ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಆನ್‌ಲೈನ್ ಸಮೀಕ್ಷೆ ಫಲಿತಾಂಶ: ರಾಹುಲ್, ಹೆಗ್ಡೆ ಅಗ್ರರು (Webdunia Online Survey 2009 | Result 2009 | Rahul Gandhi | Santosh Hegde)
Bookmark and Share Feedback Print
 
ಭಾರತೀಯ ರಾಜಕಾರಣದ ಯುವ ನೇತಾರ, ನೆಹರೂ ಗಾಂಧಿ ಪರಿವಾರದ ಉತ್ತರಾಧಿಕಾರಿ ರಾಹುಲ್ ಗಾಂಧಿ ಅವರು ಯುವ ಹೃದಯಗಳನ್ನು ಆಕರ್ಷಿಸಿದ್ದಾರೆಂಬುದು ನಿರ್ವಿವಾದ. ಜನಪ್ರಿಯತೆಯ ಓಟದಲ್ಲಿ ರಾಹುಲ್ ಅವರು ಬಾಲಿವುಡ್ ಮತ್ತು ಕ್ರಿಕೆಟ್ ತಾರೆಯರನ್ನೂ ಹಿಂದಿಕ್ಕಿದ್ದರೆ, ರಾಜ್ಯ ಮಟ್ಟದಲ್ಲಿ ಲೋಕಾಯುಕ್ತ ಸಂತೋಷ್ ಹೆಗ್ಡೆಯವರಿಗೆ ಓದುಗರು ಬೆಂಬಲಿಸಿದ್ದಾರೆ. ಡಿಸೆಂಬರ್ ತಿಂಗಳಾರಂಭದಿಂದ ಜನವರಿ 10ರವರೆಗೆ ಈ ಸಮೀಕ್ಷೆಯನ್ನು ನಡೆಸಲಾಗಿತ್ತು.

ದೇಶದಲ್ಲೇ ಅತಿದೊಡ್ಡದು ಎನ್ನಲಾಗುತ್ತಿರುವ ಆನ್‌ಲೈನ್ ಸಮೀಕ್ಷೆಯಲ್ಲಿ ಈ ರೀತಿ ಫಲಿತಾಂಶ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವೆಬ್‌ದುನಿಯಾ ಅಧ್ಯಕ್ಷರೂ, ಮುಖ್ಯ ಕಾರ್ಯಾಚರಣಾ ಅಧಿಕಾರಿಯೂ (ಸಿಒಒ) ಆಗಿರುವ ಪಂಕಜ್ ಜೈನ್ ಅವರು, ಒಟ್ಟು ಹತ್ತು ವಿಭಿನ್ನ ಪ್ರಶ್ನೆಗಳಲ್ಲಿ ದೇಶ ವಿದೇಶದ ಖ್ಯಾತನಾಮರನ್ನು ಆರಿಸುವ ಅವಕಾಶ ನೀಡಲಾಗಿತ್ತು ಎಂದಿದ್ದಾರೆ.

ಒಂಭತ್ತು ಭಾರತೀಯ ಭಾಷೆಗಳಾದ, ಕನ್ನಡ, ಹಿಂದಿ, ಮರಾಠಿ, ಗುಜರಾತಿ, ಪಂಜಾಬಿ, ಬಂಗಾಳಿ, ತಮಿಳು, ತೆಲುಗು ಮತ್ತು ಮಲಯಾಳಂಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಫಲಿತಾಂಶಗಳತ್ತ ಗಮನ ಹರಿಸಿದರೆ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮರಳಿ ಸರ್ವಾಧಿಕ ಮತಗಳನ್ನು ಪಡೆದು, ವಿಶ್ವದ ಬಹುಚರ್ಚಿತ ವ್ಯಕ್ತಿಯಾಗಿ ಉಳಿದಿದ್ದಾರೆ. ಅದೇ ರೀತಿ ನರೇಂದ್ರ ಮೋದಿ ಅವರು ಜನಪ್ರಿಯ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ. ಸೋನಿಯಾ ಗಾಂಧಿ ಅವರು ದೇಶದ ಜನಪ್ರಿಯ ಮಹಿಳೆಯಾಗಿ ಮೂಡಿಬಂದರೆ, ಐಶ್ವರ್ಯಾ ರೈ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಅವರು ಅನುಕ್ರಮವಾಗಿ ಜನಪ್ರಿಯ ಬಾಲಿವುಡ್ ನಟಿ, ನಟರಾಗಿ ಗುರುತಿಸಲ್ಪಟ್ಟಿದ್ದಾರೆ ಎಂದು ಪಂಕಜ್ ಜೈನ್ ವಿವರಿಸಿದ್ದಾರೆ.

ಯುವ ಹೃದಯಗಳ ನೇತಾರ: ಬಡವರ, ದಲಿತರ ಮನೆಗಳಲ್ಲಿ ವಾಸಿಸುತ್ತಾ ಸುದ್ದಿ ಮಾಡಿದ್ದ ಯುವ ಮುಖಂಡ ರಾಹುಲ್ ಗಾಂಧಿ ಅವರು ತರುಣ ಜನಾಂಗದ ಇಷ್ಟದ ವ್ಯಕ್ತಿಯಾಗಿ ಮೂಡಿದ್ದಾರೆ. ಇಂಟರ್ನೆಟ್ ಬಳಸುತ್ತಿರುವವರಲ್ಲಿ ಬಹುತೇಕ ಅಂದರೆ ಶೇ.65ರಷ್ಟು ಮಂದಿ ಕೂಡ ಯುವ ಜನಾಂಗವೇ ಎಂಬುದು ಉಲ್ಲೇಖನೀಯ ಅಂಶ. ಭಾರತದ ಅತ್ಯಂತ ಜನಮೆಚ್ಚಿದ ವ್ಯಕ್ತಿಯಾಗಿ ಮೂಡಿಬಂದಿರುವ ರಾಹುಲ್ ಗಾಂಧಿ ಜನಪ್ರಿಯತೆಯ ಓಟದಲ್ಲಿ, ಅಮಿತಾಭ್ ಬಚ್ಚನ್. ಮಹೇಂದ್ರ ಸಿಂಗ್ ಧೋನಿ ಮತ್ತು ಸಚಿನ್ ತೆಂಡುಲ್ಕರ್ ಅವರನ್ನೂ ಮೀರಿಸಿದ್ದಾರೆ ಎಂದು ಈ ಫಲಿತಾಂಶಗಳು ಹೇಳುತ್ತಿವೆ.

ಶೇ.29.11 ಮತಗಳನ್ನು ರಾಹುಲ್ ಪಡೆದಿದ್ದರೆ, ಅಮಿತಾಭ್ (25.11%), ಧೋನಿ (17.81%) ಮತ್ತು ಸಚಿನ್ ತೆಂಡುಲ್ಕರ್ (12.27%) ಅನುಕ್ರಮವಾಗಿ ಎರಡನೇ, ಮೀರನೇ ಮತ್ತು ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಭಾರತೀಯರಿಗೆ ವಿಶಿಷ್ಟ ಗುರುತಿನ ಸಂಖ್ಯೆ (ಯುನಿಕ್ ಐಡಿ) ನೀಡಲು ಹೊರಟಿರುವ ಬೆಂಗಳೂರಿನ ಐಟಿ ದೊರೆ ನಂದನ್ ನೀಲೇಕಣಿ ಅವರು ಈ ಪಟ್ಟಿಯಲ್ಲಿ ಕೊನೆಯಲ್ಲಿದ್ದಾರೆ.

ವಿಶ್ವದ ಜನಪ್ರಿಯ ವ್ಯಕ್ತಿ: ನೊಬೆಲ್ ಶಾಂತಿ ಪ್ರಶಸ್ತಿ ಗಳಿಸಿರುವ ಅಮೆರಿಕಾ ರಾಷ್ಟ್ರಪತಿ ಬರಾಕ್ ಒಬಾಮ ಅವರು ವೆಬ್‌ದುನಿಯಾ ನಡೆಸಿದ ಸಮೀಕ್ಷೆಯಲ್ಲಿ ಎಲ್ಲಕ್ಕಿಂತ ಅಧಿಕ ಮತಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಶೇ. 45.40 ಓಟುಗಳನ್ನು ಗಳಿಸಿರುವ ಅವರು, ಶೇ.28.52 ಮತಗಳನ್ನು ಪಡೆದಿರುವ ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗಿಂತ ಮುಂದಿದ್ದಾರೆ. ಜಗತ್ತಿನಲ್ಲಿ ಯೋಗದ ಬಗ್ಗೆ ಇರುವ ಆಸ್ಥೆ, ಕುತೂಹಲ ಮತ್ತು ಜನಪ್ರಿಯತೆಯು ವೆಬ್‌ದುನಿಯಾ ಸಮೀಕ್ಷೆಯಲ್ಲಿಯೂ ಕಾಣಿಸಿಕೊಂಡಿದ್ದು, ಯೋಗ ಗುರು ಸ್ವಾಮಿ ರಾಮದೇವ್ ಅವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ. ಅಂತೆಯೇ ಜರ್ಮನಿಯ ಚಾನ್ಸಲರ್ ಏಂಜೆಸಾ ಮರ್ಕಲ್ ಅಂತಿಮ ಸ್ಥಾನದಲ್ಲಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಪಾಕಿಸ್ತಾನದ ಹಾಲಿ ರಾಷ್ಟ್ರಪತಿ ಆಸಿಫ್ ಅಲಿ ಜರ್ದಾರಿ ಅವರು ತಮ್ಮ ಪೂರ್ವಾಧಿಕಾರಿ ಪರ್ವೇಜ್ ಮುಷರ್ರಫ್‌ಗಿಂತ ಹೆಚ್ಚು ಮತಗಳನ್ನು ಗಳಿಸಿರುವುದು.

ಆಡ್ವಾಣಿ ಜನಪ್ರಿಯತೆ ಕುಸಿತ: ಮನಸ್ಸಿನಲ್ಲಿ ಪ್ರಧಾನಮಂತ್ರಿಯಾಗುವ ಅದಮ್ಯ ಆಕಾಂಕ್ಷೆ ಇಟ್ಟುಕೊಂಡಿದ್ದ ಬಿಜೆಪಿ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಅವರ ಕನಸು ನನಸಾಗಲೂ ಇಲ್ಲ, ಅವರ ಜನಪ್ರಿಯತೆಯೂ ಕುಸಿಯಿತು. ಕಳೆದ ಬಾರಿಯ ಸಮೀಕ್ಷೆಯಲ್ಲಿ ಹೆಚ್ಚಿನ ಮತ ಗಳಿಸಿದ್ದ ಆಡ್ವಾಣಿ ಈ ಬಾರಿ ಶೇ.3.97 ಮತಗಳೊಂದಿಗೆ ದಕ್ಷಿಣ ಭಾರತದ ಹಿರಿಯ ರಾಜಕೀಯ ಮುಖಂಡ ಕರುಣಾನಿಧಿಗಿಂತಲೂ ಕೆಳಗೆ ಬಂದಿದ್ದಾರೆ. ಆದರೆ, ಬಿಜೆಪಿಯ ನರೇಂದ್ರ ಮೋದಿ ಶೇ.30.54 ಮತಗಳೊಂದಿಗೆ ಈ ಶ್ರೇಣಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಭಾರತ-ಚೀನಾ ಗಡಿವಿವಾದಗಳ ಮಧ್ಯೆಯೇ, ರಕ್ಷಣಾ ಮಂತ್ರಿ ಎ.ಕೆ.ಆಂಟನಿ ಅಂತಿಮ ಸ್ಥಾನದಲ್ಲಿದ್ದಾರೆ.

ಭಾರತದ ಜನಪ್ರಿಯ ಮಹಿಳೆ ಸೋನಿಯಾ : ಮಹಿಳೆಯರ ಜನಪ್ರಿಯತೆ ಬಗ್ಗೆ ಹೇಳಬಹುದಾದರೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮೀರಿಸಲು ಯಾರಿಗೂ ಸಾಧ್ಯವಾಗಿಲ್ಲ. ಸೋನಿಯಾ ಶೇ.47.75 ಮತಗಳೊಂದಿಗೆ ಈ ಶ್ರೇಣಿಯಲ್ಲಿ ಉನ್ನತ ಸ್ಥಾನ ಪಡೆದಿದ್ದರೆ, ಎರಡನೇ ಸ್ಥಾನದಲ್ಲಿ ಶೇ.19.51 ಮತಗಳೊಂದಿಗೆ ಐಶ್ವರ್ಯಾ ರೈ ಬಚ್ಚನ್ ಇದ್ದಾರೆ. ಮಾಯಾವತಿ ಮತ್ತು ಪ್ರತಿಭಾ ಪಾಟೀಲ್ ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿದ್ದಾರೆ. ಬಿಜೆಪಿ ನಾಯಕಿ, ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಈ ಶ್ರೇಣಿಯಲ್ಲಿ ಕಟ್ಟಕಡೆಯ ಸ್ಥಾನದಲ್ಲಿದ್ದಾರೆ.

ಜನಪ್ರಿಯ ನಟ ಅಕ್ಷಯ್ : ಬ್ಲೂ, ಕಂಭಕ್ತ್ ಇಷ್ಕ್ ಮತ್ತು ಚಾಂದನೀ ಚೌಕ್ ಟು ಚೀನಾ ಮುಂತಾದ ಫ್ಲಾಪ್ ಚಿತ್ರಗಳ ಹೊರತಾಗಿಯೂ ಕಿಲಾಡಿ ಅಕ್ಷಯ್ ಕುಮಾರ್ ಅವರು ಜನಪ್ರಿಯತೆಯನ್ನು ಉಳಿಸಿಕೊಂಡು, ಅಗ್ರಸ್ಥಾನದಲ್ಲಿದ್ದಾರೆ. ಅಕ್ಷಯ್ ಪರವಾಗಿ ಶೇ.37.80 ಮಂದಿ ಮತ ಹಾಕಿದ್ದರೆ, ಶಾರೂಖ್ ಖಾನ್ ಶೇ.22.45 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಆಮೀರ್ ಖಾನ್, ಸೈಫ್ ಅಲಿ ಖಾನ್, ಹೃತಿಕ್ ರೋಷನ್, ರಜನೀಕಾಂತ್ ಅವರು ಅನುಕ್ರಮವಾಗಿ 3, 4, 5 ಮತ್ತು 6ನೇ ಸ್ಥಾನದಲ್ಲಿದ್ದಾರೆ. ಮೋಹನ್ ಲಾಲ್ ಈ ಶ್ರೇಣಿಯಲ್ಲಿ ಅಂತಿಮ ಸ್ಥಾನಿಯಾಗಿದ್ದಾರೆ. 2008ರ ಸಮೀಕ್ಷೆಯಲ್ಲಿಯೂ ಅಕ್ಷಯ್ ಕುಮಾರ್ ಅತ್ಯಂತ ಜನಪ್ರಿಯ ನಟನಾಗಿ ಮೂಡಿಬಂದಿದ್ದರು.

ನೀಲಿ ಕಂಗಳ ಜಾದೂ: ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರ ಜನಾಕರ್ಷಣೆ ಇನ್ನೂ ಕುಂದಿಲ್ಲ. ಇದೇ ಕಾರಣಕ್ಕೆ 2009ರಲ್ಲಿ ಅವರ ನಟನೆಯ ಒಂದೇ ಒಂದು ಚಿತ್ರ ಬಿಡುಗಡೆಯಾಗದಿದ್ದರೂ ಐಶ್ ಜನಪ್ರಿಯ ನಟಿಯರ ಸಾಲಿನಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಅವರಿಗೆ ಗರಿಷ್ಠ ಶೇ.51.30 ಮತಗಳು ದೊರಕಿವೆ. ಎರಡನೇ ಸ್ಥಾನದಲ್ಲಿ ಬಾಲಿವುಡ್ ಸುಂದರಿ ಕತ್ರಿನಾ ಕೈಫ್‌ರನ್ನು ಶೇ.24.12 ಮಂದಿ ಮೆಚ್ಚಿಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಅಸಿನ್, ನಾಲ್ಕನೇ ಸ್ಥಾನ ಪ್ರಿಯಾಂಕ ಚೋಪ್ರಾ ಹಾಗೂ ಐದನೇ ಸ್ಥಾನದಲ್ಲಿ ಕರೀನಾ ಕಪೂರ್ ಇದ್ದಾರೆ.

ಅತ್ಯಂತ ಸೆಕ್ಸೀ ನಟಿ: ಬಂಗಾಳಿ ಬಾಲೆ ಬಿಪಾಷಾ ಬಸು (22.94%) ಮಾದಕ ಮೈಮಾಟ ಎಷ್ಟೆಂಬುದು ವೆಬ್‌ದುನಿಯಾ ಸಮೀಕ್ಷೆಯಲ್ಲಿ ಮತ್ತೆ ಸಾಬೀತಾಗಿದ್ದು, ಈಕೆ 2009ರ ಸೆಕ್ಸೀ ನಟಿ ಎಂದು ವೆಬ್‌ದುನಿಯಾ ಓದುಗರು ಓಟು ಹಾಕಿದ್ದಾರೆ. ಆಲ್ ದಿ ಬೆಸ್ಟ್ ಚಿತ್ರದಲ್ಲಿ ಆಂಶಿಕ ಯಶಸ್ಸು ಕಂಡಿದ್ದಳು ಬಿಪಾಷಾ. ಲಾರಾ ದತ್ತಾ (20.73%) ಮತ್ತು ಮಲ್ಲಿಕಾ ಶೆರಾವತ್ (19.48%) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ. ‘ಜೀರೋ ಸೈಜ್’ ಖ್ಯಾತಿಯ ಕರೀನಾ ಕಪೂರ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.

ವರ್ಷದ ಸರ್ವಶ್ರೇಷ್ಠ ಚಿತ್ರಗಳಿಗೆ ಸಂಬಂಧಿಸಿ ಶೇ.52.47 ಮಂದಿ 'ಸ್ಲಂ ಡಾಗ್ ಮಿಲಿಯನೇರ್'ಗೆ ಮತ ಹಾಕಿದ್ದಾರೆ. ಅಮಿತಾಭ್ ಬಚ್ಚನ್ ಅವರ 'ಪಾ' (13.82%) ಚಿತ್ರವು ಎರಡನೇ ಸ್ಥಾನದಲ್ಲಿದ್ದರೆ, 'ಅಜಬ್ ಪ್ರೇಮ್ ಕೀ ಗಜಬ್ ಕಹಾನೀ' ಮೂರನೇ ಹಾಗೂ 'ತ್ರೀ ಈಡಿಯಟ್ಸ್' ನಾಲ್ಕನೇ ಸ್ಥಾನ ಗಳಿಸಿದೆ.

ಸಚಿನ್ ಕಾ ಜವಾಬ್ ನಹೀಂ: ಸಚಿನ್ ತೆಂಡುಲ್ಕರ್ ಮತ್ತು ಕ್ರಿಕೆಟ್ ಎಂಬುದು ಪರಸ್ಪರ ಪರ್ಯಾಯ ಪದಗಳೋ ಎಂಬಂತೆ ತೋರುತ್ತಿದೆ. ಸಮೀಕ್ಷೆಯ ಫಲಿತಾಂಶದತ್ತ ಗಮನ ಹರಿಸಿದರೆ ಈ ಮಾತು ಸ್ಪಷ್ಟವಾಗುತ್ತದೆ. ಮಾಸ್ಟರ್ ಬ್ಲಾಸ್ಟರ್‌ಗೆ ಶೇ.51.25 ಜನಪ್ರಿಯತೆಯ ಮತಗಳು ಬಿದ್ದಿವೆ. ಬಳಿಕ ನಮ್ಮ ಕನ್ನಡದ ಹುಡುಗ ರಾಹುಲ್ ದ್ರಾವಿಡ್ ಶೇ.25.32 ಮತಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಉತ್ತಮ ಪ್ರದರ್ಶನ ತೋರುತ್ತಿದ್ದಾರಾದರೂ, ಮೂರನೇ ಸ್ಥಾನದಲ್ಲಿ ಉಳಿದಿದ್ದರೆ, ಸ್ಪಿನ್ನರ್ ಹರಭಜನ್ ಸಿಂಗ್ ಶೇ.0.14 ಮತಗಳೊಂದಿಗೆ ಅಂತಿಮ ಸ್ಥಾನದಲ್ಲಿದ್ದಾರೆ.

ಇತರ ಕ್ರೀಡೆಗಳಲ್ಲಿ, ಚೆಸ್ ದೊರೆ ವಿಶ್ವನಾಥನ್ ಆನಂದ್ ಶೇ.21.13 ಮತಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಬಿಲಿಯರ್ಡ್ಸ್ ಆಟಗಾರ, ಕನ್ನಡದ ಪಂಕಜ್ ಆಡ್ವಾಣಿ ಶೇ.20.44 ಮತಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಶೇ.17.38 ಮತ ಗಳಿಸಿರುವ ಸೈನಾ ನೆಹ್ವಾಲ್, ಶೇ.14.88 ಮತ ಗಳಿಸಿದ ಸೋಮದೇವ ದೇವವರ್ಮನ್ ಅನುಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.

ಸಮೀಕ್ಷೆಯ ಸವಿವರ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ


ರಾಜ್ಯ ಮಟ್ಟದಲ್ಲಿ:
ಇನ್ನು, ವೆಬ್‌ದುನಿಯಾ ಕನ್ನಡ ಪೋರ್ಟಲ್ ನಡೆಸಿದ ರಾಜ್ಯ ಮಟ್ಟದ ಸಮೀಕ್ಷೆಯಲ್ಲಿ ಹಲವು ಕುತೂಹಲಕಾರಿ ಅಂಶಗಳು ಪತ್ತೆಯಾಗಿವೆ.

ಸಂತೋಷ್ ಹೆಗ್ಡೆ ಜನಪ್ರಿಯ ವ್ಯಕ್ತಿ: ರಾಜ್ಯದ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಮೂಡಿಬಂದವರು ಭ್ರಷ್ಟರನ್ನು ಬೆತ್ತಲುಗೊಳಿಸುತ್ತಿರುವ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು. ಅವರಿಗೆ ಶೇ.38.77 ಕನ್ನಡಿಗ ಮತದಾರರು ಬೆಂಬಲ ನೀಡಿದ್ದರೆ, ನಂತರದ ಸ್ಥಾನ ಪಡೆದವರು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ. ಅವರಿಗೆ ಶೇ.24.86 ಆನ್‌ಲೈನ್ ಮತಗಳು ದೊರೆತಿವೆ.

ಮುಖ್ಯಮಂತ್ರಿ ಜನಪ್ರಿಯತೆ ಕುಸಿತ: ಮುಖ್ಯಮಂತ್ರಿಯಾದ ಬಳಿಕ ಹಲವಾರು ಗೊಂದಲಗಳಲ್ಲಿ ಸಿಲುಕಿ, ಗೊಂದಲಮಯ ನಿರ್ಧಾರಗಳನ್ನು ಕೈಗೊಂಡ ಯಡಿಯೂರಪ್ಪ (ಶೇ.15.78 ಮತಗಳು) ಅವರ ಜನಪ್ರಿಯತೆಯು ಕುಸಿದಿರುವುದು ಆನ್‌ಲೈನ್ ಸಮೀಕ್ಷೆಯಲ್ಲಿ ಸಾಬೀತಾಗಿದೆ. ಕಳೆದ ಬಾರಿ ನಂ.1 ಸ್ಥಾನದಲ್ಲಿದ್ದ ಅವರ ಸ್ಥಾನಕ್ಕೆ ಈ ಬಾರಿ ಕುಮಾರಸ್ವಾಮಿ (ಶೇ.39.97) ಏರಿದ್ದಾರೆ. ಸಿದ್ಧರಾಮಯ್ಯ ಎರಡನೇ ಸ್ಥಾನದಲ್ಲಿ ಶೇ.29.64 ಮತಗಳನ್ನು ಪಡೆದಿದ್ದಾರೆ.

ವಿವಾದಾಸ್ಪದ ರಾಜಕಾರಣಿ ಗಣಿ ಧಣಿ: ಅತ್ಯಂತ ವಿವಾದಾಸ್ಪದ ರಾಜಕಾರಣಿ ಯಾರು ಎಂದು ಕೇಳಿದ್ದಕ್ಕೆ ಮತದಾರರು ಉತ್ತರಿಸಿದ್ದು ಪ್ರವಾಸೋದ್ಯಮ ಸಚಿವ, ಗಣಿ ದೊರೆ ಜನಾರ್ದನ ರೆಡ್ಡಿ (39.20 %) ಹೆಸರನ್ನು. ಆಶ್ಚರ್ಯಕರವೆಂದರೆ ನಂತರದ ಸ್ಥಾನ ದೊರಕಿದ್ದು ಮುಖ್ಯಮಂತ್ರಿ ಯಡಿಯೂರಪ್ಪ (27.18 %) ಅವರಿಗೆ. ಮೂರನೇ ಸ್ಥಾನ ಪಡೆದ ದೇವೇಗೌಡರಿಗೆ ಶೇ.14.82 ಮತಗಳು, ನಾಲ್ಕನೇ ಸ್ಥಾನದಲ್ಲಿದ್ದ ಶೋಭಾ ಕರಂದ್ಲಾಜೆಗೆ ಶೇ.7.89 ಮತಗಳು ದೊರೆತಿವೆ.

'ವಾಲ್' ದ್ರಾವಿಡ್ ಜನಪ್ರಿಯ: ರಾಜ್ಯದ ಅತ್ಯಂತ ಶ್ರೇಷ್ಠ ಕ್ರೀಡಾಪಟುವಾಗಿ ಕನ್ನಡಿಗರ ಕಣ್ಮಣಿ, ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ (ಶೇ.60.85), 2ನೇ ಸ್ಥಾನದಲ್ಲಿ ಅನಿಲ್ ಕುಂಬ್ಳೆ ಶೇ.15.38, 3ನೇ ಸ್ಥಾನದಲ್ಲಿ ಶೇ.8.84 ಮತ ಪಡೆದ ಏಕಲವ್ಯ ಪ್ರಶಸ್ತಿ ವಿಜೇತ ಶರತ್ ಗಾಯಕ್ವಾಡ್ ಇದ್ದಾರೆ. ಪಂಕಜ್ ಆಡ್ವಾಣಿ ನಾಲ್ಕನೇ ಸ್ಥಾನದಲ್ಲಿ ಶೇ.4.87 ಮತಗಳನ್ನು ಪಡೆದಿದ್ದಾರೆ.

ಉಪೇಂದ್ರ, ಐಂದ್ರಿತಾ ಶ್ರೇಷ್ಠ ನಟ-ನಟಿಯರು: ಸಿನಿಮಾ ರಂಗದತ್ತ ನೋಡಿದರೆ, ಶ್ರೇಷ್ಠ ನಾಯಕ ನಟ ಯಾರೆಂಬ ಪ್ರಶ್ನೆಗೆ ಉಪೇಂದ್ರರನ್ನು (ಶೇ.27.86) ಓದುಗರು ಆರಿಸಿದ್ದಾರೆ. ನಂತರದ ಸ್ಥಾನ ಪುನೀತ್ ರಾಜ್ ಕುಮಾರ್ (ಶೇ.26.77) ಹಾಗೂ ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ಹಿರಿಯ ನಟ ವಿಷ್ಣುವರ್ಧನ್ (ಶೇ.21.41). ಸುದೀಪ್‌ಗೆ ಶೇ.6.25 ಮತಗಳು ಬಿದ್ದಿವೆ. ನಾಯಕಿಯರ ಸಾಲಿನಲ್ಲಿ 'ಕಪಾಳ ಮೋಕ್ಷ' ಖ್ಯಾತಿಯ ಐಂದ್ರಿತಾ ರೇ ಶೇ.37.65 ಮತಗಳನ್ನು ಪಡೆದು ಅಗ್ರಸ್ಥಾನಿಯಾಗಿದ್ದರೆ, ನಂತರ ರಮ್ಯಾ ಶೇ.21.49, ಅಮೂಲ್ಯ ಶೇ.17.96, ಪೂಜಾ ಗಾಂಧಿ ಶೇ.13.53 ಮತಗಳನ್ನು ಗಳಿಸಿದ್ದಾರೆ.

ಮನಸಾರೆ ಜನಪ್ರಿಯ ಚಿತ್ರ: 2009ರ ಜನಪ್ರಿಯ ಚಲನಚಿತ್ರವಾಗಿ ವೆಬ್‌ದುನಿಯಾ ಓದುಗರು ಆರಿಸಿದ್ದು ಮನಸಾರೆ (ಶೇ.34.92) ಚಿತ್ರವನ್ನು. ನಂತರದ ಸ್ಥಾನ ರಾಜ್ ದಿ ಶೋಮ್ಯಾನ್ (ಶೇ.26.81). ಮೂರನೇ ಸ್ಥಾನ ಸವಾರಿ ಚಿತ್ರಕ್ಕೆ ಹಾಗೂ ನಾಲ್ಕನೇ ಸ್ಥಾನ ಬಳ್ಳಾರಿ ನಾಗ ಚಿತ್ರ ಪಡೆದುಕೊಂಡಿದೆ.

ಪ್ರವಾಹ ತತ್ತರ: ಉತ್ತರ ಕರ್ನಾಟಕದಲ್ಲಿ ಬರ ಮತ್ತು ಪ್ರವಾಹವನ್ನು ರಾಜ್ಯದ ಅತ್ಯಂತ ಪ್ರಮುಖ ವಿದ್ಯಮಾನವಾಗಿ ಶೇ.67.30 ಓದುಗರು ಗುರುತಿಸಿದ್ದರೆ, ನಂತರದ ಸ್ಥಾನ ಪಡೆದ ಘಟನೆಗಳೆಂದರೆ, ರಾಜ್ಯ ಬಿಜೆಪಿಯೊಳಗಿನ ಭಿನ್ನಮತ ಸ್ಫೋಟ (12.12 %) ಹಾಗೂ ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳಲು ಶೋಭಾ ಕರಂದ್ಲಾಜೆ ತಲೆದಂಡ (8.78 %).

ಮೆಚ್ಚಿನ ಕನ್ನಡ ಪತ್ರಿಕೆಯ ರೂಪದಲ್ಲಿ ಶೇ.52.93 % ಮತಗಳು ಸೀಮಿತ ಪ್ರಸಾರ ಸಂಖ್ಯೆಯ ವಾರ್ತಾ ಭಾರತಿ ಎಂಬ ಮಂಗಳೂರಿನ ಪತ್ರಿಕೆಗೆ ಬಿದ್ದಿರುವುದು ಅಚ್ಚರಿ ಮೂಡಿಸಿದೆ. ಅದನ್ನು ಹೊರತುಪಡಿಸಿದರೆ, ಪ್ರಜಾವಾಣಿ 28.11 %, ವಿಜಯ ಕರ್ನಾಟಕ 10.75 %, ಕನ್ನಡ ಪ್ರಭ 4.79 % ಉದಯವಾಣಿ 2.13 % ಮತ್ತು ಸಂಯುಕ್ತ ಕರ್ನಾಟಕ 0.45 % ಮತಗಳನ್ನು ಗಳಿಸಿಕೊಂಡು ಅನುಕ್ರಮ ಸ್ಥಾನ ಪಡೆದುಕೊಂಡಿವೆ.

ನೆಚ್ಚಿನ ಕನ್ನಡ ವಾಹಿನಿಯಾಗಿ ಶೇ. 41.20 ಮಂದಿ ಆರಿಸಿದ್ದು ಈ-ಟಿವಿ ಕನ್ನಡ ಚಾನೆಲನ್ನು. ನಂತರದ ಸ್ಥಾನ ಸುದ್ದಿ-ರಂಜನೆಗೆ ಹೆಸರಾಗಿರುವ ಟಿವಿ-9 (ಶೇ.30.38), ಮೂರನೇ ಸ್ಥಾನ ಸುವರ್ಣ ಚಾನೆಲ್ ಪಾಲಾಗಿದೆ.

ಈ ಸಂದರ್ಭದಲ್ಲಿ ಆಸ್ಥೆಯಿಂದ ಈ ಆನ್‌ಲೈನ್‌ನ ಅತಿದೊಡ್ಡ ಸಮೀಕ್ಷೆಯಲ್ಲಿ ಪಾಲ್ಗೊಂಡ ಎಲ್ಲ ಓದುಗರಿಗೆ ವೆಬ್‌ದುನಿಯಾ ಪ್ರೀತಿಯ ಕೃತಜ್ಞತೆಗಳನ್ನು ಅರ್ಪಿಸುತ್ತದೆ.
ರಾಜ್ಯ ಮಟ್ಟದ ಸಮೀಕ್ಷೆಯ ಸವಿವರ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ