ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ತೀರ್ಪು ನಮ್ಮಲ್ಲಿ ದ್ವಿತೀಯ ದರ್ಜೆ ಪೌರರೆಂಬ ಭಾವನೆ ತಂದಿದೆ'
(Ayodhya verdict | Irfan Habib | Muslim | Shabnam Hashmi)
'ತೀರ್ಪು ನಮ್ಮಲ್ಲಿ ದ್ವಿತೀಯ ದರ್ಜೆ ಪೌರರೆಂಬ ಭಾವನೆ ತಂದಿದೆ'
ನವದೆಹಲಿ, ಶನಿವಾರ, 2 ಅಕ್ಟೋಬರ್ 2010( 09:09 IST )
ಅಯೋಧ್ಯೆಯ ಒಡೆತನ ಪ್ರಕರಣವೆನ್ನುವುದು ಕೇವಲ ಒಂದು ತುಂಡು ಭೂಮಿಯ ವಿವಾದವಾಗಿರಲಿಲ್ಲ. ಹಲವರು, ಅದರಲ್ಲೂ ಅಲ್ಪಸಂಖ್ಯಾತರು ಇದನ್ನು ಭಾರತದ ಜಾತ್ಯತೀತೆಯ ಬದ್ಧತೆಗಾಗಿನ ಪರೀಕ್ಷೆ ಎಂದೇ ಪರಿಗಣಿಸಿದ್ದರು.
ಹಾಗಾದರೆ ಗುರುವಾರ ನಡೆದ ಪರೀಕ್ಷೆಯಲ್ಲಿ ಭಾರತ ಯಶಸ್ವಿಯಾಗಿ ಪಾಸಾಗಿದೆಯೇ? ಈ ಸಂಬಂಧ ಸ್ಪಷ್ಟ ಅಥವಾ ನೇರ ಉತ್ತರಗಳು ದೊರಕಿಲ್ಲ. ದೇಶದ ಬಹುದೊಡ್ಡ ಅಲ್ಪಸಂಖ್ಯಾತ ಸಮುದಾಯವು ತೀಕ್ಷ್ಣ ಪ್ರತಿಕ್ರಿಯೆಗಳನ್ನು ನೀಡಿಲ್ಲವಾದರೂ, ಅಸಮಾಧಾನದ ದನಿಯಂತೂ ಕೇಳಿ ಬರುತ್ತಿದೆ ಎನ್ನುವುದು ಸತ್ಯ.
ಇತಿಹಾಸಕಾರ ಇರ್ಫಾನ್ ಹಬೀಬ್ ಅವರ ಮಾತುಗಳಲ್ಲೇ ಹೇಳುವುದಾದರೆ, ಇತಿಹಾಸ ಮತ್ತು ವಾಸ್ತವತೆಗಳಲ್ಲಿ ರಾಜಿ ಮಾಡಿಕೊಂಡ ತೀರ್ಪಿದು. ಐತಿಹಾಸಿಕ ವಾಸ್ತವತೆಗಳನ್ನೊಳಗೊಂಡ ಭಾರತೀಯ ಪುರಾತತ್ವ ಇಲಾಖೆಯ ವರದಿಯನ್ನು ನ್ಯಾಯಾಲಯ ಸ್ವೀಕರಿಸುವುದು ಸರಿಯಲ್ಲ. ಇಲ್ಲಿ ನಂಬಿಕೆಯೇ ಹೆಚ್ಚಿನ ತೂಕ ಪಡೆದುಕೊಳ್ಳುತ್ತದೆ. ಐತಿಹಾಸಿಕ ವಿಚಾರಗಳು ಬಂದಾಗ ಎಚ್ಚರ ವಹಿಸಬೇಕಾಗುವ ಅಗತ್ಯವಿರುತ್ತದೆ ಎಂದಿದ್ದಾರೆ.
ಗುರುವಾರದ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ವಿದ್ಯಾವಂತ ಮುಸ್ಲಿಮರು ಟಿವಿ ಚಾನೆಲ್‌ಗಳತ್ತ ತಮ್ಮ ಗಮನಗಳನ್ನು ಕೇಂದ್ರೀಕರಿಸಿದ್ದರು. ಬಹುತೇಕ ಮಂದಿ ತಮ್ಮ ರಾಜಕೀಯ ಅರಿವಿನ ಹಿನ್ನೆಲೆಯಲ್ಲಿ ಮಾತುಕತೆ ನಡೆಸುತ್ತಿದ್ದರು. ತೀರ್ಪು ಹೊರ ಬಂದ ನಂತರ ಅವರ ಬಾಯಿಯಲ್ಲಿ ಬಂದ ಮಾತು, ಇದು ಮುಸ್ಲಿಂ ವಿರೋಧಿ ಎನ್ನುವುದು.
ಭಾರತೀಯ ಮುಸ್ಲಿಮರು ಈ ದೇಶದಲ್ಲಿನ ಬಹುಸಂಖ್ಯಾತ ಸಮುದಾಯಗಳು ಹೇರುವ ನಿಯಮಗಳ ಅಡಿಯಲ್ಲಿ ಬದುಕು ಸಾಗಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈಗಿನಿಂದ ನಾವು ನಿರಂತರ ಭೀತಿಯಲ್ಲೇ ಜೀವಿಸಬೇಕಾಗಿದೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯವೊಂದರ ಉಪ ಕುಲಪತಿಯೊಬ್ಬರು ನೋವಿನಿಂದ ಹೇಳಿಕೊಂಡಿದ್ದಾರೆ.
ಆದರೆ ಇತರ ಕೆಲವರ ಅಭಿಪ್ರಾಯಗಳು ಕೊಂಚ ಅತಿರೇಕದ್ದು ಎಂದು ಅನ್ನಿಸದೇ ಇರದು. 'ಸಹಮತ್' ಸಂಘಟನೆಯ ಮುಖ್ಯಸ್ಥೆ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿರುವ ಶಬ್ನಂ ಹಷ್ಮಿಯವರ ಪ್ರಕಾರ ಈ ತೀರ್ಪಿನಿಂದಾಗಿ ತಾನು ಎರಡನೇ ದರ್ಜೆ ಪೌರ ಎಂಬ ಭಾವನೆ ಮೂಡಿದೆಯಂತೆ.
ತಾರ್ಕಿಕ ವಿರೋಧ ಮತ್ತು ಹಗೆತನದ ವಿರುದ್ಧ ನಮ್ಮ ಹೋರಾಟವನ್ನು ನಾವು ಕೈ ಬಿಡುವುದಿಲ್ಲ. ಆದರೆ ನಮ್ಮದು ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಆಶ್ವಾಸನೆಯನ್ನು ನಿಮಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಮುಂದಿನ ಪೀಳಿಗೆಗೆ ಶಬ್ನಂ ಸಂದೇಶ ನೀಡುತ್ತಾರೆ.
ಮುಸ್ಲಿಮರು ನಿರಾಸೆಗೊಂಡಿರಬಹುದು. ಆದರೆ ತಮ್ಮ ಭರವಸೆಗಳನ್ನು, ವಿಶ್ವಾಸಗಳನ್ನು ಅವರು ಕಳೆದುಕೊಂಡಿಲ್ಲ. ಅಲ್ಲದೆ ತಮ್ಮ ಭಾರತದ ಕಲ್ಪನೆಯನ್ನು ತೀರ್ಪು ಅಲುಗಾಡಿಸಿಲ್ಲ ಎಂದೇ ಹೇಳುತ್ತಿದ್ದಾರೆ.
ಹೃದಯವು ನಿರಾಸೆಗೊಳಗಾಗಿದೆ, ಆದರೆ ಭರವಸೆ ಕಳೆದುಕೊಂಡಿಲ್ಲ. ಸಂಜೆಯ ಶೋಕವು ಸುದೀರ್ಘವಾಗುತ್ತಿದೆ. ಆದರೆ ಅದು ಎಷ್ಟಾದರೂ ಸಂಜೆ ಹೊತ್ತಲ್ಲವೇ ಎಂದು ದ್ವಿಪದಿಯೊಂದರಲ್ಲೇ ತನ್ನ ನೋವನ್ನು ಯೋಜನಾ ಆಯೋಗದ ಸದಸ್ಯರಾಗಿರುವ ಸೈದಾ ಹಮೀದ್ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯ ಕುರಿತು ನ್ಯಾಯಾಲಯವು ಇಂದು ಇಂತಹ ತೀರ್ಪನ್ನು ನೀಡಿದೆ. ನಾಳೆಯ ದಿನ ಇಂತಹ ಪ್ರಸಂಗಗಳು ದೇಶದ ಇತರೆಡೆಗಳಲ್ಲೂ ನಡೆಯುವುದಿಲ್ಲ, ಪುನರಾವರ್ತನೆಯಾಗುವುದಿಲ್ಲ ಎಂಬುದಕ್ಕೆ ಏನಿದೆ ಖಾತರಿ ಎಂದು ಮಾಜಿ ಉಪ ಕುಲಪತಿಯೊಬ್ಬರು ಪ್ರಶ್ನೆ ಎಸೆದಿದ್ದಾರೆ.