ತನಗೆ ಹರತಾಳು ಹಾಲಪ್ಪನವರು ಇದೇ ಮೊಬೈಲ್ ನಂಬರಿನಿಂದ ಕರೆ ಮಾಡಿದ್ದು ಎಂದು ಮಾಧ್ಯಮಗಳ ಅಲವತ್ತು ಕೊಂಡಿದ್ದ ವೆಂಕಟೇಶ್ ಮೂರ್ತಿ ಮತ್ತು ಅತ್ಯಾಚಾರಕ್ಕೊಳಗಾದ ಅವರ ಎರಡನೇ ಪತ್ನಿ ಚಂದ್ರಾವತಿ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಾಲಪ್ಪನವರ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಂತರ ದಾಖಲೆಗಳನ್ನು ಬಿಡುಗಡೆ ಮಾಡಿದ್ದ ಮೂರ್ತಿ ದಂಪತಿ, ತಮಗೆ ಹಾಲಪ್ಪನವರ 9448****09 ಸಂಖ್ಯೆಯಿಂದ ನಿರಂತರ ಕರೆಗಳು ಬರುತ್ತಿವೆ ಎಂದಿದ್ದರು. ಆದರೆ ಆ ನಂಬರೇ ನಕಲಿ ಎಂಬುದು ಬಯಲಾಗಿದೆ. ಇದರೊಂದಿಗೆ ಮೂರ್ತಿ ದಂಪತಿ ಮತ್ತೊಂದು ಹಿನ್ನಡೆ ಅನುಭವಿಸಿದ್ದಾರೆ.
ಅದು ಮುಳಬಾಗಿಲು ನಂಬರ್..! ಶಿವಮೊಗ್ಗದಲ್ಲಿ ನಡೆದ ಅತ್ಯಾಚಾರಕ್ಕೂ ಮುಳಬಾಗಿಲು ಶಿವರಾಜುವಿಗೂ ಏನು ಸಂಬಂಧ? ಹಾಗೊಂದು ಸಂಬಂಧ ಕಲ್ಪಿಸಿರುವುದು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಹೇಳಲಾಗಿರುವ ಚಂದ್ರಾವತಿ ಮತ್ತು ಅವರ ಪತಿ ವೆಂಕಟೇಶ ಮೂರ್ತಿ.
ತನಗೆ ಹಾಲಪ್ಪನವರ 9448****09 ಮೊಬೈಲ್ ಸಂಖ್ಯೆಯಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮೂರ್ತಿ ಮೊಬೈಲ್ ಸಂಖ್ಯೆಯನ್ನು ಬಹಿರಂಗಪಡಿಸಿದ ನಂತರ ಪತ್ರಿಕೆಗಳು ಮತ್ತು ಟಿವಿ ವಾಹಿನಿಗಳು ಇದನ್ನು ಪ್ರಕಟಿಸಿದ್ದವು.
ಇದರ ಬೆನ್ನಿಗೆ ಈ ಸಂಖ್ಯೆಗೆ ನಿರಂತರ ಕರೆಗಳು ಬರಲಾರಂಭಿಸಿದವು. ಕೆಲವರು ಹಿಗ್ಗಾಮುಗ್ಗಾ ಬೈಗುಳಗಳ ಸುರಿಮಳೆ ಸುರಿಸುತ್ತಿದ್ದರೆ, ಇನ್ನು ಕೆಲವರು ಜೀವ ಬೆದರಿಕೆಯನ್ನೂ ಹಾಕಿದರು. ಮೊಬೈಲ್ ಮಾಲಕರಿಗೆ ಆಶ್ಚರ್ಯ. ಕೊನೆಗೂ ಕೂಲಂಕಷವಾಗಿ ವಿಚಾರಣೆ ನಡೆಸಿದಾಗ ಇದು ಮೂರ್ತಿ ದಂಪತಿಯ ಕಿತಾಪತಿ ಎಂಬುದು ಬಯಲಿಗೆ ಬಂತು.
ಆತನ ಹೆಸರು ಕೆ.ಎನ್. ಶಿವರಾಜು. ಕೋಲಾರದ ಮುಳಬಾಗಿಲುವಿನ ನೇತಾಜಿ ನಗರದಲ್ಲಿನ ಪಶುವೈದ್ಯ ಇಲಾಖೆಯ ನಿವೃತ್ತ ನೌಕರ ನಾರಾಯಣ ಎಂಬ ಪುತ್ರ ಇವರು. ಸ್ವಭಾವದಲ್ಲಿ ಸೌಮ್ಯ. ಯಾರ ತಂಟೆಗೂ ಹೋಗುವವರಲ್ಲ. ಪ್ರಸಕ್ತ ಏರ್ಸೆಲ್ ಮೊಬೈಲ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. 2003ರಲ್ಲೇ ಈ 9448****09 ನಂಬರನ್ನು ಪಡೆದುಕೊಂಡು ಬಳಕೆ ಮಾಡುತ್ತಾ ಬಂದಿದ್ದಾರೆ.
ಪೊಲೀಸರಿಗೆ ದೂರು... 2009ರ ನವೆಂಬರ್ 31ರಿಂದ ಡಿಸೆಂಬರ್ 28ರವರೆಗೆ 9448****09 ನಂಬರಿನಿಂದ ಐದು ಬಾರಿ ಹಾಲಪ್ಪನವರು ನಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮೂರ್ತಿ ದಂಪತಿ ದೂರು ನೀಡಿದ ನಂತರ ಸೃಷ್ಟಿಯಾದ ಆವಾಂತರಗಳಿಂದಾಗಿ ಸಾಕಷ್ಟು ಮಾನಸಿಕ ಬೇನೆ ಅನುಭವಿಸಿದ ಶಿವರಾಜು ಕೊನೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇಲ್ಲಿನ ಸ್ಥಳೀಯ ಪೊಲೀಸ್ ಠಾಣೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೂ ಅವರು ದೂರು ನೀಡಿದ್ದು, ತನ್ನದಲ್ಲದ ತಪ್ಪಿನಿಂದಾಗಿ ಅನುಭವಿಸುತ್ತಿರುವ ಯಾತನೆಗೆ ಪರಿಹಾರ ಒದಗಿಸುವಂತೆ ಕೋರಿದ್ದಾರೆ.
ಈಗಾಗಲೇ ಟಿವಿ ಮಾಧ್ಯಮಗಳು ಪ್ರಸಾರ ಮಾಡಿರುವ ಆಡಿಯೋ, ವೀಡಿಯೋ ದಾಖಲೆಗಳಲ್ಲಿ ಸತ್ಯಾಂಶದ ಕೊರತೆಯನ್ನು ಕಂಡಿರುವ ಬೆನ್ನಿಗೆ ಮೊಬೈಲ್ ನಂಬರ್ ಫೇಕ್ ಎನ್ನುವ ಅಂಶವೂ ಬೆಳಕಿಗೆ ಬರುವುದರೊಂದಿಗೆ ಚಂದ್ರಾವತಿ ಮೇಲೆ ಹಾಲಪ್ಪನವರು ಅತ್ಯಾಚಾರ ನಡೆಸಿದ ಪ್ರಸಂಗದ ಸತ್ಯಾಸತ್ಯತೆ ಮತ್ತಷ್ಟು ಅಗ್ನಿಪರೀಕ್ಷೆಗೊಳಗಾಗುತ್ತಿದೆ.