ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ವೆಬ್‌ದುನಿಯಾ ಕಾಮೆಂಟಿಗರು ಹೇಗಿದ್ದಾರೆ? (Webdunia Comment Policy | Readers view)
 
Webdunia
WD
ವೆಬ್‌ದುನಿಯಾ ಆತ್ಮೀಯ ಓದುಗರೇ,

ಕೆಲವು ದಿನಗಳಿಂದ ನೀವು ಗಮನಿಸಿರಬಹುದು. ನೀವು ಹಾಕಿದ ಅದೆಷ್ಟೋ ಕಾಮೆಂಟ್‌ಗಳು ಮಾಯವಾಗಿಬಿಡುತ್ತವೆ - "ಶಾಶ್ವತವಾಗಿ ಅಳಿಸಲಾಗಿದೆ" ಎಂಬ ಲೇಬಲ್‌ನೊಂದಿಗೆ! ಅದೇಕೆ ಹೀಗೆ ಅಂತ ನೀವೂ ತಲೆಕೆಡಿಸಿಕೊಂಡಿರಬಹುದು...

ಇದಕ್ಕೆ ಕಾರಣವಿದೆ.

ಇದನ್ನು ಸಲಹೆ ಎಂದು ತೆಗೆದುಕೊಳ್ಳಿ, ನಿಮ್ಮ ಬರವಣಿಗೆಯ ವಿಧಾನ ತಿದ್ದಿಕೊಳ್ಳುವ ಸೂಚನೆ ಎಂದುಕೊಳ್ಳಿ, ಏನೇ ಅಂದುಕೊಂಡರೂ, ನಿರ್ಲಕ್ಷಿಸದೆ ದಯವಿಟ್ಟು ಪೂರ್ತಿಯಾಗಿ ಓದಿ. ಹೌದು. ಇದನ್ನು ಇಲ್ಲಿ ಮತ್ತೊಮ್ಮೆ ಪ್ರತ್ಯೇಕವಾಗಿ ತಿಳಿಸುವ ಅನಿವಾರ್ಯತೆ ಬರಬಾರದಾಗಿತ್ತು ಅಂತ ನಮ್ಮ ತಂಡಕ್ಕೂ ಅನ್ನಿಸಿದ್ದಿದೆ.

ಎರಡು ವರ್ಷಗಳ ಹಿಂದಷ್ಟೇ ಜನ್ಮತಾಳಿ, ಕಾಲ ಕಾಲಕ್ಕೆ ಬದಲಾವಣೆಯಾಗುತ್ತಾ, ದಷ್ಟ ಪುಷ್ಟವಾಗುತ್ತಿರುವ ಕನ್ನಡ ವೆಬ್‌ದುನಿಯಾ ವೆಬ್‌ಸೈಟನ್ನು ನಿಮ್ಮ ಮನೆ-ಮನಗಳಲ್ಲಿ ತುಂಬಿಸಿಕೊಂಡಿದ್ದೀರಿ. ಸಂತೋಷದ ವಿಷಯವೇ. ನಿಮ್ಮ ಅಭಿಪ್ರಾಯ ಮಂಡಿಸಲು ಸುಲಭದ ವಿಧಾನವನ್ನೂ ನಮ್ಮ ತಂತ್ರಜ್ಞರ ತಂಡವು ನಿಮಗೆ ಒದಗಿಸಿದೆ. ಅದೇ ರೀತಿ ನಮ್ಮ ಸಂಪಾದಕೀಯ ಬಳಗವು ಕೂಡ ಉತ್ತಮ ತಾಣವನ್ನು ನೀಡುವುದರತ್ತ ಅವಿರತವಾಗಿ ಅರ್ಪಣಾ ಮನೋಭಾವದಿಂದ ಶ್ರಮಿಸುತ್ತಿದೆ. ಇತ್ತೀಚೆಗೆ ತಪ್ಪಿಲ್ಲದೆ ಕನ್ನಡದಲ್ಲಿ ಟೈಪ್ ಮಾಡಿ ಕಾಮೆಂಟ್ ಹಾಕುವುದು ಹೇಗೆ ಎಂಬ ಬಗ್ಗೆಯೂ ಇಲ್ಲಿ ಹೇಳಿಕೊಟ್ಟಿದ್ದೇವೆ. ಆದರೆ, ಕೆಲವರು ಇಷ್ಟು ಬೇಗ ಕಷ್ಟಪಟ್ಟು ಕನ್ನಡ ಟೈಪಿಸುವುದನ್ನು ಕಲಿತು ಅಸಭ್ಯ/ಅಶ್ಲೀಲ ಪದಗಳನ್ನೇ ಮೊದಲು ಬರೆಯುತ್ತಾರೆ ಎಂಬುದನ್ನು ನಾವು ಊಹಿಸಿರಲಿಲ್ಲ!

ನಮ್ಮಲ್ಲಿ ಪ್ರಕಟವಾಗುವ ನೂರಾರು ಸುದ್ದಿ-ಲೇಖನಗಳಿಗೆ ದಿನಂಪ್ರತಿ ಸಾವಿರಾರು ಓದುಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅವರಲ್ಲಿ ಹಲವರು ಆರೋಗ್ಯಪೂರ್ಣ ಚರ್ಚೆಗೆ ಮುಂದಾಗುತ್ತಾರೆ ಎಂಬುದನ್ನೂ ಬಲ್ಲೆವು. ಅಂತಹ ಪ್ರೀತಿಯ ಓದುಗರಿಗೆ ಮತ್ತೊಮ್ಮೆ ಅಭಿನಂದನೆಗಳು.

ಆದರೆ ಕೆಲವು ಓದುಗರು ಭಾವಾವೇಶಕ್ಕೊಳಗಾಗುತ್ತರೋ ಅಥವಾ ಭಾವವಿಕೃತಿಗೆ ಈಡಾಗುತ್ತಾರೆಯೋ ತಿಳಿಯದು. ಯಾವುದೇ ಒಂದು ಸುದ್ದಿಗೆ ಕಾಮೆಂಟ್ ಹಾಕುವಾಗ ವಿನಾಕಾರಣ, ಇಲ್ಲ ಸಲ್ಲದ ವಿಷಯವನ್ನು ಎಳೆದು ತಂದುಹಾಕಿಬಿಡುತ್ತಾರೆ, ಒಂದು ಲೇಖನ/ಸುದ್ದಿಗೆ ಸಂಬಂಧಿಸಿದ ಚರ್ಚೆಯ ದಾರಿ ತಪ್ಪಿಸಿ ಅದನ್ನು ಕೋಮುಭಾವನೆ ಕೆರಳಿಸುವ, ಪಕ್ಷಗಳನ್ನು, ಅದರ ನಾಯಕರನ್ನು ದೂರುವುದಕ್ಕೆ ಎಳೆದುಕೊಂಡು ಹೋಗುತ್ತಾರೆ. ಅಲ್ಲಿಗೆ ನಮ್ಮ ಉದ್ದೇಶ ನೀರಿನಲ್ಲಿಟ್ಟ ಹೋಮದಂತಾಗುತ್ತದೆ.

ಅವರು ಬರೆಯುವ ಭಾಷೆಯೋ.... ಅದಕ್ಕೆ ಡಿಕ್ಷನರಿಯಲ್ಲಿ ಹುಡುಕಿದರೆ ಸುಲಭದಲ್ಲಿ ಅರ್ಥ ದೊರೆಯದು! ಅಂತಹ ಅನ್ಯತ್ರ, ಅಲಭ್ಯವಾದ ಪದಕೋಶದಿಂದ ಪುಂಖಾನುಪುಂಖವಾದ ನಿಂದನಾತ್ಮಕ, ಅಶ್ಲೀಲ, ಅಸಭ್ಯ ಪದಗಳು ಹರಿದುಬರುತ್ತವೆ. ಪರಸ್ಪರ ದೂಷಣೆಗೂ ತೆರಳಿ, ಅತಿರೇಕಕ್ಕೆ ಹೋಗಿಬಿಡುತ್ತದೆ.

ಯಾಕೆ ಹೀಗೆ? ನಮ್ಮ ಓದುಗರು ಶಿಷ್ಟರು, ಸಭ್ಯರು, ಸುಶಿಕ್ಷಿತರು ಎಂದು ವೆಬ್‌ದುನಿಯಾ ನಂಬಿಕೊಂಡು ಬರುತ್ತಿದೆ. ಈ ಕಾರಣಕ್ಕಾಗಿಯೇ ಎಲ್ಲರೂ ತಮ್ಮ ಅಭಿಪ್ರಾಯವನ್ನು ಮಂಡಿಸಲಿ, ಅಲ್ಲೊಂದು ಆರೋಗ್ಯಕರ ಚರ್ಚೆ ನಡೆಯಲಿ ಎಂದು ಅದಕ್ಕೆ ಸೂಕ್ತವಾದ ವೇದಿಕೆಯನ್ನು ಸುಲಭವಾಗಿ ಕೈಗೆಟಕುವಂತೆ ಮಾಡಿದೆ. ಆದರೆ ಈ ನಮ್ಮ ನಂಬಿಕೆಯನ್ನು ಹುಸಿ ಮಾಡಿದ್ದಾರೆ ಕೆಲವು ಕಾಮೆಂಟಿಗರು.

ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಅಭಿಪ್ರಾಯ ಸ್ವಾತಂತ್ರ್ಯವೂ ಇದೆ. ಆದರೆ ಓದುಗರೆ, ಅದಕ್ಕೂ ಒಂದು ಸಭ್ಯತೆ, ನೈತಿಕತೆಯ ಇತಿಮಿತಿಯೂ ಇದೆಯಲ್ಲವೇ? ಕೆಲವರು ಅತ್ಯುತ್ತಮ ಸಲಹೆ ನೀಡುತ್ತಿದ್ದಾರೆ, ತಪ್ಪಾಗಿದ್ದನ್ನು ಎಚ್ಚರಿಸಿ, ನಮ್ಮ-ನಿಮ್ಮ ಈ ವೆಬ್‌ಸೈಟ್ ಬೆಳೆಯಲು ಸ್ಫೂರ್ತಿ ತುಂಬಿದ್ದಾರೆ. ಈ ರೀತಿ ಕೆಲವು ಕಾಮೆಂಟಿಗರು ಖ್ಯಾತರಾಗಿದ್ದರೆ, ಅದಕ್ಕಿಂತ ಹೆಚ್ಚು ಮಂದಿ ಅಶ್ಲೀಲ, ಅಸಭ್ಯ ಕಾಮೆಂಟುಗಳ ಮೂಲಕ ಕುಖ್ಯಾತಿ ಪಡೆಯುತ್ತಿದ್ದಾರೆ. ಎಲ್ಲವನ್ನೂ ನಾವು ಗಮನಿಸುತ್ತಲೇ ಬಂದಿದ್ದೇವೆ. ನೀವು ಹಾಕಿದ ಕಾಮೆಂಟುಗಳನ್ನು ಪ್ರಪಂಚದ ಆದ್ಯಂತವಾಗಿ ಲಕ್ಷಾಂತರ ಮಂದಿ ಓದುತ್ತಾರೆ.

ಹೀಗಾಗಿ ಎಲ್ಲ ಓದುಗರಲ್ಲಿ ಸವಿನಯ ವಿನಂತಿ.

ನಿಮ್ಮ ಕಾಮೆಂಟುಗಳು ನಮ್ಮ ರಾಜಕಾರಣಿಗಳ ತಪ್ಪುಗಳನ್ನು ತಿದ್ದಿಕೊಳ್ಳಲು ಪೂರಕವಾಗಬೇಕೇ ಹೊರತು, ಬರೇ ಅವರನ್ನು ನಿಂದಿಸುವುದಕ್ಕೆ ಸೀಮಿತವಾಗಬಾರದು. ನಾಲ್ಕೈದು ಮಕ್ಕಳನ್ನು ಒಬ್ಬ ಮಹಾತಾಯಿ ಹೆತ್ತರೆ, ಅದಕ್ಕೂ ಕೋಮು ಸಂಬಂಧಿತ ಕಾಮೆಂಟುಗಳು! ಬೇರೆಲ್ಲಾದರೂ ವಿಶೇಷವೊಂದು ಘಟಿಸಿದರೆ, ಅದಕ್ಕೆ ನಮ್ಮ ರಾಜಕಾರಣಿಗಳ ಹೆಸರು ಎಳೆದು ತಂದು ನಿಂದಿಸುವುದು... ಅವರಿವರ ತಂದೆ ತಾಯಿಯನ್ನು ಕರೆದು ತಂದು ಕೂರಿಸಿ ಅಸಭ್ಯ ಪದಾಭಿಷೇಕ ಮಾಡುವುದು, ಕಾಮೆಂಟ್ ಹಾಕಿದವರನ್ನೇ ತೊಡೆ ತಟ್ಟಿ ಯುದ್ಧಕ್ಕೆ ಆಹ್ವಾನಿಸುವುದು.... ಸಲ್ಲದು, ಸಲ್ಲದು.

ವ್ಯಕ್ತಿಯ ಕೆಲಸವನ್ನು ವಿರೋಧಿಸುವುದಿದ್ದರೆ ವಿರೋಧಿಸಿ, ಅದು ಬಾಯಿಗೆ ಸೀಮಿತವಾಗಿರಲಿ, ಆದರೆ ನೀವು ಇಲ್ಲಿ ಹಾಕುವ ಕಾಮೆಂಟ್ ಸಭ್ಯವಾಗಿರಲಿ. ಸಹ ಓದುಗನೊಬ್ಬ ಏನೋ ತಪ್ಪು ಬರೆದಿದ್ದಾನೆ ಎಂದರೆ, ಅದು ತಪ್ಪು ಅಂತ ತಿಳಿಹೇಳಿರಿ.

ಇದು ಇತ್ತೀಚಿನ ದಿನಗಳಲ್ಲಿ ಎಷ್ಟು ಅತಿರೇಕಕ್ಕೆ ಹೋಗುತ್ತಿದೆ ಎಂದರೆ, ಕಾಮೆಂಟ್ ಮಾಡುವ ಅವಕಾಶವನ್ನೇ ಕಿತ್ತೊಗೆಯಿರಿ ಎಂದು ಕೆಲವು ಓದುಗರು ದೂರವಾಣಿ ಮೂಲಕ, ಇ-ಮೇಲ್ ಮೂಲಕ ನಮಗೆ ಸಲಹೆ ನೀಡಲಾರಂಭಿದ್ದಾರೆ! ಬೇನಾಮಿ ಹೆಸರಿನಲ್ಲಿ ಅಸಭ್ಯವಾಗಿ ಕಾಮೆಂಟ್ ಮಾಡುವವರ IP address ಪತ್ತೆ ಹಚ್ಚಿ ಅವರ ಮೇಲೆ ಕ್ರಮ ಕೈಗೊಳ್ಳಿ ಅಂತೆಲ್ಲಾ ಪ್ರೀತಿಯಿಂದ ಚುಚ್ಚಿದ್ದಾರೆ. ಅಂತಹ ಅತಿರೇಕದ ಕ್ರಮಕ್ಕೆ ನಾವು ಹೋಗದಂತೆ ಎಲ್ಲ ಜವಾಬ್ದಾರಿಯುತ, ಪ್ರಜ್ಞಾವಂತ ಓದುಗರು ದಯವಿಟ್ಟು ಸಹಕರಿಸಿ. ಅಶ್ಲೀಲ ಪದಗಳು ನುಸುಳದಂತೆ ಈಗಿಂದೀಗಲೇ ಸ್ವಚ್ಛತಾ ಅಭಿಯಾನ ಆರಂಭಿಸೋಣ....

ವೆಬ್‌ದುನಿಯಾ ಸ್ವಚ್ಛ-ಸುಂದರವಾಗಿರಿಸಲು ನೀವೇನು ಮಾಡಬಹುದು?

ಯಾವುದೇ ಕಾಮೆಂಟ್‌ನಲ್ಲಿ ಕೆಟ್ಟ, ಅಶ್ಲೀಲ, ಅಸಭ್ಯ ಪದಗಳು, ವ್ಯಕ್ತಿ ನಿಂದನೆ, ಜಾತಿ ನಿಂದನೆ, ಸಮುದಾಯ ನಿಂದನೆಯ ವಿಷಯಗಳಿರುವುದನ್ನು ನೀವೇನಾದರೂ ನಮ್ಮ ಗಮನಕ್ಕೆ ತಂದರೆ, ಅದನ್ನು ಪರಾಮರ್ಶಿಸಿ ಅಳಿಸಿ ಹಾಕುತ್ತೇವೆ. ವೆಬ್‌ದುನಿಯಾ ತಾಣವನ್ನು ಸ್ವಚ್ಛ-ಸುಂದರವಾಗಿ ಇಡುವುದಕ್ಕಾಗಿಯೇ ನಿಮಗೊಂದು ಅಸ್ತ್ರ ಕೊಟ್ಟಿದ್ದೇವೆ. ಅಂತಹ ವಿಷಯಗಳು ನಿಮ್ಮ ಕಣ್ಣಿಗೆ ಬಿದ್ದರೆ ಸಾಕು, Report Abuse ಎಂಬ ಅಮೂಲ್ಯ ಆಯುಧದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಿ. ಅಶ್ಲೀಲ/ಅಸಭ್ಯ ಮನಸ್ಸುಗಳನ್ನು ಸರಿಪಡಿಸಿ ಅವರಲ್ಲಿ ಒಂದಷ್ಟು ಮಾನವೀಯತೆಯ ಮೊಳಕೆಯೊಡೆಯುವಂತೆ ಮಾಡಲು ಬನ್ನಿ, ಕೈಜೋಡಿಸಿ.

ಮನಸ್ಸು ಸ್ವಚ್ಛವಾಗಿದ್ದರೆ ಸಮಾಜ ಸ್ವಸ್ಥವಾಗಿರುತ್ತದೆ. ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ನಾವೆಲ್ಲ ಕೂಡಿ ಬೆಳೆಯೋಣ. ಆಗದೇ?

ವೆಬ್‌ದುನಿಯಾ ತಾಣದಲ್ಲಿ ಕನ್ನಡ ಕಾಮೆಂಟ್ ತಪ್ಪಿಲ್ಲದೆ ಬರೆಯೋದು ಹೇಗೆ? ಅಂತ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಯಾವುದೇ ಸಲಹೆ, ಸೂಚನೆಗಳಿದ್ದರೆ, ನಮ್ಮನ್ನು [email protected] ಇ-ಮೇಲ್ ಮೂಲಕ ಸಂಪರ್ಕಿಸಬಹುದು. ನೀವು ಇಲ್ಲಿ ಮಾಡಿದ ಕಾಮೆಂಟ್‌ಗಳು, ನೀಡಿದ ಸಲಹೆಗಳಿಗೆ ಧನ್ಯವಾದಗಳು ಮತ್ತು ಅವುಗಳ ಅಳವಡಿಕೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ಮುಂದೆ ತಿಳಿಸಲಾಗುವುದು. -ಸಂಪಾದಕ
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ