.
ಈಗಾಗಲೇ ಗಲ್ಲು ಶಿಕ್ಷೆಗೆಂದು ಕಾಯುತ್ತಿರುವವರ ಸರದಿಯೇ ತುಂಬಾ ದೊಡ್ಡದಿದೆ. ಆ ಸಾಲಿಗೆ ಕನಿಷ್ಠ ಸೇರ್ಪಡೆಯಾಗಲು ಕಸಬ್ ಇನ್ನೂ ಹಲವು ವರ್ಷಗಳ ಕಾಲ ಕಾಯಬೇಕಾಗುತ್ತದೆ. ಬಹುಶಃ ಇನ್ನೊಂದು 30 ವರ್ಷಗಳ ನಂತರ ಕಸಬ್‌ನನ್ನು ನೇಣಿಗೇರಿಸಬಹುದು ಎಂದು ನಮ್ಮ ಕಾನೂನುಗಳಲ್ಲಿರುವ ಲೋಪದೋಷಗಳನ್ನು ನಾವೇ ಲೇವಡಿ ಮಾಡಬಹುದು.
ದೇಸೀ ಉಗ್ರರ ಬಗ್ಗೆ ಮೃದು ನೀತಿ? ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ಮತ್ತು ಕೇಂದ್ರ ಸರಕಾರವು ದೇಸೀ ಉಗ್ರರ ಬಗ್ಗೆ ಮೃದು ನೀತಿ ಅನುಸರಿಸುತ್ತಿದೆ ಎಂಬ ಆರೋಪಗಳಿವೆ. ಇದನ್ನು ಸರಕಾರಗಳು ಆಗಾಗ್ಗೆ ನಿರಾಕರಿಸುತ್ತಾ ಬಂದಿವೆ.
PR
ಈ ವಿಚಾರ ಪ್ರಸ್ತಾಪ ಮಾಡಲಾಗಿರುವುದು ಲಷ್ಕರ್ ಉಗ್ರರಿಗೆ ಸಹಕಾರ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಉಗ್ರರಾದ ಫಹೀಮ್ ಅನ್ಸಾರಿ ಮತ್ತು ಸಬಾಬುದ್ದೀನ್ ಅಹ್ಮದ್ ಕುರಿತು. ದಾಳಿ ಪಿತೂರಿ ಕುರಿತು ಸಾಕಷ್ಟು ಸಾಕ್ಷ್ಯಗಳು ಸಿಗದ ಹಿನ್ನೆಲೆಯಲ್ಲಿ ಇವರನ್ನು ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿತ್ತು.
ಇದರ ವಿರುದ್ಧ ಮಹಾರಾಷ್ಟ್ರ ಸರಕಾರವು ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.
ಉಣ್ಣಿಕೃಷ್ಣನ್ ಸೈಕಲ್ ರ‌್ಯಾಲಿ... ಹುತಾತ್ಮ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ತಂದೆ ಕೆ. ಉಣ್ಣಿಕೃಷ್ಣನ್ ದೆಹಲಿಯ ಇಂಡಿಯಾ ಗೇಟ್‌ನ ಅಮರ್ ಜವಾನ್ ಜ್ಯೋತಿಯಿಂದ ಆರಂಭಿಸಿರುವ ಸೈಕಲ್ ರ‌್ಯಾಲಿ ಮುಂಬೈಯ ಗೇಟ್ ವೇ ಆಫ್ ಇಂಡಿಯಾದಲ್ಲಿ ಇಂದು ಸಮಾಪ್ತಿಗೊಂಡಿದೆ. ಮುಂಬೈ ದಾಳಿಯಲ್ಲಿ ಹುತಾತ್ಮನಾದ ತನ್ನ ಪುತ್ರನ ನೆನಪಿನಲ್ಲಿ ಉಣ್ಣಿಕೃಷ್ಣನ್ ಈ ಜಾಥಾ ನಡೆಸಿದ್ದಾರೆ.
ದೆಹಲಿಯಿಂದ ಹೊರಟ ಅವರು ಉತ್ತರ ಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ, ಹರ್ಯಾಣ ಮತ್ತು ಮಹಾರಾಷ್ಟ್ರಗಳಲ್ಲಿ ಸಂಚರಿಸಿದ್ದಾರೆ. ಭಿನ್ನ ಪ್ರಾಂತ್ಯ, ಧರ್ಮ ಮತ್ತು ಸಿದ್ಧಾಂತಗಳನ್ನು ಹೊಂದಿರುವ ವ್ಯಕ್ತಿಗಳನ್ನು ನಾನು ಈ ಸಂದರ್ಭದಲ್ಲಿ ಭೇಟಿಯಾಗಿದ್ದೇನೆ. ಎಲ್ಲಾ ಹುತಾತ್ಮರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಭಾರತೀಯರೆಲ್ಲರೂ ಜತೆಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಉಣ್ಣಿಕೃಷ್ಣನ್ ಸೈಕಲ್‌ನಲ್ಲಿ ತೆರಳಿದರೆ, ಅವರ ಪತ್ನಿ ಧನಲಕ್ಷ್ಮಿ ಕಾರಿನಲ್ಲಿ ಹಿಂಬಾಲಿಸುತ್ತಿದ್ದರು. ಅವರು ಸಾಗುವ ದಾರಿಯಲ್ಲಿ ಸಿಕ್ಕ ಹುತಾತ್ಮರ ಮನೆಗಳಿಗೆ ಭೇಟಿ ನೀಡಿ, ದುಃಖವನ್ನು ಹಂಚಿಕೊಳ್ಳಲು ಕುಟುಂಬ ಯತ್ನಿಸಿದೆ.
ಯಾವುದೇ ದಾಳಿ ಎದುರಿಸಲು ಸಿದ್ಧ: ವಾಯುಸೇನೆ ಮುಂಬೈ ದಾಳಿಯ ನಂತರ ಅಂತಹ ಯಾವುದೇ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಭಾರತ ಮಹತ್ತರ ಮುನ್ನಡೆ ಸಾಧಿಸಿದೆ. ಇದು ಸ್ವತಃ ಭಾರತೀಯ ವಾಯು ಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಪಿ.ವಿ. ನಾಯ್ಕ್ ಅವರ ಮಾತಿನಲ್ಲೇ ವ್ಯಕ್ತವಾಗಿದೆ.
ಮುಂಬೈ ದಾಳಿಯಂತಹ ಯಾವುದೇ ದಾಳಿಯನ್ನು ಪುಡಿಗೈಯಲು ವಾಯು ಸೇನೆ ಯಾವತ್ತೂ ಸಿದ್ಧವಿರುತ್ತದೆ. ಅದು ಅಂದೂ ಸಿದ್ಧವಾಗಿತ್ತು, ಮುಂದಕ್ಕೂ ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನಾಯ್ಕ್ ಭರವಸೆ ನೀಡಿದ್ದಾರೆ.
ತನಿಖೆ ಮತ್ತೆ ನಡೆಯಬೇಕು: ಕಸಬ್ ಮುಂಬೈ ದಾಳಿ ಕುರಿತು ನಡೆಸಲಾಗಿರುವ ತನಿಖೆ ಸರಿಯಿಲ್ಲ. ವಿಶೇಷ ನ್ಯಾಯಾಲಯದ ವಿಚಾರಣೆಯಲ್ಲೂ ಅನ್ಯಾಯವಾಗಿದೆ. ಪ್ರಮುಖ ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿಲ್ಲ. ಪುರಾವೆಗಳನ್ನು ಪರಿಗಣಿಸಲಾಗಿಲ್ಲ. ನಿಯಮಗಳನ್ನು ಪಾಲಿಸಲಾಗಿಲ್ಲ. ಹಾಗಿ ಮತ್ತೆ ವಿಚಾರಣೆ ನಡೆಸಬೇಕು ಎಂದು ಕಸಬ್ ಒತ್ತಾಯಿಸಿದ್ದಾನೆ.
ಕಸಬ್ ಪರ ವಾದ ಮಂಡನೆ ಆರಂಭವಾಗಿರುವ (ಗುರುವಾರ) ದಿನ ಆತನ ವಕೀಲ ಅಮೀನ್ ಸೋಲ್ಕರ್ ಈ ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸಿದ್ದಾರೆ. ಬೆಸ್ಟ್ ಬೇಕರಿ ಪ್ರಕರಣವನ್ನು ಮುಂದಿಟ್ಟುಕೊಂಡು ಇಲ್ಲೂ ಮರು ವಿಚಾರಣೆಗೆ ಆದೇಶ ನೀಡಬೇಕು ಎಂದು ಹೈಕೋರ್ಟ್ ಮುಂದೆ ಮನವಿ ಮಾಡಿದ್ದಾರೆ.
ಕಸಬ್ ಸಹಚರರ ದಫನ ಮಾಡಿದ್ದು... ಕಸಬ್ ಜತೆಗಿದ್ದು ಪೊಲೀಸರ ಗುಂಡಿಗೆ ಬಲಿಯಾದ ಒಂಬತ್ತು ಉಗ್ರರ ಕಳೇಬರಗಳನ್ನು ಕೆಲವು ತಿಂಗಳ ಹಿಂದೆಯೇ ನಾಶ ಮಾಡಲಾಗಿತ್ತು. ಆದರೆ ಎಲ್ಲಿ, ಹೇಗೆ ಎಂಬುದು ಇದುವರೆಗೆ ಬಹಿರಂಗವಾಗಿರಲಿಲ್ಲ. ಆದರೆ ಅವರನ್ನು ತಾಲೋಜಾ ಕಾರಾಗೃಹದ ಸಮೀಪ ಹೂತು ಹಾಕಲಾಗಿದೆ ಎನ್ನುವುದೀಗ ತಿಳಿದು ಬಂದಿದೆ.
ಉಗ್ರರ ಶವಗಳನ್ನು ಪಡೆಯಲು ಪಾಕಿಸ್ತಾನ ನಕಾರ ಸೂಚಿಸಿತ್ತು. ದೇಶದ ಮುಸ್ಲಿಂ ಮುಖಂಡರು ಕೂಡ ಧಾರ್ಮಿಕ ವಿಧಿ ವಿಧಾನಗಳಂತೆ ದಫನ ಮಾಡಲು ನಿರಾಕರಿಸಿದ್ದರು. ಕೊನೆಗೆ ಸರಕಾರವೇ ಕಳೇಬರಗಳನ್ನು ಹೂತು ಹಾಕಿದೆ ಎಂದು ವರದಿಗಳು ಹೇಳಿವೆ.