ಅಜೀಜ್ ಮಿರ್ಜಾ ಚಿತ್ರದಲ್ಲಿ ಶಹೀದ್
ಮುಂಬೈ, ಶನಿವಾರ, 11 ಆಗಸ್ಟ್ 2007( 13:43 IST )
ಹಿಂದಿ ಚಿತ್ರರಂಗದ ಭರವಸೆಯ ನಟ ಎನ್ನುವುದಕ್ಕಿಂತ ಕರೀನಾ ಕಪೂರ್ ಪ್ರಿಯಕರನಾಗಿಯೇ ಸಾಕಷ್ಟು ಜನಪ್ರಿಯನಾಗಿರುವ ಶಾಹಿದ್ ಕಪೂರ್ 'ವಿವಾಹ್' ಪೂರ್ವದಲ್ಲಿ, ಉತ್ತಮ ಕಥಾ ವಸ್ತುವಿನ ಶೋಧನೆಯಲ್ಲಿ ತೊಡಗಿಕೊಂಡಿದ್ದರು. ಅವರ ನಿರೀಕ್ಷೆ ಹುಸಿಗೊಂಡಿಲ್ಲ.
ಮೈನೇ ಪ್ಯಾರ್ ಕಿಯಾ, ಹಮ್ ಆಪ್ಕೆ ಹೈ ಕೌನ್, ಹಮ್ ಸಾಥ್ ಸಾಥ್ ಹೈನಂತಹ ಕೌಟುಂಬಿಕ ಮನರಂಜನಾತ್ಮಕ ಸೂಪರ್ ಡ್ಯೂಪರ್ ಹಿಟ್ ಚಿತ್ರಗಳನ್ನು ತೆರೆಗೆ ನೀಡಿದ ಸೂರಜ್ ಬರ್ಜಾತ್ಯರ 'ವಿವಾಹ್' ಚಿತ್ರದಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಂಡಿದ್ದ ಶಾಹಿದ್, ಈಗ ಸೂಪರ್ ಸ್ಟಾರ್ ಶಾರೂಕ್ ಖಾನ್ ಚಿತ್ರಗಳನ್ನು ಮಾತ್ರ ನಿರ್ದೇಶಿಸಿರುವ ಅಜೀಜ್ ಮಿರ್ಜಾರ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸುವ ಭಾಗ್ಯವನ್ನು ಪಡೆದುಕೊಂಡಿದ್ದಾರೆ.
ಈ ಹಿಂದೆ ಶಾರೂಕ್ ಖಾನ್ ಅಭಿನಯದ ರಾಜೂ ಬನ್ ಗಯಾ ಜಂಟಲ್ ಮ್ಯಾನ್, ಎಸ್ ಬಾಸ್, ಫಿರ್ ಭಿ ದಿಲ್ ಹೈ ಹಿಂದೂಸ್ತಾನಿಯಂತಹ ಚಿತ್ರಗಳನ್ನು ನಿರ್ದೇಶಿಸಿದ್ದ ಅಜೀಜ್, ಕಳೆದ ವರ್ಷ ತಮ್ಮ ಪತ್ನಿಯ ಸಾವಿನ ನಂತರ ಖಿನ್ನರಾಗಿದ್ದರು.
ಅನಿರೀಕ್ಷಿತವಾದ ತಾರಾಬಳಗವನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿದ್ದು, ಶಾಹಿದ್ ಕಪೂರ್‌ಗೆ ವಿದ್ಯಾ ಬಾಲನ್ ಜೋಡಿಯಾಗಲಿದ್ದು, ಇದೊಂದು ಸಂಗೀತಮಯ ಚಿತ್ರವಾಗಲಿದೆ.
ಕಥಾ ವಸ್ತುವನ್ನು ಬಹಿರಂಗಪಡಿಸಲು ನಿರಾಕರಿಸುವ ಶಾಹಿದ್, ಇದೊಂದು ಮನಕ್ಕೆ ಮುದ ನೀಡುವ ಕತೆ. ವಿದ್ಯಾ ಮತ್ತು ತಾವು ತಮ್ಮ ಪಾತ್ರಗಳಿಗೆ ಪರಿಪೂರ್ಣವಾಗಿ ಹೊಂದುತ್ತೇವೆ ಎಂದು ಹೇಳುತ್ತಾರೆ.