ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಕಸಬ್‌ಗೆ ಗಲ್ಲು: ತೀರ್ಪು ಮಾತ್ರ, ಶಿಕ್ಷೆ ಯಾವಾಗ? (Death Sentence | Ajmal Kasab | Mumbai Attack | Pakistani Terror | 26-11)
Bookmark and Share Feedback Print
 
ಅವಿನಾಶ್ ಬಿ.
ಮುಗ್ಧರನ್ನು ಎಗ್ಗಿಲ್ಲದೆ ಗುಂಡು ಹಾರಿಸಿ ಕೊಂದಿದ್ದ ಮಹಮದ್ ಅಜ್ಮಲ್ ಅಮೀರ್ ಕಸಬ್ ಎಂಬ ಮಹಾ ಪಾತಕಿ ಪಾಕಿ 'ಕ್ರಿಮಿ'ನಲ್‌ಗೆ, ಮತ್ತು ಎಡಬಿಡಂಗಿಗೆ ಗಲ್ಲು ಶಿಕ್ಷೆ ಅಂತ ಗುರುವಾರ ಘೋಷಿಸಲಾಗಿದೆ. ಇದು ನಿರೀಕ್ಷಿತವೇ.
Ajmal Kasab
PTI
ಇದರ ಬಗ್ಗೆ ಅಷ್ಟೊಂದು ಹೈಪ್ ಬೇಕಿರಲಿಲ್ಲ, ಮತ್ತು ನಮಗೇ ಜಯವಾಯಿತು ಎಂದೋ, ಮುಂಬೈಯ 26/11 ದಾಳಿಯಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಲಭಿಸಿತೆಂದೋ, ಅಥವಾ ನೆರೆಯ "ಪಾಕಿಸ್ತಾನಕ್ಕೊಂದು ಪಾಠ ಕಲಿಸಿದೆವು" ಎಂದೋ, ಇಲ್ಲವೇ "ಉಗ್ರಗಾಮಿಗಳಿಗೆ ಇದು ಸ್ಪಷ್ಟ ಸಂದೇಶ" ಎಂದೆಲ್ಲಾ ರಾಜಕೀಯವಾಗಿ ಬೆನ್ನು ತಟ್ಟಿಕೊಳ್ಳಬೇಕಾಗಿಲ್ಲ. ವಿಷಯವೇನೂ ಅಷ್ಟು ಸುಲಭವಾಗಿ ಇತ್ಯರ್ಥಗೊಳ್ಳುವಂಥದ್ದೇನಲ್ಲ.


ಹೌದು, ಇದು ಯಾವುದೇ ಅಪರಾಧಿಗೆ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ದೊರೆಯಬಹುದಾದ ಗರಿಷ್ಠ ಮತ್ತು ಕ್ರೂರಾತಿಕೂರ ಶಿಕ್ಷೆ, ಆದರೆ ಇದೇ ಕೊನೆಯಲ್ಲ ಎಂಬುದನ್ನು ನಾವು ಗಮನಿಸಬೇಕು. ಆದರೆ ಇದಕ್ಕೆ ನಾವು ಸಿದ್ಧರಾಗಿದ್ದೇವೆಯೇ? ಈ ಶಿಕ್ಷೆ ಯಾವಾಗ ಅನುಷ್ಠಾನವಾಗುತ್ತದೆ? ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಜತೆ ಜತೆಗೇ, ಕಳೆದ ಯಾವುದೇ ಗಲ್ಲು ಶಿಕ್ಷೆ ವಿಧಿಸಲಾದ ಪ್ರಕರಣಗಳತ್ತ ಹಿನ್ನೋಟ ಹರಿಸಿದರೆ ಕಾಡುವ ಆತಂಕವೂ ಹೌದು.

ಯಾಕೆಂದರೆ ನಮ್ಮಲ್ಲಿ 2004ರಿಂದೀಚೆಗೆ ಇದುವರೆಗೆ ಯಾವುದೇ ಗಲ್ಲು ಶಿಕ್ಷೆ ಜಾರಿಯಾಗಿಲ್ಲ ಎಂಬ ಅಂಶ ಒಂದೆಡೆಯಾದರೆ, ಈಗಾಗಲೇ ಗಲ್ಲು ಶಿಕ್ಷೆಗಾಗಿ ಸರದಿಯಲ್ಲಿ ಕಾಯುತ್ತಿರುವ ಘೋಷಿತ ಅಪರಾಧಿಗಳ ಸಂಖ್ಯೆ 51, ಈಗಷ್ಟೇ ಕಸಬ್ ಹೊಸ ಸೇರ್ಪಡೆ ಎಂಬ ಅಂಶ ಇನ್ನೊಂದೆಡೆ. ಆದರೆ, ನಮ್ಮ ಕಾನೂನಿನಡಿಯಲ್ಲಿ ಸರದಿ ತಪ್ಪಿಸುವ, ಅಥವಾ ಈ ತೀರ್ಮಾನಕ್ಕೆ ಒಪ್ಪಿಗೆ ನೀಡಬೇಕಾಗಿರುವ ರಾಷ್ಟ್ರಪತಿ ಪದವಿಯ ಮೇಲೆ ಒತ್ತಡ ಹೇರುವ ಅವಕಾಶಗಳು ಇಲ್ಲವೇ ಇಲ್ಲ. ಇದು ದೇಶಕ್ಕೇ ಗಂಡಾಂತರ ತಂದಿರುವ ಮುಂಬೈ ದಾಳಿಯಾಗಲೀ, ದೇಶದ ಅಧಿಕಾರ ಕೇಂದ್ರ ಸಂಸತ್ತಿನ ಮೇಲೆಯೇ ದಾಳಿ ಮಾಡಿದವನಾಗಲೀ, ಅಥವಾ ಒಂದು ಕೊಲೆ ಮಾಡಿದ ಆರೋಪಿಯಾಗಲಿ, ಯಾರಿಗೂ ಅನ್ವಯಿಸಬಹುದಾದ ವಾಸ್ತವ. ಹೀಗಾಗಿ ಈ ಪಾಕಿ ಪಾತಕಿಯ ಸರದಿ ಬರುವುದು ಯಾವಾಗ ಎಂಬುದು ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿಯೇ ಕುದಿಯುತ್ತಿರುವ ಅಂಶ.

ಯಃಕಶ್ಚಿತ್ ಉಗ್ರನ ರಕ್ಷಣೆಗೆ ಕೋಟಿ ಕೋಟಿ
ಒಂದು ಕಾಲದಲ್ಲಿ ಪಾಕಿಸ್ತಾನದ ಫರೀದ್‌ಕೋಟ್‌ನಲ್ಲಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿದ್ದ ಈ ಕ್ರಿಮಿ ಕಸಬ್, ಹಂತ ಹಂತವಾಗಿ ಅಪರಾಧಲೋಕದಲ್ಲಿ ಬಡ್ತಿ ಪಡೆದು, ದುರಾಸೆ ಮತ್ತಷ್ಟು ಹೆಚ್ಚಿ, ಲಷ್ಕರ್-ಇ-ತೋಯಿಬಾದಿಂದ ಸೆಳೆಯಲ್ಪಟ್ಟಾಗ ಅವನ 'ಅದೃಷ್ಟ' ಖುಲಾಯಿಸಿತ್ತು. ಲಭ್ಯ ಮಾಹಿತಿ ಪ್ರಕಾರ ಕಸಬ್ 'ಕಸಾಯಿ' ಎಂಬ ಜಾತಿಗೆ ಸೇರಿದವನು. ಜಾತಿಗೆ ತಕ್ಕ ಬುದ್ಧಿ! ಇದೀಗ ಭಾರತದಲ್ಲಿ ಸೆರೆಸಿಕ್ಕ ನಂತರವಂತೂ ಮಾಡಲೇನೂ ಕೆಲಸವಿಲ್ಲದೆ ತಿಂದುಂಡು ಬಿದ್ದುಕೊಂಡಿರುವ ಪಾಡು. ಅವನನ್ನು ಸಾಕಲು ಮತ್ತು ಅವನಿಗೆ ರಕ್ಷಣೆ ಕೊಡಲು, ದಿನಕ್ಕೆ 2 ಲಕ್ಷ ರೂಪಾಯಿಯಂತೆ, ಕೋಟ್ಯಂತರ ರೂಪಾಯಿ ಭಾರತೀಯರ ಹಣ ವ್ಯಯವಾಗುತ್ತಿದೆ. ಇನ್ನೂ ಇಟ್ಟುಕೊಂಡರೆ, ಮತ್ತಷ್ಟು ಕೋಟಿ ಕೋಟಿ ಖರ್ಚು.

ಕಸಬ್ ವಿಚಾರಣೆ, ತೀರ್ಪು
** 18 ತಿಂಗಳು ವಿಚಾರಣೆ ** ಭಾರತದ ಮೇಲೆ ಯುದ್ಧ ಸಾರಿದ ಆರೋಪ ** 166 ಮಂದಿ ಹತ್ಯೆಗೆ ಪರೋಕ್ಷ ಕಾರಣ ** 271 ದಿನ ವಿಚಾರಣೆ ** 658 ಸಾಕ್ಷಿಗಳು ** 30 ಪ್ರತ್ಯಕ್ಷ ಸಾಕ್ಷಿಗಳು ** 86 ಆರೋಪಗಳು ** 4 ಕೇಸುಗಳಲ್ಲಿ ಮರಣದಂಡನೆ ** 5 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ
ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ, ಕಸಬ್‌ಗೆ ಶಿಕ್ಷೆ ಯಾವಾಗ? ಆದಷ್ಟು ಶೀಘ್ರ ಕೊಡಿಸಬಾರದೇಕೆ? ಇದು ಕೋಟ್ಯಂತರ ನಿಜ-ಭಾರತೀಯರ ಆಗ್ರಹವೂ ಹೌದು.

ಗಲ್ಲು ಶಿಕ್ಷೆಯ ಹಾದಿ ಸುದೀರ್
ಆದರೆ, ನೆಲದ ಕಾನೂನಿನ ಪ್ರಕಾರ, ಇನ್ನು ಕಸಬ್‌ನ ಈ ಶಿಕ್ಷೆಗೆ ಹೈಕೋರ್ಟ್ ಮಾನ್ಯತೆ ನೀಡಬೇಕು, ಅಲ್ಲಿ ಅವನು ಮೇಲ್ಮನವಿ ಸಲ್ಲಿಸುವುದು, ಅಲ್ಲಿಯೂ ಸಾಬೀತಾದರೆ, ಸುಪ್ರೀಂ ಕೋರ್ಟಿದೆ. ಅಲ್ಲಿಯೂ ವಿಚಾರಣೆಯಾಗಿ, ಶಿಕ್ಷೆ ದೃಢಪಟ್ಟರೆ, ಕೆಲವು ಕಾನೂನು ಉಲ್ಲೇಖಗಳನ್ನು ಎತ್ತಿಕೊಂಡು, ಮೂರು ಬಾರಿ ಮರುಪರಿಶೀಲನೆ ಅರ್ಜಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಬಹುದು. ನಂತರವೂ ಶಿಕ್ಷೆ ದೃಢಪಟ್ಟರೆ ಆತನ ಕುಟುಂಬಿಕರು ಕ್ಷಮಾದಾನ ಅರ್ಜಿಯನ್ನು ಕೇಂದ್ರಕ್ಕೆ ಸಲ್ಲಿಸಬಹುದು. ಕೇಂದ್ರವು ಈ ಅರ್ಜಿಯನ್ನು ರಾಷ್ಟ್ರಪತಿಗೆ ಸಲ್ಲಿಸುತ್ತದೆ. ನಂತರದ ಹಂತವಾಗಿ, ರಾಷ್ಟ್ರಪತಿಯವರು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದಾರೆ. ಗೃಹ ಸಚಿವಾಲಯವು ಅಪರಾಧ ನಡೆದ ರಾಜ್ಯ ಸರಕಾರದಿಂದ ಈ ಕುರಿತು ಅಭಿಪ್ರಾಯ ಕೇಳುತ್ತದೆ. ಅದರ ಅಭಿಪ್ರಾಯ ಸಂಗ್ರಹಿಸಿ, ತನ್ನ ಷರಾವನ್ನೂ ಬರೆದು ಕೇಂದ್ರವು ಮತ್ತೆ ರಾಷ್ಟ್ರಪತಿಗೆ ಕಳುಹಿಸಬೇಕು. ರಾಷ್ಟ್ರಪತಿ ತಮ್ಮ ಅಂತಿಮ ನಿರ್ಣಯ ಕೈಗೊಳ್ಳುತ್ತಾರೆ. ಆ ಬಳಿಕವಷ್ಟೇ ಮರಣದಂಡನೆಯೋ, ಕ್ಷಮಾದಾನವೋ ಎಂಬುದು ನಿರ್ಧಾರವಾಗುತ್ತದೆ.

ಕಸಬ್ ಸರದಿಯೂ ದೊಡ್ಡದ
ನೆನಪಿಡಿ, ಈಗಾಗಲೇ ಈ ರೀತಿಯಾಗಿ ರಾಷ್ಟ್ರಪತಿಗೆ ಕೇಂದ್ರ ಸರಕಾರವು ಹಸ್ತಾಂತರಿಸಿರುವ ಕ್ಷಮಾದಾನ ಅರ್ಜಿಗಳ ಸಂಖ್ಯೆ 29. ಅಂದರೆ ಇತ್ತೀಚೆಗೆ ಗೃಹ ಸಚಿವ ಚಿದಂಬರಂ ಹೇಳಿಕೆ ನೀಡಿದಂತೆ ವರ್ಷಕ್ಕೆ ನಾಲ್ಕರಂತೆ ಅರ್ಜಿಗಳನ್ನು ರಾಷ್ಟ್ರಪತಿಗೆ ರವಾನಿಸಲಾಗುತ್ತದೆ. ಹಾಗಿದ್ದರೆ, ಈ ಮೇಲಿನ ಎಲ್ಲ ಹಂತಗಳನ್ನು ದಾಟಿ ಕಸಬ್ ಸರದಿ ಬರಲು ಸಾಕಷ್ಟು ಸಮಯ, ದಶಕವೂ ಆದೀತು! ಇದುವರೆಗೆ ರಾಷ್ಟ್ರಪತಿಗೆ ಹೋದ ಅರ್ಜಿಗಳಲ್ಲಿ ಸಂಸತ್ ಮೇಲಿನ ದಾಳಿ ಪ್ರಕರಣದ ಆರೋಪಿ ಅಪ್ಜಲ್ ಗುರು ಮತ್ತು ಇನ್ನೊಬ್ಬ ಬಂಡು ತಿಡಕೆ ಎಂಬಾತನ ಅರ್ಜಿಗಳನ್ನು ರಾಷ್ಟ್ರಪತಿಯವರು ಗೃಹ ಸಚಿವಾಲಯಕ್ಕೆ ಕಳುಹಿಸಿ ಅಭಿಪ್ರಾಯ ಕೇಳಿದ್ದಾರೆ. ಅಲ್ಲಿಂದ ಆಯಾ ರಾಜ್ಯ ಸರಕಾರಗಳೊಂದಿಗೆ ಮಾತುಕತೆ ನಡೆಸಿ, ಗೃಹ ಸಚಿವಾಲಯದ ಷರಾ ಬಿದ್ದು, ಮರಳಿ ರಾಷ್ಟ್ರಪತಿ ಕಚೇರಿಗೆ ಹೋಗುತ್ತದೆ ಈ ಅರ್ಜಿ.

ಸ್ವತಂತ್ರ ಭಾರತದಲ್ಲಿ 55 ಗಲ್ಲು ಶಿಕ್ಷ
ಭಾರತದಲ್ಲಿ ಕೊನೆಯ ಬಾರಿ ಗಲ್ಲು ಶಿಕ್ಷೆಯಾದದ್ದು 2004ರಲ್ಲಿ. ಧನಂಜಯ ಚಟರ್ಜಿ (14ರ ಹುಡುಗಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಕ್ಕೆ) ಸಾವಿನ ಪಾಶಕ್ಕೆ ತಲೆಯೊಡ್ಡಬೇಕಾಗಿತ್ತು. ಇದಕ್ಕೆ ಮೊದಲು 1995ರಲ್ಲಿ ಆಟೋ ಶಂಕರನಿಗೆ ಮರಣದಂಡನೆಯಾಗಿತ್ತು. ಒಂದು ಮಾಹಿತಿ ಪ್ರಕಾರ, ದೇಶದಲ್ಲಿ ಈಗ 309 ಮಂದಿ ಮರಣದಂಡನೆಗೆ ಗುರಿಯಾಗಿ ವಿಭಿನ್ನ ಕೋರ್ಟುಗಳಲ್ಲಿ ಮೇಲ್ಮನವಿ ಹಂತದಲ್ಲೋ, ರಾಷ್ಟ್ರಪತಿ ಕಚೇರಿ, ಗೃಹ ಸಚಿವಾಲಯ, ರಾಜ್ಯ ಸರಕಾರಗಳಲ್ಲೋ ಅರ್ಜಿಯ ವಿಲೇವಾರಿ ನಿರೀಕ್ಷೆಯಲ್ಲಿದ್ದಾರೆ. ಸ್ವತಂತ್ರ ಭಾರತದಲ್ಲಿ, ಕಳೆದ ಆರು ದಶಕಗಳಲ್ಲಿ ಇದುವರೆಗೆ ಮರಣ ದಂಡನೆಯಾಗಿದ್ದು 55 ಮಂದಿಗೆ.
ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಪ್ರಕಾರ, ಈ ದಶಕದಲ್ಲಿ ಭಾರತದಲ್ಲಿ, 2007ರಲ್ಲಿ ಕನಿಷ್ಠ 100 ಮಂದಿ, 2006ರಲ್ಲಿ 40, 2005ರಲ್ಲಿ 77, 2002ರಲ್ಲಿ 23 ಮತ್ತು 2001ರಲ್ಲಿ 33 ಮಂದಿಗೆ ಮರಣ ದಂಡನೆ ತೀರ್ಪು ನೀಡಲಾಗಿದೆ.

ಅಫ್ಜಲ್ ಕೇಸಿನ ಡೇಟ್‌ಲೈನ
2001ರ ಡಿಸೆಂಬರ್ 13ರ ಸಂಸತ್ ಮೇಲೆ ಭಯೋತ್ಪಾದಕರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಫ್ಜಲ್ ಗುರುವಿನ ಕೇಸನ್ನೇ ತೆಗೆದುಕೊಳ್ಳಿ. ಅವನಿಗೆ ವಿಚಾರಣಾ ನ್ಯಾಯಾಲಯ ಗಲ್ಲು ಶಿಕ್ಷೆ ಕೊಟ್ಟದ್ದು 2002ರ ಡಿಸೆಂಬರ್ 18ರಂದು. ಅದನ್ನು ಹೈಕೋರ್ಟು ಎತ್ತಿ ಹಿಡಿದದ್ದು 2003 ಅಕ್ಟೋಬರ್ 29ರಂದು. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದಾಗ ಶಿಕ್ಷೆಯನ್ನು ಸುಪ್ರೀಂ ಕೋರ್ಟು ಮಾನ್ಯ ಮಾಡಿದ್ದು 2005ರ ಆಗಸ್ಟ್ 4ರಂದು. 2006ರ ಜನವರಿ 4ರಂದು ಅಫ್ಜಲ್ ಗುರು ಪರವಾಗಿ ಕ್ಷಮಾದಾನ ಅರ್ಜಿ ಸಲ್ಲಿಸಲಾಗಿತ್ತು.

ಇದೀಗ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಲ್ಲಿ ಬಂಧಿತರಾಗಿರುವ ಮೂವರ ಅರ್ಜಿಗಳು, ಕರ್ನಾಟಕದ ಶ್ರದ್ಧಾನಂದ, ಮಂಗಳೂರಿನ ಕುಟುಂಬವನ್ನು ಕೊಲೆಗೈದ ಪ್ರವೀಣ್ ಕುಮಾರ್, ವೀರಪ್ಪನ್ ಸಹಚರರು ಸೇರಿದಂತೆ ರಾಷ್ಟ್ರಪತಿ ಕಚೇರಿಯಲ್ಲಿ ಮತ್ತು ಗೃಹ ಸಚಿವಾಲಯದಲ್ಲಿ ವಿಲೇವಾರಿಗೆ ಬಾಕಿ ಇರುವ ಕ್ಷಮಾದಾನ ಅರ್ಜಿಗಳ ಸಂಖ್ಯೆ ಪರಿಗಣಿಸಿದರೆ, ಅದಕ್ಕೂ ಮೊದಲಿನ ಹಂತಗಳನ್ನು ದಾಟಿ ಕಸಬ್ ಸರದಿ ಬರುವುದು ಯಾವಾಗ?

ಉಗ್ರರನ್ನು ಇಟ್ಟುಕೊಳ್ಳುವುದೇ ದೊಡ್ಡ ತಲೆನೋವ
ಅದಿರಲಿ, ಟೈವ್ ಟಿವಿ ಕ್ಯಾಮರಾಗಳಲ್ಲಿ ಕೋಟ್ಯಂತರ ಜನರು ನೋಡುತ್ತಿರುವಂತೆಯೇ ಜನರನ್ನು ಕೊಂದಿದ್ದ ಆರೋಪಿಯೊಬ್ಬ ನಮ್ಮ ಕೈಗೆ ಸೆರೆ ಸಿಕ್ಕಿದ್ದರೂ, ತ್ವರಿತವಾಗಿ ನ್ಯಾಯಾನ್ಯಾಯ ವಿಶ್ಲೇಷಣೆಯಾಗುತ್ತಿಲ್ಲ ಎಂದಾದರೆ, ಇನ್ನು ಮುಂಬೈ ದಾಳಿ ರೂವಾರಿಗಳೆಂದು ಜಗತ್ತೇ ಹೇಳುತ್ತಿರುವ ಡೇವಿಡ್ ಹೆಡ್ಲಿಯನ್ನು ನಮಗೊಪ್ಪಿಸಿ, ಪಾಕಿಸ್ತಾನದ ಹಫೀಜ್ ಸಯೀದ್‌ನನ್ನು ನಮಗೆ ಕೊಡಿ, ಲಖ್ವಿಯನ್ನು ಹಸ್ತಾಂತರಿಸಿ, ದಾವೂದ್‌ನನ್ನು ಕೊಡಿ ಎಂದೆಲ್ಲಾ ಕೇಳುವುದರಲ್ಲಿ ಏನಾದರೂ ಪ್ರಯೋಜನವಿದೆಯೇ ಎಂಬುದು ಇಲ್ಲಿ ಕಾಡುವ ಪ್ರಶ್ನೆ. ಈ ಭಯಾನಕ ಉಗ್ರಗಾಮಿಗಳನ್ನೆಲ್ಲಾ ತೆಗೆದುಕೊಂಡು, ಇಟ್ಟುಕೊಂಡು ನಾವು ಮಾಡುವುದಾದರೂ ಏನನ್ನು? ಜೈಲಿನಲ್ಲಿ ಅವರ ಕಾವಲಿಗೆ ಮತ್ತೊಂದಿಷ್ಟು ಕೋಟಿ ಕೋಟಿ ವೆಚ್ಚ...

ಕಾನೂನು ಬದಲಾಯಿಸುತ್ತಿಲ್ಲವೇಕೆ?
ಹೀಗಾಗಬಾರದು. ದೇಶವನ್ನೇ ಧ್ವಂಸ ಮಾಡುವಂತಹಾ ಈ ಭಯೋತ್ಪಾದನಾ ಕೃತ್ಯಗಳಿಗೆ ತ್ವರಿತ ನ್ಯಾಯದಾನ ವ್ಯವಸ್ಥೆ ಬೇಕು. ಈ ಕುರಿತು ಕಠಿಣಾತಿಕಠಿಣ ಕಾನೂನು ಬೇಕು. ಈಗಿರುವ ವ್ಯವಸ್ಥೆಗೆ, ಕಾನೂನಿಗೆ ತಿದ್ದುಪಡಿ ಮಾಡಿದರೂ ಸರಿಯೇ. ಒಂದು ದೇಶದ ಭದ್ರತೆಗೇ ಆತಂಕವೊಡ್ಡುವವರ ಬಗ್ಗೆ, ಮಾರಣಹೋಮ ಮಾಡುವ ಭಯೋತ್ಪಾದನಾ ಪಿಡುಗಿನ ಬಗ್ಗೆ, ನಾವೇಕೆ ಅದೇ ಹಳೇ ಕಾನೂನುಗಳೆಂಬ ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬೀಳಬೇಕು? ತಿದ್ದುಪಡಿಯಾಗದಿದ್ದರೆ, ಸೈಯದ್ ಸಬಾವುದ್ದೀನ್, ಫಾಹೀಂ ಅನ್ಸಾರಿ ಮುಂತಾದವರು "ಸಾಕ್ಷಿಗಳ ಕೊರತೆಯಿಂದ" ಬಿಡುಗಡೆಯಾಗುತ್ತಾರೆ!

ಅದಿರಲಿ, ಈಗ ಮರಣ ದಂಡನೆ ವಿಧಿಸಿದೆ ಎಂದಾದರೆ, ಇದರಿಂದ ಮತ್ತೊಬ್ಬ ಭಯೋತ್ಪಾದಕನೇನಾದರೂ ಪಾಠ ಕಲಿಯುತ್ತಾನೆಯೇ? ಎಂಬುದೂ ಯೋಚಿಸಬೇಕಾದ ಸಂಗತಿ. ಈ ರೀತಿಯಾದರೆ ದೇಶವನ್ನೇ ನುಂಗಿಹಾಕುತ್ತಿರುವ, ದೇಶದ ಸಾಮರಸ್ಯ, ಶಾಂತಿಯನ್ನು ಕದಡುತ್ತಿರುವ ಉಗ್ರವಾದವೆಂಬ ಪಿಡುಗನ್ನು ಹತ್ತಿಕ್ಕುವುದಾದರೂ ಹೇಗೆ? ನಾವು ಜನ ಸಾಮಾನ್ಯರು ಭಯಮುಕ್ತವಾಗಿ, ನೆಮ್ಮದಿಯಿಂದ ಜೀವಿಸುವುದಾದರೂ ಹೇಗೆ? ಅದಕ್ಕೇ ಹೇಳಿದ್ದು ಕಾನೂನು ತಿದ್ದುಪಡಿಯಾಗಬೇಕು ಅಂತ.

ಕಾನೂನು ನಿಯಾಮಕರು ಎನ್ನಲಾಗುವ ರಾಜಕಾರಣಿಗಳು, ಉಗ್ರವಾದದ ವಿರುದ್ಧ ಅತ್ಯುಗ್ರವಾದ ಕಾನೂನು ರೂಪಿಸುವ ಕುರಿತು ಬದ್ಧತೆ ತೋರಿಸದೇ ಹೋದರೆ, ಮುಂದಿನ ಕಾಲ ಕಷ್ಟ ಕಷ್ಟ. ನಮ್ಮದೇ ದೇಶದಲ್ಲಿ ನಮ್ಮ ರಕ್ಷಣೆಗಾಗಿ ಕಾನೂನು ಬದಲಾಯಿಸಲು ಯಾರನ್ನು ಕೇಳಬೇಕು? ದೇಶ ರಕ್ಷಿಸುವ ಬದ್ಧತೆ ನಮಗೆ ಬೇಕಷ್ಟೆ. ಅದರ ಬದಲು, ನಾವು "ಇದು ದೇಶವಿರೋಧಿ ಶಕ್ತಿಗಳಿಗೆ ನೀಡಿದ ಪ್ರಬಲ ಸಂದೇಶ" ಅಥವಾ "ಪಾಕಿಸ್ತಾನಕ್ಕೆ ಕಟುವಾದ ಎಚ್ಚರಿಕೆ" ಎಂದುಕೊಂಡು ಬೆನ್ನು ತಟ್ಟಿಕೊಳ್ಳುತ್ತೇವೆ!

ಭಯೋತ್ಪಾದಕರ ವಿರುದ್ಧ ಹೋರಾಡಿ ಮಡಿದ ಮತ್ತು ಅಂಗಾಂಗ ಕಳೆದುಕೊಂಡ ಧೀರ ಪೊಲೀಸ್ ಸೇನಾನಿಗಳ ಕುಟುಂಬಗಳಿಗೆ ಪರಿಹಾರವಿನ್ನೂ ದೊರೆತಿಲ್ಲ ಎಂಬುದನ್ನು ಕೇಳಿದ್ದೇವೆ. ಪಾರ್ಲಿಮೆಂಟ್ ದಾಳಿ ಪ್ರಕರಣದಲ್ಲಿ ಮಡಿದವರ, ಗಾಯಗೊಂಡವರ ಕುಟುಂಬವು ಪ್ರಧಾನಿಯನ್ನೇ ಭೇಟಿ ಮಾಡಿ ತಮ್ಮ ಪಾಡು ಹೇಳಿಕೊಂಡಿದ್ದನ್ನು, ಅಫ್ಜಲ್‌ಗೆ ಗಲ್ಲು ಶಿಕ್ಷೆ ಜಾರಿಗೊಳಿಸಿ ಅಂತ ಗೋಗರೆದದ್ದನ್ನು ಕೇಳಿದ್ದೇವೆ. ಈ ವೀರ ಯೋಧರ ಬಗ್ಗೆ ನಿರ್ಲಕ್ಷ್ಯ, ಬಂಧಿತ ಉಗ್ರರಿಗೆ ಸಕಲ ರಕ್ಷೆ! ಇಲ್ಲ, ಇದು ಬದಲಾಗಬೇಕು, ಬದಲಾಗಲೇ ಬೇಕು! ಏನಂತೀರಿ?

ಮಟ್ಯಾಷ್ : ಎಸ್ಎಂಎಸ್ ಹರಿದಾಡುತ್ತಿದ್ದದ್ದು ಹೀಗೆ... ಕಸಬ್ ರಿಲೀಸ್ ಮಾಡಿ... ಮುಂಬೈ ಛತ್ರಪತಿ ಶಿವಾಜಿ ಟರ್ಮಿನಸ್ (ಸಿಎಸ್‌ಟಿ)ಯಲ್ಲಿ ಬಿಟ್ಟು ಬಿಡಿ... ನಂತರ ಜನರೇ ನೋಡಿಕೊಳ್ತಾರೆ...
ಸಂಬಂಧಿತ ಮಾಹಿತಿ ಹುಡುಕಿ