ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್‌ಗೆ ಗಲ್ಲು; ಆತನ ಭಾರತೀಯ ಸಹಚರರ ಕತೆಯೇನು?
(Pakistani terrorist | Ajmal Kasab | Faheem Ansari | Sabauddin Ahmed)
ಮುಂಬೈ ದಾಳಿಯ ವೇಳೆ ಜೀವಂತವಾಗಿ ಸೆರೆ ಸಿಕ್ಕಿರುವ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಮೀರ್ ಅಜ್ಮಲ್ ಕಸಬ್‌ಗೆ ವಿಶೇಷ ನ್ಯಾಯಾಲಯ ವಿಧಿಸಿರುವ ಮರಣ ದಂಡನೆ ಶಿಕ್ಷೆಯನ್ನು ಖಚಿತಗೊಳಿಸುವ ನಿಟ್ಟಿನಲ್ಲಿ ಪ್ರಕರಣ ಮುಂದಿನ ವಾರ ಬಾಂಬೆ ಹೈಕೋರ್ಟ್ ಮುಂದೆ ಬರಲಿದೆ. ಆದರೆ ಗಡುವು ಮುಕ್ತಾಯದ ಹಂತ ತಲುಪಿದ್ದರೂ ಇಬ್ಬರು ಭಾರತೀಯ ಉಗ್ರರನ್ನು ಖುಲಾಸೆಗೊಳಿಸಿರುವ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಇನ್ನೂ ಮೇಲ್ಮನವಿ ಸಲ್ಲಿಸಿಲ್ಲ.
2008ರ ನವೆಂಬರ್ 26ರಂದು ಮುಂಬೈಯ ಹಲವು ಕಡೆ ಹತ್ತು ಭಯೋತ್ಪಾದಕರು ದಾಳಿ ನಡೆಸಿ 166 ಮಂದಿಯನ್ನು ನಿರ್ದಯವಾಗಿ ಕೊಂದು ಹಾಕಿದ್ದ ಪ್ರಕರಣವನ್ನು ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು ಇದೇ ವರ್ಷದ ಮೇ 6ರಂದು ಕಸಬ್‌ಗೆ ಗಲ್ಲು ಶಿಕ್ಷೆ ಪ್ರಕಟಿಸಿತ್ತು.
ಹೈಕೋರ್ಟ್ ಮೂಲಗಳ ಪ್ರಕಾರ ಕಸಬ್ ಗಲ್ಲು ಶಿಕ್ಷೆಯನ್ನು ನಿರ್ಧರಿಸಬೇಕಾದ ಪ್ರಕರಣ ಮುಂದಿನ ವಾರ ವಿಚಾರಣೆಗೆ ಬರಲಿದೆ. ಆದರೆ ಇಬ್ಬರು ಭಾರತೀಯ ಉಗ್ರರಾದ ಫಹೀಂ ಅನ್ಸಾರಿ ಮತ್ತು ಸಬಾಹುದ್ದೀನ್ ಅಹ್ಮದ್ ನಿರ್ದೋಷಿತ್ವದ ವಿರುದ್ಧ ಮಹಾರಾಷ್ಟ್ರ ಗೃಹ ಸಚಿವಾಲಯವು ಸಲ್ಲಿಸಬೇಕಾಗಿದ್ದ ಮೇಲ್ಮನವಿ ಕರಡು ಇನ್ನೂ ಸರಕಾರಿ ವಕೀಲರ ಕಚೇರಿಯನ್ನು ತಲುಪಿಲ್ಲ.
ಲಷ್ಕರ್ ಇ ತೋಯ್ಬಾ ದಾಳಿಗೆ ಸಹಕರಿಸಿದ್ದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಅವರ ಕೃತ್ಯಗಳ ಕುರಿತು ಸಾಕ್ಷ್ಯಾಧಾರಗಳ ಕೊರತೆಯನ್ನು ಎತ್ತಿ ತೋರಿಸಿದ್ದ ನ್ಯಾಯಾಲಯವು, ಅವರಿಬ್ಬರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಇವರಿಬ್ಬರು ಮುಂಬೈಯ ನಕ್ಷೆಗಳನ್ನು ಭಯೋತ್ಪಾದಕರಿಗೆ ಒದಗಿಸಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.
ಹೈಕೋರ್ಟ್‌ನಲ್ಲಿ ಕಸಬ್ ಮರಣದಂಡನೆ ಪ್ರಕರಣವನ್ನು ಪ್ರತಿನಿಧಿಸಲು ವಿಶೇಷ ನ್ಯಾಯವಾದಿ ಉಜ್ವಲ್ ನಿಕ್ಕಂ ಅವರನ್ನು ರಾಜ್ಯ ಸರಕಾರ ನೇಮಕಗೊಳಿಸಿದೆ. ಅನ್ಸಾರಿ ಮತ್ತು ಅಹ್ಮದ್ ದೋಷಮುಕ್ತಿಯ ವಿರುದ್ಧವೂ ಅವರೇ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ವಿಶೇಷ ನ್ಯಾಯಾಲಯದಲ್ಲೂ ಸರಕಾರಿ ವಕೀಲರಾಗಿ ವಾದಿಸಿ ಗೆದ್ದಿದ್ದ ನಿಕ್ಕಂ, ಖುಲಾಸೆಗೊಂಡಿರುವ ಇಬ್ಬರು ಭಾರತೀಯ ಉಗ್ರರ ವಿರುದ್ಧದ ಮೇಲ್ಮನವಿ ಕರಡು ಪ್ರತಿಯನ್ನೂ ಸಿದ್ಧಗೊಳಿಸಲಿದ್ದಾರೆ.
ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲು 90 ದಿನಗಳ ಅವಕಾಶ ನೀಡಲಾಗಿತ್ತು. ಅದು ಆಗಸ್ಟ್ 4ರಂದು ಮುಕ್ತಾಯಗೊಳ್ಳಲಿದೆ. ಹಾಗಾಗಿ ಈ ಅವಧಿಯಲ್ಲೇ ಸರಕಾರ ತನ್ನ ಮೇಲ್ಮನವಿಯನ್ನು ಸಲ್ಲಿಸಲಿದೆ ಎಂದು ಹೇಳಲಾಗಿದೆ.
ತನಗೆ ವಿಧಿಸಿರುವ ಗಲ್ಲು ಶಿಕ್ಷೆಯ ವಿರುದ್ಧ ಕಸಬ್ ಇನ್ನೂ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿಲ್ಲ. ಆದರೆ ಹೈಕೋರ್ಟ್‌ಗೆ ಪತ್ರ ಬರೆದು, ತನ್ನ ಪರವಾಗಿ ವಾದ ಮಂಡಿಸಲು ಇಬ್ಬರು ವಕೀಲರನ್ನು ನೇಮಿಸುವಂತೆ ಮನವಿ ಮಾಡಿದ್ದಾನೆ. ಅದರಂತೆ ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹೈಕೋರ್ಟ್ ಶಿಫಾರಸು ಮಾಡಿತ್ತು. ಪ್ರಾಧಿಕಾರವು ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ಎಂಬ ಇಬ್ಬರು ನ್ಯಾಯವಾದಿಗಳನ್ನು ನೇಮಕಗೊಳಿಸಿದೆ.
ಈ ಇಬ್ಬರೂ ವಕೀಲರು ಇದೀಗ 1,500 ಪುಟಗಳ ತೀರ್ಪಿನ ಪ್ರತಿಯನ್ನು ಕೂಲಂಕಶವಾಗಿ ಪರಿಶೀಲನೆ ನಡೆಸುತ್ತಿದ್ದು, ಕೆಲವೇ ದಿನಗಳಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ.
ಕಸಬ್ ಮರಣ ದಂಡನೆ ಸ್ಥಿರಗೊಳಿಸುವುದು, ಮರಣ ದಂಡನೆ ವಿರುದ್ಧದ ಕಸಬ್ ಮೇಲ್ಮನವಿ ಮತ್ತು ಇಬ್ಬರು ಭಾರತೀಯ ಉಗ್ರರ ಖುಲಾಸೆ ವಿರುದ್ಧದ ಸರಕಾರದ ಮೇಲ್ಮನವಿಯನ್ನು ಹೈಕೋರ್ಟ್ ಏಕಕಾಲಕ್ಕೆ ವಿಚಾರಣೆ ನಡೆಸಲಿದೆ.