ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ತೀರ್ಪಿನ ವಿರುದ್ಧ ಸುನ್ನಿ ವಕ್ಫ್ ಮೇಲ್ಮನವಿ ಖಚಿತ
(Sunni Wakf Board | Ayodhya verdict | Supreme Court | Zafaryab Jilani)
ಅಯೋಧ್ಯೆ ತೀರ್ಪಿನ ವಿರುದ್ಧ ಸುನ್ನಿ ವಕ್ಫ್ ಮೇಲ್ಮನವಿ ಖಚಿತ
ಲಕ್ನೋ, ಮಂಗಳವಾರ, 5 ಅಕ್ಟೋಬರ್ 2010( 16:59 IST )
ಅಯೋಧ್ಯೆಯ ವಿವಾದಿತ ಸ್ಥಳವನ್ನು ಮೂರು ಭಾಗವನ್ನಾಗಿ ಮಾಡಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿ ಸುಪ್ರೀಂ ಕೋರ್ಟಿಗೆ ಹೋಗುವ ತನ್ನ ನಿರ್ಧಾರವನ್ನು ಖಚಿತಪಡಿಸಿದೆ. ಈ ಸಂಬಂಧ ಸಭೆ ನಡೆಸಿರುವ ಮಂಡಳಿಯು, ನಿಲುವಳಿಯೊಂದನ್ನು ಅಂಗೀಕರಿಸಿದೆ.
PTI
ಹೈಕೋರ್ಟ್ ತೀರ್ಪಿನಂತೆ ವಿವಾದಿತ ಭೂಮಿಯನ್ನು ಒಪ್ಪಿಸಲು ನಾವು ಸಿದ್ಧರಿಲ್ಲ. ತೀರ್ಪಿನ ವಿರುದ್ಧ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಲಕ್ನೋ ತ್ರಿಸದಸ್ಯ ಪೀಠವು ನೀಡಿದ ತೀರ್ಪಿನ ನಂತರ ವಕ್ಫ್ ಮಂಡಳಿ ತಿಳಿಸಿತ್ತು.
ವಿವಾದಿತ ಸ್ಥಳವನ್ನು ಮೂರು ಭಾಗಗಳಾಗಿ ವಿಂಗಡಿಸುವ ತೀರ್ಮಾನವು ನಮಗೆ ಸಮಾಧಾನ ತಂದಿಲ್ಲ. ಅದರ ವಿರುದ್ಧ ನಾವು ಮೇಲ್ಮನವಿ ಮಾಡುತ್ತೇವೆ ಎಂದು ಮಂಡಳಿಯ ವಕೀಲ ಜಾಫರಯಾಬ್ ಜಿಲಾನಿ ಹೇಳಿದ್ದರು.
ಅದೇ ಹೊತ್ತಿಗೆ ತಾವು ಸೌಹಾರ್ದಯುತ ಮಾತುಕತೆಯ ಮೂಲಕ ಸಮಸ್ಯೆ ಪರಿಹಾರವಾಗುವುದಿದ್ದರೆ ಸಿದ್ಧರಾಗಿದ್ದೇವೆ ಎಂದೂ ಸುನ್ನಿ ವಕ್ಫ್ ಮಂಡಳಿ ಸ್ಪಷ್ಟಪಡಿಸಿದೆ.
ಅಂತಹ ಪ್ರಸ್ತಾವನೆಗಳು ಬಂದಲ್ಲಿ ಮಾತುಕತೆಗಳು ನಡೆಯುತ್ತವೆ. ಹೇಗೂ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಮಗೆ 90 ದಿನಗಳ ಕಾಲಾವಕಾಶವಿದೆ. ನಾವೇನು ಈ ಕುರಿತು ಆತುರದ ನಿರ್ಧಾರಕ್ಕೆ ಬರುವುದಿಲ್ಲ ಎಂದು ಜಿಲಾನಿ ತಿಳಿಸಿದ್ದಾರೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸಭೆ ನಡೆದ ನಂತರವೇ ನಾವು ಸುಪ್ರೀಂ ಕೋರ್ಟಿಗೆ ಹೋಗುತ್ತೇವೆ. ನಮಗೆ 90 ದಿನಗಳು ಮುಂದಿರುವುದರಿಂದ ಆತುರ ಪಡುವುದಿಲ್ಲ ಎಂದರು.
ಮೂವರು ನ್ಯಾಯಾಧೀಶರು ತೆಗೆದುಕೊಂಡಿರುವ ತೀರ್ಮಾನವು ನನಗೆ ವೈಯಕ್ತಿಕವಾಗಿ ಸರಿ ಕಂಡಿಲ್ಲ. ಈ ಕುರಿತು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ಯತ್ನಕ್ಕೆ ಒತ್ತು ನೀಡಲು ನಾವು ಸಿದ್ಧರಿದ್ದೇವೆ. ಆದರೆ ಯಾವುದೇ ಕಾರಣಕ್ಕೂ ವಿವಾದಿತ ಸ್ಥಳವನ್ನು ಬಿಟ್ಟುಕೊಡುವ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ವಕೀಲರು ತಿಳಿಸಿದ್ದಾರೆ.
ಬಾಬ್ರಿ ಮಸೀದಿ ಪ್ರಕರಣ ಕುರಿತ ತೀರ್ಪು ಭಾಗಶಃ ಅಸಮಾಧಾನ ತಂದಿರುವುದು ಮಾತ್ರವಲ್ಲ, ಇದು ಮುಸ್ಲಿಮರ ಪಕ್ಷದ ಕಾನೂನು ಮತ್ತು ಸಾಕ್ಷ್ಯಗಳಿಗೆ ಪೂರಕವಾಗಿಲ್ಲ. ಆದರೂ ನಾವು ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಮಸೀದಿಯ ಕುರಿತು ನಾವು ಭರವಸೆಯನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.