ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್ ಪ್ರಕರಣವನ್ನು ನಿಧಾನ ಮಾಡುತ್ತಿರುವುದ್ಯಾಕೋ..?
(Ajmal Kasab | Faheem Ansari | Sabauddin Ahmed | Mumbai attack)
ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಿ ಪಾತಕಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ಗೆ ವಿಶೇಷ ನ್ಯಾಯಾಲಯವು ಮರಣ ದಂಡನೆ ತೀರ್ಪನ್ನು ನೀಡಿ ನಾಳೆಗೆ 100 ದಿನ ತುಂಬುತ್ತದೆ. ಆದರೆ ಕಸಬ್ ವಕೀಲರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಬೇಕೆಂದು ಆಗಾಗ ಮನವಿ ಮಾಡುತ್ತಾ ಬರುತ್ತಿದ್ದಾರೆ.
ಕಸಬ್ ಮರಣ ದಂಡನೆ ಖಚಿತಪಡಿಸಬೇಕೆಂದು ಮಹಾರಾಷ್ಟ್ರ ಸರಕಾರ ಈಗಾಗಲೇ ಬಾಂಬೆ ಹೈಕೋರ್ಟಿನಲ್ಲಿ ಅಪೀಲು ಮಾಡಿಕೊಂಡಿದೆ. ಅಲ್ಲದೆ ಖುಲಾಸೆಗೊಂಡಿರುವ ಇಬ್ಬರು ಭಾರತೀಯ ಉಗ್ರರಾದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್‌ರ ವಿರುದ್ಧವೂ ಮೇಲ್ಮನವಿ ಸಲ್ಲಿಸಿದೆ.
ಗುರುವಾರ ಇದರ ವಿಚಾರಣೆ ನಡೆಸಿರುವ ನ್ಯಾಯಾಲಯವು, ಫಹೀಂ ಮತ್ತು ಸಬಾವುದ್ದೀನ್ ಬಂಧನಕ್ಕೆ ಆದೇಶ ನೀಡಿದೆ. ಅಲ್ಲದೆ ಕಸಬ್ ಮೇಲ್ಮನವಿಗೆ ಸೆಪ್ಟೆಂಬರ್ ಕೊನೆಯವರೆಗೆ ಕಾಲಾವಕಾಶ ಬೇಕೆಂಬ ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ಮನವಿಯನ್ನು ತಳ್ಳಿ ಹಾಕಿರುವ ಕೋರ್ಟ್, ಆಗಸ್ಟ್ 30ರ ಕೊನೆಯ ಗಡುವು ನೀಡಿದೆ.
ಲಷ್ಕರ್ ಇ ತೋಯ್ಬಾದ ಇಬ್ಬರು ಸಕ್ರಿಯ ಭಾರತೀಯ ಕಾರ್ಯಕರ್ತರಾದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಆರೋಪಗಳಿಗೆ ಪೂರಕ ಸಾಕ್ಷ್ಯಗಳು ಸಿಗದ ಹಿನ್ನೆಲೆಯಲ್ಲಿ ಅವರನ್ನು ಮುಂಬೈ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಲಾಗಿತ್ತು. ಇವರಿಬ್ಬರು ಮುಂಬೈಯ ನಕ್ಷೆಗಳನ್ನು ಭಯೋತ್ಪಾದಕರಿಗೆ ಒದಗಿಸಿದ್ದರು ಎಂದು ಆರೋಪಿಸಲಾಗಿತ್ತು.
ಇದೀಗ ಅವರಿಬ್ಬರ ವಿರುದ್ಧವೂ ಹೈಕೋರ್ಟ್ ಬಂಧನ ವಾರೆಂಟ್ ಹೊರಡಿಸಿದೆ. ಪ್ರಸಕ್ತ ಅವರು ರಾಂಪುರ ಸಿಆರ್‌ಪಿಎಫ್ ನೇಮಕಾತಿ ಶಿಬಿರ ದಾಳಿ ಪ್ರಕರಣ ಸಂಬಂಧ ಉತ್ತರ ಪ್ರದೇಶ ಜೈಲಿನಲ್ಲಿದ್ದಾರೆ. ಅವರನ್ನು ಅಲ್ಲಿಂದ ಬಂಧಿಸಿ, ಮುಂಬೈಯಲ್ಲಿ ಹಾಜರುಪಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ದಿನದೂಡುವ ತಂತ್ರವೇ? ಲಷ್ಕರ್ ಇ ತೋಯ್ಬಾ ಸಂಘಟನೆಯ 10 ಭಯೋತ್ಪಾದಕರು 2008ರ ನವೆಂಬರ್ 26ರಂದು ಸಾಗರ ಮಾರ್ಗವಾಗಿ ಮುಂಬೈಗೆ ಬಂದು ಹಲವು ಕಡೆಗಳಲ್ಲಿ ಯದ್ವಾತದ್ವಾ ದಾಳಿ ನಡೆಸಿದ ಪರಿಣಾಮ 23 ವಿದೇಶಿ ಪ್ರಜೆಗಳೂ ಸೇರಿದಂತೆ 166 ಮಂದಿ ಅಮಾಯಕರು ಸಾವನ್ನಪ್ಪಿದ್ದರು. ಘಟನೆಯಲ್ಲಿ 304 ಮಂದಿ ಗಾಯಗೊಂಡಿದ್ದರು. ಆರೋಪಿಗಳಲ್ಲಿ ಜೀವಂತವಾಗಿ ಸೆರೆ ಸಿಕ್ಕಿದ್ದು ಕಸಬ್ ಮಾತ್ರ.
ಈತನ ಪ್ರಕರಣವನ್ನು 271 ದಿನಗಳ ಕಾರ್ಯನಿರತ ದಿನಗಳಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು, 2010ರ ಮೇ 3ರಂದು ದೋಷಿ ಎಂದು ತೀರ್ಪು ನೀಡಿತ್ತು. ಅಲ್ಲದೆ ಮೇ 6ರಂದು ಪಾಕ್ ಪಾತಕಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿತ್ತು.
ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಸಬ್‌ಗೆ 90 ದಿನಗಳ ಕಾಲಾವಕಾಶ ನೀಡಲಾಗಿತ್ತು. ಅಂದರೆ ಆಗಸ್ಟ್ 4ರ ಮೊದಲು ಮೇಲ್ಮನವಿ ಸಲ್ಲಿಸಬೇಕಿತ್ತು. ಆದರೆ ಇದನ್ನು ಮುಂದೂಡುವಂತೆ ಮನವಿ ಮಾಡಿಕೊಂಡ ಕಾರಣ ಆಗಸ್ಟ್ 12ಕ್ಕೆ ನಿಗದಿ ಮಾಡಲಾಗಿತ್ತು. ಇದೀಗ ಮತ್ತೆ 18 ದಿನಗಳ ಕಾಲ ಮುಂದೂಡಲಾಗಿದೆ.
ಭೋಪಾಲ್ ದುರಂತ ಪ್ರಕರಣ ನಡೆದು ಎರಡು ದಶಕಗಳ ನಂತರ ಕೆಳಗಿನ ನ್ಯಾಯಾಲಯದಿಂದ ತೀರ್ಪು ಬಂದಿತ್ತು. ನ್ಯಾಯಾಂಗದ ನಿಧಾನಗತಿ ನಡೆಯ ಬಗ್ಗೆ ದೇಶವ್ಯಾಪಿ ಟೀಕೆಗಳು ವ್ಯಕ್ತವಾಗಿದ್ದವು. ಈ ಕುರಿತು ಇತ್ತೀಚೆಗಷ್ಟೇ ಪ್ರತಿಕ್ರಿಯಿಸಿದ್ದ ಸುಪ್ರೀಂ ಕೋರ್ಟ್, ನ್ಯಾಯವಾದಿಗಳು ಮತ್ತು ಕಕ್ಷಿದಾರರು ಉದ್ದೇಶಪೂರ್ವಕವಾಗಿ ಪ್ರಕರಣಗಳನ್ನು ಎಳೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.
ಪ್ರಕರಣಕ್ಕೆ ವಿಶೇಷ ಉಪಚಾರವಿಲ್ಲ... ಪಾಕಿಸ್ತಾನಿ ಉಗ್ರ ಕಸಬ್‌ಗೆ ನೀಡಲಾಗಿರುವ ಮರಣ ದಂಡನೆಯನ್ನು ಖಚಿತಗೊಳಿಸುವ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ಸಮಯ ವ್ಯರ್ಥ ಮಾಡುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಅದೇ ಹೊತ್ತಿಗೆ ಕಸಬ್ ಪ್ರಕರಣಕ್ಕೆ ವಿಶೇಷ ಉಪಚಾರವನ್ನೂ ನೀಡುವುದಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.
ವಿಶೇಷ ನ್ಯಾಯಾಲಯವು ನೀಡಿರುವ ತೀರ್ಪು ಸಾವಿರಾರು ಪುಟಗಳಲ್ಲಿರುವುದರಿಂದ ತಮಗೆ ಅದನ್ನು ಓದಿದ ನಂತರವಷ್ಟೇ ಮೇಲ್ಮನವಿ ಸಲ್ಲಿಸಲು ಸಾಧ್ಯ ಎಂದು ಕಸಬ್ ಪರ ವಕೀಲರು ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶ ರಂಜನಾ ದೇಸಾಯಿ, ಇಲ್ಲಿ ಯಾರಾದರೂ ಅಮಾಯಕರೆಂದು ನಮಗೆ ತಿಳಿದು ಬಂದರೆ ನಾವದನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ ಅಂದು ಕೊಂಡಿದ್ದೀರಾ? ನಾವು ನ್ಯಾಯಾಂಗದ ಪರಿಧಿಯಲ್ಲಿದ್ದೇವೆ. ಈ ಕುರಿತು ನಾವು ಯಾವುದೇ ರೀತಿಯ ಭಾವನೆಗಳನ್ನು ನೆಚ್ಚಿಕೊಳ್ಳದೆ ನಿರ್ಧರಿಸುತ್ತೇವೆ ಎಂದರು.