ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಓದುಗರೇ, ಕಾಮೆಂಟಿಸೋ ಮುನ್ನ ಇತ್ತ ಕೇಳಿ... (Webdunia Comment Policy | How to write in Kannada | Kannada Typing)
Bookmark and Share Feedback Print
 
ವೆಬ್‌ದುನಿಯಾದ ಆತ್ಮೀಯ ಅಭಿಮಾನಿ ಓದುಗರಿಗೆ ನಲ್ಮೆಯ ನಮಸ್ಕಾರ ಮತ್ತು ವೆಬ್‌ದುನಿಯಾ ಕಾಮೆಂಟಿಗರಿಗೆ ಅದಕ್ಕಿಂತಲೂ ಹೆಚ್ಚಿನ ಗೌರವಯುತವಾದ ಮತ್ತೊಂದು ನಮಸ್ಕಾರ.

ಈ ಲೇಖನವು ಕಾಮೆಂಟ್ ಹಾಕುವವರಿಗೆ, ಅದರಲ್ಲಿಯೂ ವಿಶೇಷವಾಗಿ ಅಶ್ಲೀಲ, ಅಸಭ್ಯ, ಹೊಲಸು ಪದಗಳಿಂದ ವೆಬ್‌ದುನಿಯಾದ ಸುಂದರ ತಾಣದಲ್ಲಿ ತಿಪ್ಪೆ ಸುರಿಯುವವರಿಗೆ "ವಿಶೇಷ" ಗಮನಕ್ಕಾಗಿ ಮತ್ತು ಸಭ್ಯತೆ ತೋರಿಸಬೇಕೆಂಬ ಆಗ್ರಹಪೂರ್ವಕ ಕೋರಿಕೆಗಾಗಿ. ಯಾಕೆಂದರೆ ಈ ಹಿಂದೆಯೊಮ್ಮೆ ಈ ಕುರಿತು ನಾವು ಇಲ್ಲಿ ವೆಬ್‌ದುನಿಯಾ ಕಾಮೆಂಟಿಗರು ಹೇಗಿದ್ದಾರೆ ಎಂದು ಕೇಳಿ ಪ್ರಸ್ತಾಪಿಸಿದ್ದೆವು. ಪರಿಸ್ಥಿತಿ ಸುಧಾರಿಸದಿರುವುದು ಮಾತ್ರ ತೀರಾ ವಿಷಾದನೀಯ!

ನಾವಾಡುವ ಮಾತುಗಳು ನಮ್ಮ ವ್ಯಕ್ತಿತ್ವದ ಕೈಗನ್ನಡಿ. ಅಂದರೆ ಇಲ್ಲಿ ನಾವೇನು ಬರೆಯುತ್ತೇವೋ, ಅದರಿಂದ ನಾವು ಎಂಥವರೆಂದು ಎಲ್ಲ ಓದುಗರಿಗೂ ಅರಿವಾಗುತ್ತದೆ. ಬಹುಶಃ (ಎಲ್ಲವನ್ನೂ ಸನ್ಮಾನ್ಯ ಓದುಗರು ಗಮನಿಸುತ್ತಾರೆ ಎಂಬ) ಇದೇ ಕಾರಣಕ್ಕೆ ಕೆಲವರು ತಮ್ಮ ಹೆಸರಿನ ಬದಲು, ತಲೆಬುಡವಿಲ್ಲದ ಹೆಸರು ಹಾಕಿಕೊಂಡೋ, ಬೇರೆಯವರ ಹೆಸರು ಬರೆದುಕೊಂಡೋ, ಲೀಲಾಜಾಲವಾಗಿ ಬಾಯಿಗೆ ಬಂದಿದ್ದನ್ನು ಬರೆಯುತ್ತಾರೆ ಅಂದುಕೊಳ್ಳಬಹುದಲ್ಲವೇ?

ಹಿಂದೆಯೂ ಹೇಳಿದ್ದೇವೆ. ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಅದರಲ್ಲಿ ನೈತಿಕತೆಯೂ, ಸಭ್ಯತೆಯೂ ಸೇರಿರಬೇಕಲ್ಲವೇ? ದೇವೇಗೌಡರಾಗಲೀ, ಯಡಿಯೂರಪ್ಪನವರಾಗಲೀ, ಕುಮಾರಸ್ವಾಮಿಯಾಗಲೀ, ಸೋನಿಯಾ ಗಾಂಧಿಯಾಗಲೀ, ನರೇಂದ್ರ ಮೋದಿಯಾಗಲೀ, ಆಡ್ವಾಣಿಯೇ ಆಗಿರಲಿ.... ಇವರೆಲ್ಲರೂ ಜನಬೆಂಬಲವಿರುವ ಜನ ನಾಯಕರು. ಒಂದು ದೇಶವನ್ನು, ರಾಜ್ಯವನ್ನು ಕಾಯುವ ಜವಾಬ್ದಾರಿ ಹೊತ್ತವರು. ಜನರ ಕುಂದು ಕೊರತೆಗಳನ್ನು ಆಲಿಸಲು ಸಮರ್ಥರು. ಅಂಥವರನ್ನು ಅಸಭ್ಯ ಶಬ್ದಗಳಿಂದ, ಅಶ್ಲೀಲ ಮಾತುಗಳಿಂದ ನಿಂದಿಸುವ ಮೊದಲು, ಈ ನಾಯಕರಂತೆ ಜನಬೆಂಬಲ ಅಥವಾ ನಾಯಕತ್ವದ ಗುಣಗಳು ನಮ್ಮಲ್ಲಿದೆಯೇ? ನಾವೇ ಅವರ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದ್ದೆವು, ನಾವೆಷ್ಟು ಸಮರ್ಥರು ಎಂಬುದನ್ನು ಒಂದು ಕ್ಷಣ ಯೋಚಿಸಿ ನೋಡಿ, ಆನಂತರ ಕಾಮೆಂಟ್ ಹಾಕೋಣ ಅಲ್ಲವೇ?

ವೆಬ್‌ದುನಿಯಾ ಕಾಮೆಂಟ್ ಬರವಣಿಗೆಗೆ ಅವಕಾಶ ಕೊಡುವ ಸಂದರ್ಭದಲ್ಲಿ ಮುಖ್ಯವಾಗಿ ಎರಡು ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು. ಇಲ್ಲೊಂದು ಆರೋಗ್ಯಪೂರ್ಣ ಚರ್ಚೆಯಾಗಲಿ, ಆ ಮೂಲಕ ತಿಳಿಯದಿರುವ ಸಂಗತಿಗಳನ್ನು ತಿಳಿದುಕೊಳ್ಳೋಣ, ಸಂದೇಹಗಳನ್ನು ಪರಿಹರಿಸಿಕೊಳ್ಳೋಣ ಎಂಬುದು ಒಂದು ಕಾರಣವಾದರೆ, ಎರಡನೇ ಕಾರಣ - ಬರವಣಿಗೆ ಎಂಬುದು ತಮ್ಮ ಕೈಗೆಟಕುವಂಥಹುದಲ್ಲ ಎಂದು ಭಾವಿಸಿದ ಅಮೆಚೂರ್ ಓದುಗರಿಗೆ ಬರವಣಿಗೆಯನ್ನು ಸುಧಾರಿಸಿಕೊಳ್ಳಲು, ತಾವೂ ಬೆಳೆದು ಜೊತೆಯವರನ್ನೂ ಬೆಳೆಸುವ ಗುಣವನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸುವುದಕ್ಕಾಗಿ.

ಕಾಪಿ - ಪೇಸ್ಟ್ ಚಟ
ಇಂಥದ್ದೊಂದು ಅಮೂಲ್ಯವಾದ, ದಿನಕ್ಕೆ ಸಾವಿರಾರು ಜನರು ಓದುವ ತಾಣವನ್ನು ಹೊಲಸು ಶಬ್ದಗಳಿಂದ, ಅಶ್ಲೀಲ ಕಾಮೆಂಟುಗಳಿಂದ, ಅಸಭ್ಯ ಪದಗಳಿಂದ ತುಂಬಿಸುವವರಿಗೇನನ್ನೋಣ? ಅಷ್ಟು ಮಾತ್ರವಲ್ಲ, ಕಾಪಿ ಪೇಸ್ಟ್ ಮಾಡುವ ಚಾಳಿ ಕೆಲವರಿಗೆ. ಇಂಥವರಿಗೆ ಓದುಗರೇ "ಕಾಪಿ-ಪೇಸ್ಟ್ ರೋಗಿಗಳು" ಅಂತ ಬಿರುದನ್ನೂ ಕೊಟ್ಟಿದ್ದಾರೆ. ಪ್ರಜ್ಞಾವಂತ ಓದುಗರೇ ಮುಂದೆ ನಿಂತು ಅವುಗಳನ್ನು 'ರಿಪೋರ್ಟ್ ಅಬ್ಯೂಸ್' (ನಿಂದನೆ ಕುರಿತ ವರದಿ) ಮಾಡಿ ವೆಬ್‌ದುನಿಯಾಕ್ಕೆ ಸಹಕರಿಸಿದ್ದಾರೆ, ಸಹಕರಿಸುತ್ತಲೇ ಇದ್ದಾರೆ. ಅಂಥವರಿಗೆ ಹೃದಯ ತುಂಬಿದ ಧನ್ಯವಾದಗಳು.

ಆದರೂ ಈ ಚಾಳಿ ಮುಂದುವರಿಯುತ್ತಲೇ ಇದೆ. ಈ ರೀತಿ ಮಾಡುವಂಥವರಿಗೊಂದು ಸಲಹೆ. ಹಾಕಿದ ಕಾಮೆಂಟನ್ನೇ ಪದೇ ಪದೇ ಹಾಕುತ್ತಾ, ದಯವಿಟ್ಟು ವೆಬ್‌ದುನಿಯಾದಲ್ಲಿ ಆಗುತ್ತಿರುವ ಚರ್ಚೆಯ ದಾರಿ ತಪ್ಪಿಸಲು ಹೋಗಬೇಡಿ. ನೀವು ಒಮ್ಮೆ ಬರೆದರೆ ಖಂಡಿತಾ ಓದಿದವರಿಗೆ ಅರ್ಥವಾಗುತ್ತದೆ ಎಂಬುದು ನಿಮ್ಮ ಪರಿಜ್ಞಾನದಲ್ಲಿರಲಿ. ಸ್ವಲ್ಪ ನಿಮ್ಮ ಬುದ್ಧಿಗೆ ಕೆಲಸ ಕೊಡಿ.

ಕಾಮೆಂಟಿಸುವ ಮುನ್ನ ಮೆದುಳಿಗೆ ಮೇವು
ಇನ್ನು, ಬಯ್ಯುವುದನ್ನೇ ರೂಢಿಸಿಕೊಂಡಿರುವ ಕಾಮೆಂಟಿಗರು, ಕಾಮೆಂಟ್ ಹಾಕುವ ಮುನ್ನ ಒಂದಿಷ್ಟು ನಿಮ್ಮ ಸ್ವಂತ ಯೋಚನಾ ಶಕ್ತಿಯನ್ನು ಉಪಯೋಗಿಸಿ ನೋಡಿಯಂತೆ! ಬರೇ ಯಾರೋ ಒಬ್ಬರು (ತಾವು ಹಿಂಬಾಲಿಸುವ ನಾಯಕರು, ನೇತಾರರು, ರಾಜಕೀಯ ಪಕ್ಷಗಳು) ಹೇಳಿದ್ದನ್ನು ಬ್ಲೈಂಡ್ ಆಗಿ ಅನುಸರಿಸದೆ, ತಾವು ಓದಿದ ಸುದ್ದಿಯಲ್ಲಿದ್ದ ವ್ಯಕ್ತಿ ನಿಜಕ್ಕೂ ಅಪರಾಧಿಯಾಗಿರಬಹುದೇ ಎಂಬುದನ್ನು ಸ್ವತಃ ಆಲೋಚಿಸಿ ನೋಡಿ. ಇಲ್ಲಿ ವ್ಯಕ್ತಿ ನಿಷ್ಠೆ ಮತ್ತು ಪಕ್ಷ ನಿಷ್ಠೆಗಳು ನಿಮ್ಮೊಳಗಿರುವ ಜ್ಞಾನದ ಸಾಗರಕ್ಕೆ ಮೋಡ ಕವಿಯುತ್ತವೆ. ಈ ಮೋಡ ಸರಿಸಿ, ಈಚೆಗೆ ಬಂದು ಯೋಚಿಸಿ, ಆಮೇಲೆ ಕಾಮೆಂಟ್ ಹಾಕಬೇಕೆಂಬುದು ಸವಿನಯ ಕೋರಿಕೆ. ಇಲ್ಲವಾದರೆ ಏನಾಗುತ್ತದೆ ಎಂದರೆ, ಪಾಕಿಸ್ತಾನಿ ಕ್ರಿಕೆಟಿಗನೊಬ್ಬ ಉತ್ತಮವಾಗಿ ಆಡಿದ ವರದಿಯಿದ್ದರೆ, ಅಲ್ಲಿಯೂ ಕೋಮು ಬೀಜ ಬಿತ್ತುವವರಿದ್ದಾರೆ. ಯಾವುದೇ ವಿಚಿತ್ರ ಅಪರಾಧ ಕೃತ್ಯಗಳು ಬಂದರೆ, ಅವುಗಳಲ್ಲಿನ ಆರೋಪಿಯ ಹೆಸರು ನೋಡಿ, ಈತ ಈ ಧರ್ಮದವನು, ಈ ಮತದವನು ಎಂಬ ಕೋಮುವಾದ! ಇಂಥ ಚಿಕ್ಕಪುಟ್ಟ ವಿಷಯಗಳಲ್ಲಿ ಈ ರೀತಿ ಹುಡುಕುವುದನ್ನೇ ಅಲ್ಲವೇ ಕೋಮುವಾದ ಎಂದು ಕರೆಯುವುದು? ಸೋನಿಯಾ ಗಾಂಧಿ ಮಾಡಿದ ಜನಹಿತ ಕಾರ್ಯವೊಂದನ್ನು ಎತ್ತಿ ತೋರಿಸಿದರೆ, ಆಕೆ ಆ ಧರ್ಮದವರು, ಆಕೆ ಅಂಥವಳು ಇಂಥವಳು ಎಂದು ಟೀಕಿಸುವುದು, ನರೇಂದ್ರ ಮೋದಿಯ ರಾಜ್ಯದ ಪ್ರಗತಿ ಬಗ್ಗೆ ಬರೆದರೆ, ಆ ವಿಷಯದ ಬಗ್ಗೆ ಬಿಟ್ಟು ಬೇರೆಲ್ಲದರ ಕುರಿತೂ ಅಸಭ್ಯವಾಗಿ, ನಿಂದನಾತ್ಮಕವಾಗಿ ಚರ್ಚೆಯಾಗುತ್ತದೆ. ಇದು ಸಲ್ಲದು.

ಓದುಗರೊಬ್ಬರು ಕೇಳಿದ ಹಾಗೆ, 'ನಿಮ್ಮ ಧರ್ಮವು ಬೇರೊಂದು ಧರ್ಮವನ್ನು, ಅಥವಾ ವ್ಯಕ್ತಿಗಳನ್ನು ಬಾಯಿಗೆ ಬಂದಂತೆ ದೂರಲು, ಹೇಳಿಕೊಡುತ್ತದೆಯೇ?' ಇಲ್ಲ. ಖಂಡಿತಾ ಇಲ್ಲ. ಪರಧರ್ಮ ನಿಂದನೆಯನ್ನು ಯಾವುದೇ ಧರ್ಮ ಹೇಳಿಕೊಡುವುದಿಲ್ಲ. ನಾವು ಪರಧರ್ಮ ಸಹಿಷ್ಣುಗಳು. ಹೀಗಾಗಿ, ಅನ್ಯ ಧರ್ಮವನ್ನು ನಿಂದಿಸುವವರು ತಮ್ಮ ಧರ್ಮವನ್ನೇ ನಿಂದಿಸಿದಂತೆ. ಅಥವಾ ಯಾವುದೇ ಧರ್ಮ ಇಲ್ಲ. ಉಗ್ರಗಾಮಿಗಳಿಗೂ ಯಾವುದೇ ಧರ್ಮ ಇಲ್ಲ, ಅವರು ಧರ್ಮ-ಹೀನರು ಎಂಬುದನ್ನು ರಾಜಕಾರಣಿಗಳ ಬಾಯಿಂದ ಕೇಳುತ್ತಿದ್ದೇವೆ, ಹೀಗೆಯೇ ಇದು ಕೂಡ.

ಕಾಮೆಂಟ್ ಬಿಂಬಿಸುವ ವ್ಯಕ್ತಿತ್ವ
ಇನ್ನು ಕೆಲವರು ಅನಗತ್ಯವಾಗಿ ತಂದೆ-ತಾಯಿಯನ್ನು, ಅಕ್ಕ-ತಂಗಿಯರನ್ನು ತಮ್ಮ ಕಾಮೆಂಟಿನಲ್ಲಿ ಸಹ-ಓದುಗನನ್ನು ನಿಂದಿಸುವುದಕ್ಕೋಸ್ಕರ ಎಳೆದು ತರುತ್ತಿರುವುದು. ಇದು ತೀರಾ ಅಕ್ಷಮ್ಯ. ಈ ರೀತಿ ಕಾಮೆಂಟ್ ಹಾಕುವವರು ತಮ್ಮ ನಿಜ ಹೆಸರನ್ನು ಬಯಲಾಗಿಸಲು ಹೆದರಿದರೂ, ತಮ್ಮ ವ್ಯಕ್ತಿತ್ವವನ್ನೇ ಬಟಾಬಯಲು ಮಾಡುತ್ತಿದ್ದಾರೆ. ಅವರ ಕಾಮೆಂಟ್‌ಗಳು ಮಾತೃಸಮಾನರಾದ ಸ್ತ್ರೀಯರಿಗೆ ಅವರೆಷ್ಟು ಗೌರವ ಕೊಡುತ್ತಾರೆ ಎಂಬುದರ ಪ್ರತೀಕವೂ ಹೌದು.

ಈ ರೀತಿಯ ಕಾರಣಗಳಿಂದಾಗಿ ಈ ಲೇಖನ ಬರೆಯಬೇಕಾಯಿತು. ಆದುದರಿಂದ ನಮ್ಮ ಪ್ರೀತಿಯ ಓದುಗರೇ, ದಯವಿಟ್ಟು ಇಂಥವಕ್ಕೆ ಅವಕಾಶ ಕೊಡಬೇಡಿ.

ಕನ್ನಡದಲ್ಲೇ ಇರಲಿ ಕಾಮೆಂಟ್‌ಗಳು
ಕನ್ನಡವನ್ನು ಸುಲಭವಾಗಿ ಬರೆಯಲು ಸಾಕಷ್ಟು ಟೂಲ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ನಮ್ಮ ವೆಬ್‌ದುನಿಯಾದ ಕಾಮೆಂಟ್ ಶೀಟ್‌ನಲ್ಲೇ ಕನ್ನಡ ಬರೆಯುವುದು ಸುಲಭ ಮತ್ತು ಅದು ಹೇಗೆ ಎಂಬುದನ್ನು ಇಲ್ಲಿ ಹಿಂದೆಯೇ ಹೇಳಿಕೊಟ್ಟಿದ್ದೇನೆ. ಆದರೂ ಕೆಲವು ಓದುಗರು ಆಂಗ್ಲಗನ್ನಡದಲ್ಲಿ ಟೈಪ್ ಮಾಡುತ್ತಾರೆ ಮತ್ತು ಅದು ಓದುವುದು ತೀರಾ ತ್ರಾಸದಾಯಕ ಎಂಬುದಾಗಿ ಈಗಾಗಲೇ ಓದುಗರು ದೂರಿಕೊಂಡಿದ್ದಾರೆ. ಕನ್ನಡದಲ್ಲೇ ಕಾಮೆಂಟ್ ಹಾಕಿದರೆ ಅತ್ಯುತ್ತಮ. ಆದರೆ ಅರೆಬರೆ ಇಂಗ್ಲಿಷಿನಲ್ಲಿ ಬರೆದರೆ ಯಾರು ಕೂಡ ಅದನ್ನು ಓದಲಾರರು ಮತ್ತು ನಿಮ್ಮ ಸಂದೇಶವು ತಲುಪಬೇಕಾದಲ್ಲಿಗೆ ತಲುಪಲಾರದು.

ನಿಂದನೆ ಇದ್ದರೆ Report Abuse ಬಳಸಿ
ಓದುಗರೇ, ವೆಬ್‌ದುನಿಯಾ ತಾಣವನ್ನು ಸ್ವಚ್ಛ-ಸುಂದರವಾಗಿಡಲು ನೀವು ಕೂಡ ಸಹಕರಿಸಬಹುದು. ಅದಕ್ಕಾಗಿಯೇ ರಿಪೋರ್ಟ್ ಅಬ್ಯೂಸ್ ಎಂಬ ಬಟನ್ ಒಂದಿದೆ. ದಯವಿಟ್ಟು ನೀವೇ ಕಾಳಜಿ ತೆಗೆದುಕೊಂಡು, ನಮ್ಮ-ನಿಮ್ಮ ವೆಬ್‌ದುನಿಯಾವನ್ನು ಶುದ್ಧವಾಗಿರಿಸಲು ಅದನ್ನು ಬಳಸಿಕೊಳ್ಳಿ. ಇಲ್ಲಿ ವ್ಯಕ್ತಿ-ನಿಂದನೆ, ಕಾಪಿ ಪೇಸ್ಟ್ ರೋಗ, ಅಶ್ಲೀಲ ಶಬ್ದ (ಇಡೀ ಕಾಮೆಂಟ್ ಚೆನ್ನಾಗಿದ್ದರೂ, ಒಂದೇ ಒಂದು ಅಸಭ್ಯ ಶಬ್ಧವಿದ್ದರೂ ಅದು ಅಬ್ಯೂಸ್ ಆಗಲು ಅರ್ಹ!), ಸುಳ್ಳು ಆರೋಪ ಮುಂತಾದವುಗಳಿದ್ದರೆ ನಿಮ್ಮ ಕೈಯಲ್ಲಿರುವ Report Abuse ಆಯುಧವನ್ನು ಯಥಾಸಾಧ್ಯ ಬಳಸಿಕೊಳ್ಳಿ.

ಮುಂದೇನು?
ಅಶ್ಲೀಲ ಕಾಮೆಂಟುಗಳನ್ನು ತಡೆಯಲು ಹಲವು ಓದುಗರು ಪತ್ರ ಬರೆದು ಕೆಲವೊಂದು ಸಲಹೆ ನೀಡಿದ್ದಾರೆ. ಅವುಗಳಲ್ಲಿ ಎರಡು ನಮ್ಮ ಗಮನ ಸೆಳೆದಿವೆ. ಒಂದನೆಯದು, ಕಾಮೆಂಟ್ ಮಾಡರೇಶನ್ (ಅಂದರೆ ನೀವು ಹಾಕಿದ ಕಾಮೆಂಟುಗಳು ಸಂಪಾದಕರ ಒಪ್ಪಿಗೆ ನೀಡಿದ ನಂತರವಷ್ಟೇ ವೆಬ್‌ಸೈಟಿನಲ್ಲಿ ಕಾಣಿಸಿಕೊಳ್ಳುತ್ತದೆ). ಎರಡನೆಯದೆಂದರೆ ಲಾಗ್ ಇನ್ ಆಗದಿದ್ದವರಿಗೆ ಕಾಮೆಂಟ್ ಹಾಕಲು ಅವಕಾಶವನ್ನೇ ನೀಡದಿರುವುದು. ಅಂದರೆ ನೀವೊಂದು ವೆಬ್‌ದುನಿಯಾ mail ID ರಚಿಸಿ, ಅದರ ಮೂಲಕವೇ ಕಾಮೆಂಟ್ ಹಾಕುವಂತೆ ಮಾಡುವುದು.

ಈ ಎರಡೂ ವಿಧಾನಗಳನ್ನು ಅನುಸರಿಸಿದರೆ, ಒಂದು ಚರ್ಚೆಯಲ್ಲಿ ಮುಕ್ತವಾಗಿ ಭಾಗವಹಿಸುವುದು ಓದುಗರಿಗೆ ಅಷ್ಟು ಸುಲಭವಲ್ಲ. ಉತ್ತಮ ಚರ್ಚೆಗೆ ಅವಕಾಶವಿದ್ದರೂ, ತರಾತುರಿಯಲ್ಲಿರುವ ಓದುಗರ ಔದಾಸೀನ್ಯಕ್ಕೂ ಇದು ಕಾರಣವಾದೀತು. ಸಮಾಜಮುಖಿಯಾದ ಚರ್ಚೆಯೊಂದು ಅಲ್ಲಿ ಮೂಡಿಬರಲು ಅವಕಾಶವಿರಲಾರದು ಎಂಬ ಕಾರಣಕ್ಕೆ ಇದುವರೆಗೆ ಈ ಸಲಹೆಗಳನ್ನು ಅನುಸರಿಸಿರಲಿಲ್ಲ. ಮತ್ತೆ ದಿನಕ್ಕೆ ಸಾವಿರಾರು ಕಾಮೆಂಟ್‌ಗಳು ಬರುವುದರಿಂದ, ಅವುಗಳನ್ನು ಪರಿಷ್ಕರಿಸಿದ ನಂತರ ವೆಬ್‌ನಲ್ಲಿ ಕಾಣಿಸಿಕೊಳ್ಳಲು ತಡವಾದೀತು ಮತ್ತು ಇದು ಚರ್ಚೆಯ ಅವಕಾಶವನ್ನೂ ಕುಂಠಿತಗೊಳಿಸುತ್ತದೆ. ಈ ಕಾರಣಕ್ಕೆ ಅದನ್ನು ಇದುವರೆಗೆ ಪರಿಗಣಿಸಿಲ್ಲ. ಈಗಾಗಲೇ ಅಸಭ್ಯವಾಗಿ ಕಾಮೆಂಟ್ ಹಾಕುತ್ತಿರೋ ಓದುಗರು ಅದನ್ನು ಪರಿಗಣಿಸುವಂತೆ ಮಾಡಲಾರರು ಎಂದು ನಾವಿನ್ನೂ ವಿಶ್ವಾಸದಲ್ಲಿದ್ದೇವೆ. ಹೀಗಾಗಿ ನಿಮ್ಮ ಹೊಣೆಗಾರಿಕೆ ಇನ್ನಷ್ಟು ಹೆಚ್ಚಿದೆ!

ಅನಾಮಿಕರಾಗಬೇಡಿ
ತಮ್ಮ ಹೆಸರು ಹಾಕದೆ, ಬೇರೆಯವರ ಹೆಸರು ಬಳಸುವವರಿಗೆ ಹಲವು ಓದುಗರು ಈಗಾಗಲೇ ವಿಶೇಷ 'ಬಿರುದು' ದಯಪಾಲಿಸಿದ್ದಾರೆ (ಅದು ಇಲ್ಲಿ ಪ್ರಕಟಿಸಲು ಯೋಗ್ಯವಾದ ಶಬ್ದವಲ್ಲ!). ಹೀಗೆ ಆಗದಂತೆ ನೋಡಿಕೊಳ್ಳುವುದು ಕೂಡ ನಿಮ್ಮ ಜವಾಬ್ದಾರಿ. ಮತ್ತು ನಿಮ್ಮದೇ ಆನ್‌ಲೈನ್ ವ್ಯಕ್ತಿತ್ವ ರೂಪಿಸಿಕೊಂಡಿರೆಂದಾದರೆ, ನಿಮಗೂ ಒಂದು ಒಳ್ಳೆಯ ಹೆಸರು ಬರುತ್ತದೆ, ನಮಗೂ ನಮ್ಮ ಕಾಮೆಂಟಿಗರನ್ನು ಗುರುತಿಸಲು ಮತ್ತು ಮುಂದೊಂದು ದಿನ ನಿಮ್ಮ ಲೇಖನಗಳಿಗೆ ನಮ್ಮ ತಾಣದಲ್ಲಿ ಅವಕಾಶ ಒದಗಿಸಲೂ ಸಾಧ್ಯವಾಗುತ್ತದೆ.

ಈ ಎಲ್ಲ ಕಾರಣಗಳಿಂದ, ಈಗ ನಿಮಗೆ ಕೊಟ್ಟಿರುವ ಮುಕ್ತ ಕಾಮೆಂಟ್ ಅವಕಾಶವನ್ನು ಉಳಿಸಿಕೊಳ್ಳುವುದು ಕೂಡ ನಿಮ್ಮಂಥ ಪ್ರೀತಿಯ ಓದುಗರ ಕೈಯಲ್ಲೇ ಇದೆ ಎಂಬುದನ್ನು ದಯವಿಟ್ಟು ಗಮನಿಸಿ.

ಹೀಗಾಗಿ, ಅಸಭ್ಯ ಕಾಮೆಂಟ್ ಹಾಕುವವರೇ, ದಯವಿಟ್ಟು ನೀವೂ ಸಭ್ಯರಾಗಿರಿ, ಸಹ-ಓದುಗರನ್ನೂ ಸಭ್ಯರಾಗಿಸಲು ಸಹಕರಿಸಿ. ಉತ್ತಮ ಆನ್‌ಲೈನ್ ಕನ್ನಡ ಸಮುದಾಯವೊಂದನ್ನು ನಿರ್ಮಿಸಲು ಸಹಕರಿಸಿ. ನಿಮ್ಮ ಸಲಹೆ ಸೂಚನೆಗಳು ನಮಗೂ ಪ್ರೋತ್ಸಾಹದ ಟಾನಿಕ್ ಇದ್ದಂತೆ. ವೆಬ್‌ದುನಿಯಾದೊಂದಿಗೆ ಹೆಚ್ಚು ಹೆಚ್ಚು ನೀವು ಆತ್ಮೀಯವಾಗುತ್ತಿರುವುದು ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ಹೀಗಾಗಿ ನಿಮ್ಮಲ್ಲಿ ಮತ್ತೆ ನಮ್ಮ ಅರಿಕೆ. ವ್ಯಕ್ತಿ ನಿಂದನೆ, ಜಾತಿ ನಿಂದನೆ, ಅಶ್ಲೀಲ, ಅಸಭ್ಯ ಪದಗಳ ಪ್ರಯೋಗ ಬೇಡವೇ ಬೇಡ. ಇದು ನಿಮ್ಮ ಅಭಿಪ್ರಾಯ ಹಂಚಿಕೊಳ್ಳಲು, ಚರ್ಚೆ ಮಾಡಿಕೊಳ್ಳಲು ಇರುವ ಅತ್ಯುತ್ತಮ ವೇದಿಕೆ. ಇದನ್ನು ಸಭ್ಯವಾಗಿ, ಸಮರ್ಥವಾಗಿ ಬಳಸಿಕೊಳ್ಳಿ. ಅಸಭ್ಯ ಕಾಮೆಂಟ್‌ಗಳನ್ನು ಹೇಗೆ ತಡೆಯಬಹುದು ಎಂಬುದಕ್ಕೆ ನಮಗೂ ದಾರಿ ತೋರಿಸಿ. ನಿಮ್ಮ ಸಲಹೆಗಳನ್ನು avinash.b @ webdunia.net ವಿಳಾಸಕ್ಕೆ ಕಳುಹಿಸಿಕೊಡಿ.

ಗಮನಿಸಿ: ಈ ಲೇಖನ ಬರೆದಿರುವುದು ಈಗಲೂ ಅತ್ಯುತ್ತಮವಾಗಿ ಚರ್ಚೆಗೆ ಕಾರಣವಾಗುವ ಮತ್ತು ಹಲವು ಮಾಹಿತಿಗಳನ್ನು ನೀಡುತ್ತಾ, ತಮ್ಮೊಡನಿದ್ದವರ ಜ್ಞಾನ ಹೆಚ್ಚಲು ಕಾರಣವಾಗುವ ಸಭ್ಯ ಓದುಗರಿಗೆ ಅಲ್ಲ. ಅವರಿಗೆ ನಮ್ಮ ಧನ್ಯವಾದಗಳು.

- ಅವಿನಾಶ್ ಬಿ.

ಸಂಬಂಧಿತ ಮಾಹಿತಿ ಹುಡುಕಿ