ಅಯೋಧ್ಯೆ ತೀರ್ಪು ಬಂದ ಮರುದಿನವೇ ರಾಜಕೀಯ ವೇದಿಕೆಗಳು ಬಣ್ಣ ಪಡೆದುಕೊಳ್ಳ ತೊಡಗಿವೆ. ಬಾಬ್ರಿ ಮಸೀದಿ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಮಾಜಿ ರಾಯಭಾರಿ ಹಾಗೂ ರಾಜಕಾರಣಿ ಸಯ್ಯದ್ ಶಹಾಬುದ್ದೀನ್ ಪುತ್ರಿಗೆ ಸಂಯುಕ್ತ ಜನತಾದಳ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿದೆ.
ಪಾಟ್ನಾದಿಂದ 125 ಕಿಲೋ ಮೀಟರ್ ದೂರದಲ್ಲಿರುವ ಬೆಗುಸರಾಯ್ ಜಿಲ್ಲೆಯಲ್ಲಿನ ಮುಸ್ಲಿಂ ಪ್ರಾಬಲ್ಯದ ಸಾಹೇಬ್‌ಪುರ್ ಕಮಾಲ್ ಕ್ಷೇತ್ರದಿಂದ 40ರ ಹರೆಯದ ಫರ್ವೀನ್ ಅಮಾನುಲ್ಲಾಹ್‌ಗೆ ಜೆಡಿಯು ಟಿಕೆಟ್ ಪ್ರಕಟಿಸಿದೆ.
ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷಗಳಾದ ಜೆಡಿಯು ಮತ್ತು ಬಿಜೆಪಿಗಳು ತಮ್ಮ ಮೈತ್ರಿ ಮುಂದುವರಿಸುತ್ತಿವೆ.
ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಿಗೆ ಶಬಾಬುದ್ದೀನ್ ಪ್ರತಿತಂತ್ರಗಳನ್ನು ಹೂಡಿದ್ದರು. ಅದಕ್ಕಿಂತಲೂ ವಿಶೇಷವೆಂದರೆ ಇದೀಗ ಜೆಡಿಯು ಅಭ್ಯರ್ಥಿಯಾಗಿರುವ ಫರ್ವೀನ್ ಪತಿ ಅಫ್ಜಲ್ ಅಮಾನುಲ್ಲಾಹ್ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿಯವರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದುದು.
1990ರಲ್ಲಿ ರಾಮಮಂದಿರಕ್ಕಾಗಿ ರಥಯಾತ್ರೆ ಕೈಗೊಂಡಿದ್ದ ಅಡ್ವಾಣಿಯವರನ್ನು ಬಿಹಾರದಲ್ಲಿ ಬಂಧಿಸಲಾಗಿತ್ತು. ಐಎಎಸ್ ಹಿರಿಯ ಅಧಿಕಾರಿಯಾಗಿರುವ ಅಫ್ಜಲ್ ಅವರು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು ಎಂದು ವರದಿಗಳು ಹೇಳಿವೆ.
ಚುನಾವಣೆಯಲ್ಲಿ ನಾನು ಜೆಡಿಯು ಮತ್ತು ಎನ್‌ಡಿಎ ಅಭ್ಯರ್ಥಿ ಎಂದು ಫರ್ವೀನ್ ಹೇಳಿಕೆ ನೀಡಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದಲ್ಲಿನ ಸಾಮಾಜಿಕ ವಿಜ್ಞಾನದ ಸ್ನಾತಕೋತ್ತರ ಪದವೀಧರೆಯಾಗಿರುವ ಫರ್ವೀನ್ 2002ರ ಗುಜರಾತ್ ಕೋಮುಗಲಭೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಭಾರೀ ಪ್ರತಿಭಟನೆಗಳನ್ನು, ಟೀಕೆಗಳನ್ನು ನಡೆಸಿದ್ದವರು. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕಾರಕ್ಕೆ ಬರುವಲ್ಲಿ ಬಿಜೆಪಿ ಸಹಕಾರ ನೀಡಿದ ನಂತರ ಫರ್ವೀನ್ ನಿಲುವುಗಳು ಮೃದುಗೊಂಡಿವೆ.
ಈ ಕುಟುಂಬದ ಬಗ್ಗೆ ನಿತೀಶ್ ಆಡಳಿತವು ಸಹಕಾರಿ ಮನೋಭಾವನೆ ಹೊಂದಿರುವುದೇ ಇದಕ್ಕಿರುವ ಮತ್ತೊಂದು ಕಾರಣ. ಆಕೆಯ ಗಂಡ ಅಫ್ಜಲ್‌ಗೆ ರಾಜ್ಯ ಗೃಹ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿದೆ. ಮುಸ್ಲಿಂ ಐಎಎಸ್ ಅಧಿಕಾರಿಯೊಬ್ಬರಿಗೆ ಇಂತಹ ಪ್ರಭಾವಿ ಸ್ಥಾನವನ್ನು ನಿತೀಶ್ ಕರುಣಿಸಿರುವುದು ಇದೇ ಮೊದಲಂತೆ.