ಮಾಜಿ ಸಚಿವ ಹರತಾಳು ಹಾಲಪ್ಪ ಪ್ರಕರಣಕ್ಕೆ ಸಿಕ್ಕಿರುವ ಮತ್ತೊಂದು ತಿರುವಿದು. ತನ್ನ ಪತ್ನಿಯನ್ನು ಹಾಲಪ್ಪ ಅತ್ಯಾಚಾರ ಮಾಡಿದ್ದಾರೆ ಎಂದು ವೀಡಿಯೋ ದಾಖಲೆ ಸಮೇತ ದೂರು ನೀಡಿರುವ ವೆಂಕಟೇಶ್ ಮೂರ್ತಿ, ಚಂದ್ರಾವತಿ ತನ್ನ ಪತ್ನಿಯೇ ಅಲ್ಲ ಎಂದು ನ್ಯಾಯಾಲಯಕ್ಕೆ ಅಫಿದಾವಿತ್ ಸಲ್ಲಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
PR
ಹಾಲಪ್ಪ ವಿರುದ್ಧ ಅತ್ಯಾಚಾರ ಮೊಕದ್ದಮೆ ದಾಖಲಿಸಿರುವ ಚಂದ್ರಾವತಿ ಯಾನೆ ಚಂದ್ರಮ್ಮನವರು ಪದೇ ಪದೇ ತನ್ನ ದೂರಿನ ಪ್ರತಿಯಲ್ಲಿ ವೆಂಕಟೇಶ್ ಮೂರ್ತಿ ನನ್ನ ಗಂಡ ಎಂದೇ ನಮೂದಿಸಿದ್ದಾರೆ. ತಾವಿಬ್ಬರು 1998ರಲ್ಲಿ ವಿವಾಹವಾಗಿದ್ದೆವು ಎಂದು ದೂರಿನ ದಾಖಲೆಗಳಲ್ಲಿ ತಿಳಿಸಿದ್ದಾರೆ. ಆದರೆ ಇದೇ ವೆಂಕಟೇಶ ಮೂರ್ತಿ ಕೆಲ ವರ್ಷಗಳ ಹಿಂದೆ ತಾನು ಚಂದ್ರಾವತಿಯನ್ನು ಮದುವೆಯಾಗಿಲ್ಲ ಎಂದು ಪ್ರಮಾಣೀಕರಿಸಿದ್ದರು.
ಸುಮಿತ್ರಾಗೆ ವಿಷಪ್ರಾಶನ ಮಾಡಿದ್ದ ಮೂರ್ತಿ... ಇದೇ ಮೂರ್ತಿ 1996ರಲ್ಲಿ ಮೊದಲ ಪತ್ನಿ ಸುಮಿತ್ರಾರನ್ನು ತ್ಯಜಿಸಿದ್ದರು. ಇದೇ ಸಂಬಂಧ ಸುಮಿತ್ರಾರವರು 2004ರಲ್ಲಿ ತೀರ್ಥಹಳ್ಳಿ ನ್ಯಾಯಾಲಯದಲ್ಲಿ ಪರಿಹಾರ ಕೇಳುವ ಮೊಕದ್ದಮೆ ದಾಖಲಿಸಿದ್ದ ಸಂದರ್ಭದಲ್ಲಿ ಮೂರ್ತಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು.
ಆ ದೂರಿನ ಪ್ರಕಾರ ಮೂರ್ತಿಯವರು ಎರಡನೇ ಮದುವೆಯಾಗುವ ಉದ್ದೇಶದಿಂದ ತನ್ನ ಮೇಲೆ ಹಲ್ಲೆ ಮಾಡಿದ್ದರು. ನಂತರ ಕಸಬೆಯ ಸಿದ್ದಪ್ಪ ನಾಯಕರ ಮಗಳು ಚಂದ್ರಮ್ಮ ಎಂಬಾಕೆಯನ್ನು ನನ್ನ ಗಂಡ ಮದುವೆಯಾಗಿದ್ದಾರೆ. ಈಗ ಆಕೆಯ ಜತೆಗೆ ಶಿವಮೊಗ್ಗದಲ್ಲಿ ವಾಸಿಸುತ್ತಿದ್ದಾರೆ. ಇವರಿಗೊಂದು ಹೆಣ್ಣು ಮಗುವೂ ಇದೆ ಎಂದು ಸುಮಿತ್ರಾ ದೂರಿದ್ದರು.
ಇದಕ್ಕೆ ನ್ಯಾಯಾಧೀಶರ ಎದುರು ಉತ್ತರಿಸಿದ್ದ ವೆಂಕಟೇಶ್ ಮೂರ್ತಿ, ತಾನು ಚಂದ್ರಮ್ಮಳನ್ನು ಮದುವೆ ಮಾಡಿಕೊಂಡಿಲ್ಲ. ನಮಗೆ ಹೆಣ್ಣು ಮಗುವೂ ಇಲ್ಲ. ಆಕೆಯನ್ನು ಮದುವೆಯಾಗಲೆಂದು ನಾನು ಸುಮಿತ್ರಾಳನ್ನು ಥಳಿಸಿ ಮನೆಯಿಂದ ಹೊರಗೆ ಹಾಕಿರುವುದಾಗಲೀ ಅಥವಾ ಸುಮಿತ್ರಾ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ನಾನು ಮತ್ತು ನನ್ನ ಮನೆಯವರು ಆಕೆಗೆ ವಿಷಪ್ರಾಶನ ಮಾಡಿರುವ ಯತ್ನಗಳಾಗಲಿ ನಡೆದಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದರು.
ಇದು ಕ್ರಿಮಿನಲ್ ಅಪರಾಧ... ಕಾನೂನು ತಜ್ಞರ ಪ್ರಕಾರ ಈ ರೀತಿ ಸತ್ಯವನ್ನು ಮರೆ ಮಾಚಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸುವುದು ಒಂದು ಕ್ರಿಮಿನಲ್ ಅಪರಾಧ.
ಇಲ್ಲಿ ವಾಸ್ತವ ಸಂಗತಿಯೆಂದರೆ 2004ರಲ್ಲಿ ನ್ಯಾಯಾಲಯಕ್ಕೆ ಮೂರ್ತಿ ತನ್ನ ಪ್ರಮಾಣ ಪತ್ರವನ್ನು ಸಲ್ಲಿಸುವ ಸಂದರ್ಭದಲ್ಲಿ ಮೂರ್ತಿ-ಚಂದ್ರಮ್ಮರಿಗೆ ಐದು ವರ್ಷದ ಮಗುವಿತ್ತು.
ಆ ಹೊತ್ತಿಗಾಗಲೇ ಚಂದ್ರಾವತಿಯಿಂದ ಮೂರ್ತಿ ಮಗುವನ್ನು ಪಡೆದುಕೊಂಡಿದ್ದರೂ ನ್ಯಾಯಾಲಯದಲ್ಲಿ, 'ನನ್ನ ಹೆಂಡತಿ ಸುಮಿತ್ರಾಳ ಅರ್ಜಿಯನ್ನು ವಜಾ ಮಾಡಬೇಕು ಮತ್ತು ಆಕೆಯನ್ನು ನನ್ನ ಜತೆಗೆ ಕಳುಹಿಸಿಕೊಡಲು ಆದೇಶ ನೀಡಬೇಕು. ನಾನು ಎರಡನೇ ಮದುವೆಯಾಗಿಲ್ಲ' ಎಂದಿದ್ದರು.
ಕಾನೂನು ತಜ್ಞರ ಪ್ರಕಾರ ಮೂರ್ತಿ ಎಸಗಿರುವುದು ಕ್ರಿಮಿನಲ್ ಅಪರಾಧ. ಸುಮಿತ್ರಾ ಈಗ ನ್ಯಾಯಾಲಯಕ್ಕೆ ಮಾಹಿತಿ ನೀಡಿದಲ್ಲಿ ಮೂರ್ತಿ ವಿರುದ್ಧ ಕಠಿಣ ಶಿಕ್ಷೆ ಪ್ರಕಟವಾಗಬಹುದು.
ಇದರೊಂದಿಗೆ ಹಾಲಪ್ಪನವರ ವಿರುದ್ಧ ಆರೋಪಗಳ ಸುರಿಮಳೆಗರೆದಿದ್ದ ಮೂರ್ತಿ ದಂಪತಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿರುವುದು ಸ್ಪಷ್ಟವಾಗಿದೆ.