ಕಸಬ್‌ನನ್ನು ಕಾಂಗ್ರೆಸ್ ಗಲ್ಲಿಗೆ ಹಾಕುತ್ತದೆಯೇ?: ಬಿಜೆಪಿ ಪ್ರಶ್ನೆ
ಪಣಜಿ, ಶುಕ್ರವಾರ, 7 ಮೇ 2010( 09:00 IST )
ಸಂಸತ್ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆಯನ್ನು ಯಾವತ್ತೋ ಘೋಷಿಸಲಾಗಿದೆ. ಆದರೆ ಇನ್ನೂ ಆತ ಜೈಲಿನಲ್ಲಿ ಕೊಳೆಯುತ್ತಿದ್ದಾನೆ ಎನ್ನುತ್ತಾ ಮುಂಬೈ ದಾಳಿ ಪ್ರಕರಣದಲ್ಲಿ ಉಗ್ರ ಅಜ್ಮಲ್ ಕಸಬ್‌ಗೆ ಮರಣ ದಂಡನೆ ಶಿಕ್ಷೆ ಘೋಷಣೆಯಾಗಿರುವುದನ್ನು ಸ್ವಾಗತಿಸಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಕಾಂಗ್ರೆಸ್ ಮತ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಪಾಕಿಸ್ತಾನದ ಭಯೋತ್ಪಾದಕ ಕಸಬ್‌ಗೆ ಇಂದು ವಿಶೇಷ ನ್ಯಾಯಾಲಯವು ಮರಣ ದಂಡನೆ ಘೋಷಿಸಿರುವುದನ್ನು ಸ್ವಾಗತಿಸಿದ ಅವರಲ್ಲಿ, ಆತನಿಗೆ ಗಲ್ಲು ಶಿಕ್ಷೆಯಾಗಬಹುದೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, 'ನನಗೇನೂ ಸಂಪೂರ್ಣ ಭರವಸೆಯಿಲ್ಲ. 2001ರ ಸಂಸತ್ ದಾಳಿ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿ ಗಲ್ಲು ಶಿಕ್ಷೆ ಪಡೆದುಕೊಂಡಿರುವ ಅಫ್ಜಲ್ ಗುರು ಈಗಲೂ ಜೈಲಿನಲ್ಲೇ ಇದ್ದಾನೆ' ಎಂದರು.
ಅಫ್ಜಲ್ ಗುರು ಮುಂತಾದವರಿಗೆ ಗಲ್ಲು ಶಿಕ್ಷೆ ನೀಡದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ಅಧ್ಯಕ್ಷ, ಆತನಂತೆ ಶಿಕ್ಷೆ ಪಡೆದುಕೊಂಡಿರುವ ಹಲವು ಮಂದಿ ಸಾವಿಗಾಗಿ ಕಾಯುತ್ತಿದ್ದಾರೆ. ಆದರೆ ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕೀಯದಿಂದಾಗಿ ಅವರನ್ನು ನೇಣಿಗೆ ಹಾಕಲಾಗುತ್ತಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಅದೇ ಹೊತ್ತಿಗೆ ಓಟ್ ಬ್ಯಾಂಕ್ ರಾಜಕೀಯವನ್ನು ಭಯೋತ್ಪಾದನೆಯ ಜತೆ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದಿರುವ ಅವರು, ಕ್ರಿಮಿನಲ್‌ಗಳು ಕ್ರಿಮಿನಲ್‌ಗಳೇ, ಭಯೋತ್ಪಾದಕರು ಭಯೋತ್ಪಾದಕರೇ. ಇವುಗಳನ್ನು ರಾಜಕೀಯದ ಜತೆ ಮಿಶ್ರಮಣ ಮಾಡಬಾರದು ಎಂದು ಕಾಂಗ್ರೆಸ್‌ಗೆ ಪರೋಕ್ಷವಾಗಿ ಸಲಹೆ ನೀಡಿದರು.
ಸರಕಾರವು ಅಫ್ಜಲ್ ಗುರು ಪ್ರಕರಣದಲ್ಲಿ ನಡೆದುಕೊಂಡಂತೆ ಕಸಬ್ ಪ್ರಕರಣದಲ್ಲೂ ಅದನ್ನು ಪುನರಾವರ್ತಿಸಬಾರದು. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಗಲ್ಲಿಗೆ ಹಾಕುವುದನ್ನು ವಿಳಂಬ ಮಾಡಬಾರದು. ಆದರೆ ಕಸಬ್ ಹೊಂದಿರುವ ಮೇಲ್ಮನವಿ ಹಕ್ಕುಗಳನ್ನು ಆತನಿಗೆ ನ್ಯಾಯಬದ್ಧವಾಗಿ ನೀಡಬೇಕೆಂದು ಬಿಜೆಪಿ ಹಿರಿಯ ನಾಯಕ ಬಲ್ಬೀರ್ ಪುಂಜ್ ಆಗ್ರಹಿಸಿದ್ದಾರೆ.